ಪ್ರಚಲಿತ

ದೇವರ ಸ್ವಂತ ನಾಡಲ್ಲಿ ಅನ್ಯಾಯದ ಸಾವು: ಹೊಣೆ ಸರ್ಕಾರದ್ದೇ ಅಲ್ಲವೇ?

ದೇವರ ಸ್ವಂತ ನಾಡು ಕೇರಳ ಎಂದು ಹೇಳಲಾಗುತ್ತದೆ. ಆದರೆ ಅಲ್ಲಿ ಜನರಿಗೆ ಎಷ್ಟರ ಮಟ್ಟಿಗೆ ಸುರಕ್ಷತೆ ಇದೆ ಎನ್ನುವುದು ಮಾತ್ರ ಪ್ರಶ್ನಾರ್ಹ ವಿಷಯ. ಕಾರಣ ಇತ್ತೀಚೆಗೆ ನಡೆದ ಒಂದು ಭೀಕರ ಹತ್ಯೆ ಮತ್ತು ಇದಕ್ಕೆ ಅಲ್ಲಿನ ಕಮ್ಯುನಿಸ್ಟ್ ಸರ್ಕಾರದ ತಾತ್ಸಾರ ಭಾವ.

ಆಕೆಯ ಹೆಸರು ವಂದನಾ ದಾಸ್. ವೈದ್ಯಕೀಯ ಶಿಕ್ಷಣದ ಬಳಿಕ ನೂರಾರು ಕನಸುಗಳನ್ನು ಹೊತ್ತು ವೈದ್ಯೆಯಾಗಿ ಜನರ ಸೇವೆ ಮಾಡುತ್ತಿದ್ದವಳು. ಆದರೆ ಆಕೆಯ ಜೀವಕ್ಕೆ ಮಾತ್ರ ಯಾವುದೇ ಬೆಲೆ ಇಲ್ಲವಾದದ್ದು, ಪೊಲೀಸ್ ಸುಪರ್ಧಿಯಲ್ಲಿದ್ದ ಆರೋಪಿಯೇ ಆ ಯುವ ವೈದ್ಯೆಯನ್ನು ಚುಚ್ಚಿ ಚುಚ್ಚಿ ಕೊಂದದ್ದು ಅಲ್ಲಿನ ಕಾನೂನು ಎಷ್ಟು ಸಬಲ, ಅಲ್ಲಿನ ಪೊಲೀಸರು ಎಷ್ಟು ಸಮರ್ಥರು ಎಂಬುದನ್ನು ಪ್ರಶ್ನಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

೨೩ ವರ್ಷದ ಕನಸು ಕಂಗಳ ವೈದ್ಯೆಯನ್ನು, ಮಾದಕ ವ್ಯಸನಿಯಾಗಿದ್ದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ ಆರೋಪಿ ಸಂದೀಪ್ ಕತ್ತರಿ ಯಿಂದ ಚುಚ್ಚಿ ಕೊಂದಿದ್ದ. ಆರೋಪಿಯನ್ನು ಪೊಲೀಸರೇ ಮೆಡಿಕಲ್ ಟೆಸ್ಟ್‌ ಗಾಗಿ ವಂದನಾ ಕರ್ತವ್ಯ ನಿರ್ವಹಿಸುತ್ತಿದ್ದ ಕೊಲ್ಲಂ‌ನ ಆಸ್ಪತ್ರೆಗೆ ಕರೆತಂದಿದ್ದರು. ಆತನನ್ನು ತಪಾಸಣೆ ನಡೆಸುವ ಸಂದರ್ಭದಲ್ಲಿ ಕ್ರೂರಿ ಆಕೆಯನ್ನು ಕೊಲೆ ಮಾಡಿದ್ದಾನೆ. ಜೊತೆಗೆ ಪೊಲೀಸರು ಸೇರಿದಂತೆ ಇತರರ ಮೇಲೆಯೂ ದಾಳಿ ನಡೆಸಿದ್ದಾನೆ. ಆ ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಘಟನೆಯ ಬಗ್ಗೆ ಕೇರಳ ಸರ್ಕಾರ ಹೆಚ್ಚು ತಲೆ ಕೆಡಿಸಿಕೊಂಡಂತಿಲ್ಲ. ಕೇರಳದ ಕಮ್ಯೂನಿಸ್ಟ್ ಸರ್ಕಾರದ ಆರೋಗ್ಯ ಮಂತ್ರಿ ಈ ಘಟನೆಯ ಬಗ್ಗೆ ನೀಡಿದ ಹೇಳಿಕೆ ಅಲ್ಲಿನ ಸರ್ಕಾರದ ಮನಸ್ಥಿತಿಗೆ ಹಿಡಿದ ಕೈಗನ್ನಡಿ. ‘ಆ ವೈದ್ಯೆಗೆ ಸಾಕಷ್ಟು ಅನುಭವ ಇಲ್ಲದಿರುವ ಕಾರಣಕ್ಕೆ ಆ ಹತ್ಯೆ ನಡೆದಿದೆ’ ಎನ್ನುವ ಮೂಲಕ ಕೇರಳದ ಆರೋಗ್ಯ ಮಂತ್ರಿ ತನ್ನ ಸರ್ಕಾರ ಜನರ ಜೀವಕ್ಕೆ ಯಾವುದೇ ಬೆಲೆ ನೀಡುತ್ತಿಲ್ಲ. ಜನ ಸಾಮಾನ್ಯರು ಭಯದಿಂದ ಬದುಕುವ ಸ್ಥಿತಿ ಇದೆ ಎಂಬುದನ್ನು ಜಾಹೀರು ಮಾಡಿದಂತಾಗಿದೆ.

ಒಬ್ಬ ಆರೋಪಿಯನ್ನು ನಿಯಂತ್ರಣ ಮಾಡಲಾಗದ ಕೇರಳ ಸರ್ಕಾರದ ಅಡಿಯಲ್ಲಿರುವ ಪೊಲೀಸ್ ವ್ಯವಸ್ಥೆ ಅಲ್ಲಿನ ಜನಸಾಮಾನ್ಯರಿಗೆ ನ್ಯಾಯ ಒದಗಿಸಲು ಸಾಧ್ಯವಿದೆಯೇ ಎನ್ನುವುದು ಜನರ ಸಂದೇಹ. ಕೆಲ ಸಮಯದ ಹಿಂದೆ ಉತ್ತರ ಪ್ರದೇಶದಲ್ಲಿ ಅತೀಕ್ ಎಂಬ ರೌಡಿಯನ್ನು ಅಲ್ಲಿನ ಪೊಲೀಸರು ಎನ್‌ಕೌಂಟರ್ ಮಾಡಿದ್ದಾಗ ಅಬ್ಬರಿಸಿ ಬೊಬ್ಬಿರಿದ ಕೇರಳದ ಕಮ್ಯುನಿಸ್ಟರು, ಅಲ್ಲಿನ ಮಾಧ್ಯಮಗಳು, ತಮ್ಮ ರಾಜ್ಯದಲ್ಲಿಯೇ ಇಂತಹ ಘಟನೆ ನಡೆದಾಗ ಕೈಗೆ ಬಳೆ ತೊಟ್ಟು, ತುಟಿಗೆ ಗಮ್ ಹಾಕಿ ಕುಳಿತಿರುವುದು ದುರಂತ. ಹಾಗೆಯೇ ಅಲ್ಲಿನ ಸರ್ಕಾರದ ಹೇಡಿತನಕ್ಕೆ ಹಿಡಿದ ಕೈಗನ್ನಡಿ. ತರಬೇತಿ ಪಡೆದ ಪೊಲೀಸರಿಗೆ ಒಬ್ಬ ಆರೋಪಿಯನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದದ್ದು, ಓರ್ವ ಮುಗ್ಧ ವೈದ್ಯೆಯ ಕೊಲೆ ಗೆ ಕಾರಣವಾಗಿದ್ದು ಕೇರಳ ಸರ್ಕಾರದ ವೈಫಲ್ಯಕ್ಕೆ ಸ್ಪಷ್ಟ ನಿದರ್ಶನ.

Tags

Related Articles

Close