ಪ್ರಚಲಿತ

ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಂತಸದ ಸುದ್ದಿಯೊಂದನ್ನು ನೀಡಿದೆ. ಇಂಧನಗಳಾದ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಪ್ರತಿ ಲೀಟರ್‌ಗೆ 2 ರೂ ಇಳಿಕೆ ಮಾಡುವ ಮಹತ್ವದ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೈಗೆೊಂಡಿರುವುದಾಗಿದೆ.

ಈ ಕುರಿತಾಗಿ ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಸಚಿವಾಲಯವು ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ತೈಲ ಮಾರುಕಟ್ಟೆ ಕಂಪನಿಗಳು ದೇಶದಾದ್ಯಂತ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಪರಿಷ್ಕರಣೆ ಮಾಡಿರುವುದಾಗಿ ‌ಮಾಹಿತಿ ನೀಡಿದೆ.

ಸದ್ಯ ನಿಗದಿ ಮಾಡಿರುವ ಹೊಸ ಬೆಲೆ 15 ಮಾರ್ಚ್ 2024 ರಿಂದಲೇ ಚಾಲ್ತಿಯಲ್ಲಿ ಬರುತ್ತದೆ ಎಂದೂ ಸಚಿವಾಲಯ ತನ್ನ ಪೋಸ್ಟ್‌ನಲ್ಲಿ ಮಾಹಿತಿ ನೀಡಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ಮಾಹಿತಿಯನ್ನು ಹಂಚಿಕೊಂಡಿರುವುದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ತಲಾ 2 ರೂ. ಗಳನ್ನು ಇಳಿಕೆ ಮಾಡಿ ಕೋಟ್ಯಾಂತರ ಭಾರತೀಯರ ತಮ್ಮ ಪರಿವಾರದ ಕಲ್ಯಾಣವನ್ನು ಮತ್ತು ಅನುಕೂಲವನ್ನು ಮತ್ತೆ ಸಾಬೀತು ಮಾಡಿದ್ದಾರೆ. ತಮ್ಮ ಪರಿವಾರದ ಅಭಿವೃದ್ಧಿ ಪ್ರಧಾನಿ ಮೋದಿ ಅವರ ಗುರಿ ಎಂದು ಅವರು ಟ್ವೀಟ್ ಮೂಲಕ ಹೇಳಿದ್ದಾರೆ.

ಪೆಟ್ರೋಲ್ ಮತ್ತು ಡಿಸೇಲ್ ಇಂಧನಗಳ ಬೆಲೆಯಲ್ಲಿನ ಇಳಿಕೆಯಿಂದ ನಾಗರಿಕರ ಆದಾಯ, ಪ್ರವಾಸೋದ್ಯಮ ಮತ್ತು ಪ್ರಯಾಣಗಳಿಗೆ ಉತ್ತೇಜನ ದೊರೆಯಲಿದೆ. ಸರ್ಕಾರ ಹಣದುಬ್ಬರ ನಿಯಂತ್ರಣದ ಮೂಲಕ ಪ್ರಯೋಜನವನ್ನು ನೀಡುವುದಾಗಿಯೂ ಸಚಿವಾಲಯ ತಿಳಿಸಿದೆ.

Tags

Related Articles

Close