ಪ್ರಚಲಿತ

ಶಾಲಾ – ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತೆಗೆ ಮಹತ್ವದ ಒಪ್ಪಂದ

ನಮ್ಮ ದೇಶದ ಅಭಿವೃದ್ಧಿ, ಬೆಳವಣಿಗೆ ಎಲ್ಲವೂ ಈ ದೇಶವನ್ನು ಯಾರು ಮತ್ತು ಹೇಗೆ ಆಡಳಿತ ನಡೆಸುತ್ತಿದ್ದಾರೆ ಎನ್ನುವುದನ್ನು ಅವಲಂಬಿಸಿರುವುದಾಗಿದೆ. ನಮ್ಮ ದೇಶವನ್ನು ಆಳುವವರನ್ನು ಆಯ್ಕೆ ಮಾಡುವವರೂ ನಾವೇ ಹೌದು. ಎಂತಹ ವ್ಯಕ್ತಿಯ ಆಯ್ಕೆಯನ್ನು ನಾವು ನಮ್ಮ ಅಮೂಲ್ಯ ಮತಗಳನ್ನು ನೀಡುವ ಮೂಲಕ ಆಯ್ಕೆ ಮಾಡಿದ್ದೇವೆ ಎನ್ನುವುದರಲ್ಲಿಯೇ ದೇಶ ಅಭಿವೃದ್ಧಿ ಹೊಂದುವುದೋ?, ಇಲ್ಲವೋ? ಎನ್ನುವುದು ನಿರ್ಧರಿತವಾಗುತ್ತದೆ.

ಈ ಹಿನ್ನೆಲೆಯಲ್ಲಿ ಚುನಾವಣೆಯ ಬಗ್ಗೆ ಅರಿವು, ಮತದಾನದ ಬಗ್ಗೆ ಜಾಗೃತಿ ಎಲ್ಲರಲ್ಲಿಯೂ ಮೂಡಬೇಕಾದ ಅಗತ್ಯತೆ ಇದೆ. ಇಂತಹ ಅತ್ಯಗತ್ಯ ಚುನಾವಣಾ ಜ್ಞಾನವನ್ನು ಮಕ್ಕಳಿಗೆ ಎಳವೆಯಿಂದಲೇ ನೀಡುವ ಹಿನ್ನೆಲೆಯಲ್ಲಿ ದೇಶಾದ್ಯಂತ ಶಾಲೆಗಳಲ್ಲಿ ಚುನಾವಣಾ ಸಾಕ್ಷರತೆ ತರಲು ಚುನಾವಣಾ ಆಯೋಗ ಮತ್ತು ಶಿಕ್ಷಣ ಸಚಿವಾಲಯ ನಿರ್ಧರಿಸಿದ್ದು, ಇದಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಮೂಲಗಳು ಹೇಳಿವೆ.

ಭಾರತದ ಶಾಲಾ ಕಾಲೇಜುಗಳಲ್ಲಿ ಸಾಂಸ್ಥಿಕ ವ್ಯವಸ್ಥೆಯೊಳಗೆ ಚುನಾವಣಾ ಸಾಕ್ಷರತೆಯನ್ನು ನೀಡುವುದಕ್ಕೆ ಸಂಬಂಧಿಸಿದ ಹಾಗೆ ಈ ಒಪ್ಪಂದ ಹೇಳುತ್ತದೆ. ರಚನಾತ್ಮಕ ಪಠ್ಯಕ್ರಮ, ಸಹ ಪಠ್ಯ, ಪಠ್ಯೇತರ ಚಟುವಟಿಕೆಗಳ ಮೂಲಕ ಚುನಾವಣಾ ಸಾಕ್ಷರತೆಯ ಅರಿವು ಮೂಡಿಸುವಂತೆ ಈ ಒಪ್ಪಂದದಲ್ಲಿ ಹೇಳಲಾಗಿದೆ.

ಈ ಉಪಕ್ರಮವು ವಿದ್ಯಾರ್ಥಿಗಳು ಮತದಾನ ಮಾಡುವ ವಯಸ್ಸಿಗೆ ಬರುವ ವೇಳೆ ಅವರಲ್ಲಿ ಸಂಪೂರ್ಣವಾದ ಚುನಾವಣೆಯ ಕುರಿತ ಅರಿವು ಮೂಡಲು‌ ಸಹಾಯಕವಾಗಲಿದೆ. ಹೊಸ ಮತದಾರರನ್ನು ಸಿದ್ಧ ಮಾಡುವಲ್ಲಿಯೂ ಇದು ಮಹತ್ವದ ಪಾತ್ರ ವಹಿಸಲಿದೆ. ಆರರಿಂದ ಹನ್ನೆರಡನೇ ತರಗತಿಯೊಳಗಿನ ಪಠ್ಯಗಳಲ್ಲಿ ಚುನಾವಣಾ ವಿಷಯಗಳನ್ನು ಮಕ್ಕಳಿಗೆ ತಿಳಿಸುವಂತೆ ಈ ಉಪಕ್ರಮದಲ್ಲಿ ‌ಸೂಚಿಸಲಾಗಿದೆ.

ಈ ಒಪ್ಪಂದದ ಅನ್ವಯ ಎನ್‌ಸಿಇಆರ್‌ಟಿ ಶಾಲೆಗಳ ಪಠ್ಯ ಪುಸ್ತಕಗಳಲ್ಲಿ ಚುನಾವಣಾ ಸಾಕ್ಷರತೆಗೆ‌ ಸಂಬಂಧಿಸಿದ ಹಾಗೆ ವಿಷಯಗಳಿರಲಿವೆ. ಈ ಪಠ್ಯವನ್ನು ಅಳವಡಿಸಲು ರಾಜ್ಯ ಶಿಕ್ಷಣ ಮಂಡಳಿಗೂ ಸೂಚನೆ ನೀಡಲಾಗುತ್ತದೆ. ಮಕ್ಕಳಲ್ಲಿ ಚುನಾವಣಾ ಸಾಕ್ಷರತೆ ಮೂಡಿಸಲು ಅವರ ನೋಂದಣಿ ಮತ್ತು ಮತದಾರರ ಭಾಗವಹಿಸುವಿಕೆ ಖಚಿತಪಡಿಸಿಕೊಳ್ಳಲು ಹಲವು ಚಟುವಟಿಕೆಗಳನ್ನು ನಡೆಸುವಂತೆಯೂ ಸೂಚಿಸಲಾಗಿದೆ.

ಜೊತೆಗೆ ಮತದಾನದ ವಯಸ್ಸು ಅಂದರೆ ಹದಿನೆಂಟು ವರ್ಷ ತಲುಪುವ ಪ್ರತಿಯೋರ್ವನಿಗೂ ಗುರುತಿನ ಚೀಟಿ ಹಸ್ತಾಂತರಿಸುವ ಇಸಿಐ ಗುರಿ ಸಾಧನೆಗೂ ದೃಢವಾದ ಕಾರ್ಯವಿಧಾನವನ್ನು ಬೆಳವಣಿಗೆ ಮಾಡಲಾಗಿದೆ.

ಒಟ್ಟಿನಲ್ಲಿ ಸೂಕ್ತ ವಯಸ್ಸಿಗೆ ಬರುವ ಸಂದರ್ಭದಲ್ಲಿ ಚುನಾವಣೆ, ಮತದಾನದ ಬಗ್ಗೆ ಸೂಕ್ತ ಅರಿವನ್ನು ಪ್ರತಿಯೋರ್ವ ವ್ಯಕ್ತಿಯೂ ಹೊಂದಿರಬೇಕು ಎನ್ನುವ ಉದ್ದೇಶದ ಜೊತೆಗೆ ಆರಂಭ ಮಾಡಲಾದ ಈ ಉಪಕ್ರಮ ನಿಜಕ್ಕೂ ಉಪಕಾರಿಯೇ ಸರಿ.

Tags

Related Articles

Close