ಪ್ರಚಲಿತ

ಕಾಂಗ್ರೆಸಿಗರಿಗೆ ಭಾರತ ಮಾತೆಗೆ ಜೈಕಾರ ಹಾಕಲು ತಮ್ಮ ನಾಯಕರ ಅನುಮತಿ ಬೇಕು: ಪಿ. ಎಂ. ಮೋದಿ ವಾಗ್ದಾಳಿ

ಸನಾತನ ಹಿಂದೂ ಧರ್ಮ, ದೇವರುಗಳು ಹಿಂದೂಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷವಾದ ಕಾಳಜಿ ಇದೆ ಎನ್ನುವುದು ಆಗಾಗ್ಗೆ ಸಾಬೀತಾಗುತ್ತಲೇ ಇರುತ್ತದೆ. ದೇಶದ ಅಭಿವೃದ್ಧಿ, ಜನರ ಕಾಳಜಿಯ ಜೊತೆಗೆ ಹಿಂದೂ ಧರ್ಮದ ಬಗೆಗೂ ಪ್ರಧಾನಿ ಮೋದಿ ಅವರು ವಿಶೇಷ ಕಾಳಜಿ ಹೊಂದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರಧಾನಿ ಮೋದಿ ಅವರು ನಿನ್ನೆ ಮೈಸೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮಾತನಾಡಿ, ಎಲ್ಲಿಯವರೆಗೆ ಮೋದಿ ಇರುತ್ತಾರೆಯೋ, ಅಲ್ಲಿಯ ವರೆಗೆ ಹಿಂದೂ ಧರ್ಮ ಹಾಗೂ ಸನಾತನ ಧರ್ಮದ ನಾಶ ಅಸಾಧ್ಯ. ಇದು ನಾನು ನೀಡುವ ಗ್ಯಾರಂಟಿ ಎಂದು ತಿಳಿಸಿದ್ದಾರೆ.

ಮೈಸೂರು ಸಾಂಸ್ಕೃತಿಕ ರಾಜಧಾನಿ. ಇಲ್ಲಿನ ನಾಡ ಹಬ್ಬ ದಸರಾ ಇಡೀ ದೇಶದಲ್ಲೇ ಪ್ರಖ್ಯಾತಿ ಪಡೆದಿರುವಂತ ವಿಷಯ. ತಾಯಿ ಚಾಮುಂಡಿ, ತಾಯಿ ಭುವನೇಶ್ವರಿ, ತಾಯಿ ಕಾವೇರಿಯ ಪಾದಗಳಿಗೆ ನನ್ನ ನಮನಗಳು ಎಂದು ಅವರು ಹೇಳಿದ್ದಾರೆ.

ಬಿಜೆಪಿಯ ಸಂಕಲ್ಪ ಪತ್ರ ಮೋದಿಜಿ ಅವರ ಭರವಸೆಯಾಗಿದೆ. ಬಡವರಿಗೆ ಮೂರು ಕೋಟಿಗಳಷ್ಟು ಮನೆ ನಿರ್ಮಾಣದ ಗುರಿಯನ್ನು ನಾವು ಹೊಂದಿದ್ದೇವೆ. ಪಡಿತರವನ್ನು ಉಚಿತವಾಗಿ ವಿತರಣೆ ಮಾಡುತ್ತೇವೆ. ಆಯುಷ್ಮಾನ್ ಭಾರತ್ ಮೂಲಕ ಹಿರಿಯರಿಗೆ ಉಚಿತವಾಗಿ ವೈದ್ಯಕೀಯ ಸವಲತ್ತುಗಳನ್ನು ನೀಡುತ್ತೇವೆ. ಕರ್ನಾಟಕ ಐಟಿ ಹಬ್ ಆಗಿದ್ದು, ಇದನ್ನು ಇನ್ನಷ್ಟು ವಿಸ್ತರಿಸುತ್ತೇವೆ. ಕನ್ನಡ ಎಂಬ ಸಮೃದ್ಧ ಭಾಷಾ ವ್ಯಾಪಕತೆಯನ್ನು ಮತ್ತಷ್ಟು ವಿಸ್ತರಣೆ ಮಾಡುತ್ತೇವೆ. ಸ್ಥಳೀಯ ಭಾಷೆಗಳ ಅಭಿವೃದ್ಧಿ ಸಹ ನಮ್ಮ ಆದ್ಯತೆಯಾಗಿದೆ. ಮೈಸೂರು ಸೇರಿದಂತೆ ಕರ್ನಾಟಕದ ಹಲವು ಪ್ರವಾಸಿ ತಾಣಗಳನ್ನು ವಿಶ್ವ ಪ್ರವಾಸಿ ನಕ್ಷೆಗಳ ಪಟ್ಟಿಗೆ ಸೇರಿಸುವ ಭರವಸೆಯನ್ನು ಸಹ ಅವರು ಇದೇ ಸಂದರ್ಭದಲ್ಲಿ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಟುಕ್ಡೆ ಗ್ಯಾಂಗ್ ತನ್ನ ಖತರ್ನಾಕ್ ಉಪಾಯಗಳ ಜೊತೆಗೆ ದೇಶ ಸುತ್ತುತ್ತಿದೆ. ಇದರ ಬಗ್ಗೆ ಎಚ್ಚರ ಇರಲಿ. ದೇಶದ ವಿರುದ್ಧ ಕಾಂಗ್ರೆಸ್ ಪಕ್ಷ ಮಾತನಾಡುತ್ತಿದೆ. ಭಾರತ್‌ ಮಾತಾ ಕಿ ಜೈ ಎನ್ನಲು ಕಾಂಗ್ರೆಸ್ ಪಕ್ಷದ ಅನುಮತಿಯನ್ನು ಪಡೆಯಬೇಕಾ? ದೇಶ ವಿರೋಧಿ ಕಾಂಗ್ರೆಸ್ ನಮಗೆ ಬೇಕಾ ಎಂದು ಮೋದಿ ಅವರು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಸಭೆಯಲ್ಲಿ ಭಾರತ ಮಾತೆಗೆ ಜೈ ಕಾರ ಹಾಕಲು ಒಬ್ಬ ಮುಖಂಡ ಕಾಂಗ್ರೆಸ್ ನಾಯಕನ ಅನುಮತಿ ಕೇಳುತ್ತಾನೆ. ಇಂತಹ ಸ್ಥಿತಿಯಲ್ಲಿ ಇರುವ ಕಾಂಗ್ರೆಸ್ ಪಕ್ಷಕ್ಕೆ ನೀವು ಮತ ಹಾಕುವಿರಾ? ಈ ಹಿಂದೆ ವಂದೇ ಮಾತರಂ ಗೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಈಗ ಭಾರತ ಮಾತೆ ಗೆ ಜೈ ಎನ್ನುವುದನ್ನು ವಿರೋಧಿಸುತ್ತಿದೆ. ಕಾಂಗ್ರೆಸ್ ಪಥನವಾಗಲು ಇದೇ ಮುಖ್ಯ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾವು ನಮ್ಮ ಶತ್ರುಗಳಿಗೆ ಪಾಠ ಕಲಿಸಿದರೆ, ಕಾಂಗ್ರೆಸ್ ಇದಕ್ಕೆ ಸಾಕ್ಷಿ ಕೇಳುತ್ತದೆ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಅವರಿಗೆ ಮತ ಹಾಕುವಿರಾ ಎಂದು ಪ್ರಶ್ನೆ ಮಾಡಿದ್ದಾರೆ. ರಾಮ ಮಂದಿರ ಉದ್ಘಾಟನೆಯ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್ ಸನಾತನ ಧರ್ಮ, ಹಿಂದೂ ಧರ್ಮದ ನಾಶಕ್ಕೆ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಉದ್ದೇಶ ಮೋದಿ ಇರುವ ವರೆಗೆ ನಡೆಯುವುದು ಅಸಾಧ್ಯ ಎಂದು ಅವರು ಹೇಳಿದ್ದಾರೆ.

ಈ ಲೋಕಸಭಾ ಚುನಾವಣೆಯಲ್ಲಿ ಭಾರತದ ಭವಿಷ್ಯ ನಿರ್ಧಾರವಾಗುತ್ತದೆ. ಅರವತ್ತು ದಶಕಗಳ ರಿಪೋರ್ಟ್ ಕಾರ್ಡ್ ಅನ್ನು ಕಾಂಗ್ರೆಸ್ ಈ ವರೆಗೂ ದೇಶದ ಜನರ ಮುಂದೆ ಇರಿಸಿಲ್ಲ. ರಾಜ್ಯವು ಕಾಂಗ್ರೆಸ್‌ಗೆ ಕೊಳ್ಳೆ ಹೊಡೆಯುವ ಎಟಿಎಮ್ ಆಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕರ್ನಾಟಕದಿಂದ ನೂರಾರು ಕೋಟಿ ಕಪ್ಪು ಹಣ ದೇಶಕ್ಕೆ ಸರಬರಾಜು ಆಗುತ್ತಿದೆ ಎಂದು ಪಿ ಎಂ ಮೋದಿ ಕಾಂಗ್ರೆಸ್ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Tags

Related Articles

Close