ಇತಿಹಾಸ

ಅಖಂಡ ಭಗವಾ ಭಾರತದ ಹರಿಕಾರ ಸಾಮ್ರಾಟ ಚಂದ್ರಗುಪ್ತ ಮೌರ್ಯನ ಸಮಾಧಿ ಕರ್ನಾಟಕದ ಶ್ರವಣಬೆಳಗೋಳದಲ್ಲಿದೆ ಎನ್ನುವ ವಿಚಾರ ಕನ್ನಡಿಗರಿಗೇ ಗೊತ್ತಿಲ್ಲ!!

ಶ್ರವಣಬೆಳಗೋಳ ಎಂದರೆ ಸಾಕು ಭಗವಾನ್ ಬಾಹುಬಲಿಯ ಭವ್ಯ ಮೂರ್ತಿ ನಮ್ಮ ಮನಸ್ಸಿನಲ್ಲಿ ಹಾದು ಹೋಗುತ್ತದೆ. ಆದರೆ ಶ್ರವಣಬೆಳಗೋಳದಲ್ಲಿ ಅಖಂಡ ಭಾರತವನ್ನು ಬೆಸೆದ ಭಾರತದ ಮಹಾನ್ ಸಾಮ್ರಾಟ ಚಂದ್ರಗುಪ್ತ ಮೌರ್ಯನ ಸಮಾಧಿಯೂ ಇದೆ ಎನ್ನುವುದು ಬಹುತೇಕರಿಗೆ ಗೊತ್ತೆ ಇಲ್ಲ!! ಬಹುಶಃ ಕನ್ನಡಿಗರಿಗಂತೂ ಇದರ ಪರಿವೆಯೂ ಇಲ್ಲ ಎಂದೆಣಿಸುತ್ತದೆ. ನಮ್ಮ ದೇಶದಲ್ಲಿ ಅಕಬರ-ಬಾಬರ-ಹುಮಾಯೂನನ ಸಮಾಧಿ ಎಲ್ಲಿದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಮಹಾನ್ ಹಿಂದೂ ಸಾಮ್ರಾಟ ಚಂದ್ರಗುಪ್ತ ಮೌರ್ಯ ಸಮಾಧಿ ಎಲ್ಲಿದೆ ಎನ್ನುವುದು ಗೊತ್ತಿಲ್ಲ! ಅಲೆಗ್ಸಾಂಡರನ ಸಮಕಾಲೀನ ಚಂದ್ರಗುಪ್ತ ಮೌರ್ಯ ಭಾರತದ ಶ್ರೇಷ್ಠ ಸಾಮ್ರಾಟರಲ್ಲೊಬ್ಬ. ಭಾರತದಲ್ಲಿ ಚಂದ್ರಗುಪ್ತ ಮೌರ್ಯನ ಪರಾಕ್ರಮ ಹೇಗಿತ್ತೆಂದರೆ ಸ್ವತಃ ಅಲೆಕ್ಸಾಂಡರನೂ ಭಾರತಕ್ಕೆ  ದಂಡೆತ್ತಿ ಬರಲು ಹಿಂದೇಟು ಹಾಕುತ್ತಿದ್ದ ಎನ್ನಲಾಗುತ್ತದೆ.

ಭಾರತದ ಕೀರ್ತಿಯನ್ನು ಜಗತ್ತಿನೆಲ್ಲೆಡೆ ಹಬ್ಬಿಸಿದ ಜೋಡಿ ಚಾಣಕ್ಯ-ಚಂದ್ರಗುಪ್ತರದ್ದು. ಚಂದ್ರಗುಪ್ತ ಮೌರ್ಯನ ಜನನ 340BCE ನಲ್ಲಿ ಬಿಹಾರದ ಪಾಟಲೀ ಪುತ್ರದಲ್ಲಾಗಿದ್ದರೆ, ಆತನ ದೇಹಾಂತ್ಯ 297BCE ನಲ್ಲಿ ಕರ್ನಾಟಕದ ಶ್ರವಣ ಬೆಳಗೋಳದಲ್ಲಾಯ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಅಖಂಡ ಭಾರತವನ್ನು ನಿರ್ಮಾಣ ಮಾಡಿದ ಚಂದ್ರಗುಪ್ತ ಮೌರ್ಯ ತನ್ನ ಸಾಮ್ರಾಜ್ಯವನ್ನು ಮಗ ಬಿಂದುಸಾರನ ಕೈಗಿತ್ತು ತಾನು ದಕ್ಷಿಣ ಭಾರತೆದೆಡೆಗೆ ಪಯಣಿಸಿದ್ದ. ಒಂದು ಸಾವಿರ ವರ್ಷಗಳ ನಂತರ ಬರೆದ ಜೈನ ಗ್ರಂಥಗಳಾದ ಹರಿಶೇನನ ಬೃಹತ್ ಕಥಾ ಕೋಶ, ರತ್ನ ನಂದಿಯ ಭದ್ರಬಾಹು ಚರಿತ, ಮುನಿವಂಸಾಭ್ಯುದಯ ಮತ್ತು ರಾಜವಳಿ ಕಥೆಗಳ ಪ್ರಕಾರ, ಸಾಮ್ರಾಟ ಚಂದ್ರಗುಪ್ತ ಮೌರ್ಯ ತನ್ನ ಸಾಮ್ರಾಜ್ಯವನ್ನು ತ್ಯಜಿಸಿ ಜೈನ ಮುನಿ ಭದ್ರಬಾಹುವಿನ ಜೊತೆ ದಕ್ಷಿಣ ಭಾರತದಲ್ಲಿ ನೆಲೆಸಿದ್ದ.

ತನ್ನ ಜೀವನದ ಬಹುತೇಕ ವರ್ಷಗಳನ್ನು ಆತ ಶ್ರವಣಬೆಳಗೋಳದಲ್ಲಿ ಕಳೆದಿದ್ದ ಮತ್ತು ಜೈನ ಪರಂಪರೆಯ ಪ್ರಕಾರ “ಸಲ್ಲೇಖನ” ವೃತ ಕೈಗೊಂಡು ದೇಹ ತ್ಯಾಗ ಮಾಡಿದ್ದ ಎಂದು ಹೇಳಲಾಗುತ್ತದೆ. ಈ ಗ್ರಂಥಗಳ ಜೊತೆಗೆ, 7 ರಿಂದ 15 ನೇ ಶತಮಾನದವರೆಗಿನ ಹಲವಾರು ಜೈನ ಸ್ಮಾರಕ ಮತ್ತು ಶಿಲಾಶಾಸನಗಳು ಭದ್ರಬಾಹು ಮತ್ತು ಚಂದ್ರಗುಪ್ತರ ಸಂಯೋಗಗಳನ್ನು ಸೂಚಿಸುತ್ತವೆ. ಈ ಸಂಯೋಗಗಳಿಂದ ಚಂದ್ರಗುಪ್ತ ಮೌರ್ಯ ಜೈನ ಮತಕ್ಕೆ ಪರಿವರ್ತನೆ ಹೊಂದಿರಬಹುದು ಎನ್ನಲಾಗುತ್ತದೆ. ಸನ್ಯಾಸಿ ಜೀವನಕ್ಕೆ ಮೊರೆ ಹೋದ ಚಂದ್ರಗುಪ್ತ ತನ್ನ ಗುರು ಭದ್ರಬಾಹುವಿನ ಮಾರ್ಗದರ್ಶನದಲ್ಲಿ ನಿತ್ಯವೂ ಶ್ಲೋಕ ಪಠಣೆ ಮಾಡುತ್ತಿದ್ದ ಮತ್ತು ಚಂದ್ರಗಿರಿ ಬೆಟ್ಟದಲ್ಲಿ ಹತ್ತಿಳಿದು ತನ್ನ ಅಧ್ಯಾತ್ಮಿಕ ಜೀವನವನ್ನು ಮುನ್ನಡೆಸುತ್ತಿದ್ದ ಎನ್ನುತ್ತಾರೆ.

ಅಧಿಕಾರದ ಉತ್ತುಂಗದಲ್ಲಿರುವಾಗಲೆ ಮತ್ತು ಅತಿ ಕಿರಿಯ ಪ್ರಾಯದಲ್ಲೆ ಹಠಾತ್ತಾಗಿ ಚಂದ್ರಗುಪ್ತ ತನ್ನ ಅಧಿಕಾರವನ್ನು ತ್ಯಜಿಸಲು ಆತ ಜೈನ ಮತದ ಪ್ರಭಾವಕ್ಕೆ ಒಳಗಾಗಿದ್ದು ಕಾರಣವಿರಬಹುದೆನ್ನುವುದನ್ನು ವಿನ್ಸೆಂಟ್ ಸ್ಮಿತ್ ಉಲ್ಲೇಖಿಸಿದ್ದ ಎಂದು ಮೂಕರ್ಜಿ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಶ್ರವಣಬೆಳಗೋಳದ ಯಾವ ಬೆಟ್ಟದ ಮೇಲೆ ಚಂದ್ರಗುಪ್ತ ಮೌರ್ಯ ಸಂನ್ಯಾಸತ್ವವನ್ನು ಪಾಲಿಸಿದ್ದನೋ ಅದನ್ನು “ಚಂದ್ರಗಿರಿ ಬೆಟ್ಟ” ಎಂದು ಕರೆಯಲಾಗುತ್ತದೆ ಮತ್ತು ಅಲ್ಲಿಯೇ ಚಂದ್ರಗುಪ್ತನ ಸ್ಮರಣಾರ್ಥ ಕಟ್ಟಿದ ಚಂದ್ರಗುಪ್ತ ಬಸದಿಯೂ ಇದೆ.

ಹಿಂದೂ ಗ್ರಂಥಗಳು ಕೂಡಾ ಪಾಟಲಿಪುತ್ರದ ಆಸ್ಥಾನದಲ್ಲಿ ಚಂದ್ರಗುಪ್ತ ಮತ್ತು ಜೈನ ಸಮುದಾಯದ ನಡುವೆ ನಿಕಟ ಸಂಬಂಧವನ್ನು ಒಪ್ಪಿಕೊಳ್ಳುತ್ತವೆ. ಮೂಲತಃ ಬ್ರಾಹ್ಮಣ ಪ್ರಿಯ ಚಂದ್ರಗುಪ್ತ ತನ್ನ ಆಸ್ಥಾನದಲ್ಲಿ ಜೈನರನ್ನು ತನ್ನ ದೂತರಂತೆ ನೇಮಿಸಿಕೊಂಡಿದ್ದ ಮತ್ತು ಇದು ಪರೋಕ್ಷವಾಗಿ ಚಂದ್ರಗುಪ್ತನ ಮೇಲೆ ಜೈನ ಚಿಂತನೆಯ ಪ್ರಭಾವವನ್ನು ಬೀರಿರಬಹುದು ಎಂದು ಗ್ರಂಥಗಳು ದೃಢೀಕರಿಸುತ್ತವೆ. ಜೈನ ಮತದ ಪ್ರಭಾವಕ್ಕೊಳಗಾಗಿ ಶ್ರವಣಬೆಳಗೋಳದಲ್ಲಿ ನೆಲೆಸಿ, ಚಂದ್ರಗಿರಿ ಬೆಟ್ಟದಲ್ಲಿರುವ ಗುರು ಭದ್ರಬಾಹುವಿನ ಗುಹೆಯಲ್ಲಿ ಚಂದ್ರಗುಪ್ತ ಮೌರ್ಯ ಸಲ್ಲೇಖನ ವೃತ ಕೈಗೊಂಡು ದೇಹ ತ್ಯಜಿಸುತ್ತಾರೆ ಎಂದು ಇತಿಹಾಸದಲ್ಲಿ ದಾಖಲಾಗಿದೆ.

ಅಖಂಡ ಹಿಂದೂ ಸಾಮ್ರಾಜ್ಯ ಸ್ಥಾಪಿಸಿದ ಭಾರತದ ಒಬ್ಬ ಮಹಾನ್ ಸಾಮ್ರಾಟನ ಸಮಾಧಿ ಇವತ್ತು ಅನಾಥರಂತೆ ಬಿದ್ದುಕೊಂಡಿದೆ. ಮುಘಲ ಮತಾಂಧರ ಗೋರಿಗಳಿಗೆ ಅಡ್ಡಡ್ಡ ಉದ್ದುದ್ದ ಬೀಳುವ, ಅವರ ದರ್ಗಾಗಳನ್ನು ಪೂಜಿಸುವ ನಮಗೆ ನಮ್ಮ ಸನಾತನ ಪ್ರಂಪರೆಯ ಭವ್ಯ ಇತಿಹಾಸದ ಪರಿವೆಯೆ ಇಲ್ಲ. ಎಂತಹ ದೌರ್ಭಾಗ್ಯವಿದು? ಭಾರತದ ಮೂಲೆ ಮೂಲೆಗಳನ್ನು ಮೌರ್ಯ ಸಾಮ್ರಾಜ್ಯದ ಏಕ ಛತ್ರದಡಿ ತಂದ ಚಂದ್ರಗುಪ್ತ ಮೌರ್ಯ ಅಂತಿಮ ದಿನಗಳನ್ನು ಕರ್ನಾಟಕದಲ್ಲಿ ಕಳೆದು, ಕನ್ನಡ ಮಣ್ಣಿನಲ್ಲಿ ಪ್ರಾಣ ತ್ಯಜಿಸಿದ್ದರೆನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಶ್ರವಣಬೆಳಗೋಳಕ್ಕೆ ಭೇಟಿ ನೀಡಿದರೆ, ನಮ್ಮ ಮಹಾನ್ ಸಮ್ರಾಟ ಓಡಾಡಿದ ಚಂದ್ರಗಿರಿ ಬೆಟ್ಟಕ್ಕೆ ಮತ್ತು ಆತ ಸಲ್ಲೇಖನ ಕೈಗೊಂಡು ಸಮಾಧಿಯಾದ ಸ್ಥಳಕ್ಕೆ ಸಾಷ್ಟಾಂಗ ನಮಸ್ಕಾರ ಹಾಕಿ ಬನ್ನಿ.

-ಶಾರ್ವರಿ

Source
indiabackpackerwikipedia
Tags

Related Articles

Close