ಅಂಕಣ

ಭಾರತದ ಸ್ವಾತಂತ್ರ್ಯ ಹೋರಾಟದ ಕರಾಳ ಅಧ್ಯಾಯ, ಇನ್ನು ಮುಂದೆ ಬ್ರಿಟಿಷರ ಪಠ್ಯ ಪುಸ್ತಕಗಳಲ್ಲಿ ಲಭ್ಯ!!?? ಅಷ್ಟಕ್ಕೂ ಆ ಕರಾಳ ಅಧ್ಯಾಯವಾದರೂ ಯಾವುದು??

ಭಾರತದ ಇತಿಹಾಸದಲ್ಲಿಯೇ ಎಂದೂ ಕೂಡ ನಡೆಯದೇ ಇದ್ದಂತಹ ದುರಂತವು ಅಂದು ನಡೆದೇ ಹೋಗಿತ್ತು!! ಬ್ರಿಟಿಷರ ಅಟ್ಟಹಾಸಕ್ಕೆ ಸಾವಿರಾರು ಅಮಾಯಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದರು!! ಚೆಲ್ಲಾ ಪಿಲ್ಲಿಯಾಗಿ ಹರಡಿರುವ ರಕ್ತ ಸಿಕ್ತ ದೇಹಗಳು ಒಂದು ಕಡೆಯಾದರೆ, ದಿಕ್ಕೇ ತೋಚದೆ ಬಾವಿಯಲ್ಲಿ ಜಿಗಿದು ಪ್ರಾಣ ಬಿಡುತ್ತಿರುವ ಜನಗಳ ಕೂಗಿಗೆ ಸಾಕ್ಷಿಯಾಯಿತು ಆ ಕರಾಳ ದಿನ!! 99 ವರ್ಷಗಳ ಹಿಂದೆ ನಡೆದು ಹೋದ ಆ ಭೀಕರ ಮಾರಣ ಹೋಮವು ಮನುಕುಲದ ಇತಿಹಾಸದ ಅತ್ಯಂತ ನಿರ್ಧಯ ಹತ್ಯಾಕಾಂಡವಾಗಿತ್ತು!!

ಭಾರತದ ಇತಿಹಾಸದಲ್ಲಿ ನಡೆದ ಅತ್ಯಂತ ನಿರ್ಧಯ ಹತ್ಯಾಕಾಂಡದ ಬಗ್ಗೆ ಇದೀಗ ಯುನೈಟೆಡ್ ಕಿಂಗ್ ಡಮ್(ಯುಕೆ) ನಲ್ಲಿಯೂ ಬಾರಿ ಸುದ್ದಿಯಾಗುತ್ತಲೇ ಇದೆ!! ಆ ನಿಟ್ಟಿನಲ್ಲಿ ಬ್ರಿಟಿಷರಿಂದಲೇ ಆದ ಘೋರ ದುರಂತವು ಇದೀಗ ಬ್ರಿಟಿಷರ ಶಾಲಾಪಠ್ಯ ಪುಸ್ತಕಗಳಲ್ಲಿ, ಈ ಕರಾಳ ಅಧ್ಯಾಯವನ್ನು ಅಳವಡಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿವೆ.

ಹೌದು… ಭಾರತದ ಇತಿಹಾಸದಲ್ಲೇ ಇದೊಂದು ಎಂದೂ ಕಂಡರಿಯದ ಕರಾಳವಾದ ದಿನ. ಭರತ ಖಂಡದಲ್ಲಿ ಸ್ವತಂತ್ರಪೂರ್ವ ಬ್ರಿಟಿಷರ ದಬ್ಬಾಳಿಕೆ ಹೇಗಿತ್ತು ಎಂಬುದಕ್ಕೆ ಇದೊಂದು ಪ್ರತ್ಯಕ್ಷ ನಿದರ್ಶನ. ಸಾವಿರಾರು ಅಮಾಯಕರನ್ನು ನಾಲ್ಕು ಗೋಡೆಗಳ ಮದ್ಯೆ ಭೀಕರವಾಗಿ ನರಸಂಹಾರಗೈದು, ಅಟ್ಟಹಾಸದಿ ಹೇಡಿತನ ಮೆರೆದ ಬ್ರಿಟಿಷರ ಈ ಹತ್ಯಾಕಾಂಡ ಬೇರೆ ಯಾವುದೂ ಅಲ್ಲ!! ಅದುವೇ ಜಲಿಯನ್-ವಾಲಾ-ಬಾಗ್!!

ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಬ್ರಿಟಿಷರು ಕೈಗೊಂಡ ಅಮಾನವೀಯ ಕೃತ್ಯ. ಬ್ರಿಟಿಷ್ ಸೈನ್ಯದ ಕ್ರೌರ್ಯಕ್ಕೆ ಅಂದು ನೂರಾರು ಮಂದಿ ಬಲಿಯಾದರೆ, ಅದೆಷ್ಟೋ ಮಂದಿ ಹೆಂಗಸರು, ಮಕ್ಕಳು ಸೇರಿ ಸಾವಿರಾರು ದೇಶಭಕ್ತರು ಗಾಯಗೊಂಡರು. ಇಂತಹ ಅಮಾನಯವೀಯ ಕೃತ್ಯಕ್ಕೆ ಅಂದು ಆ ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ ಇಂದಿಗೂ ನಿರ್ದಿಷ್ಟವಾಗಿ ಲಭ್ಯವಾಗಿಲ್ಲ. ಬ್ರಿಟಿಷ್ ಆಡಳಿತದ ಪ್ರಕಾರ ಸತ್ತದ್ದು 379 ಜನ. ಆದರೆ ಇನ್ನೊಂದು ಮಾಹಿತಿ ಹೇಳಿದ್ದು 1000 ಜನ!!

ಇವೆರಡರ ಮೇಲೆ ಡಾ. ಸ್ಮಿತ್ ಎಂಬ ವೈದ್ಯನೊಬ್ಬ ನೀಡಿದ ಹೇಳಿಕೆ ಪ್ರಕಾರ ಸ್ಥಳದಲ್ಲಿ ಸತ್ತವರ ಸಂಖ್ಯೆ 1,526ರಷ್ಟಿದ್ದರೆ, ಗಾಯಗೊಂಡವರ ಸಂಖ್ಯೆ ಎರಡು ಸಾವಿರಕ್ಕೂ ಹೆಚ್ಚು!!! ಆದರೆ ಗಾಯಾಳುಗಳಲ್ಲಿ ನಂತರ ಸಾವನ್ನಪ್ಪಿದವರ ಸಂಖ್ಯೆ ಮಾತ್ರ ಲಭ್ಯವಾಗಿಲ್ಲ. ಇದು ಇತಿಹಾಸ ಕಂಡ ಮಾನವನ ವಿಕಟ ಅಟ್ಟಹಾಸ, ನಿಷ್ಕರುಣೆ, ಮದಕ್ಕೆ ಸಾಕ್ಷಿಯಾಗಿ ಇಂದಿಗೂ ನಿಂತ ಹೇಯ ಘಟನೆ!! ದುರಂತವೆಂದರೆ, ಇಂದಿನ ಪೀಳಿಗೆಗೆ ಬಹುತೇಕ ಇತಿಹಾಸದಲ್ಲಿನ ಇಂಥ ಕರಾಳ ಕೃತ್ಯಗಳ ಬಗ್ಗೆ ಅರಿವೇ ಇಲ್ಲದಿರುವುದು. ಆದರೆ ಈ ಬಗ್ಗೆ ಯುಕೆಯ ಶಾಲಾ ಪಠ್ಯ ಪುಸ್ತಕಗಳಲ್ಲಿ ‘ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ’ ದ ಬಗ್ಗೆ ಪಾಠವನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

ಹೌದು… ‘ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ’ ದ ಬಗ್ಗೆ ಪಾಠವನ್ನು ಅಳವಡಿಸಿಕೊಳ್ಳುವಂತೆ ಅಲ್ಲಿನ ಲೇಬರ್ ಪಾರ್ಟಿ ಎಂಪಿಯಾಗಿರುವ ಭಾರತೀಯ ಮೂಲದ ವೀರೇಂದ್ರ ಶರ್ಮಾ ಅವರು ಪ್ರಧಾನಿ ಥೆರೇಸಾ ಮೇ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಐತಿಹಾಸಿಕ ಸನ್ನಿವೇಶ ಯುಕೆಯಲ್ಲಿ ಸ್ಮರಣೆಗೊಳ್ಳಬೇಕು ಎಂದು ವೀರೇಂದ್ರ ಶರ್ಮಾ ಅಭಿಯಾನವನ್ನು ಆರಂಭಿಸಿದ್ದಾರಲ್ಲದೇ ಹೌಸ್ ಕಾಮನ್ ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ!!

ಈ ಹಿಂದೆ ಭಾರತದ ಸ್ವಾತಂತ್ರ್ಯ ಹೋರಾಟದ ಕರಾಳ ಅಧ್ಯಾಯವಾದ 1919ರ ಜಲಿಯನ್ ವಾಲಾ ಭಾಗ್ ಹತ್ಯಾಕಾಂಡಕ್ಕಾಗಿ ಕ್ಷಮೆಯಾಚಿಸಬೇಕೆಂದು ಬ್ರಿಟಿಷ್ ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನು ಬೆಂಬಲಿಸಿ 14 ಬ್ರಿಟಿಷ್ ಸಂಸದರು ಸಹಿ ಹಾಕಿದ್ದರು. ಅಷ್ಟೇ ಅಲ್ಲದೇ ಈ ಬಗ್ಗೆ ಅಕ್ಟೋಬರ್ 17ರಂದು ಭಾರತೀಯ ಮೂಲದ ಬ್ರಿಟಿಷ್ ಸಂಸದ ವೀರೇಂದ್ರ ಶರ್ಮಾ ಅವರು ಈ ನಿರ್ಣಯವನ್ನು ಸಂಸತ್ ಕೆಳಮನೆ (ಹೌಸ್ ಆಫ್ ಕಾಮನ್ಸ್)ಯಲ್ಲಿ ಮಂಡಿಸಿದ್ದರು!! “ಜಲಿಯಾನ್ ವಾಲಾ ಭಾಗ್” ಹತ್ಯಾಕಾಂಡ 1919″ ಎಂಬ ಹೆಸರಿನ ನಿರ್ಣಯಕ್ಕೆ ಇತರ 13 ಸಂಸದರು ಸಹಿ ಹಾಕಿದ್ದಾರೆಂದು ವೀರೇಂದ್ರ ಶರ್ಮಾ ಅವರ ಕಾರ್ಯಾಲಯವು, ಹರಿಯಾಣದ ಶಾಸಕಾಂಗ ವ್ಯವಹಾರಗಳ ಸಚಿವ ರಾಮ್ ಬಿಲಾಸ್ ಶರ್ಮಾ ಅವರಿಗೆ ರವಾನಿಸಿದ ಈ ಮೇಲ್ ಸಂದೇಶದಲ್ಲಿ ಈ ಬಗ್ಗೆ ತಿಳಿಸಲಾಗಿದೆ.

ಆದರೆ ಇದೀಗ ವೀರೇಂದ್ರ ಶರ್ಮಾ ಅವರು, ಬ್ರಿಟಿಷ್ ಸರ್ಕಾರದ ಪ್ರಧಾನಿ ಥೆರೇಸಾ ಮೇ ಅವರಿಗೆ ಪತ್ರ ಬರೆದು ‘ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ’ ದ ಬಗ್ಗೆ ಶಾಲಾ ಪಠ್ಯ ಪುಸ್ತಕಗಳಲ್ಲಿ ಪಾಠವನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಯುಕೆಯ ಎಲ್ಲಾ ಮಕ್ಕಳಿಗೂ ವಸಾಹತುಶಾಹಿ ಪರಂಪರೆಯ ಬಗ್ಗೆ ಗೊತ್ತಿರಬೇಕು ಮತ್ತು ಇತಿಹಾಸದ ಆಘಾತಕಾರಿ ಆಯಾಮಗಳ ಬಗ್ಗೆಯೂ ತಿಳಿಯುವಂತೆ ಮಾಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಬಗ್ಗೆ ಯುಕೆ ಪ್ರಧಾನಿ ಥೆರೇಸಾ ಮೇ ಅವರು ತಮ್ಮ ಮನವಿಯನ್ನು ಪುರಸ್ಕರಿಸಲಿದ್ದಾರೆ ಎಂಬ ವಿಶ್ವಾಸವನ್ನು ವೀರೇಂದ್ರ ಶರ್ಮಾ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ!!

“ಜಲಿಯನ್ ವಾಲಾ ಬಾಗ್” ದಲ್ಲಿ 99 ವರ್ಷಗಳ ಹಿಂದೆ ನಡೆದ ಘಟನೆಯಾದರೂ ಏನು??

ಪಂಜಾಬಿನಲ್ಲಿ ಸುಮಾರು 99 ವರ್ಷಗಳ ಹಿಂದೆ ನಡೆದ ಘಟನೆ. ಅಂದು ಭಾನುವಾರ, ಏಪ್ರಿಲ್ 13, 1919, ಸಮಯ 4 ಘಂಟೆ-30 ನಿಮಿಷ!! ವೈಶಾಖ ಪೂರ್ಣಿಮಾ ದಿನವಾದ ಅಂದು, ಸಿಖ್ ಸಮುದಾಯದವರು ಜಲಿಯನ್-ವಾಲಾ-ಬಾಗ್ ಎಂಬ ಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕಣ್ಣಳತೆಯ ದೂರದಲ್ಲೇ ಅಮೃತ ಸರೋವರದ ಪವಿತ್ರ ಸ್ವರ್ಣಮಂದಿರ ಕಾಣುತ್ತಿತ್ತು. ಅಂದು “ಬೈಸಾಕಿ” ಸಂಭ್ರಮ. ಸಿಖ್ಖರ ಹೊಸ ವರ್ಷದ ಮೊದಲ ದಿನವದು. ಮುಂಜಾನೆಯಿಂದಲೇ ಅಕ್ಕಪಕ್ಕದ ಹಳ್ಳಿಗಳಿಂದ ಗುರುದ್ವಾರಕ್ಕೆ ಆಗಮಿಸಿದ್ದ ಯಾತ್ರಾರ್ಥಿಗಳು ಆ ಮೈದಾನದಲ್ಲಿ ಸೇರಿದ್ದರು. ಹಬ್ಬವನ್ನು ತನ್ನ ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸುತ್ತಿದ್ದ ಅವರುಗಳ ಮೇಲೆ ಬ್ರಿಟಿಷರ ಕೆಂಗಣ್ಣು ಬಿದ್ದಿತ್ತು!!

ಇದು ಅವರ ವಿರುದ್ಧ ಪಿತೂರಿಯನ್ನು ರಚಿಸಲು ಸೇರಿರುವ ಸಭೆ ಇರಬಹುದೆಂದು ಲೆಕ್ಕಿಸಿ, ವಿಚಾರಿಸದೆ ತನ್ನ ಸೈನ್ಯದೊಂದಿಗೆ ಒಳ ನುಗ್ಗಿದ ಜನರಲ್ ಡಯಾರ್ ಎಂಬಾತ ಏಕಾ-ಏಕಿ ಗುಂಡಿನ ಮಳೆಗಯ್ಯಲು ಆದೇಶಿಸಿದ. ಅಲ್ಲಿರುವ ಒಂದೇ ಒಂದು ಬಾಗಿಲಿನಿಂದ ನುಗ್ಗಿದ ಈ 150 ಜನರ ಸೇನೆ, ನಾಲ್ಕು ದಿಕ್ಕುಗಳಲ್ಲಿಯೂ ತನ್ನ ಸರ್ಪಗಾವಲನ್ನು ಪಸರಿಸಿ ಬರೋಬ್ಬರಿ 1650 ಗುಂಡುಗಳನ್ನು ಹಾರಿಸಲ್ಪಟ್ಟಿತು. ಗುಂಡಿನಿಂದ ತಪ್ಪಿಸಿಕೊಳ್ಳಲು ಕೆಲವರು ಗೋಡೆ ಏರಿ ವಿಫಲ ಪ್ರಯತ್ನ ಪಟ್ಟರೆ, ಅದೆಷ್ಟೋ ತಾಯಂದಿರು ಮಕ್ಕಳೊಂದಿಗೆ ಬಾವಿಯೊಳಗೆ ಜಿಗಿದು ಪ್ರಾಣ ತ್ಯಜಿಸಿದರು. ಮಹಿಳೆಯರು, ಮಕ್ಕಳು, ಅಮಾಯಕರೆಂಬುದನ್ನು ಲೆಕ್ಕಿಸದೆ ನರಸಂಹಾರ ನಡೆಸಿದ ಬರ್ಬರ ಘಟನೆ ಅದಾಗಿತ್ತು ಎನ್ನುವುದೇ ವಿಷಾದನೀಯ!!

ಆದರೆ, ಈ ಬಗ್ಗೆ ಕಳೆದ ವರ್ಷ ಆಕ್ಸ್ ಫರ್ಡ್ ನಲ್ಲಿ ಬ್ರಿಟಿಷ್ ವಸಾಹತುಗಳ ಶೋಷಣೆ ಬಗ್ಗೆ ಮಾತಾನಾಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, “ಬ್ರಿಟಿಷರು ನಡೆಸಿದ ವಸಾಹತಿನ ಶೋಷಣೆಗೆ ‘ಪರಿಹಾರ ಸೂತ್ರ’ ಸಾಧ್ಯವಾಗದೆ ಇದ್ದರೂ, ಬ್ರಿಟಿಷ್ ವಸಾಹತಿನಿಂದ ಉಂಟಾದ ಶೋಷಣೆಗಳಿಗೆ ಬ್ರಿಟನ್ ಪ್ರಧಾನಿ ಕ್ಷಮೆ ಯಾಚಿಸುವುದು ಸೂಕ್ತ” ಎಂದು ಅಭಿಪ್ರಾಯಪಟ್ಟಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಶಿ ತರೂರ್ ಅವರ ಅಭಿಪ್ರಾಯಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದರು!! ಇನ್ನು, ವೀರೇಂದ್ರ ಶರ್ಮಾ ಅವರು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕಾಗಿ ಕ್ಷಮೆಯಾಚಿಸಬೇಕೆಂದು ಬ್ರಿಟಿಷ್ ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನು ಬೆಂಬಲಿಸಿ, ಈವರೆಗೆ 14 ಬ್ರಿಟಿಷ್ ಸಂಸದರು ಸಹಿ ಹಾಕಿ ತಮ್ಮ ಮಾನವಿಯತೆಯನ್ನು ಮೆರೆದಿದ್ದರು!!

ಆದರೆ ಇದೀಗ, ಯುಕೆಯ ಎಲ್ಲಾ ಮಕ್ಕಳಿಗೂ ವಸಾಹತುಶಾಹಿ ಪರಂಪರೆಯ ಬಗ್ಗೆ ಗೊತ್ತಿರಬೇಕು ಮತ್ತು ಇತಿಹಾಸದ ಆಘಾತಕಾರಿ ಆಯಾಮಗಳ ಬಗ್ಗೆಯೂ ತಿಳಿಯುವಂತೆ ಮಾಡಬೇಕು ಎನ್ನುವ ದೃಷ್ಟಿಯಿಂದ, ಯುಕೆಯ ಶಾಲಾ ಪಠ್ಯ ಪುಸ್ತಕಗಳಲ್ಲಿ ‘ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ’ ದ ಬಗ್ಗೆ ಪಾಠವನ್ನು ಅಳವಡಿಸಿಕೊಳ್ಳುವಂತೆ ಅಲ್ಲಿನ ಲೇಬರ್ ಪಾರ್ಟಿ ಎಂಪಿಯಾಗಿರುವ ವೀರೇಂದ್ರ ಶರ್ಮಾ ಅವರು ಪ್ರಧಾನಿ ಥೆರೇಸಾ ಮೇ ಅವರಿಗೆ ಪತ್ರ ಬರೆದು ಮನವಿ ಮಾಡಿರುವ ಜೊತೆಗೆ, ಈ ಮನವಿಯನ್ನು ಸ್ವೀಕರಿಸುತ್ತಾರೆ ಎನ್ನುವ ಭರವಸೆಯನ್ನೂ ಹೊಂದಿದ್ದಾರೆ. ಆದರೆ ಇದು, ಅದ್ಯಾವ ತಿರುವನ್ನು ಪಡೆಯುತ್ತೆ ಅನ್ನೋದನ್ನು ಮಾತ್ರ ಕಾದು ನೋಡಬೇಕಾಗಿದೆ.

Source :http://news13.in/archives/99144

– ಅಲೋಖಾ

Tags

Related Articles

Close