ಪ್ರಚಲಿತ

ಜನರ ತೆರಿಗೆ ಹಣದಲ್ಲಿ ಐಷಾರಾಮಿ ವಿಮಾನ ಯಾನ: ಸಾರ್ವಜನಿಕರ ಕೆಂಗಣ್ಣಿಗೆ ತುತ್ತಾದ ಸಿಎಂ ಸಿದ್ದು & ಟೀಂ

ಬರ, ಆರ್ಥಿಕ ಅವ್ಯವಸ್ಥೆ‌ ಸೇರಿದಂತೆ ಇನ್ನೂ ಹಲವಾರು ಸಮಸ್ಯೆಗಳಿಂದ ಕರ್ನಾಟಕ ಕಂಗೆಟ್ಟಿದೆ. ಬಿಟ್ಟು ಭಾಗ್ಯದ ಆಸೆಗೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಮತದಾರರ ಜೊತೆಗೆ, ಆ ಪಕ್ಷಕ್ಕೆ ಮತ‌ ನೀಡದವರು ಸಹ ಬೆಲೆ ಏರಿಕೆಯ ಬಿಸಿಗೆ ಕಂಗೆಟ್ಟು ಕುಳಿತಿದ್ದಾರೆ.

ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಇದ್ಯಾವುದೂ ದೊಡ್ಡ ವಿಷಯವೇ ಅಲ್ಲ ಎಂಬಂತಾಗಿದೆ. ಜನರು ಕಷ್ಟಪಡಲಿ, ಆದರೆ ನಾವು ಮಂತ್ರಿಗಳು, ಅವರ ಆಪ್ತ ವಲಯ, ಅವರ ಕುಟುಂಬ… ಇತ್ಯಾದಿ ಅವರಿಗೆ ಸಂಬಂಧಪಟ್ಟವರೆಲ್ಲರೂ ಐಷಾರಾಮಿ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಜನರನ್ನು ಲೂಟಿ ಮಾಡುವ, ಆ ಮೂಲಕ ಸಮಾಜಕ್ಕೆ ಆರ್ಥಿಕ ಹೊಡೆತ ನೀಡಿ ತಮ್ಮ ಬೊಕ್ಕಸ ತುಂಬಿಸುವ ಕೆಲಸವನ್ನು ಬಹಳ ನಿಯತ್ತಾಗಿ ಮಾಡುತ್ತಿದೆ.

ಜನರ ಸಂಕಷ್ಟ ಪರಿಹರಿಸಲು ರಾಜ್ಯದ ಆರ್ಥಿಕತೆ ಬಳಕೆ ಮಾಡದ ಕಾಂಗ್ರೆಸ್, ತಾವು ಮಾತ್ರ ಜಾಂ.. ಜೂಂ… ಎಂಬಂತೆ ಹಣವನ್ನು ದುಂದುವೆಚ್ಚ ಮಾಡುವುದರಲ್ಲಿ ಬ್ಯುಸೀ ಆಗಿದೆ. ಈ ವರೆಗೆ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕೋಟಿ ಕೋಟಿ ಹಣ ಬಳಸಿ ಅನುದಾನ ನೀಡಿದ್ದ ಕಾಂಗ್ರೆಸ್, ಬಹುಸಂಖ್ಯಾತರ ಕೈಗೆ ಚಿಪ್ಪು ನೀಡಿತ್ತು ಎನ್ನುವುದು ನಾವೆಲ್ಲರೂ ತಿಳಿದ ಸಂಗತಿ. ಹಾಗೆಯೇ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆಯೇ ಹಣ ಇಲ್ಲದ ಕಾಂಗ್ರೆಸ್, ತಮ್ಮ ಸರ್ಕಾರದ ಸಚಿವರುಗಳಿಗೆ ಹೊಸ ಹೊಸ ಕಾರುಗಳ ಉಡುಗೊರೆ ನೀಡಿದ್ದನ್ನು ಜನ ಇನ್ನೂ ಮರೆತಿಲ್ಲ.

ಇದಕ್ಕೂ ಮುನ್ನವೇ ಸಿ ಎಂ ಸಿದ್ದರಾಮಯ್ಯ ಮತ್ತು ತಂಡ ಮತ್ತೊಮ್ಮೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಯಾಕೆ ಎಂದಿರಾ… ಅದಕ್ಕೆ ಕಾರಣ ಇಲ್ಲಿದೆ..

ಸಿ ಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಭೇಟಿಗೆ ತೆರಳಿ ಹಿಂದಿರುಗುವ ಸಂದರ್ಭದಲ್ಲಿ, ರಾಜ್ಯದ ವಸತಿ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಜೊತೆಗೆ ಐಷಾರಾಮಿ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಿದ್ದರಾಮಯ್ಯ ಮತ್ತವರ ತಂಡದ ಇಂತಹ ದುಂದುವೆಚ್ಚಕ್ಕೆ ಸಾರ್ವಜನಿಕರು ಫುಲ್ ಗರಂ ಆಗಿದ್ದಾರೆ. ಹಾಗೆಯೇ ಬಿಜೆಪಿ ಸಹ ಜಮೀರ್ ಮತ್ತು ಸಿದ್ದು ಅವರ ಇಂತಹ ಶೋಕಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ನಿಜ ಕೇಂದ್ರ ಅವರು ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಕೊಂಡಿದ್ದು, ಯಾರ್ದೋ ದುಡ್ಡು, ಎಲ್ಲಮ್ಮನ ಜಾತ್ರೆ.. ಜನರ ದುಡ್ಡು, ಆಕಾಶದಲ್ಲಿ ಜಾತ್ರೆ ಎಂದು ಕಾಂಗ್ರೆಸ್ ಸಿ ಎಂ ಮತ್ತು ಜಮೀರ್ ಬಗ್ಗೆ ಕುಹಕವಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಬರಗಾಲ ಬಂದಿದೆ. ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಸಾಮಾನ್ಯರ ಬದುಕು ಅಸಹನೀಯ ಪರಿಸ್ಥಿತಿ ತಲುಪಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಶ್ರೀಮಂತಿಕೆಯ ದರ್ಪ ತೋರುವ, ಮೋಜು ಮಸ್ತಿಯೇ ಜೀವನ ಶೈಲಿ ಎಂದು ಪ್ರದರ್ಶಿಸಿಕೊಳ್ಳುವ ಜಮೀರ್ ಜೊತೆ, ತೆರಿಗೆ ಹಣ ವ್ಯಯಿಸಿ, ಐಷಾರಾಮಿ ಜೆಟ್ ವಿಮಾನದಲ್ಲಿ ಪ್ರಯಾಣ ನಡೆಸಿರುವ ಸಿ ಎಂ ಸಿದ್ದರಾಮಯ್ಯ ಅವರು ಈ ಮೋಜಿನ ಭಾಗವಾಗಿರುವುದು ರಾಜ್ಯದ ದೌರ್ಭಾಗ್ಯವಲ್ಲದೆ ಮತ್ತಿನ್ನೇನೂ ಅಲ್ಲ ಎಂದು ಹೇಳಿದ್ದಾರೆ.

ಹಾಗೆಯೇ ರಾಜ್ಯದ ಜನ ಬರದಿಂದ ತತ್ತರಿಸುತ್ತಿದ್ದರೆ, ದೊರೆ ಆಕಾಶದಲ್ಲಿ ಓಲಾಡುತ್ತಾ ತೇಲಾಡುತ್ತಿದ್ದಾರೆ ಎಂದು ಈ ಘಟನೆಯನ್ನು ವರ್ಣಿಸಬಹುದು ಎಂದು ಕುಹಕವಾಡಿದ್ದಾರೆ.

Tags

Related Articles

Close