ಪ್ರಚಲಿತ

ಬಿಜೆಪಿ ಚುನಾವಣಾ ಪ್ರಣಾಳಿಕೆ 24 ಕ್ಯಾರೆಟ್ ಚಿನ್ನ

ದೇಶದಲ್ಲಿ ಇನ್ನೇನು ಕೆಲವೇ ಸಮಯದಲ್ಲಿ ಲೋಕಸಭಾ ಚುನಾವಣಾ ಹಬ್ಬ ನಡೆಯಲಿದೆ. ಎಲ್ಲಾ ಪಕ್ಷಗಳೂ ದೇಶದೆಲ್ಲೆಡೆ ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕಾರ್ಯದಲ್ಲಿ ಸಹ ತೊಡಗಿಸಿಕೊಂಡಿವೆ. ಒಂದು ಪಕ್ಷ ಇನ್ನೊಂದು ಪಕ್ಷದ ಮೇಲೆ ಕೆಸರೆರಚುವ ಕಾರ್ಯದಲ್ಲಿ ನಿರತವಾಗಿವೆ.

ಹಾಗೆಯೇ ಎಲ್ಲಾ ಪಕ್ಷಗಳು ತಮ್ಮ ಪಕ್ಷ ಜಯ ಗಳಿಸಿದರೆ ಯಾವೆಲ್ಲಾ ಕೆಲಸಗಳನ್ನು ಮಾಡಲಿದ್ದೇವೆ ಎನ್ನುವ ಪ್ರಣಾಳಿಕೆಯನ್ನು ಸಹ ಜನರ ಮುಂದಿಟ್ಟಿವೆ. ಬಿಜೆಪಿ ಸಹ ತನ್ನ ಜನಸ್ನೇಹಿ ಪ್ರಣಾಳಿಕೆಯನ್ನು ದೇಶದ ಮುಂದಿಟ್ಟಿದ್ದು, ಈ ಪ್ರಣಾಳಿಕೆಗೆ ಸಂಬಂಧಿಸಿದ ಹಾಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮಾತನಾಡಿದ್ದಾರೆ.

ಬಿಜೆಪಿ ಪ್ರಣಾಳಿಕೆಯನ್ನು ಬಣ್ಣಿಸಿರುವ ಅವರು, ಈ ಪ್ರಣಾಳಿಕೆಯಲ್ಲಿ ಮಹಿಳೆಯರು, ರೈತರು, ಬಡವರು ಹಾಗೂ ಯುವಕರ ಏಳಿಗೆಗಾಗಿ ಭರವಸೆಗಳನ್ನು ನೀಡಲಾಗಿದೆ. ಸುಮಾರು 14 ಭರವಸೆಗಳನ್ನು ನೀಡಲಾಗಿದ್ದು, ಈ ಎಲ್ಲಾ ಭರವಸೆಗಳು 24 ಕ್ಯಾರೆಟ್ ಚಿನ್ನದ ಹಾಗೆ ಪರಿಶುದ್ಧವಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಬಿಜೆಪಿ ತಾನು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವ ಮೂಲಕ ಜನರಲ್ಲಿ ವಿಶ್ವಾಸ ಗಳಿಸಿದೆ. ಈ ಬಾರಿಯ ಚುನಾವಣೆಗೆ ಬಿಜೆಪಿ ನೀಡಿರುವ ಪ್ರಣಾಳಿಕೆಯು ಸಹ 24 ಕ್ಯಾರೆಟ್‌ನ ಚಿನ್ನದ ಹಾಗೆ ಅತ್ಯಂತ ಪರಿಶುದ್ಧವಾಗಿದೆ. ಬಿಜೆಪಿ ಬಿಡುಗಡೆ ಮಾಡಿರುವ ಈ ಭರವಸೆಗಳ ಸಂಕಲ್ಪಗಳನ್ನು ವಿಶ್ವ ರಾಜಕಾರಣದಲ್ಲಿ ಸುವರ್ಣಾಲಂಕಾರಗಳಲ್ಲಿ ನೋಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ ನೀಡಲಾಗಿದ್ದ ಭರವಸೆಗಳಲ್ಲಿ ಹೆಚ್ಚಿನ ಭರವಸೆಗಳನ್ನು ‌ನಾವು ಈಡೇರಿಸುವ ಕೆಲಸವನ್ನು ಮಾಡಿದ್ದೇವೆ. ಮುಖ್ಯವಾಗಿ ಆರ್ಟಿಕಲ್ 370 ರದ್ದತಿ, ಮಹಿಳಾ ಮೀಸಲಾತಿ, ಶ್ರೀರಾಮ ಮಂದಿರ ನಿರ್ಮಾಣ, ತ್ರಿವಳಿ ತಲಾಖ್ ರದ್ದತಿ ಹೀಗೆ ಮಹತ್ವದ ಹಲವಾರು ಭರವಸೆಗಳನ್ನು ಈಡೇರಿಸಿದ್ದೇವೆ. ಈ ಪ್ರಣಾಳಿಕೆಗಳನ್ನು ರಚನೆ ಮಾಡುವ ವೇಳೆ ನಾವು ಸುಮಾರು ಹದಿನೈದು ಲಕ್ಷಕ್ಕೂ ಹೆಚ್ಚಿನ ಸಲಹೆಗಳನ್ನು ನಾವು ಗಣನೆಗೆ ತೆಗೆದುಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಪಕ್ಷ ಈ ಹಿಂದಿನ ಚುನಾವಣೆಗಳಲ್ಲಿಯೂ ಅತ್ಯಂತ ಕಠಿಣ, ಇಂತಹ ವಿಷಯಗಳು ದೇಶದಲ್ಲಿ ಸಂಭವಿಸುವುದೇ ಅಸಾಧ್ಯ ಎನ್ನುವಂತಹ ಹಲವಾರು ವಿಷಯಗಳನ್ನು ಸಾಧ್ಯವಾಗಿಸಿದ ಕೀರ್ತಿ ಭಾರತೀಯ ಜನತಾ ಪಕ್ಷಕ್ಕೆ ಸಲ್ಲಬೇಕು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ತಾವು ನೀಡಿದ ಭರವಸೆಗಳನ್ನು ಈಡೇರಿಸುವುದರ ಜೊತೆಗೆ, ದೇಶದ ಜನರ ಅಭಿವೃದ್ಧಿಯ ವಿಷೊರದಲ್ಲೂ ಯಾವುದೇ ರಾಜಿ ಮಾಡಿಕೊಂಡಿಲ್ಲ ಎನ್ನುವುದು ಸ್ಪಷ್ಟ. ಹಾಗೆಯೇ ದೇಶದ ಅಭಿವೃದ್ಧಿಯ ಕೆಲಸದಲ್ಲೂ ಸದಾ ಮುಂದಿದ್ದು, ದೇಶವನ್ನು ವಿಶ್ವಕ್ಕೆ ಮಾದರಿಯಾಗಿಸಿದ ಕೀರ್ತಿ ಪ್ರಧಾನಿ ಮೋದಿ ಸರ್ಕಾರದ್ದು.

ಜನರ ನಿರೀಕ್ಷೆಗಳನ್ನು ಸುಳ್ಳಾಗಿಸದ ಬಿಜೆಪಿ ಈ ಬಾರಿಯೂ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯಲಿದೆ ಎನ್ನುವುದು ಸ್ಪಷ್ಟ. ಮತದಾರ ಈ ಬಾರಿಯೂ ಬಿಜೆಪಿಗೆ ಮಣೆ ಹಾಕಲಿದ್ದಾನೆ ಎನ್ನುವ ಭರವಸೆ ಸಾರ್ವಜನಿಕರದ್ದು.

Tags

Related Articles

Close