ಇತಿಹಾಸ

ಆಪರೇಷನ್ ಪೋಲೊ ಬಗ್ಗೆ ನಿಮಗೆಷ್ಟು ಗೊತ್ತು?!! ಆ ಉಕ್ಕಿನ ಮನುಷ್ಯ ಬರದಿದ್ದರೆ ಭಾರತದಲ್ಲೇ ಮತ್ತೊಂದು ಪುಟ್ಟ ಪಾಕಿಸ್ತಾನ ಹುಟ್ಟಿ ಕೊಂಡಿರುತ್ತಿತ್ತೇನೋ!

ಅದು 1947 ಆಗಷ್ಟ್ 15, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನ, ದೇಶದ ಜನರೆಲ್ಲ ತ್ರಿವರ್ಣ ಧ್ವಜ ಕೈಯಲ್ಲಿ ಹಿಡಿದು ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದರೆ ಇಲ್ಲಿನ ಜನ ಮಾತ್ರ ಪಾಕಿಸ್ತಾನಿ ಮಾನಸಿಕತೆಯ ಇಸ್ಲಾಮಿಕ್ ಭಯೋತ್ಪಾದಕರಂತೆ ವರ್ತಿಸುತ್ತಿದ್ದ ರಜಾಕಾರರಿಂದ ಕೊಲ್ಲಲ್ಪಡುತ್ತಿದ್ದೆವು.

ದೇಶದೆಲ್ಲೆಡೆ ‘ಭಾರತ್ ಮಾತಾ ಕೀ ಜೈ’ ಅನ್ನೋ ಘೋಷಣೆಗಳು ಮೊಳಗುತ್ತಿದ್ದರೆ ಇಲ್ಲಿ ಮಾತ್ರ ‘ಆಜಾದ್ ಹೈದ್ರಾಬಾದ್ ಜಿಂದಾಬಾದ್’ ಅನ್ನೋ ಘೋಷಣೆಗಳು ರಜಾಕಾರರಿಂದ ಮೊಳಗುತ್ತಿದ್ದವು.

ಭಾರತಕ್ಕೆ ಸ್ವಾತಂತ್ರ್ಯ ನೀಡೋದಕ್ಕೂ ಮುನ್ನ ಬ್ರಿಟಿಷರು ಭಾರತದ ಮ್ಯಾಪ್’ನಲ್ಲಿ ಗೆರೆಯೊಂದನ್ನ ಎಳೆದು ಅದನ್ನ ಭಾರತ ಪಾಕಿಸ್ತಾನದ ಬಾರ್ಡರ್ ಅಂತ ಘೋಷಿಸಿ ಭಾರತವನ್ನ ವಿಭಜಿಸಿಯಾಗಿತ್ತು. ವಿಭಜನೆಯ ನಂತರದ ಭಾರತದಲ್ಲಿ ಆಗ 563 ರಾಜ ಸಂಸ್ಥಾನಗಳಿದ್ದವು.

ಭಾರತ ಸರಕಾರ ಕಾಯಿದೆ (Government of India Act, 1935)ಯ ಪ್ರಕಾರ ರಾಜ ಸಂಸ್ಥಾನಗಳು ಒಂದೋ ಭಾರತಕ್ಕೆ ಇಲ್ಲಾ ಪಾಕಿಸ್ತಾನಕ್ಕೆ ಸೇರಬೇಕು, ಹಾಗೂ ಯಾವ ಸಂಸ್ಥಾನವೂ ಸ್ವತಂತ್ರ್ಯವಾಗಿ ಇರುವಂತಿಲ್ಲ ಎಂದು ಕಾಯಿದೆಯಲ್ಲಿ ಷರಾ ಬರೆದಾಗಿತ್ತು. ಆ ಸಂಸ್ಥಾನದ ಭೂಪ್ರದೇಶದ ಸರಹದ್ದು ಭಾರತಕ್ಕೋ, ಪಾಕಿಸ್ತಾನಕ್ಕೋ ಮುಂದುವರೆಯಲೇಬೇಕು (Continuity of land border) ಎಂಬ ಒಂದು ಬಲವಾದ ಕಾನೂನು ಸಹ ಇತ್ತು. ಭಾರತದ ಸ್ವಾತಂತ್ಯವಾಗುವವರೆಗೂ ಈ ಸಂಸ್ಥಾನಗಳು ಏಕಾಧಿಪತ್ಯ (suzerainty) ವ್ಯವಸ್ಥೆಯಲ್ಲಿ ಬ್ರಿಟಿಷರ ಅಡಿಯಾಳುಗಳಾಗಿದ್ದರೂ ಭಾರತ/ಪಾಕಿಸ್ತಾನದ ರಚನೆಯ ಆನಂತರ ಕಡ್ಡಾಯವಾಗಿ ಭಾರತಕ್ಕೆ ಇಲ್ಲವೇ ಪಾಕಿಸ್ತಾನಕ್ಕೆ ಸೇರಬೇಕಿತ್ತು.

560 ಸಂಸ್ಥಾನಗಳೇನೋ ಭಾರತಕ್ಕೆ ವಿಲೀನವಾಗಲು ಒಪ್ಪಿದವು ಆದರೆ ಕಾಶ್ಮೀರದ ರಾಜ ಹರಿಸಿಂಗ್, ಜುನಾಗಡ(ಈಗಿನ ಗುಜರಾತಿನ ಭಾಗ)ನ ಮೊಹಮ್ಮದ್ ಮಹಬತ್ ಖಾಂಜಿ 3 ಹಾಗು ಹೈದ್ರಾಬಾದದಿನ ನಿಜಾಮ ಮಾತ್ರ ತಮ್ಮ ಸಂಸ್ಥಾನಗಳನ್ನ ಭಾರತಕ್ಕೆ ವಿಲೀನಗೊಳಿಸಲು ನಿರಾಕರಿಸಿ ತಾವು ಸ್ವತಂತ್ರವಾಗೇ ಇರುತ್ತೇವೆ ಅನ್ನೋ ಪ್ರಸ್ತಾವನೆಯನ್ನ ಭಾರತ ಸರ್ಕಾರದೆದುರಿಟ್ಟವು ಮುಂದೆ.

ಈ ಮೂರು ಸಂಸ್ಥಾನಗಳಲ್ಲಿ ಜುನಾಗಡ್ ಭಾರತಕ್ಕೆ ಸೇರಿತು, ಕಾಶ್ಮೀರ ಸಂಸ್ಥಾನ ನೆಹರುವಿನ ದ್ವಿಮುಖನೀತಿಯಿಂದಾಗಿ ಭಾರಕ್ಕೆ ಸೇರಿಯೂ ಇನ್ನೂ ಕಗ್ಗಂಟಾಗೇ ಉಳಿದಿದೆ. ಇನ್ನು ಹೈದ್ರಾಬಾದಿನ ವಿಷಯಕ್ಕೆ ಬರೋದಾದರೆ ಆ ಸಂಸ್ಥಾನವನ್ನು ಭಾರತಕ್ಕೆ ಸೇರಿಸಲು ಸರ್ದಾರ್ ಪಟೇಲರು ಪಟ್ಟ ಪ್ರಯತ್ನ ಹಾಗು ತೋರಿದ ಗಂಡೆದೆ ಮಾತ್ರ ಯಾವ ನಾಯಕನಿಗೂ ಬರಲು ಸಾಧ್ಯವಿಲ್ಲ.

ಹೈದ್ರಾಬಾದ್’ನ್ನ ಭಾರತಕ್ಕೆ ವಿಲೀನಗೊಳಿಸಲ್ಲ, ಬದಲಾಗಿ ತಾನು ಸ್ವತಂತ್ರವಾಗಿ ಇರುತ್ತೇವೆ ಇಲ್ಲವಾದರೆ ಪಾಕಿಸ್ತಾನದ ಜೊತೆ ವಿಲೀನವಾಗುತ್ತೇವೆ ಅನ್ನೋ ಪ್ರಸ್ತಾವನೆಯನ್ನ ನಿಜಾಮ ಪಟೇಲರೆದುರಿಗಿಟ್ಟ.

ಒಂದು ಮನೆಯಲ್ಲಿ ಅಣ್ಣತಮ್ಮಂದಿರುಗಳ ಜಗಳವಾಡಿ ದೂರವಾಗಿದ್ದರೆ ಅವರನ್ನ ಒಂದು ಮಾಡೋಕೆ ಕಷ್ಟಸಾಧ್ಯ ಅನ್ನೋ ಪರಿಸ್ಥಿತಿಯಿರೋವಾಗ ಸರ್ದಾರ್ ಪಟೇಲರಿಗೆ 563 ರಾಜಸಂಸ್ಥಾನ(Presidencies or Princely States)ಗಳನ್ನ ಭಾರತಕ್ಕೆ ವಿಲೀನಗೊಳಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ.

ಸರ್ದಾರ್ ಪಟೇಲರು ಸ್ವತಂತ್ರ ಭಾರತದ ಮೊತ್ತಮೊದಲ ಉಪ ಪ್ರಧಾನಿ ಹಾಗು ಗೃಹಮಂತ್ರಿಯಾಗಿದ್ದವರು, ದೇಶ ಸ್ವಾತಂತ್ರ್ಯವಾದಾಗ ದೇಶದಲ್ಲಿದ್ದ 563 ರಾಜಸಂಸ್ಥಾನಗಳಲ್ಲಿ 562 ಸಂಸ್ಥಾನಗಳನ್ನ ಯಾವ ಯುದ್ಧವು ಇಲ್ಲದೆ ಎಲ್ಲ ರಾಜರ ಮನವೊಲಿಸಿ ಭಾರತಕ್ಕೆ ವಿಲೀನಗೊಳಿಸಿದ ಕಾರಣಕ್ಕೇ ಸರ್ದಾರ್ ಪಟೇಲರಿಗೆ ಉಕ್ಕಿನ ಮನುಷ್ಯ(Iron Man) ಎಂಬ ಬಿರುದು ಸಿಕ್ಕಿತ್ತು.

1947 ಆಗಷ್ಟ್ 15 ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಹೈದ್ರಾಬಾದ್ ಸಂಸ್ಥಾನಕ್ಕೆ ಮಾತ್ರ ಸ್ವಾತಂತ್ರ್ಯ ಸಿಕ್ಕಿದ್ದು ಹದಿಮೂರು ತಿಂಗಳು ಎರಡು ದಿನಗಳ ನಂತರ ಅಂದರೆ 1948 ಸಪ್ಟೆಂಬರ್ 17 ಕ್ಕೆ.

ಆ ಹದಿಮೂರು ತಿಂಗಳು ನಮ್ಮ ಭಾಗದ ಜನ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ನಮ್ಮ ಭಾಗದ(ಹೈದ್ರಾಬಾದ್ ಕರ್ನಾಟಕ) ಜನ ತಿರಂಗಾ ಧ್ವಜ ಹಾರಿಸಿದರೂ ಅವರನ್ನ ನಿರ್ದಯವಾಗಿ ಕೊಂದ ಮುಸಲ್ಮಾನ
ರಜಾಕಾರರಿಂದ ಬೇಸತ್ತಿದ್ದ ನಮಗೆ ಭಾರತ ಸ್ವತಂತ್ರವಾಗಿದೆ ನಮಗೂ ಸ್ವಾತಂತ್ರ್ಯ ಸಿಕ್ಕಿದೆ ಅನ್ನೋ ಭಾವನೆಯೇ ನಮ್ಮಲ್ಲಿರಲಿಲ್ಲ.

ಇಲ್ಲಿನ ಜನ ತಮಗೆ ಭಾರತಕ್ಕೆ ಸೇರಬೇಕು ಅನ್ನೋ ಆಶಯವನ್ನ ನಿಜಾಮನೆದುರಿಟ್ಟರೂ ಅದನ್ನ ಒಪ್ಪದ ನಿಜಾಮ ತನ್ನ ರಜಾಕಾರ ಸೈನ್ಯದಿಂದ ಲಕ್ಷಾಂತರ ಹಿಂದುಗಳನ್ನ ಕೊಂದ, ಸಾವಿರಾರು ಹಿಂದೂ ಮಹಿಳೆಯರ ಅತ್ಯಾಚಾರ ಮಾಡಿಸಿದ, ಮಕ್ಕಳು ಮರಿಯೆನ್ನದೆ ಭರ್ಚಿ ಈಟಿಗಳಿಂದ ತಿವಿದು ಕೊಂದ. ನಿಜಾಮ ಕಾಸಿಂ ರಜ್ವಿ ನೇತೃತ್ವದ ರಜಾಕಾರರ ದಬ್ಬಾಳಿಕೆ ವಿರೋಧಿಸಿ ಬೀದಿಗಿಳಿದಿದ್ದ ಈ ಭಾಗದ ಜನ ನಿಜಾಮನ ವಿರುದ್ಧ ತಿರುಗಿ ಬಿದ್ದಿದ್ದರು.

ಹೈದರಾಬಾದ್ ಸಂಸ್ಥಾನ ಭಾರತದ ಒಕ್ಕೂಟದಲ್ಲಿ ವಿಲೀನಗೊಳ್ಳಲು ಅಂದಿನ ನಿಜಾಮ ಮೀರ್ ಉಸ್ಮಾನ್ ಅಲಿ ಖಾನ್ ಒಪ್ಪಲಿಲ್ಲ. ಅಲ್ಲದೆ ಈ ಭಾಗವನ್ನು ಪ್ರತ್ಯೇಕ ರಾಷ್ಟ್ರವಾಗಿಸಲು ಲಾತೂರ್‌ನ ವಕೀಲ ಕಾಸಿಂ ರಜ್ವಿ ಹುಟ್ಟುಹಾಕಿದ್ದ ರಜಾಕಾರರ ಸಂಘಟನೆ ಜನರ ಮೇಲೆ ದಬ್ಬಾಳಿಕೆ ಆರಂಭಿಸಿತ್ತು. ವಿಲೀನದ ಪರವಾಗಿದ್ದವರ ಮಾರಣಹೋಮ ನಡೆಯಿತು.

ಹೈದ್ರಾಬಾದ್ ಸಂಸ್ಥಾನ ಭಾರತದ ಪ್ರಮುಖ ಅಂಗವಾಗಿದ್ದು ಅದು ಪಾಕಿಸ್ತಾನಕ್ಕೆ ಸೇರುವ ಇಂಗಿತ ವ್ಯಕ್ತಪಡಿಸಿ ನಾವು ಸಾಯುತ್ತೇವೆಯೇ(ನಾವು ಸಾಯೋಕು ಮುನ್ನ 1.5 ಕೋಟಿ ಹಿಂದುಗಳನ್ನ ಕೊಂದು ನಾವು ಸಾಯ್ತೇವೆ) ಹೊರತು ಹೈದ್ರಾಬಾದನ್ನ ಭಾರತಕ್ಕೆ ವಿಲೀನಗೊಳಿಸಲ್ಲ ಅಂದಿದ್ದ ನಿಜಾಮ.

ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಈ ಭಾಗದ ವಿಮೋಚನೆ ಆಗುವವರೆಗೆ 13 ತಿಂಗಳ ಕಾಲ ರಜಾಕಾರರೊಂದಿಗೆ ಜಗಳ, ಹೊಡೆದಾಟ ಅಲ್ಲಲ್ಲಿ ನಡೆದೇ ಇತ್ತು. ಅವರ ಪರವಾಗಿದ್ದ ಇಸಾಮುದ್ದೀನ್ ಎನ್ನುವವನ್ನು ಮುಚಳಂಬ ಗ್ರಾಮದ ಯುವಕರು ಗ್ರಾಮದ ಸಮೀಪದ ಬುದ್ಯಾನ ಹಳ್ಳದಲ್ಲಿ ಅಡಗಿ ಕುಳಿತು ಆತ ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದಾಗ ಮೈಮೇಲೆ ಎರಗಿ ಕೊಲೆ ಮಾಡಿದ್ದರು.

‘ಇಸಾಮುದ್ದೀನ್ ನ ಕೊಲೆಗೆ ಪ್ರತಿಕಾರವಾಗಿ ಮುಚಳಂಬದ ಮೇಲೆ ದಾಳಿ ನಡೆಸಿ ಶರಣಪ್ಪ ಪಾಟೀಲ, ಅಪ್ಪಣ್ಣ ಹಂಚೆ, ಕಂಟೆಪ್ಪ ಕಾಮಶೆಟ್ಟಿ ಒಳಗೊಂಡು 13ಜನರನ್ನು ಕೊಲ್ಲಲಾಗಿತ್ತು.

‘ಶರಣಪ್ಪ ಅವರ ಮನೆಗೆ ಬೆಂಕಿ ಹಚ್ಚಿದಾಗ 7 ಜನರು ಸುಟ್ಟು ಭಸ್ಮವಾದರು.

‘ಬೀದರ್’ನ ಗೋರಟಾ(ಬಿ) ದಲ್ಲಿಯೂ ರಜಾಕಾರಾರಿಂದ ಭೀಕರ ಹತ್ಯಾಕಾಂಡ ನಡೆಸಲಾಗಿತ್ತು. ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಇಲ್ಲಿ 200 ಜನರು ಮೃತಪಟ್ಟಿರುವ ಮತ್ತು ₹70 ಲಕ್ಷ ಹಾನಿಯಾದ ಬಗ್ಗೆ ಪಂಚನಾಮೆ ಮಾಡಲಾಯಿತು’ ಎಂದು ಭಾರತ ಸರ್ಕಾರ ನೇಮಿಸಿದ್ದ ಹೈದರಾಬಾದ್ ನ ಏಜೆಂಟ್ ಜನರಲ್ ಕೆ.ಎಂ.ಮುನ್ಷಿಯವರು ತಾವು ಬರೆದ ‘ದಿ ಎಂಡ್ ಆಫ್ ಎನ್ ಇರಾ’ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಆ ಸಮಯದಲ್ಲಿ ಬಲವಂತವಾಗಿ ಯಾವ ಸಂಸ್ಥಾನಗಳನ್ನೂ ಭಾರತಕ್ಕೆ ಸೇರಿಸುವುದು ವಿಶ್ವಸಂಸ್ಥೆಯ ಪ್ರಕಾರ ತಪ್ಪಾಗಿತ್ತು.

ಆದರೆ ಸ್ವತಂತ್ರ ಸಂಸ್ಥಾನದ ಮೇಲೆ ಸೈನಿಕ ಕಾರ್ಯಾಚರಣೆ ನಡೆಸುವುದು ವಿಶ್ವಸಂಸ್ಥೆಯ ಪ್ರಕಾರ ಅಪರಾಧವಾಗಿದ್ದು ಇದಕ್ಕಾಗಿ ಭಾರತೀಯ ಸೈನ್ಯವನ್ನ ಹೈದ್ರಾಬಾದಗೆ ನುಗ್ಗಿಸೋದು ಹೇಗೆ ಅಂತ ಸರ್ದಾರ್ ಪಟೇಲರು ಯೋಚಿಸುತ್ತಿದ್ದಾಗ ಅವರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಒಂದು ಉಪಾಯ ನೀಡಿದ್ದರು.. ಅದೇ ‘ಪೋಲಿಸ್ ಆ್ಯಕ್ಷನ್’ ಎಂಬ ಹೆಸರಿನಿಂದ ಹೈದ್ರಾಬಾದಿನ ಮೇಲೆ ಆಕ್ರಮಣ ಮಾಡೋದು.

ಸ್ಥಳೀಯ ಪೋಲೀಸರ ಕಾರ್ಯಾಚರಣೆಗೆ ಅವಕಾಶವಿದ್ದು ಪೋಲಿಸ್ ಆ್ಯಕ್ಷನ್ ಅನ್ನೋ ಹೆಸರಿನಲ್ಲಿ ಭಾರತೀಯ ಸೈನ್ಯದಿಂದ ಹೈದ್ರಾಬಾದ್ ಮುತ್ತಿಗೆ ಹಾಕಿಸಿದರೆ ವಿಶ್ವಸಂಸ್ಥೆಗೆ ಯಾವ ಅನುಮಾನವೂ ಬರಲ್ಲ ಹೈದ್ರಾಬಾದ್ ಸಂಸ್ಥಾನವನ್ನ ಸುಲಭವಾಗಿ ಸೋಲಿಸಿ ಭಾರತಕ್ಕೆ ವಿಲೀನಗೊಳಿಸಬಹುದು ಅನ್ನೋದು ಅಂಬೇಡ್ಕರ್’ರವರ ತಂತ್ರವಾಗಿತ್ತು.

ಆದರೆ ನಿಜಾಮನ ಸೈನ್ಯ ಅಷ್ಟು ದುರ್ಬಲವಾಗಿತ್ತು ಅಂದುಕೊಂಡಿರೇನು? ದುರ್ಬಲವಲ್ಲದಿದ್ದರೂ ತನ್ನ ಸಂಸ್ಥಾನದಲ್ಲಿದ್ದ ಬಹುಸಂಖ್ಯಾತ ಹಿಂದೂಗಳೇ ನಿಜಾಮನ ಟಾರ್ಗೇಟ್ ಆಗಿದ್ದು ಒಂದು ವೇಳೆ ಭಾರತ ಸರ್ಕಾರ ತನ್ನ ಸಂಸ್ಥಾನದ ಮೇಲೆ ಆಕ್ರಮಣ ಮಾಡಿದರೆ ನಾನು ಹಿಂದೂಗಳ ಮಾರಣಹೋಮ ಮಾಡಿಸಿಬಿಡುತ್ತೇನೆ ಅನ್ನೋ ಧಮಕಿ ಸರ್ದಾರ್ ಪಟೇಲರಿಗೆ ನಿಜಾಮ ಹಾಕಿದ್ದ.

ಆದರೆ ಇದನ್ನೆಲ್ಲ ನೋಡುತ್ತಿದ್ದ ಸರ್ದಾರ್ ಪಟೇಲರು ನಿಜಾಮನಿಗೆ ಖಡಕ್ ಎಚ್ಚರಿಕೆ ನೀಡಿದ್ದರು, ಆದರೆ ಇದನ್ನು ಒಪ್ಪದ ನಿಜಾಮ ಹಿಂದುಗಳ ಮೇಲೆ ದೌರ್ಜನ್ಯ ಮುಂದುವರಿಸಿದ್ದ.

ಪಟೇಲರಿಗೆ ಧಮಕಿ ಹಾಕುವಷ್ಟು ಧೈರ್ಯ ನಿಜಾಮನಿಗೆ ಬಂದಿದ್ದಾರೂ ಹೇಗೆ?

ಭಾರತ ಪಾಕಿಸ್ತಾನ ಅದಾಗಲೇ ಇಬ್ಭಾಗವಾಗಿತ್ತು. ಮೊಹಮ್ಮದ್ ಅಲಿ ಜಿನ್ನಾ ಪಾಕಿಸ್ತಾನ ಪ್ರಧಾನಿಯಾಗಿದ್ದ. ಈ ನಿಜಾಮ ಹೈದ್ರಾಬಾದ್ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ವಿಲೀನಗೊಳಿಸುತ್ತೆನೆ ಎಂಬ ಪ್ರಸ್ತಾವನೆಯನ್ನ ಜಿನ್ನಾ ಮುಂದಿಟ್ಟ ತಕ್ಷಣ ಜಿನ್ನಾ ನಿಜಾಮನಿಗೆ ತನ್ನ ಬೆಂಬಲ ಸೂಚಿಸಿಬಿಟ್ಟಿದ್ದ.

ಭಾರತ ಸರ್ಕಾರವೇನಾದರೂ ನಿಮ್ಮ ಸಂಸ್ಥಾನದ ಮೇಲೆ ದಾಳಿ ಮಾಡಿದರೆ ನಮ್ಮ ಸೈನ್ಯ ನಿನ್ನ ಬೆಂಬಲಕ್ಕೆ ನಿಲ್ಲುತ್ತೆ ಅನ್ನೋ ಆಶ್ವಾಸನೆಯನ್ನೂ ಜಿನ್ನಾ ನಿಜಾಮನಿಗೆ ಕೊಟ್ಟಿದ್ದ. ಬರೀ ಆಶ್ವಾಸನೆಯಷ್ಟೇ ಅಲ್ಲ ಅತ್ಯಾಧುನಿಕ ಗನ್, ಗ್ರೆನೆಡ್’ಗಳನ್ನೂ ಅದಾಗಲೇ ಹೈದ್ರಾಬಾದ್ ಸಂಸ್ಥಾನಕ್ಕೆ ಜಿನ್ನಾ ಕಳಿಸಿ ಕೊಟ್ಟಿದ್ದ. ಆದರೆ ಅವುಗಳನ್ನ ಆಪರೇಟ್ ಮಾಡೋದಕ್ಕೆ ನಮ್ಮ ಸೈನ್ಯದ ಸ್ಪೆಷಲಿಸ್ಟ್’ಗಳನ್ನ ಸದ್ಯದಲ್ಲೇ ಕಳಿಸಿಕೊಡುತ್ತೇನೆ ಎಂದೂ ಹೇಳಿದ್ದ. ನಿಜಾಮನ ರಜಾಕಾರರ ಸೈನ್ಯಕ್ಕೆ ಈ ಅತ್ಯಾಧುನಿಕ ಯುದ್ಧೋಪಕರಣಗಳ ಆಪರೇಟಿಂಗ್ ಗೊತ್ತಿರಲಿಲ್ಲ.

ಇದನ್ನೆಲ್ಲ ಸರ್ದಾರ್ ಪಟೇಲರು ಸೂಕ್ಷ್ಮವಾಗೇ ಗಮನಿಸುತ್ತ ಹೈದ್ರಾಬಾದ್ ಮೇಲೆ ಯಾವಾಗ ದಾಳಿ ಮಾಡಬಹುದು ಅನ್ನೋ ಲೆಕ್ಕಾಚಾರ ಹಾಕುತ್ತ ಕೂತಿದ್ದರು. ಆ ಸುಸಂದರ್ಭ ಬಂದೇ ಬಿಟ್ಟಿತು. ಅದು 1948 ರ ಸೆಪ್ಟೆಂಬರ್ 11, ಪಾಕಿಸ್ತಾನ ಶೋಕಸಾಗರದಲ್ಲಿ ಮುಳುಗುತ್ತು. ಕಾರಣ ಮೊಹಮ್ಮದ್ ಅಲಿ ಜಿನ್ನಾ ಅಸುನೀಗಿದ್ದ. ಜಿನ್ನಾ ಸತ್ತಿದ್ದಕ್ಕೆ ಪಾಕಿಸ್ತಾನ ಕುಗ್ಗಿ ಹೋಗಿತ್ತು. ಹೈದ್ರಾಬಾದ್ ನಿಜಾಮನ ಸೈನ್ಯಕ್ಕೆ ತರಬೇತಿ ನೀಡ್ತೇವೆ ಅಂತ ಹೇಳಿದ್ದ ಜಿನ್ನಾನೇ ಸತ್ತ ಮೇಲೆ ಪಾಕಿಸ್ತಾನ ಹೈದ್ರಾಬಾದ್ ಕಡೆ ತಲೆ ಹಾಕಲೇ ಇಲ್ಲ.

ಈ ವಿಷಯವನ್ನರಿತ ಸರ್ದಾರ್ ಪಟೇಲರು ತಡಮಾಡದೆ 1948 ಸೆಪ್ಟೆಂಬರ್ 12 ರಂದು ಸರ್ದಾರ್ ವಲ್ಲಭ್ ಭಾಯ್ ಪಟೇಲರು ಭಾರತೀಯ ಸೇನೆಗೆ ಆದೇಶ ನೀಡಿಯೇಬಿಟ್ಟರು.ಸೇನೆಯನ್ನು ಹೈದ್ರಾಬಾದ್’ಗೆ ನುಗ್ಗಿಸಿ ಆಪರೇಷನ್ ಪೋಲೋ ಹೆಸರಿನಿಂದ ನಮ್ಮ ಭಾಗದ ಜನರನ್ನ ನಿಜಾಮ, ರಜಾಕಾರರ ಕಪಿಮುಷ್ಟಿಯಿಂದ ಮುಕ್ತಗೊಳಿಸೋಕೆ ಪಟೇಲರು ಪಣ ತೊಟ್ಟು ನಿಂತಾಗಿತ್ತು.

ನಿಜಾಮ ಆಡಳಿತದ ಅಂತ್ಯಕ್ಕಾಗಿ ನಡೆದ ‘ಆಪರೇಷನ್ ಪೋಲೊ’ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಗೆ ಸಾರ್ವಜನಿಕರು ಪ್ರಾಣದ ಹಂಗು ತೊರೆದು ಸಹಕರಿಸಿದ್ದರು. ಭಾರತ ಸರ್ಕಾರದ ಹೈದ್ರಾಬಾದ್ ಸಂಸ್ಥಾನದ ಏಜೆಂಟರಾಗಿದ್ದ ಕೆ.ಎಂ.ಮುನ್ಷಿಯವರು ಇಲ್ಲಿನ ಪರಿಸ್ಥಿತಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸವಿಸ್ತಾರ ವರದಿ ಸಲ್ಲಿಸಿದ್ದರು. ಹೀಗಾಗಿ ಸೇನಾ ಕಾರ್ಯಾಚರಣೆ ನಡೆಯಿತು. ಸೇನೆ ಹೈದರಾಬಾದ್ ಮೇಲೆ 8 ಸ್ಥಳಗಳಿಂದ ಏಕಕಾಲಕ್ಕೆ ದಾಳಿ ಆರಂಭಿಸಿತು. 9 ನೇ ರಾಷ್ಟ್ರೀಯ ಹೆದ್ದಾರಿ ಮುಖ್ಯ ಕಾರ್ಯಾಚರಣೆಗೆ ಆಯ್ಕೆ ಮಾಡಲಾಯಿತು. ರಜಾಕಾರರು ಅಲ್ಲಲ್ಲಿ ರಸ್ತೆ ಹಾಳು ಮಾಡಿ ಸೇತುವೆ ಕೆಡವಿ ಸೇನೆಯ ಟ್ಯಾಂಕರ್ ಗಳು ಮುಂದಕ್ಕೆ ಸಾಗದಂತೆ ತಡೆಯೊಡ್ಡಿದ್ದರು. ಆದ್ದರಿಂದ ಹೆದ್ದಾರಿ ಪಕ್ಕದ ಗ್ರಾಮಸ್ಥರು ಕೊಡಲಿ, ಕತ್ತಿ ಹಿಡಿದು ಬೆನ್ನಟ್ಟಿ ಕವಣೆ ಕಲ್ಲಿನಿಂದ ಹೊಡೆದು ಅವರ ಗುಂಪುಗಳನ್ನು ಚದುರಿಸಿದ್ದರಂತೆ.

ಮೇಜರ್ ಜನರಲ್ ಜೆ.ಎನ್.ಚೌಧರಿ ನೇತೃತ್ವದ ಸೇನೆ 13 ಸೆಪ್ಟೆಂಬರ್ 1948 ರಂದು ನಳದುರ್ಗ ಕೋಟೆ ವಶಪಡಿಸಿಕೊಂಡಿತು. ಮಾರ್ಗ ಮಧ್ಯದಲ್ಲಿ ತುರೋರಿ, ಕಲ್ಯಾಣ, ಹುಮನಾಬಾದ್, ರಾಜೇಶ್ವರದಲ್ಲಿಯೂ ಪ್ರಬಲ ವಿರೋಧ ಎದುರಿಸಬೇಕಾಯಿತು. ರಜಾಕಾರರು ಮತ್ತು ನಿಜಾಮ ಸೇನೆಯೊಂದಿಗೆ ಯುದ್ಧ ಮಾಡುತ್ತಾ 17 ರಂದು ಸೇನೆ ಹೈದರಾಬಾದ್ ವಶಪಡಿಸಿಕೊಂಡಿತು. ಹೀಗೆ ಐದು ದಿನಗಳವರೆಗೆ ನಡೆದ ಆಪರೇಷನ್ ಪೋಲೊ ಕಾರ್ಯಾಚರಣೆ ಯಶಸ್ವಿ ಆಗುವಲ್ಲಿ ಜನರ ಪಾತ್ರವೂ ಸಾಕಷ್ಟಿತ್ತು. ರಜಾಕಾರರು ಹಾಳು ಮಾಡಿದ ರಸ್ತೆಯಲ್ಲಿ ತಕ್ಷಣ ಕಲ್ಲು, ಮಣ್ಣು ಹಾಕಿ ಸೇನೆಗೆ ಮುಂದಕ್ಕೆ ಸಾಗಲು ಅನುವು ಮಾಡಿಕೊಟ್ಟಿರುವ ಪ್ರಸಂಗದ ನೆನಪು ಇಲ್ಲಿನ ಹಿರಿಯರಲ್ಲಿ ಹಾಗೆ ಉಳಿದಿದೆ.

ಮುಚಳಂಬ ಮತ್ತು ಗೋರಟಾ(ಬಿ) ಗ್ರಾಮಗಳ ಸೀಮೆಯಲ್ಲಿ ಹೋರಾಟಗಾರರನ್ನು ಜೀವಂತ ಸುಡಲಾಗಿತ್ತು. ಸೈನ್ಯವು ಮಹಾರಾಷ್ಟ್ರದ ನಳದುರ್ಗದಿಂದ 9 ನೇ ರಾಷ್ಟ್ರೀಯ ಹೆದ್ದಾರಿ ಮೂಲಕ ಹೈದರಾಬಾದ್ ಕಡೆಗೆ ಹೊರಟಿತ್ತು. ಆಗ ಅದಕ್ಕೆ ಅಡ್ಡಿ ಪಡಿಸಲು ಯತ್ನಿಸಿದ್ದ ರಜಾಕಾರರನ್ನು ಅಲ್ಲಲ್ಲಿ ಹೋರಾಟಗಾರರು ಗುಂಪು ಗೂಡಿ ಹಿಮ್ಮೆಟ್ಟಿಸಿದ್ದರು.

ಯುದ್ಧ ಮುಗಿದಿತ್ತು, ಯುದ್ಧಕ್ಕಿಂತ ಮುಂಚೆ ದೆಹಲಿಗೆ ಹೋಗಿ ಪಟೇಲರಿಗೆ ಸವಾಲು ಹಾಕಿ ವಾಪಸ್ ಬರೋವಾಗ ‘ಸಲಾಂ’ ಅಂತ ಹೇಳಿಬಂದಿದ್ದ ನಿಜಾಮ ಸೆಪ್ಟೆಂಬರ್ 17, 1948 ರಲ್ಲಿ ಹೈದ್ರಾಬಾದಿನ ಆಗಿನ ಬೇಗಂಪೇಟ್ ಏರಪೋರ್ಟ್ ನಲ್ಲಿ ಸರ್ದಾರ್ ಪಟೇಲರಿಗೆ ಕೈ ಮುಗಿದು ನಮಸ್ಕರಿಸಿ ಹೈದ್ರಾಬಾದ್ ಸಂಸ್ಥಾನವನ್ನ ಭಾರತಕ್ಕೆ ಯಾವುದೇ ಷರತ್ತಿಲ್ಲದೆ ವಿಲೀನಗೊಳಿಸುವ ಪ್ರಕ್ರಿಯೆಗೆ ಸಹಿ ಹಾಕಿದ.

5 ದಿನಗಳ ಕಾಲ(ಸೆಪ್ಟೆಂಬರ್ 13- 17 ರವರೆಗೆ) ರಜಾಕಾರರ ಪಡೆಗಳೊಂದಿಗೆ ಭಾರತೀಯ ಸೈನ್ಯ ಕಾದಾಡಿ ಹೈದ್ರಾಬಾದ್ ಸಂಸ್ಥಾನವನ್ನು ಭಾರತದಕ್ಕೆ ವಿಲೀನಗೊಳಿಸಿದ ಕೀರ್ತಿ ಸರ್ದಾರ್ ಪಟೇಲರಾದಿಯಾಗಿ ಬಾಬಾಸಾಹೇಬ್ ಅಂಬೇಡ್ಕರ್ ಹಾಗು ನಮ್ಮ ಭಾರತೀಯ ಸೈನ್ಯಕ್ಕೆ ಸಲ್ಲುತ್ತೆ.

ಈ ಕೆಲಸ ಪಟೇಲರು ಮಾಡಿರದಿದ್ದರೆ ಇಂದು ಭಾರತದ ಮಧ್ಯಭಾಗದಲ್ಲಿ ಮತ್ತೊಂದು ಪಾಕಿಸ್ತಾನ ಜನ್ಮ ತಾಳಿರುತ್ತಿತ್ತೇನೋ ಇಂತಹ ಸರ್ದಾರ್ ಪಟೇಲರು ನಮ್ಮ ಹೈದ್ರಾಬಾದ್ ಕರ್ನಾಟಕ ಭಾಗಕ್ಕಷ್ಟೇ ಯಾಕೆ ಈ ಭಾರತ ದೇಶಕ್ಕೆ ಎಲ್ಲ ದೇವರುಗಳಿಗಿಂತಲೂ ಮಿಗಿಲು ಅಂದರೆ ಬಹುಶಃ
ತಪ್ಪಾಗಲಾರದೇನೋ.

ಇಂದು ಕರ್ನಾಟಕದ ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ನಿಜಾಮನಿಂದ ಸ್ವಾತಂತ್ರ್ಯ ಸಿಕ್ಕ ಅಮೃತ ಘಳಿಗೆ,ಇತಿಹಾಸವನ್ನ ನಾವು ಮರೆಯಬಾರದು, ಮರೆತರೆ ಅದೇ ಇತಿಹಾಸ ನಮ್ಮನ್ನ ಬಲಿ ತೆಗೆದುಕೊಳ್ಳುತ್ತೆ, ಅದಕ್ಕೋಸ್ಕರ ಇತಿಹಾಸದ ಈ ರೋಚಕ ತುಣುಕನ್ನು ನಿಮ್ಮೆದುರಿಡೋ ಪ್ರಯತ್ನವಷ್ಟೇ!!!

-postcard team

Tags

Related Articles

Close