ಅಂಕಣ

ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ ಹುತಾತ್ಮರಾದ ಸೈನಿಕರ ವೀರ ನಾರಿ ಪತ್ನಿಯರನ್ನು ಸ್ವಾವಲಂಬಿಯಾಗಿಸುತ್ತಿರುವ ಭಾರತೀಯ ಸೇನೆಯ ಈ ಪ್ರಯತ್ನಕ್ಕೆ ಒಂದು ಸೆಲ್ಯೂಟ್ ಹೊಡೆಯಲೆಬೇಕು!!

ದೇಶದ ನಾಗರಿಕರು ಸುರಕ್ಷಿತವಾಗಿ ತಮ್ಮ ಮನೆಗಳಲ್ಲಿ ನೆಮ್ಮದಿಯ ನಿದ್ದೆ ಮಾಡುವಂತಾಗಿರುವುದು ದೇಶ ಕಾಯುವ ಸೈನಿಕರಿಂದಾಗಿ. ಆದರೆ ನಮ್ಮ ಸುರಕ್ಷತೆಗಾಗಿ ಪ್ರಾಣಾರ್ಪಣೆ ಮಾಡುವ ಸೈನಿಕರಿಗಾಗಲಿ, ಅವರನ್ನೆ ನಂಬಿಕೊಂಡು ಬದುಕಿರುವ ಅವರ ಪರಿವಾರದವರಿಗಾಗಲಿ ನಾವು ಕೊಡುವ ಗೌರವ ಶೂನ್ಯವೆಂದೆ ಹೇಳಬೇಕು. ಒಬ್ಬ ಸೈನಿಕ ಹುತಾತ್ಮನಾದ ಮೇಲೆ ಅತನ ಪರಿವಾರ ಯಾವ ಸ್ಥಿತಿಯಲ್ಲಿ ಬದುಕುತ್ತಿದೆ ಎನ್ನುವುದನ್ನು ತಿಳಿಯುವ ಗೋಜಿಗೆ ನಾವ್ಯಾರೂ ಹೋಗುವುದಿಲ್ಲ. ಹುತಾತ್ಮರ ಪರಿವಾರಕ್ಕೆ ಅಷ್ಟೋ ಇಷ್ಟೋ ಕೊಟ್ಟು ಕೈ ತೊಳೆದುಕೊಂಡು ಸುಮ್ಮನಾಗಿ ಬಿಡುತ್ತೇವೆ. ಕಡೆ ಉಸಿರಿರುವವರೆಗೂ ರಾಷ್ಟ್ರಧ್ವಜವನ್ನು ತನ್ನ ಎದೆಗಪ್ಪಿ ಹಿಡಿದು ರಕ್ಷಣೆ ಮಾಡುವ ಸೈನಿಕರ ಋಣ ಯಾವತ್ತೂ ತೀರಿಸಲು ಸಾಧ್ಯವಿಲ್ಲ.

ರಾಷ್ಟ್ರ ರಕ್ಷಣೆ ಮಾಡುವ ನಮ್ಮ ಸೈನಿಕರ ಪರಿವಾರದವರಿಗೆ ಕಿಂಚಿತ್ತು ಸೇವೆ ನಾವೂ ಕೂಡಾ ಸಲ್ಲಿಸಬಹುದು. ಭಾರತೀಯ ಸೇನೆ ಮತ್ತು ಪುಣೆ ಮೂಲದ ಅಸೀಮ್ ಫೌಂಡೇಶನ್ ಎನ್ನುವ ಸ್ವಯಂ ಸೇವಾ ಸಂಸ್ಥೆಯು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸೈನಿಕರ ವಿಧವೆ ಪತ್ನಿಯರ ಕೈಗಳನ್ನು ಬಲಪಡಿಸಿ ಸ್ವಾಲಂಬಿಯಾಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿವೆ. ಸಾಮಾಜಿಕ ಉದ್ಯಮಶೀಲತಾ ಸಾಹಸವನ್ನು ಸ್ಥಾಪಿಸಲು ಜಮ್ಮುವಿನ ಸಾಂಬಾ ಜಿಲ್ಲೆಯ ಮಿಲಿಟರಿ ಗ್ಯಾರಿಸನ್ ನಲ್ಲಿ, ಹುತಾತ್ಮರ ವಿಧವೆಯರು “ಒಲಿವ್ ಗ್ರೀನ್” ಕುಕೀಸ್ ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಲ್ಲಿ ಮಹಿಳೆಯರು ಅವರ ವೈಯಕ್ತಿಕ ಕೌಶಲ್ಯಗಳನ್ನು ಸುಧಾರಿಸುವಲ್ಲಿ ಸಾಮೂಹಿಕ ಬೆಂಬಲವನ್ನು ಪಡೆಯುವುದರಿಂದ ಅವರು ಸ್ವತಂತ್ರವಾಗಿರಲು ಮತ್ತು ಸ್ವಾವಲಂಬಿಗಳಾಗಿರಲು ಸಾಧ್ಯವಾಗುತ್ತದೆ.

ಓಲಿವ್ ಗ್ರೀನ್ ಕುಕೀಸ್ ಗಳನ್ನು ಸಾಂಬಾ ಜಿಲ್ಲೆಯ ಅತ್ಯುತ್ತಮ ತಳಿಯ ಸೇಬು ಮತ್ತು ವಾಲ್ ನಟ್ ಗಳಿಂದ ತಯಾರಿಸಲಾಗುತ್ತದೆ. ಪುಣೆ ಮೂಲದ ಅಸೀಮ್ ಫೌಂಡೇಶನ್ ಕಿಂಚಿತ್ತೂ ಫಲಾಪೇಕ್ಷೆ ಇಲ್ಲದೆ ಹುತಾತ್ಮರ ಪತ್ನಿಯರಿಗೆ ಕುಕೀಸ್ ಮಾಡುವ ತರಬೇತಿ ಮತ್ತು ಉಪಕರಣಗಳನ್ನು ನೀಡುತ್ತಲಿದೆ. ಇಲ್ಲಿ ತಯಾರಾದ ಕುಕೀಸ್ಗಳನ್ನು ಒಂದು ಪ್ಯಾಕೆಟಿಗೆ 55 ರೂಪಾಯಿಗಳಂತೆ ವಿವಿಧ ಸಂಸ್ಥೆಯ ಗ್ರಾಹಕರುಗಳಿಗೆ ಮಾರಲಾಗುತ್ತದೆ. ಕುಕೀಸ್ ಮಾರಿ ಗಳಿಸಿದ ಹಣವನ್ನು ವಿಧವೆಯರಿಗೆ ಸಮನಾಗಿ ಹಂಚಲಾಗುತ್ತದೆ. ಪ್ರಸ್ತುತ ಹತ್ತು ಕೆ.ಜಿಯಷ್ಟು ಕುಕೀಸ್ ಗಳನ್ನು ತಯಾರಿಸಲಾಗುತ್ತಿದೆ. ಇವರ ಈ ಎಲ್ಲಾ ಕೆಲಸಗಳಲ್ಲಿ ಭಾರತೀಯ ಸೇನೆಯು ಬೆಂಗಾವಲಾಗಿ ನಿಂತಿದೆ. ತಯಾರಾದ ಕುಕೀಸ್ ಗಳನ್ನು ತಿಂಗಳಿಗೆ ಎರಡು ಬಾರಿ ಪುಣೆಯ ಎನ್.ಜಿ.ಓಗೆ ತಲುಪಿಸ ಕಾರ್ಯವನ್ನು ಸ್ವತಃ ಸೇನೆಯೆ ಮಾಡುತ್ತಿದೆ. ತನ್ನ ಸೈನಿಕರ ಪರಿವಾರದವರನ್ನು ಆತ್ಮ ನಿರ್ಭರರನ್ನಾಗಿಸುತ್ತಿರುವ ಸೇನೆಗೆ ಒಂದು ಸೆಲ್ಯೂಟ್ ಹೊಡೆಯಲೆ ಬೇಕು ನಾವೆಲ್ಲರೂ.

“ಕೋಶೂರ್ ಕ್ರಂಚ್ “ಎಂದು ಬರೆಯಲಾದ ಪಾಕೆಟ್ನ ಪ್ರತಿ ಕುಕಿಯು ಕೂಡಾ ಶೌರ್ಯ ಮತ್ತು ತ್ಯಾಗದ ಪರಿಮಳವನ್ನು ತುಂಬಿಕೊಂಡಿರುವ ಸಂದೇಶವನ್ನು ಸಾರುತ್ತಿದೆ. ಪಾಕೇಟ್ನಲ್ಲಿ ” ಸಾಂಬಾ ಜಿಲ್ಲೆಯ ಧೈರ್ಯಶಾಲಿ ಮಹಿಳೆಯರ ಕೈಗಳಿಂದ ತಯಾರಿಸಲ್ಪಟ್ಟ ಓಲಿವ್ ಗ್ರೀನ್ ಕುಕೀಸ್ ಅಡೆತಡೆಗಳ ಮಧ್ಯೆಯೂ ಕರ್ತವ್ಯ ನಿರತರಾಗಿದ್ದ ತಮ್ಮ ಹತ್ತಿರದ ಮತ್ತು ಪ್ರಿಯವಾದ ಒಬ್ಬ ವ್ಯಕ್ತಿಯನ್ನು ಕಳೆದುಕೊಂಡ ಹೋರಾಟದ ಕಥೆಯನ್ನು ಹೇಳುತ್ತದೆ. ಸಾಧನೆಯಿಂದ ತಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳುವ ನಿರ್ಣಯವನ್ನು ಮಾಡಿರುವ ಈ ಕದನ ವಿಧೆವೆಯರು “ವೀರ ನಾರಿ”ಯರೆಂದು ಕರೆಸಿಕೊಳ್ಳುವ ಎಲ್ಲಾ ಗೌರವಗಳಿಗೆ ಪಾತ್ರರಾಗಿದ್ದಾರೆ. ಆಲಿವ್ ಗ್ರೀನ್ ಕುಕೀಸ್ ನ ಪ್ರತಿಯೊಂದು ಪ್ಯಾಕ್ ಅನ್ನು ಖರೀದಿಸುವುದರೊಂದಿಗೆ, ನೀವು ಕೆಚ್ಚೆದೆಯ ಹುತಾತ್ಮರಿಗೆ ವಂದನೆ ಸಲ್ಲಿಸುವುದು ಮಾತ್ರವಲ್ಲದೆ ಕದನ ವಿಧವೆಯರ ಅದಮ್ಯವಾದ ಆತ್ಮವಿಶ್ವಾಸವನ್ನು ಸಹ ಬೆಂಬಲಿಸುತ್ತೀರಿ.” ಎಂದು ಬರೆಯಲಾಗಿದೆ.

ಭಾರತೀಯ ಸೇನೆಯ ಈ ಮಹಾ ಕಾರ್ಯಕ್ಕೆ ನಾವೂ ಕೂಡಾ ಕೈ ಜೋಡಿಸಬಹುದು. ಭಾರತೀಯ ಸೇನೆಯ ಈ ಪ್ರಯತ್ನವನ್ನು ದೇಶಕ್ಕೆ ತಿಳಿಸುವ ಕಾರ್ಯ ನಡೆಯಬೇಕು. ಈ ಕುಕೀಸ್ ಗಳಿಗೆ ದೇಶಿಯ ಮಾತ್ರವಲ್ಲ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಬರುವಂತಾಗಿ ಹುತಾತ್ಮರ ವಿಧವೆಯರ ಬಾಳಿಗೆ ಬೆಳಕಾಗುವಂತಾಗಬೇಕು. ಹುತಾತ್ಮರ ವಿಧವೆಯರು ಯಾರ ಮೇಲೆಯೂ ಅವಲಂಬಿತರಾಗದೆ ಸ್ವಾವಲಂಬಿಗಳಾಗಬೇಕಾದರೆ ಹೆಚ್ಚು ಹೆಚ್ಚು ಮಹಿಳೆಯರಿಗೆ ಇಲ್ಲಿ ಕೆಲಸ ಸಿಗುವಂತಾಗಬೇಕು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವುದಂತೂ ಸಾಧ್ಯವಿಲ್ಲ. ಪ್ರಾಣಾರ್ಪಣೆ ಮಾಡಿದವರ ಪರಿವಾರದವರ ಬೆನ್ನುಲುಬಾಗಿ ನಿಂತರೆ ಅದೆ ನಾವು ಅವರಿಗೆ ಅರ್ಪಿಸುವ ಗೌರವ ಮತ್ತು ಶೃದ್ದಾಂಜಲಿ. ಸೇನೆಯ ಈ ಕಾರ್ಯದಲ್ಲಿ ನೆರವಾಗುವ ಮೂಲಕ ಹುತಾತ್ಮರ ಪತ್ನಿಯರ ಕೈ ಬಲ ಪಡಿಸೋಣ. ನಿಮ್ಮ ಕಣ್ಣುಗಳಿಗೆ ಈ ಕುಕೀಸ್ ಎಲ್ಲಾದರೂ ಕಂಡರೆ ತಕ್ಷಣ ಖರೀದಿಸಿ ಮತ್ತು ಹುತಾತ್ಮರಿಗೆ ವಂದನೆ ಸಲ್ಲಿಸಿ. ಜೈ ಜವಾನ್…..

-ಶಾರ್ವರಿ

Tags

Related Articles

Close