ಪ್ರಚಲಿತ

ಹತಾಶೆಯಿಂದ ಕಾಂಗ್ರೆಸ್ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ: ಪ್ರಲ್ಹಾದ ಜೋಶಿ

ದೇಶದೆಲ್ಲೆಡೆ ಲೋಕಸಭಾ ಚುನಾವಣಾ ಕಾವು ರಂಗೇರಿದೆ. ಈ ಬಾರಿ ಯಾವ ಪಕ್ಷಕ್ಕೆ ಮತದಾರ ಒಲಿಯುತ್ತಾನೆ ಎನ್ನುವ ಕಾತರ ಎಲ್ಲರಲ್ಲೂ ಮನೆ ಮಾಡಿದೆ. ಯಾವ ಪಕ್ಷ ಸರ್ಕಾರ ರಚಿಸಲಿದೆ ಎನ್ನುವ ಕುತೂಹಲ ಸಹ ಜನಮಾನಸದಲ್ಲಿ ಮನೆ ಮಾಡಿದೆ.

ಪ್ರತಿ ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳು ಸೇರಿದಂತೆ ಇನ್ನಿತರ ಸಂಸ್ಥೆಗಳು ಸಮೀಕ್ಷೆ ನಡೆಸುತ್ತವೆ. ಈ ಬಾರಿಯ ಲೋಕಸಭಾ ಕದನಕ್ಕೆ ಸಂಬಂಧಿಸಿದ ಹಾಗೆಯೂ ಹಲವಾರು ಸಮೀಕ್ಷೆಗಳು ನಡೆದಿದ್ದು, ಈ ಎಲ್ಲಾ ಸಮೀಕ್ಷೆಗಳಲ್ಲಿಯೂ ಕಾಂಗ್ರೆಸ್ ಪಕ್ಷ ಮಕಾಡೆ ಮಲಗುತ್ತದೆ. ಬಿಜೆಪಿ ನೇತೃತ್ವದ ಎನ್‌ಡಿಎ ಜಯಭೇರಿ ಗಳಿಸಿ, ಸರ್ಕಾರ ರಚನೆ ಮಾಡುತ್ತದೆ ಎನ್ನುವ ಫಲಿತಾಂಶವೇ ದೊರೆತಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ಭೀತಿಯ ಜೊತೆಗೆ ಹತಾಶೆಯನ್ನು ಉಂಟು ಮಾಡಿದೆ ಎನ್ನುವುದು ಸತ್ಯ.

ತಮ್ಮ ಪಕ್ಷ ಎಲ್ಲಿ ಸೋಲುವುದೋ, ಎಲ್ಲಿ ಮರ್ಯಾದೆ ಕಳೆದುಕೊಳ್ಳುವ ಸ್ಥಿತಿ ಬರುವುದೋ ಎಂಬ ಭಯದಲ್ಲಿ ಕಾಂಗ್ರೆಸ್ ಪಕ್ಷವು ಜನರ ಗಮನವನ್ನು ಬೇರೆಡೆ ಸೆಳೆಯುವ ಎಲ್ಲಾ ಸರ್ಕಸ್‌ಗಳನ್ನು ಮಾಡುತ್ತಿದೆ. ಪ್ರಧಾನಿ ಮೋದಿ ಅವರನ್ನು, ಬಿಜೆಪಿ ಯನ್ನು ಜರೆದು, ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ ಎನ್ನುವುದು ಹಾಸ್ಯಾಸ್ಪದ.

ಈ ಬಗ್ಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತಿರುವ ಪ್ರಲ್ಹಾದ ಜೋಶಿ ಅವರು ಮಾತನಾಡಿದ್ದು, ಈ ವರೆಗೆ ದೇಶದಲ್ಲಿ ನಡೆದಿರುವ ಎಲ್ಲಾ ಸರ್ವೇಗಳಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಇದು ಕಾಂಗ್ರೆಸ್ ಹತಾಶೆಗೆ ಕಾರಣವಾಗಿದ್ದು, ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಈ ವರೆಗೆ ನಡೆದ ಸಮೀಕ್ಷೆ ಗಳ ಪ್ರಕಾರ ಕಾಂಗ್ರೆಸ್ ಎರಡು, ಮೂರು ಸ್ಥಾನಗಳನ್ನು ಗೆದ್ದರೆ ಹೆಚ್ಚು. ಸಿ ವೋಟರ್ ಸಮೀಕ್ಷೆ, ಎಬಿಸಿ ಸಮೀಕ್ಷೆಗಳಲ್ಲಿ ಎರಡು, ಮೂರು ಸ್ಥಾನಗಳಷ್ಟೇ ಕಾಂಗ್ರೆಸ್ ಪಕ್ಷಕ್ಕೆ ದೊರೆಯುತ್ತದೆ ಎಂಬ ಫಲಿತಾಂಶ ಬಂದಿದೆ. ಇದು ಕಾಂಗ್ರೆಸ್ ಪಕ್ಷದ ಹತಾಶೆಗೆ ಕಾರಣವಾಗಿದ್ದು, ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಯಾರು ಗಲಭೆ ಸೃಷ್ಟಿ ಮಾಡುತ್ತಾರೆ. ಯಾರು ಧಿಕ್ಕಾರ ಕೂಗುತ್ತಾರೆ ಅವರಿಗೆ ಜನರೇ ತಕ್ಕ ಉತ್ತರ ನೀಡುತ್ತಾರೆ. ದೇವೇಗೌಡರು ಹಿರಿಯರು. ಕಾಂಗ್ರೆಸ್‌ನವರು ಅವರಿಗೆ ಅತ್ಯಂತ ಕನಿಷ್ಠ ಭಾಷೆಯಲ್ಲಿ ಮಾತನಾಡುತ್ತಾರೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಅವರು ನುಡಿದಿದ್ದಾರೆ.

Tags

Related Articles

Close