ಪ್ರಚಲಿತ

ಛಾಯಾಗ್ರಾಹಕನಾಗಿದ್ದ ಇವರು ಇಂದು ವಿಧಾನ ಪರಿಷತ್ ವಿಪಕ್ಷ ನಾಯಕ.! ಕೋಟ ಎಂಬ ಕೋಟೆಯ ಮಾಣಿಕ್ಯ ಇಂದು ವಿಧಾನ ಪರಿಷತ್ ಎಂಬ ಕೋಟೆಯ ವಿಪಕ್ಷ ನಾಯಕ…

ಕಪ್ಪು ಪ್ಯಾಂಟ್ ಬಿಳಿ ಅಂಗಿ ಎಂಬ ಸಾದಾ ವಸ್ತ್ರ. ಮಾತನಾಡಲು ನಿಂತರೆ ಕೇಳುಗರ ಕಿವಿ ನಿವಿರುವಂತಿರುತ್ತದೆ. ಪಟಪಟನೆ ಉದುರುವ ಅವರ ಮಾತುಗಳನ್ನು ಕೇಳಿದರೆ ಎಂತವನನ್ನೇ ಮಂತ್ರಮುಗ್ದಗೊಳಿಸುವಂತಿರುತ್ತದೆ. ಇವರು ಬರೆಯುವ ಒಂದೊಂದು ಮೊಣಚು ಅಕ್ಷರಗಳ ಅಂಕಣಗಳೂ ಓದುಗರನ್ನು ಸತ್ಯದರ್ಶನದತ್ತ ಕೊಂಡೊಯ್ಯುತ್ತದೆ. ಯಾವುದೇ ಪಕ್ಷದ ರಾಜಕೀಯ ವ್ಯಕ್ತಿಯೇ ಆಗಿರಲಿ, ಇವರನ್ನು ಕಂಡರೆ ಒಮ್ಮೆ ಎದ್ದು ನಿಂತು ನಮಸ್ಕರಿಸುವಂತಹಾ ವ್ಯಕ್ತಿತ್ವ ಇವರದ್ದು. ಸಾಮಾನ್ಯ ಛಾಯಾಗ್ರಹಕರಾಗಿದ್ದ ಇವರು ಇಂದು ವಿಧಾನ ಪರಿಷತ್ ನ ವಿಪಕ್ಷ ನಾಯಕ…

ಎಸ್… ನಾವು ಹೇಳುತ್ತಿರುವುದು ವಿಧಾನ ಪರಿಷತ್ ಸದಸ್ಯರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರ ಬಗ್ಗೆ. ಯಾವುದೇ ವಿಕೃತ ರಾಜಕೀಯಕ್ಕೆ ಒಳಗಾಗದೆ ಅತ್ಯಂತ ಶ್ರೀಮಂತ ರಾಜಕೀಯವನ್ನು ಮಾಡುತ್ತಾ, ನಾಡು ನುಡಿಯ ಸಂಸ್ಕೃತಿಯನ್ನು ಮೇಲೈಸುತ್ತಾ ಭಾರತಾಂಬೆಯ ಚರಣ ಕಮಲವೇ ನಮ್ಮ “ಧ್ಯೇಯ ಕಮಲ” ಎಂದು ಕೆಲಸ ಮಾಡುತ್ತಾ, ಯಾವುದೇ ಭ್ರಷ್ಟಾಚಾರಾದಿ ಕುಕೃತ್ಯಗಳಿಗೆ ಎಡೆಮಾಡಿಕೊಡದೆ ನಿಷ್ಠೆಯಿಂದ ಸರ್ಕಾರದ ಕೆಲಸ ದೇವರ ಕೆಲಸವೆಂದು ಭಾವಿಸಿ ಜನಸೇವೆ ಮಾಡಿದವರು ಕೋಟ ಶ್ರೀನಿವಾಸ ಪೂಜಾರೀಯವರು. ಇಂತಹಾ ಧೀಮಂತ ನಾಯಕ ಇದೀಗ ಕರ್ನಾಟಕ ರಾಜ್ಯ ವಿಧಾನ ಪರಿಷತ್ ನ ವಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ. ಯಾವುದೇ ಅಪೇಕ್ಷೆಯನ್ನು ಇಟ್ಟುಕೊಳ್ಳದ ಇವರನ್ನು ಇದೀಗ ಸ್ವತಃ ಅಧಿಕಾರವೇ ಹುಡುಕಿಕೊಂಡು ಬಂದಿದೆ.

ಫೋಟೋಗ್ರಾಫರ್ ರಾಜಕಾರಣಿಯಾದ ಕಥೆ ಇದು…

ಕೋಟ ಶ್ರೀನಿವಾಸ ಪೂಜಾರಿಯವರು ಹುಟ್ಟು ರಾಜಕಾರಣಿ ಅಲ್ವೇ ಅಲ್ಲ. ಇವರ ಕುಟುಂಬಸ್ಥರೂ ರಾಜಕೀಯವನ್ನು ಕಂಡವರಲ್ಲ, ಅಧಿಕಾರ ಅನುಭವಿಸಿದವರಲ್ಲ. ಇವರೂ ವೃತ್ತಿಯಲ್ಲಿ ಛಾಯಾಗ್ರಾಹಕರು. ಸಾಮಾನ್ಯರಲ್ಲಿ ಸಾಮಾನ್ಯರೆಂಬಂತೆ ಎಲ್ಲರಂತೆ ಜೀವನ ನಡೆಸಿಕೊಂಡು ಬಂದವರು ಇವರು. ರಾಜಕೀಯ ಅನ್ನೋದು ಆಕಸ್ಮಿಕವಾಗಿ ಬಂದಂತಹ ಉಡುಗೊರೆ. ಆರಂಭಧಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಇಲ್ಲಿ ಇವರ ರಾಜಕೀಯ ಜೀವನ ಆರಂಭವಾಗಿರುತ್ತದೆ. ನಂತರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿಯೂ ಕೆಲಸ ಮಾಡುತ್ತಾರೆ. ಅಲ್ಲಿಂದ ತಾಲೂಕು ಪಂಚಾಯತ್ ಚುನಾವಣೆ, ಅಲ್ಲಿಯೂ ಭರ್ಜರಿ ಗೆಲುವು, ನಂತರ ಜಿಲ್ಲಾ ಪಂಚಾಯತ್ ಚುನಾವಣೆ, ಅಲ್ಲಿಯೂ ಗೆಲುವು. ಹೀಗೆ ಸದಾ ವಿಜಯಪತಾಕೆಯನ್ನೇ ಹಾರಿಸಿಕೊಂಡು ಬಂದ ಇವರನ್ನು ರಾಜ್ಯದ ಶಕ್ತಿ ಸೌಧ ಕೈಬೀಸಿ ಕರೆಯುತ್ತಿತ್ತು. ಭಾರತೀಯ ಜನತಾ ಪಕ್ಷದ ಹೆಮ್ಮೆಯ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕರ್ನಾಟಕ ರಾಜ್ಯ ವಿಧಾನಪರಿಷತ್ ನ ಸದಸ್ಯರಾಗಿಯೇ ಬಿಟ್ಟರು.ನಿಷ್ಕಳಂಕ ವ್ಯಕ್ತಿತ್ವವನ್ನು ಹೊಂದಿದ್ದ ಇವರು ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಾರವನ್ನೇ ಸೃಷ್ಟಿಸಿದರು. ಮತ್ತೊಂದು ಬಾರಿ ವಿಧಾನ ಪರಿಷತ್ ಗೆ ಆಯ್ಕೆಯಾದರು. ಒಟ್ಟು ಮೂರು ಬಾರಿ ವಿಧಾನ ಪರಿಷತ್ ಗದ್ದುಗೆಯೇರಿದ್ದ ಇವರು ಒಂದು ಬಾರಿ ಅವಿರೋಧವಾಗಿಯೂ ಆಯ್ಕೆಯಾಗಿದ್ದರು. ಇದು ಇವರ ಪಕ್ಷಾತೀತ ರಾಜಕಾರಣದ ನಿಲುವನ್ನು ಎತ್ತಿ ಹಿಡಿಯುವಂತಿತ್ತು.

ಸಚಿವ ಸ್ಥಾನ-ಬಯಸದೆ ಬಂದ ಭಾಗ್ಯ..!

ಈ ಪುಣ್ಯಾತ್ಮ ಯಾವುದನ್ನೂ ಅಪೇಕ್ಷೆ ಪಟ್ಟವರೇ ಅಲ್ಲ. ಆದರೂ ಅಧಿಕಾರ ಅನ್ನೋದು ಇವರನ್ನೇ ಹಿಂಬಾಲಿಸಿಕೊಂಡು ಬರುತ್ತಿತ್ತು. ಗ್ರಾಮ ಪಂಚಾಯತಿಯಿಂದ ಹಿಡಿದು ಪರಿಷತ್ ಸ್ಥಾನದವರೆಗೂ ಇವರು ಕಲ್ಪನೆನೇ ಮಾಡಿಕೊಂಡಿಲ್ಲ. ಹಾಗೆನೇ ಕರ್ನಾಟಕ ರಾಜ್ಯ ಮಂತ್ರಿ ಮಂಡಲದಲ್ಲಿ ಕೆಲಸ ಮಾಡುವ ಭಾಗ್ಯವೂ ಇವರಿಗೆ ಒಲಿದು ಬಂದಿತ್ತು. ಕಳೆದ ಭಾರತೀಯ ಜನತಾ ಪಕ್ಷದ ಸರ್ಕಾರದಲ್ಲಿ ಮುಜುರಾಯಿ ಹಾಗೂ ಬಂದರು ಒಳನಾಡು ಸಾರಿಗೆ ಸಚಿವ ಸ್ಥಾನ ಇವರಿಗಾಗಿ ಕಾದಿತ್ತು. ಅಂದಹಾಗೆ ಮುಜರಾಯಿ ಇಲಾಖೆಗೆ ನಿಜವಾಗಿಯೂ ಅರ್ಥ ಬಂದಿದ್ದು ಕೋಟ ಶ್ರೀನಿವಾಸ ಪೂಜಾರಿಯವರ ಅಧಿಕಾರವಧಿಯಲ್ಲಿ.

ರಾಜ್ಯದ ದೇವಾಲಯಗಳಿಗೆ ಭರಪೂರ ಅನುದಾನಗಳನ್ನು ಘೋಷಿಸುವ ಮೂಲಕ ಅದೆಷ್ಟೋ ದೇವಾಲಯಗಳ ಜೀರ್ಣೋದ್ಧಾರಕ್ಕೆ ಕಾರಣರಾದರು. ಈ ಹಿಂದೆ ಒಂದು ಮಾತಿತ್ತು. ಮುಜರಾಯಿ ಸಚಿವರಾದರೆ ಮತ್ತೆ ಗೆಲ್ಲೋದು ಕಷ್ಟ ಎಂದು. ಯಾಕೆಂದರೆ ಅದರ ಪ್ರತಿಯೊಂದು ಪೈಸೆಯೂ ದೇವರ ಹಣವಾಗಿರುತ್ತದೆ. ಅದರಲ್ಲಿ ಲೂಟಿ ಮಾಡಿದ್ರೆ ಮತ್ತೆ ಆತ ಗೆಲ್ಲೋದಿಲ್ಲ ಎಂಬ ಮಾತಿತ್ತು. ಅಂತೆಯೇ ಕರ್ನಾಟಕದಲ್ಲಿ ಮುಜರಾಯಿ ಸಚಿವರಾದವರು ಮತ್ತೆ ಗೆದ್ದ ಇತಿಹಾಸವೂ ಅತಿ ವಿರಳ. ಆದರೆ ಕೋಟ ಶ್ರೀನಿವಾಸ್ ಪೂಜಾರಿ ಮತ್ತೆ ಗೆದ್ದು ಬಂದರು. ಮತ್ತೆ ವಿಧಾನ ಪರಿಷತ್ ನ ಸದಸ್ಯರಾದರು. ಈ ಮೂಲಕ ರಾಜ್ಯದ ಜನತೆಯ ಹಣ ಹಾಗೂ ದೇವರ ಹಣ ಎರಡೂ ಒಂದೇ, ಅದರಲ್ಲಿ ಭ್ರಷ್ಟಾಚಾರ ಮಾಡಬಾರದು ಎಂಬ ಸಂದೇಶವನ್ನು ದೇಶಕ್ಕೆ ಸಾರಿದ್ದರು. ಮತ್ತೆ ಮುತ್ಸದ್ದಿ ನಾಯಕರಾದರು.

ಕೋಟ ಎದ್ದರೆ ವಿಪಕ್ಷವೇ ನಡುಗುವುದು…!

ವಿಧಾನ ಪರಿಷತ್ ನ ಒಂದು ಕಡೆಯಲ್ಲಿ ಕುಳಿತು ಎಲ್ಲವನ್ನೂ ಆಳಿಸುತ್ತಿರುವ ಕೋಟ ಶ್ರೀನಿವಾಸ ಪೂಜಾರಿ ಎದ್ದು ಪ್ರಶ್ನೆಗೆ ನಿಂತರೆ ವಿಪಕ್ಷಗಳು ಒಮ್ಮೆ ಬೆವರುತ್ತವೆ. ಪ್ರಖರವಾದ ಮಾತು, ಅಂಕಿ ಅಂಶಗಳ ಸಮೇತವಾಗಿ ಇವರು ಕೇಳುವ ಒಂದೊಂದು ಪ್ರಶ್ನೆಯೂ ಕೂಡ ವಿರೋಧಿಗಳಲ್ಲಿ ಬಿಸಿ ಹುಟ್ಟಿಸುತ್ತದೆ. ಇವರ ಪ್ರಶ್ನೆಗೆ ಉತ್ತರಿಸೋದು ಕೊಂಚ ಕಷ್ಟವೇ ಸರಿ. ದಾಖಲೆ ಸಹಿತವಾಗಿ ಇವರು ಕೇಳುವ ಪ್ರಶ್ನೆ ಅತ್ಯಂತ ಅಮೂಲ್ಯ ಹಾಗೂ ಅದು ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಹೊತ್ತು ತಂದ ಪ್ರಶ್ನೆಗಳಾಗಿರುತ್ತದೆ.

ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ಇವರನ್ನು ಕಂಡರೆ ಅತ್ಯಂತ ಹೆಚ್ಚು ಪ್ರೀತಿ. ತಳಮಟ್ಟದ ಕಾರ್ಯಕರ್ತರಾಗಿ ದುಡಿದು ಗ್ರಾಮ ಪಂಚಾಯತ್ ನಿಂದಲೇ ಸ್ಪರ್ಧಿಸಿ ಅಲ್ಲಿನ ಸಮಸ್ಯೆಗಳನ್ನು ಸವಿಸ್ತಾರವಾಗಿ ತಿಳಿಯಬಲ್ಲ ಸಾಮರ್ಥ್ಯವಿರುವ ಏಕೈಕ ನಾಯಕನೆಂದರೆ ಅದು ಕೋಟ ಶ್ರೀನಿವಾಸ ಪೂಜಾರಿ. ಗ್ರಾಮ ಪಂಚಾಯತ್ ಸದಸ್ಯರು ಇಂದು ವೇತನ ಪಡೆದುಕೊಳ್ಳಬೇಕಾದರೆ ಅದರ ಹಿಂದೆ ಇವರ ಕೆಲಸ ಅತಿದೊಡ್ಡದು. ಪ್ರತಿ ಗ್ರಾಮ ಪಂಚಾಯತಿಗೂ ಭೇಟಿ ಮಾತ್ರವಲ್ಲದೆ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಸಾಮಾನ್ಯ ಸಭೆ ಹಾಗೂ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತಾರೆ.

ಬಿಜೆಪಿಯೇ ಜೀವಾಳ-ಇವರಿದ್ದರಿಲ್ಲ ಕಳವಳ…

ಭಾರತೀಯ ಜನತಾ ಪಕ್ಷ ವೆಂದರೆ ಇವರಿಗೆ ಜೀವ. ಎಲ್ಲವನ್ನೂ ಕೊಟ್ಟ ಪಕ್ಷಕ್ಕೆ ತಾನು ಸದಾ ಋಣಿ ಎಂದೇ ಪಕ್ಷಪ್ರೇಮವನ್ನು ಮೆರೆಯುತ್ತಾರೆ ಇವರು. ಉಡುಪಿ ಜಿಲ್ಲಾ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ಇವರು ಭಾರತೀಯ ಜನತಾ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿಯೂ ತನ್ನ ಜವಾಬ್ಧಾರಿಯನ್ನು ನಿಷ್ಠೆಯಿಂದ ಪೂರೈಸಿದ್ದಾರೆ. ಪಕ್ಷದ ಪರವಾಗಿ ರಾಜ್ಯದಾದ್ಯಂತ ಸಂಚರಿಸುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಬಲ ತುಂಬಿದ್ದಾರೆ. ಕಳೆದ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇವರ ಪ್ರಭಾವ ಅವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬೀರಿತ್ತು. ಅದರಲ್ಲೂ ತಾನು ಉಸ್ತುವಾರಿಯಾಗಿದ್ದ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಸ್ಥಾನದಲ್ಲಿ ಐದನ್ನೂ ಗೆದ್ದು ತೋರಿಸುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿಯಾಗಿದ್ದರು. ತನ್ನ ಸಾಮಾರ್ಥ್ಯವನ್ನು ಮತ್ತೆ ಸಾಭೀತುಒಡಿಸಿದ್ದರು.

ಅಜಾತಶತ್ರುವಿಗೆ ಎಲ್ಲರೂ ಮಿತ್ರರೇ…

ಗ್ರಾಮ ಪಂಚಾಯತಿ ಸದಸ್ಯನಿಂದ ಲೋಕಸಭಾ ಸಂಸದರವರೆಗೂ ಕೋಟ ಶ್ರೀನಿವಾಸ ಪೂಜಾರಿ ಎಂದರೆ ಬಲು ಇಷ್ಟ. ಭಾರತೀಯ ಜನತಾ ಪಕ್ಷ ಮಾತ್ರವಲ್ಲದೆ ವಿರೋಧ ಪಕ್ಷಗಳು ಕೂಡಾ ಇವರನ್ನು ಕಂಡರೆ ಪ್ರೀತಿಯಿಂದ ಗೌರವಿಸುತ್ತಾರೆ. ಅಜಾತಶತ್ರು ಎನಿಸಿಕೊಂಡಿದ್ದ ಶ್ರೇಷ್ಠ ನಾಯಕ ವಿಎಸ್ ಆಚಾರ್ಯ, ಸೋಮಶೇಖರ್ ಭಟ್ ಹಾಗೂ ಪ್ರಭಾಕರ್ ನಾಯಕ್ ರಂತಹ ಗರಡಿಯಲ್ಲಿ ಪಳಗಿದ ಇವರನ್ನೂ ಜನತೆ ಕರೆಯೋದು ಅಜಾತಶತ್ರು ಎಂದೇ. ವ್ಯಕ್ತಿ ಪ್ರೇಮ, ರಾಷ್ಟ್ರ ಪ್ರೇಮ, ಪಕ್ಷ ಪ್ರೇಮ ಎಂಬುವುದು ಇವರಲ್ಲಿ ಸದಾ ಜಾಗೃತ.

ನಮ್ಮೂರ ಮಾಣಿಕ್ಯ ವಿಧಾನ ಪರಿಷತ್ ವಿಪಕ್ಷ ನಾಯಕ…!

ಕೋಟ ಎಂಬ ಸಾಮಾನ್ಯ ಗ್ರಾಮದ ಬಡ ಕೃಷಿ ಕುಟುಂಬದಿಂದ ಬಂದ ಇವರು ಇಂದು ಕರ್ನಾಟಕ ರಾಜ್ಯ ವಿಧಾನ ಪರಿಷತ್ ನ ವಿಪಕ್ಷದ ಮುಖ್ಯ ನಾಯಕ. ಕೇವಲ ಸದಸ್ಯ ಸ್ಥಾನದಲ್ಲಿ ಇರುವಾಗಲೇ ಅಬ್ಬರಿಸುತ್ತಿದ್ದ ಇವರನ್ನು ಎದುರಿಸಲಾಗದ ಆಡಳಿತ ಪಕ್ಷದ ನಾಯಕರು ಇದೀಗ ವಿಪಕ್ಷ ನಾಯಕನಾಗಿ ಆಯ್ಕೆಯಾಗಿದ್ದಾರೆ ಎಂದಾಗ ಒಮ್ಮೆ ಭಯ ಹುಟ್ಟೋದು ಗ್ಯಾರಂಟಿ. ಆದರೂ ಇವರನ್ನು ಅಷ್ಟೇ ಪ್ರೀತಿಯಿಂದ ಸ್ವೀಕರಿಸುತ್ತಾರೆ ಅನ್ನೋದೂ ಅಷ್ಟೇ ಸತ್ಯ.

  • ಸುನಿಲ್ ಪಣಪಿಲ
Tags

Related Articles

Close