ಪ್ರಚಲಿತ

‘ಮಾಡಿದ್ದುಣ್ಣೊ ಮಹರಾಯ’

ಕೆಲವು ರಾಜಕಾರಣಿಗಳು, ಅವರ ಕುಟುಂಬಸ್ಥರು, ಹಿಂಬಾಲಕರು ಕಾನೂನನ್ನು ಯಾರು, ಹೇಗೆ ಬೇಕಾದರೂ ಬಳಕೆ ಮಾಡಬಹುದು. ಹೇಗೆ ಬೇಕಾದರೂ ಅದನ್ನು ತಮಗೆ ಬೇಕಾದ ಹಾಗೆ ಬದಲಾಯಿಸಬಹುದು ಎಂಬ ಹುಸಿ ಭಾವನೆಯಲ್ಲಿ ಬದುಕುತ್ತಿದ್ದಾರೆ.

ಅವರಿಗೆ ಕಾನೂನಿನ ಬಗ್ಗೆ ಸತ್ಯದ ಅರಿವಿಲ್ಲ. ತಮಗೆ ಪ್ರಿಯವಾದ ರಾಜಕೀಯ ವ್ಯಕ್ತಿಗಳ ಕತ್ತಿಗೆ ಕಾನೂನು ಕುಣಿಕೆ ಬಿತ್ತು ಎಂದಾಕ್ಷಣವೇ ಅವರು ತಮ್ಮ ವಿರೋಧಿಗಳ ವಿರುದ್ಧ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಮಾಡುತ್ತಾರೆ. ತಮ್ಮವರ ತಪ್ಪಿದ್ದರೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ, ಬೇಕು ಬೇಕೆಂದು ಸುಖಾಸುಮ್ಮನೆ ನಮ್ಮವರನ್ನು ಸುಳ್ಳು ಆಪಾದನೆ ಹೊರಿಸಿ ಕಾನೂನಿನ ಕೂಪಕ್ಕೆ ತಳ್ಳಿದ್ದಾರೆ ಎನ್ನುವ ಆರೋಪ ಮಾಡಿ, ತಮ್ಮ ಹತಾಶೆಯನ್ನು ಹೊರಗೆ ಹಾಕುತ್ತಾರೆ. ಇತ್ತೀಚೆಗಂತೂ ಪ್ರಧಾನಿ ಮೋದಿ ವಿರೋಧಿಗಳು ಏನೇ ಅಪರಾಧ, ತಪ್ಪು ಮಾಡಿ ಕಾನೂನಿನ ಪ್ರಕಾರ ಶಿಕ್ಷೆಗೆ ಒಳಪಟ್ಟರೆ ಇದಕ್ಕೆಲ್ಲಾ ಪ್ರಧಾನಿ ಮೋದಿ ಅವರೇ ಕಾರಣ ಎಂದು ಬೊಬ್ಬೆ ಹೊಡೆಯುವ ನಾಲಾಯಕುಗಳಿಗೂ ನಮ್ಮ ದೇಶದಲ್ಲೇನೂ ಕಮ್ಮಿ ಇಲ್ಲ.

ದೆಹಲಿಯ ಸಿ ಎಂ ಅರವಿಂದ ಕೇಜ್ರಿವಾಲ್ ಅವರನ್ನು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಾಗೆ ED ಬಂಧಿಸಿರುವುದು, ಅವರನ್ನು ಏಳು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿರುವುದು ಎಲ್ಲರಿಗೂ ತಿಳಿದ ವಿಷಯ. ಮಾಡಿದ ತಪ್ಪಿಗೆ ಕೇಜ್ರಿವಾಲ್ ಈ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವುದು ಸಂಗತ.

ಹೀಗಿದ್ದರೂ ಅವರ ಪತ್ನಿ ಸುನೀತಾ ಮಾತ್ರ ಇದೆಲ್ಲಾ ಪ್ರಧಾನಿ ಮೋದಿ ಅವರ ಪ್ಲ್ಯಾನ್ ಎನ್ನುವ ಹಾಗೆ ಹೇಳಿಕೆ ನೀಡಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಸುನೀತಾ, ಪ್ರಧಾನಿ ಮೋದಿ ಅವರು ತಮ್ಮ ಅಧಿಕಾರದ ದುರಹಂಕಾರದಿಂದ ಮೂರು ಬಾರಿ ಮುಖ್ಯಮಂತ್ರಿಯಾದ ದೆಹಲಿ ಸಿ ಎಂ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಎಲ್ಲರನ್ನೂ ನಾಶ ಮಾಡಲು ಹೊರಟಿದ್ದಾರೆ. ಇದು ದೆಹಲಿಯ ಜನರಿಗೆ ಮಾಡಿದ ದ್ರೋಹ ಎಂದು ಅವರು ಹೇಳಿದ್ದಾರೆ. ನಿಮ್ಮ ಮುಖ್ಯಮಂತ್ರಿ ಸದಾ ನಿಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಅವರ ಜೀವನ ದೇಶಕ್ಕಾಗಿ ಮುಡಿಪಾಗಿತ್ತು. ಸಾರ್ವಜನಿಕರಿಗೆ ಎಲ್ಲವೂ ಗೊತ್ತು ಎಂದು ಹೇಳಿದ್ದಾರೆ.

ಕೇಜ್ರಿವಾಲ್ ಗುರು ಅಣ್ಣಾ ಹಜಾರೆ ಅವರು, ಅಬಕಾರಿ ನೀತಿ ರೂಪಿಸದಂತೆ ನಾನು ಈ ಹಿಂದೆಯೇ ಕೇಜ್ರೀವಾಲ್‌ಗೆ ಎಚ್ಚರಿಸಿದ್ದೆ. ಅವರ ನಿರ್ಲಕ್ಷ್ಯ ಧೋರಣೆಯೇ ಅವರಿಗೆ ಮುಳುವಾಗಿದೆ ಎಂದು ಹೇಳಿದ್ದಾರೆ.

ಅಬಕಾರಿ ನೀತಿ ರೂಪಿಸುವುದು ನಮ್ಮ ಕೆಲಸ ಅಲ್ಲ. ಮದ್ಯ ಸೇವನೆ ಸರಿಯಲ್ಲ ಎಂಬ ಸತ್ಯ ಮಕ್ಕಳಿಗೂ ಗೊತ್ತು. ಈ ಅಬಕಾರಿ ನೀತಿಯಿಂದ ಹಿಂದೆ ಸರಿಯಲು ಅವರಿಗೆ ಸೂಚಿಸಿದ್ದೆ. ಆದರೆ ಅವರು ಈ ನೀತಿ ರೂಪಿಸಿಯೇ ಬಿಟ್ಟರು. ಅವರ ಈ ನಡೆಯೇ ಈಗ ಅವರಿಗೆ ಮುಳ್ಳಾಗಿ ಪರಿಣಮಿಸಿದೆ ಎಂದು ಹಜಾರೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಹೆಚ್ಚು ಆದಾಯ ಗಳಿಸುವ ಭ್ರಮೆಗೆ ಬಿದ್ದು, ಅಬಕಾರಿ ನೀತಿ ರೂಪಿಸಿದ ಕೇಜ್ರಿವಾಲ್ ಸದ್ಯದ ಸ್ಥಿತಿ ‘ಮಾಡಿದ್ದುಣ್ಣೋ ಮಹರಾಯ’ ಎಂಬಂತಾಗಿದೆ. ಈ ಹಿಂದೆ ಮದ್ಯದ ವಿರುದ್ಧ ಹೋರಾಟ ಮಾಡಿದ ವ್ಯಕ್ತಿ, ದುರಾಸೆಗೆ ಬಿದ್ದು ಅಬಕಾರಿ ನೀತಿ ರೂಪಿಸಲು ಹೊರಟದ್ದು ಹಾಸ್ಯಾಸ್ಪದವಲ್ಲದೆ ‌ಮತ್ತೇನು?

ಒಟ್ಟಿನಲ್ಲಿ ಅವರು ತಪ್ಪೇ ಮಾಡದಿದ್ದರೆ ಬಂಧಿಸುವ ಕೆಲಸವನ್ನು ಇಡಿ ಅಧಿಕಾರಿಗಳು ಮಾಡುತ್ತಿರಲಿಲ್ಲ. ಆದರೆ, ಅವರಿಂದ ತಪ್ಪು ನಡೆದಿದೆ. ಈಗ ಸರ್ಕಾರ ಮತ್ತು ಕಾನೂನು ತಮ್ಮ ಚೌಕಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಂಡಿದೆ.

ಆದರೆ ಕೋತಿ ಬೆಣ್ಣೆ ತಿಂದು, ಮೇಕೆ ಮೂತಿಗೆ ಒರೆಸಿತು ಎಂಬಂತೆ, ಕೇಜ್ರಿವಾಲ್ ತಪ್ಪಿಗಾಗಿ ನಡೆದ ಅವರ ಬಂಧನವನ್ನು, ಪ್ರಧಾನಿ ಮೋದಿ ಅವರು ಮಾಡಿಸಿದ್ದು ಎಂಬಂತೆ ಹೇಳುತ್ತಿರುವ ಅವರ ಕುಟುಂಬಸ್ಥರಿಗೆ ಮತ್ತು ಹಿಂಬಾಲಕರಿಗೆ ನೈಜ ಸತ್ಯ ಎಂದು ಅರಿವಾಗುವುದೋ ದೇವರೇ ಬಲ್ಲ.

Tags

Related Articles

Close