ಪ್ರಚಲಿತ

ಕಾಂಗ್ರೆಸ್ ಶಾಸಕನ ಆಸೆಗೆ ಎಳ್ಳುನೀರು ಬಿಟ್ಟ ಜೆಡಿಎಸ್‌..? ಮೊದಲ ಹೆಜ್ಜೆಯಲ್ಲೇ ಕಾಂಗ್ರೆಸ್-ಜೆಡಿಎಸ್ ತಳ್ಳಾಟ..!

ಈಗಾಗಲೇ ಚುನಾವಣಾ ನಂತರ ಮೈತ್ರಿ ಮಾಡಿಕೊಂಡ ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ತಂತ್ರ ಫಲಿಸಿತು , ಅಧಿಕಾರ ದೊರಕಿತು ಎಂದು ಬೀಗುತ್ತಿದ್ದರೆ, ಇತ್ತ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಭಾರತೀಯ ಜನತಾ ಪಕ್ಷ ಮುಂದಿನ ದಿನಗಳಲ್ಲಿ ಯಾವ ರೀತಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬಹುದು ಎಂಬ ಆಲೋಚನೆಯಲ್ಲಿ ತೊಡಗಿದ್ದಾರೆ. ಚುನಾವಣೆಗೂ ಮುನ್ನ ಕಿತ್ತಾಡಿಕೊಂಡಿದ್ದ ಜೆಡಿಎಸ್‌ ಮತ್ತು ಕಾಂಗ್ರೆಸ್ ಇದೀಗ ಕೇವಲ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬ ಕಾರಣಕ್ಕಾಗಿ ಕೈಜೋಡಿಸಿಕೊಂಡು ಇದೀಗ ಸಚಿವ ಸಂಪುಟದ ಖಾತೆ ಹಂಚಿಕೆ ವಿಚಾರಕ್ಕೆ ಕಿತ್ತಾಡಿಕೊಳ್ಳುವಂತಾಗಿದೆ..!

ಒಂದಾದ ಮೊದಲ ದಿನವೇ ಅಧಿಕಾರಕ್ಕಾಗಿ ಪೈಪೋಟಿ..!

ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯಿಂದ ಬಿಎಸ್ ಯಡಿಯೂರಪ್ಪ ನವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರೂ ಕೂಡ ಬಹುಮತ ಸಾಬೀತು ಪಡಿಸಲಾಗದೆ ರಾಜೀನಾಮೆ ನೀಡಿದ್ದರು. ಬಿಜೆಪಿ ಅಧಿಕಾರಕ್ಕೆ ಏರಲಿಲ್ಲ ಎಂಬ ವಿಚಾರ ತಿಳಿಯುತ್ತಿದ್ದಂತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಿ ಅದಕ್ಕೆ ಬೇಕಾದ ಮುಂದಿನ ತಯಾರಿ ನಡೆಸುತ್ತಿದ್ದಾರೆ. ಬುಧವಾರ ಪ್ರಮಾಣವಚನ ಸ್ವೀಕರಿಸಲು ಸಿದ್ದತೆ ನಡೆಸಿರುವ ಕುಮಾರಸ್ವಾಮಿ ಅವರಿಗೆ ಇದೀಗ ಮೊದಲ ಹಂತದಲ್ಲೇ ಕಂಟಕ ಎದುರಾಗಿದೆ. ಯಾಕೆಂದರೆ ಸಮ್ಮಿಶ್ರ ಸರಕಾರ ರಚನೆಯಾದರೆ ಜೆಡಿಎಸ್‌ ಮತ್ತು ಕಾಂಗ್ರೆಸ್ ನ ಎರಡೂ ಪಕ್ಷಗಳ ಶಾಸಕರಿಗೆ ಮಂತ್ರಿ ಸ್ಥಾನ ನೀಡಲೇಬೇಕು. ಆದ್ದರಿಂದ ಕರಾವಳಿಯಲ್ಲಿ ಒಂದೇ ಒಂದು ಸ್ಥಾನ ಗೆದ್ದ ಕಾಂಗ್ರೆಸ್ ನ ಶಾಸಕ ಯುಟಿ ಖಾದರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಷರತ್ತು ವಿಧಿಸಿತ್ತು. ಮೊದಲ ದಿನ ಜೆಡಿಎಸ್ ಕೂಡಾ ಒಪ್ಪಿಕೊಂಡಿತ್ತಾದರೂ ಇದೀಗ ಜೆಡಿಎಸ್ ತನ್ನ ಪಕ್ಷದ ನಾಯಕರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಆಲೋಚನೆ ನಡೆಸಿದೆ ಎಂದು ಹೇಳಲಾಗುತ್ತಿದೆ..!

ಖಾದರ್ ಬದಲು ಫಾರೂಕ್‌ಗೆ ಸಚಿವ ಸ್ಥಾನ..!?

ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ೮ ಕ್ಷೇತ್ರಗಳ ಪೈಕಿ ಕೇವಲ ಒಂದು ಸ್ಥಾನ ಪಡೆದಿರುವ ಕಾಂಗ್ರೆಸ್ ಶಾಸಕ ಯುಟಿ ಖಾದರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೊಡಬೇಕೆಂದು ಕಾಂಗ್ರೆಸ್ ನಿರ್ಧರಿಸಿತ್ತು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಗೆದ್ದಿರುವವರು ಖಾದರ್ ಮಾತ್ರ, ಆದ್ದರಿಂದ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದರೆ, ಇತ್ತ ಕರಾವಳಿಯ ಜೆಡಿಎಸ್ ನ ಪ್ರಭಾವಿ ನಾಯಕ ಮತ್ತು ಜೆಡಿಎಸ್‌ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್‌ಗೆ ಸಚಿವ ಸ್ಥಾನ ಕೊಡಲು ಜೆಡಿಎಸ್‌ ನಿರ್ಧರಿಸಿದೆ.

ಸುಮಾರು ೭೬೫ ಕೋಟಿ ಆಸ್ತಿಯ ಒಡೆಯನಾಗಿರುವಂತಹ ಬಿ.ಎಂ.ಫಾರೂಕ್ ಗೆ ಸಚಿವ ಸ್ಥಾನ ನೀಡಿದ್ದೇ ಆದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಜೆಡಿಎಸ್ ಗೆ ಜೀವ ತುಂಬಲು ಸಹಾಯವಾಗಬಹುದು ಎಂಬ ಆಲೋಚನೆ ಹೊಂದಿರುವ ಜೆಡಿಎಸ್‌ ಕಾಂಗ್ರೆಸ್ ನ ನಿರ್ಧಾರಕ್ಕೆ ಸೊಪ್ಪು ಹಾಕದೇ ತನ್ನದೇ ಪಕ್ಷದ ನಾಯಕನಿಗೆ ಮಂತ್ರಿ ಸ್ಥಾನ ನೀಡಿದರೂ ಆಶ್ಚರ್ಯವಿಲ್ಲ..!

–ಅರ್ಜುನ್

Tags

Related Articles

Close