ಪ್ರಚಲಿತ

ಕಾಂಗ್ರೆಸ್‌ಗೆ ರಾಮ ಈಗ ನೆನಪಾದನೇ? : ಪ್ರಲ್ಹಾದ ಜೋಶಿ

ಅಯೋಧ್ಯೆಯ ಪ್ರಭು ಶ್ರೀರಾಮ ಮಂದಿರ, ರಾಮಲಲ್ಲಾನ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಈ ವರೆಗೆ ರಾಜಕೀಯವನ್ನೇ ‌ಮಾಡಿಕೊಂಡು ಬಂದಿದೆ. ‘ಕೋತಿ ಬೆಣ್ಣೆ ತಿಂದು, ಮೇಕೆ ಮೂತಿಗೆ ಒರೆಸಿತು’ ಎಂಬಂತೆ, ಕಾಂಗ್ರೆಸಿಗರು ಶ್ರೀರಾಮನನ್ನು ರಾಜಕೀಯ ದಾಳವಾಗಿ ಬಳಸಿ, ಬಿಜೆಪಿ ರಾಮನ ವಿಚಾರದಲ್ಲಿ, ರಾಮ ಮಂದಿರದ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎನ್ನುತ್ತಾ ಜನರ ದಾರಿ ತಪ್ಪಿಸಲು ಪ್ರಯತ್ನ ಮಾಡಿದ್ದು ಹಳೆಯ ಸಂಗತಿ.

ಬಿಜೆಪಿಯ ಬಹುಕಾಲದ ಶ್ರಮ, ಆರ್‌ಎಸ್‌ಎಸ್‌ನ ಬಹುಕಾಲದ ಬಯಕೆಯಾದ ರಾಮ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಯಿತು. ಇದನ್ನು ರಾಜಕೀಯೇತರವಾಗಿ ರಾಷ್ಟ್ರ ಮಂದಿರ ಎಂದು ಇಡೀ ದೇಶಕ್ಕೆ ದೇಶವೇ ಸಂಭ್ರಮಿಸಿತು. ಆದರೆ ಕಾಂಗ್ರೆಸ್ ಮಾತ್ರ ರಾಮ ಮಂದಿರ ವಿಷಯವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪ ಮಾಡಿತ್ತು. ಜೊತೆಗೆ ರಾಮ ಮಂದಿರದ ಅಧಿಕೃತ ಟ್ರಸ್ಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದು ಯಾವುದೇ ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂಬಂತೆ ಎಲ್ಲಾ ಪಕ್ಷದ ನಾಯಕರಿಗೆ ಆಹ್ವಾನವಿತ್ತರು. ಕಾಂಗ್ರೆಸ್ ನಾಯಕರಿಗೂ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಯಿತು. ಆದರೆ ಇದನ್ನು ರಾಜಕೀಯ ದಾಳವಾಗಿ ಪರಿವರ್ತಿಸಲು ಮುಂದಾದ ಕಾಂಗ್ರೆಸ್, ಇದು ಬಿಜೆಪಿ ಓಟು ಪಡೆಯಲು, ಜನರ ಸಿಂಪತಿ ಗಿಟ್ಟಿಸಲು ನಿರ್ಮಾಣ ಮಾಡಿದ ಮಂದಿರ ಎಂದು ಯಾರೊಬ್ಬರೂ ಕಾರ್ಯಕ್ರಮಕ್ಕೆ ಹೋಗಲಿಲ್ಲ.

ಅಲ್ಲಿಗೆ ಈ ವಿಷಯ ರಾಜಕೀಯವಾಗಿದ್ದು ಹೇಗೆ, ಇದನ್ನು ರಾಜಕೀಯಕ್ಕೆ ಬಳಸಿದವರು ಯಾರು? ಎನ್ನುವ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಜನರಿಗೆ ಸಿಕ್ಕಿತ್ತು. ಹಿಂದೂ ವಿರೋಧಿ, ಶ್ರೀರಾಮ ವಿರೋಧಿ ಕಾಂಗ್ರೆಸ್‌ನ ಬಗ್ಗೆ ಜನರಲ್ಲಿ ಅದಾಗಲೇ ಒಂದು ರೀತಿಯ ಅಸಹ್ಯ ಹುಟ್ಟಿತ್ತು ಎನ್ನುವುದು ಸತ್ಯ.

ಶ್ರೀರಾಮ ಮಂದಿರ ಲೋಕಾರ್ಪಣೆಗೆ ಆಹ್ವಾನ ಇದ್ದರೂ ತೆರಳದ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮಂದಿರ ಲೋಕಾರ್ಪಣೆ ಕಾರ್ಯ ಅದ್ಧೂರಿಯಾಗಿ ನಡೆದಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಹೊಂದಿರುವ ನಿಲುವಿನ ಬಗ್ಗೆ ಕಿಡಿ ಕಾರಿರುವ ಅವರು, ಕಾಂಗ್ರೆಸ್ ಪಕ್ಷ ರಾಮನನ್ನೇ ವಿಭಜನೆ ಮಾಡಲು ಪ್ರಯತ್ನ ಪಡುತ್ತಿದೆ ಎಂದು ಕೆಂಡ ಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಜಾತಿ ಎಣಿಕೆ ಕ್ರಮದ ಬಗೆಗೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಪ್ರಭು ಶ್ರೀರಾಮನನ್ನೇ ವಿಚಾರಣೆಗೆ ತಂದು ನಿಲ್ಲಿಸಿದ ಕಾಂಗ್ರೆಸಿಗರು, ಈಗ ಬಣ್ಣ ಬದಲಾಯಿಸಿ ಗೋಸುಂಬೆಗಳಾಗಿದ್ದಾರೆ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಮ ರಾಜ್ಯದ ಕನಸು ನಮ್ಮ ಗ್ಯಾರಂಟಿಗಳಿಂದ ನನಸು ಎಂದು ಕಾಂಗ್ರೆಸ್‌ನ ಡಿ ಸಿ ಎಂ ಡಿ ಕೆ ಶಿವಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರ ವಿರುದ್ಧ ಮಾತನಾಡಿದ ಜೋಶಿ, ಅವರಿಗೆ ರಾಮ ಈಗ ನೆನಪಾದನೇ? ಎಂದು ಪ್ರಶ್ನೆ ಮಾಡಿದ್ದಾರೆ.

Tags

Related Articles

Close