ಪ್ರಚಲಿತ

ಭಾರತದ ಆಹಾರ ಜ್ಞಾನ ಅಪರೂಪದ್ದಾಗಿದ್ದು, ಪ್ರಪಂಚ ವೇ ಇದರ ಲಾಭ ಪಡೆಯಲಿದೆ: ಪ್ರಧಾನಿ ಮೋದಿ

ಭಾರತದ ಆಹಾರ ಕ್ಷೇತ್ರವನ್ನು ದೇಶದ ಹೂಡಿಕೆದಾರ ಸ್ನೇಹಿ ಉಪಕ್ರಮಗಳು ಹೊಸ ಎತ್ತರಕ್ಕೆ ಏರುವಂತೆ ಮಾಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ‘ವರ್ಲ್ಡ್ ಫುಡ್ ಇಂಡಿಯಾ 2023’ ರ ದ್ವಿತೀಯ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿ, ವಿಶ್ವದ ಹೂಡಿಕೆದಾರರಿಗೆ ಭಾರತದ ವೈವಿಧ್ಯತೆಯನ್ನು ಒಳಗೊಂಡ ಆಹಾರ ಕ್ಷೇತ್ರ ಲಾಭದಾಯಕ ಕ್ಷೇತ್ರದಂತಾಗಿದೆ ಎಂದು ಅವರು ತಿಳಿಸಿದ್ದಾರೆ. ಆಹಾರ ಭದ್ರತೆ ಈ ಶತಮಾನದಲ್ಲಿ ಪ್ರಪಂಚ ಎದುರಿಸುತ್ತಿರುವ ಬಹು ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದೂ ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.

ಇಂದು ಆಹಾರ ಕ್ಷೇತ್ರ ಎನ್ನುವುದು ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಚಿನ್ನದಂತಹ ಅವಕಾಶವನ್ನು ಒದಗಿಸಿ ಕೊಟ್ಟಿದೆ. ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಹಾಗೆ ಇರುವ ಪ್ರತಿ ವಲಯದಲ್ಲಿಯೂ ಭಾರತ ಅತ್ಯುತ್ತಮ ಬೆಳವಣಿಗೆಗಳನ್ನು ಸಾಧಿಸಿದೆ. ಪ್ಯಾಕೇಜ್ಡ್ ಆಹಾರಗಳ ಬೇಡಿಕೆ ಸಹ ಗಮನಾರ್ಹ ಎಂಬಂತೆ ಹೆಚ್ಚಳವಾಗಿದೆ. ಇದು ರೈತರಿಗೆ, ಉದ್ಯಮಿಗಳಿಗೆ, ಸ್ಟಾರ್ಟ್‌ಅಪ್‌ಗಳ ಉಗಮಕ್ಕೂ ಹೆಚ್ಚು ಅವಕಾಶಗಳನ್ನು ಒದಗಿಸಿಕೊಟ್ಟಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮ ದೇಶದ ಸ್ತ್ರೀಯರು ಆಹಾರ ಸಂಸ್ಕರಣಾ ಉದ್ಯಮವನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಬೆಂಬಲಿಸಲು, ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಪ್ರತಿ ಹಂತದಲ್ಲಿಯೂ ಮಹಿಳಾ ಉದ್ಯಮಿಗಳು ಮತ್ತು ಸ್ವಸಹಾಯ ಗುಂಪುಗಳನ್ನು ಉತ್ತೇಜನ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ನುಡಿದಿದ್ದಾರೆ.

ಸಾವಿರಾರು ವರ್ಷಗಳಿಂದಲೇ ಭಾರತದ ಸುಸ್ಥಿರವಾದ ಆಹಾರ ಸಂಸ್ಕೃತಿಯು ವಿಕಸನಗೊಂಡಿದೆ. ನಮ್ಮ ಹಿರಿಯ ತಲೆಮಾರು, ಪೂರ್ವಜರು ಆಯುರ್ವೇದದ ಜೊತೆಗೆ ಆಹಾರ ಪದ್ಧತಿಯನ್ನು ಮಿಳಿತಗೊಳಿಸಿದ್ದಾರೆ. ಭಾರತದ ಆಹಾರ ಜ್ಞಾನ ಅಪರೂಪದ್ದಾಗಿದ್ದು, ಇದರಿಂದ ಇಡೀ ಪ್ರಪಂಚವೇ ಲಾಭ ಪಡೆಯಲಿದೆ ಎಂದು ಅವರು ಹೇಳಿದ್ದಾರೆ. ಭಾರತ ದೇಶ ಸಿರಿ ಧಾನ್ಯಕ್ಕೆ ಅನ್ನದ ಮಾನ್ಯತೆ ನೀಡಿದೆ. ಈ ವರ್ಷ ಅಂತರಾಷ್ಟ್ರೀಯ ಸಿರಿ ಧಾನ್ಯ ವರ್ಷವನ್ನು ಆಚರಣೆ ಮಾಡಲಾಗುತ್ತಿದೆ. ಭಾರತದ ಸೂಪರ್ ಫುಡ್ ಬಕೆಟ್‌ನ ಪ್ರಮುಖ ಅಂಶ ಸಿರಿ ಧಾನ್ಯ ವಾಗಿದೆ. ಶೀಘ್ರವೇ ಇದು ಪ್ರಪಂಚದ ಮೂಲೆ ಮೂಲೆಗೆ ತಲುಪಲಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags

Related Articles

Close