ಅಂಕಣ

ಏಳು ವರ್ಷ ವಯಸ್ಸಿನಲ್ಲೇ ಭಗವದ್ ಕಥೆಗಳನ್ನು ಹೇಳುತ್ತಿದ್ದ ಬಾಲೆ ಈಗ ಹಿಂದೂ ಸಮಾಜದ ಕಣ್ಮಣಿ, ವಿಶ್ವ ಹಿಂದೂ ಪರಿಷತ್ತಿನ ವಾಗ್ಮಿ ಸಾಧ್ವಿ ಸರಸ್ವತಿ ಹಿಂದೂಗಳ ಹೆಮ್ಮೆ!!

ಆಕೆಯ ವಯಸ್ಸಿನ ಹೆಣ್ಣು ಮಕ್ಕಳು ಕನ್ನಡಿ ಮುಂದೆ ನಿಂತು ತಮ್ಮ ಸೌಂದರ್ಯ ಉಪಾಸನೆ ಮಾಡುತ್ತಿರುತಾರೆ. ಆಕೆಯ ವಯಸ್ಸಿನ ಹುಡುಗಿಯರು ತಮ್ಮ ರಾಜಕುಮಾರನ ಕನಸು ಕಾಣುತ್ತಿರುತ್ತಾರೆ. ಆದರೆ ಆಕೆಯ ಜನ್ಮ ಧರ್ಮ ರಕ್ಷಣೆಗಾಗಿ ಆಗಿದ್ದು. ಏರು ಯೌವ್ವನದ ಕಾಲದಲ್ಲಿ ವಿರಾಗಿಣಿಯಂತೆ ಕಾವಿ ಉಟ್ಟು ಹಿಂದೂ ಸಮಾಜದ ನರ ಸತ್ತ ಪುರ ಜನರನ್ನು ತನ್ನ ವಾಗ್ಝರಿಯಿಂದ ಬಡಿದೆಬ್ಬಿಸುತ್ತಾಳೆ 21 ರ ಹರೆಯದ ಸಾಧ್ವಿ ಸರಸ್ವತಿ!! ಸಿಂಹಿಣಿಯ ಘರ್ಜನೆಯಂತಿರುತ್ತದೆ ಆಕೆಯ ಭಾಷಣ. ನಿದ್ದೆಯಲ್ಲಿದ್ದವರೂ ಎದ್ದು ಕೂರಬೇಕು ಅಂತಹ ನಿರರ್ಗಳ ವಾಕ್ಪಟುತ್ವ! ಸತ್ಯ, ಭಗವಂತನೆ ಸನಾತನ ಧರ್ಮದ ಉತ್ಥಾನಕ್ಕಾಗಿ ಆಕೆಯನ್ನು ಭೂಮಿಗೆ ಕಳುಹಿಸಿರಬೇಕು. ಇಲ್ಲವೆಂದರೆ ಇಂತಹ ಸಣ್ಣ ವಯಸಿನಲ್ಲಿ ಇಂತಹ ಸಾಧನೆ ಸಾಧ್ಯವೆ?

ಏಳು ವರ್ಷದ ಬಾಲಿಕಾ ಸರಸ್ವತಿಗೆ ತಾನು ಸಾಧ್ವಿಯಾಗಿ “ರಾಮ ಕಥೆ”ಗಳನ್ನು ಹೇಳಿ ಜನರನ್ನು ಬಡಿದೆಚ್ಚರಿಸಬೇಕೆಂಬ ಹಂಬಲ ಉಂಟಾಯಿತು! ಈ ವಯಸ್ಸಿನ ಮಕ್ಕಳು ಸರಿಯಾಗಿ ಪಾಠ ಪುಸ್ತಕದ ಪದ್ಯಗಳನ್ನೆ ಬಾಯಿಪಾಠ ಮಾಡಲಾಗುವುದಿಲ್ಲ ಅಂತಹದರಲ್ಲಿ ಆಕೆಗೆ ರಾಮ ಕಥೆ ಹೇಳಬೇಕೆಂಬ ಮನಸಾಗುತ್ತದೆ ಎಂದರೆ ಎಂತಹ ಅದ್ಭುತ ವಿಚಾರ!! ತಾನು ಬದುಕಿರುವವರೆಗೂ ಹಿಂದೂ ರಾಷ್ಟ್ರದ ಉತ್ಥಾನ ಮಾಡುತ್ತೇನೆ ಎನ್ನುತ್ತಾರೆ ವಿಶ್ವ ಹಿಂದೂ ಪರಿಷತ್ತಿನ ಸ್ಟಾರ್ ಪ್ರಚಾರಿಣಿ ಸಾಧ್ವಿ ಸರಸ್ವತಿ.

ತನ್ನ ಅಜ್ಜನಿಂದ ಪ್ರೇರಣೆಗೊಳಗಾಗಿ ಏಳು ವರ್ಷ ವಯಸ್ಸಿನಲ್ಲೆ ಅವರು ಭಗವದ್ ಗೀತೆಯನ್ನು ಪಠಿಸಲು ಪ್ರಾರಂಭಿಸಿದ್ದರಂತೆ. ಅಜ್ಜ ತನ್ನ ಹುಟ್ಟೂರಾದ ರೇವಾ(ಮಧ್ಯ ಪ್ರದೇಶ) ದಿಂದ ಬೇರೆಡೆಗೆ ಕಥೆ ಪರಾಯಣ ಮಾಡಲು ಕರೆದುಕೊಂಡು ಹೋಗುತ್ತಿದೆನ್ನುತ್ತಾರೆ ಸಾಧ್ವಿ. ಆದರೆ ದುರ್ದೈವ ಎಂದರೆ ಆಕೆ ಒಂಭತ್ತು ವರ್ಷ ವಯಸ್ಸಿನವಳಾಗಿರುವಾಗ ಆಕೆಯ ಅಜ್ಜ ರೈಲು ಅಫಘಾತದಲ್ಲಿ ಮರಣ ಹೊಂದುತ್ತಾರೆ. ತನ್ನ ತಾತನ ಮರಣಾನಂತರ ತನ್ನ ತಂದೆ ತನ್ನನ್ನು ಕಥೆ ಪಾರಾಯಣ ಮಾಡಲು ಬೇರೆ ಊರುಗಳಿಗೆ ಕೊಂಡು ಹೋಗುತ್ತಿದ್ದರೆನ್ನುತ್ತಾರೆ. ತಮ್ಮ ಮಗಳ ಆಧ್ಯಾತ್ಮದ ಒಲವನ್ನು ಚಿವುಟದೆ ಅದಕ್ಕೆ ನೀರೆರೆದು ಪೋಷಿಸಿದರು ಸಾಧ್ವಿಯ ಹೆತ್ತವರು. ಇದು ಸನಾತನ ಧರ್ಮದ ಪುಣ್ಯ. ಇಂತಹ ಹೆತ್ತವರು ಎಲ್ಲರಿಗೂ ಸಿಗುವುದಿಲ್ಲ.

ವೃತ್ತಿಯಲ್ಲಿ ವೈದ್ಯರಾಗಿದ್ದ ಸಾಧ್ವಿಯವರ ತಂದೆಯವರು ತಮ್ಮ ಮಗಳ ಹಂಬಲಕ್ಕೆ ಪ್ರೋತ್ಸಾಹ ನೀಡಿ ಆಕೆ ರಾಮ ಕಥೆ, ಭಾಗವತ ಮತ್ತು ಗೋ ಕಥೆಗಳನ್ನು ಹೇಳಲು ಅನುವು ಮಾಡಿಕೊಟ್ಟು ಧರ್ಮ ರಕ್ಷಣೆಯ ಕಾರ್ಯದಲ್ಲಿ ಸಹಭಾಗಿಯಾದರು. ತನ್ನ ಹದಿನೆರಡನೆ ವಯಸ್ಸಿನಲ್ಲಿ “ದೀಕ್ಷೆ” ತೆಗೆದುಕೊಂಡ ಸರಸ್ವತಿಯವರು “ಸಾಧ್ವಿ ಸರಸ್ವತಿ”ಯಾಗಿ ರೇವಾದ ಚೈತನ್ಯ ಪೀಠ ಆಶ್ರಮವನ್ನು ಸೇರಿಕೊಂಡರು. ಅಂದಿನಿಂದ ಇಂದಿನವರೆಗೆ ಸಾಧ್ವಿಯವರು ಮಹಾರಾಷ್ಟ್ರ, ಗುಜರಾತ್, ಛತ್ತೀಸ್ಗಢ, ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಥಾ ನಿರೂಪಣೆ ಮಾಡಿದ್ದಾರೆ.

ಕೇವಲ ಕಥಾ ಪಾರಾಯಣ ಮಾಡುವುದಷ್ಟೇ ತಮ್ಮ ಪೀಠದ ಉದ್ದೇಶವಲ್ಲ, ಭಾಗವತದಲ್ಲಿ ಗೋವಿನ ಕಥೆಗಳನ್ನು ಸೇರಿಸಿ “ಗೋಹತ್ಯೆ”ಯನ್ನು ನಿಷೇಧಿಸುವುದು ನಮ್ಮ ಉದ್ದೇಶ ಎನ್ನುವ ಇವರು ಭಾರತದಲ್ಲೇನಾದರೂ ಗೋಹತ್ಯೆ ನಿಂತರೆ ಹೊಸ ಕ್ರಾಂತಿಯಾಗಲಿದೆ ಎಂದು ಪ್ರತಿಪಾದಿಸುತಾರೆ. ಒಂದೆರಡು ವರ್ಷಗಳವರೆಗೆ ಹಾಲೂಡಿಸುವ ತಾಯಿ ನಮಗೆ ಪೂಜನೀಯಳು ಅಂತಹದರಲ್ಲಿ ಜೀವನ ಪರ್ಯಂತ ನಮಗೆ ಹಾಲು ನೀಡುವ ಗೋಮಾತೆ ಎಷ್ಟು ದೊಡ್ಡವಳಾಗಿರಬೇಕು? ನಾವು ಆಕೆಯ ಋಣವನ್ನು ಕೊಲ್ಲುವುದರ ಮೂಲಕ ತೀರಿಸುತ್ತೇವೆ. ಇದೊಂದು ಘೋರ ಅಪರಾಧ, ಹಾಗೆ ಮಾಡಬೇಡಿ ಗೋಮಾತೆಯನ್ನು ನಿಮ್ಮ ತಾಯಿಯಂತೆ ಪ್ರೀತಿಸಿ ಆಕೆ ಸದಾ ಪೂಜನೀಯಳೆಂದು ನಾವು ಜನರಿಗೆ ಮನದಟ್ಟು ಮಾಡುತ್ತೇವೆನ್ನುತ್ತಾರೆ ಸಾಧ್ವಿ.

ಇಂತಹ ಸಣ್ಣ ಪ್ರಾಯದಲ್ಲಿ ಎಂತಹ ಘನ ಉದ್ದೇಶ! ಮೂರನೆ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದ ಸಾಧ್ವಿ ಪ್ರಯಾಣದ ತೊಂದರೆಯ ಕಾರಣದಿಂದ ಶಾಲೆಯನ್ನು ತ್ಯಜಿಸಬೇಕಾಯಿತು. ಜೀವನದಲ್ಲಿ ಯಾರು ಬೇಕಾದರೂ ಸನ್ಯಾಸಿಯಾಗಬಹುದು. ಕೇವಲ ಕೇಸರಿ ತೊಟ್ಟವರೆ ಸನ್ಯಾಸಿಗಳಲ್ಲ, ಪ್ರಾಪಂಚಿಕ ವಾಂಛೆಗಳನ್ನು ತ್ಯಜಿಸಿದ ಗ್ರಹಸ್ಥರೂ ಕೂಡಾ ಸನ್ಯಾಸಿಗಳೆ ಎನ್ನುತ್ತಾರೆ ಇವರು. ಸಂಸ್ಕೃತದಲ್ಲಿ “ಸಾಧ್ವಿ” ಎಂದರೆ “ಸಂಸ್ಕಾರ ಉಳ್ಳವರು” ಎಂದರ್ಥ ಹಾಗಾಗಿ ಯಾರಲ್ಲಿ ಸಂಸ್ಕಾರವಿದೆಯೋ ಅವರೆಲ್ಲರೂ ಸಾಧ್ವಿಗಳೆ ಎಂದು ಹೇಳುತ್ತಾರೆ. ಸಾಧ್ವಿಯೆಂದರೆ ತನ್ನ ಗುರಿಯೆಡೆಗೆ ಮನವಿಟ್ಟು ಸಾಧನೆ ಮಾಡುವುದು. ಸಾಧನೆಗೆ ಬಟ್ಟೆಯ ಬಣ್ಣದ ಸಂಬಂಧವಿಲ್ಲ ಎಂದು ಹೇಳುತ್ತಾ ಸನ್ಯಾಸದ ಮಹತ್ವವನ್ನು ತಿಳಿಹೇಳುತ್ತಾರೆ.

ತನ್ನ ಜೀವನದ ಕೊನೆ ಘಳಿಗೆಯವರೆಗೂ ಹಿಂದೂ ರಾಷ್ಟ್ರಕ್ಕಾಗಿ ಹೋರಾಡುತ್ತೇನೆ ಅದಕ್ಕಾಗಿ ತಾನು ಏನು ಬೇಕಾದರೂ ಮಾಡಲು ಸಿದ್ದ ಎನ್ನುವ ಸಾಧ್ವಿ ಮಹಿಳೆ ಮತ್ತು ಪುರುಷರಾದಿಯಾಗಿ ಎಲ್ಲರಿಗೂ ಮಾದರಿ. ಸನಾತನದ ಸೇವೆ ಮಾಡಲು ಕಾವಿ ಉಡಲೆ ಬೇಕೆಂದೇನಿಲ್ಲ. ಸೇವೆ ಮಾಡುವ ಮನಸ್ಸಿದ್ದರೆ ಸಾಕು. ದೇಶ ಮತ್ತು ಧರ್ಮಕ್ಕಾಗಿ ಉಪಯೋಗವಾಗದ ಬದುಕು ಇದ್ದರೆಷ್ಟು ಬಿಟ್ಟರೆಷ್ಟು. ಆದ್ದರಿಂದ ಜೀವನದ ಪರಮ ಗುರಿ ದೇಶ ಮತ್ತು ಧರ್ಮ ರಕ್ಷಣೆಯೆ ಆಗಿರಲಿ.

ಧರ್ಮೋ ರಕ್ಷತಿ ರಕ್ಷಿತಃ

-ಶಾರ್ವರಿ

Tags

Related Articles

Close