ಪ್ರಚಲಿತ

ಕ್ರೀಡಾ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಕೊಡುಗೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಅಂಜು ಬಾಬಿ ಜಾರ್ಜ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ವಿಶೇಷವಾದ ಪ್ರೋತ್ಸಾಹ ನೀಡುತ್ತಿದೆ‌. ಈ ಹಿಂದೆ ಕೇಂದ್ರದ ಆಡಳಿತ ಚುಕ್ಕಾಣಿ ಹಿಡಿದಿದ್ದ ಯಾವ ಸರ್ಕಾರ ಸಹ ನೀಡದಷ್ಟು ಪ್ರಮಾಣದಲ್ಲಿ ಕ್ರೀಡಾ ಕ್ಷೇತ್ರಕ್ಕೆ, ಕ್ರೀಡಾಪಟುಗಳಿಗೆ ಬೆಂಬಲ ನೀಡುವ, ಅವರ ಅಗತ್ಯತೆಗಳನ್ನು ಪೂರೈಸುವ ಕೆಲಸವನ್ನು ಪ್ರಧಾನಿ ಮೋದಿ ಸರ್ಕಾರ ಮಾಡುತ್ತಿದೆ ಎಂದರೆ ಅತಿಶಯವಾಗಲಾರದು.

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹ, ಕ್ರೀಡಾ ಕ್ಷೇತ್ರದಲ್ಲಾಗಿರುವ ‌ಸಕಾರಾತ್ಮಕ ಬೆಳವಣಿಗೆಗಳ ಬಗ್ಗೆ ಭಾರತದ ಹೆಮ್ಮೆಯ ಕ್ರೀಡಾಪಟು ಅಂಜು ಬಾಬಿ‌ ಜಾರ್ಜ್ ಮಾತನಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಡೆದ ಕ್ರಿಸ್ಮಸ್ ಆಚರಣೆಯ ಸಂದರ್ಭದಲ್ಲಿ ಅಂಜು ಮಾತನಾಡಿದ್ದು, ಈಗಿನ ಕ್ರೀಡಾಪಟುಗಳನ್ನು ನೋಡಿ ನನಗೆ ಅಸೂಯೆಯಾಗುತ್ತಿದೆ. ನಾನು ಈ ಸಂದರ್ಭದಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕಾಗಿತ್ತು. ನಾನು ತಪ್ಪಾದ ಸಮಯದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ ಎಂದು ನನಗೆ ಈಗ ಅನಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಅಂಜು ಬಾಬಿ ಜಾರ್ಜ್ ಅವರು ಇಪ್ಪತ್ತು ವರ್ಷಗಳ ಹಿಂದೆ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ ಲಾಂಗ್ ಜಂಪ್‌ನಲ್ಲಿ ಕಂಚು ಗೆದ್ದ ಸ್ಪರ್ಧಿಯಾಗಿದ್ದಾರೆ.

ಭಾರತದಲ್ಲಿ ಕ್ರೀಡಾಪಟುಗಳ ಸಾಧನೆಯನ್ನು ಮುಕ್ತವಾಗಿ ಒಪ್ಪಿಕೊಂಡು, ಅವರಿಗೆ ಸ್ಪೂರ್ತಿ ತುಂಬುವ, ಅವರ ಅಗತ್ಯತೆಗಳನ್ನು ಈಡೇರಿಸುವ ಪ್ರಧಾನಿ ಮೋದಿ ಅವರನ್ನು ಅಂಜು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ನಾನು ಈ ಸಂದರ್ಭದಲ್ಲಿ ಆಡಿದ್ದರೆ ನನ್ನ ಗೆಲುವುಗಳನ್ನು ಸಹ ವಿಭಿನ್ನ ರೀತಿಯಲ್ಲಿ ಸಂಭ್ರಮಿಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಎರಡು ದಶಕಗಳ ಹಿಂದೆ ವಿಶ್ವ ಅಥ್ಲೆಟಿಕ್‌ನಲ್ಲಿ ಪದಕ ಗೆದ್ದ ಮೊದಲ ಕ್ರೀಡಾಪಟು ಎಂಬ ಹಿರಿಮೆಗೆ ಭಾಜನಳಾಗಿದ್ದೆ. ಆದರೆ ಆ ಸಮಯದಲ್ಲಿ ನಾನು ಸರ್ಕಾರಿ ನೌಕರಿಯಲ್ಲಿದ್ದರೂ ನನಗೆ ಭಡ್ತಿ ನೀಡಲು ಸಹ ಆಗಿನ ಸರ್ಕಾರ ಸಿದ್ದವಿರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತದ ಕ್ರೀಡಾ ವಲಯಕ್ಕೆ ಸಂಬಂಧಿಸಿದ ಹಾಗೆ ಬಹಳಷ್ಟು ಬದಲಾವಣೆಗಳು ಸಾಧ್ಯವಾಗಿವೆ. ಮುಂಬರುವ ವರ್ಷಗಳಲ್ಲಿ ಭಾರತ ಜಾಗತಿಕ ಕ್ರೀಡೆಗಳಲ್ಲಿ ಅಗ್ರಗಣ್ಯ ಸ್ಥಾನಕ್ಕೆ ಏರುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags

Related Articles

Close