ಪ್ರಚಲಿತ

ಮೆ ಅಟಲ್ ಹೂ…

ಭಾರತ‌ ದೇಶ ಕಂಡ ಅದ್ಭುತ ಪ್ರಧಾನಿ, ಭಾರತೀಯ ಜನತಾ ಪಕ್ಷದ ನಾಯಕನಾದರೂ ಅಜಾತ ಶತ್ರುವಾಗಿದ್ದ ನಮ್ಮ ನೆಚ್ಚಿನ ಅಟಲ್ ಬಿಹಾರಿ ವಾಜಪೇಯಿ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಭಾರತದ ಈ ಹೆಮ್ಮೆಯ ಪುತ್ರ ಅಟಲ್ ಜೀ ಅವರ ಜೀವನಾಧರಿತ ಸಿನೆಮಾ ಒಂದು ಬರಲಿದ್ದು, ಇಡೀ ದೇಶವೇ ಈ ಸಿನೆಮಾಗಾಗಿ ಕಾತರದಿಂದ ಕಾಯುತ್ತಿದೆ.

ತಮ್ಮ ಪ್ರೇರಣಾದಾಯಕ ಮಾತುಗಳ ಮೂಲಕವೇ ಜನರಿಗೆ ಹತ್ತಿರವಾಗಿದವರು ಅಟಲ್ ಜಿ. ಕೇವಲ ಬಿಜೆಪಿಯವರಿಗೆ, ಬಿಜೆಪಿ ಪಕ್ಷವನ್ನು ಬೆಂಬಲಿಸುವವರಿಗೆ ಮಾತ್ರವಲ್ಲ. ಬದಲಾಗಿ ವಿರೋಧ ಪಕ್ಷಗಳಿಗೂ ಅಟಲ್ ಜಿ ಅವರು ಇಷ್ಟವಾದವರು, ನೆರೆಯ ಪಾಕಿಸ್ತಾನ ಸಹ ಅಟಲ್ ಜಿ ಅವರನ್ನು ಗೌರವದಿಂದ ಕಾಣುತ್ತಿತ್ತು ಎಂದರೆ ಅದಕ್ಕೆ ಕಾರಣ ಅವರ ಗುಣ, ನಡತೆ, ನಡೆ – ನುಡಿ ಎಂದು ಯಾವುದೇ ಸಂದೇಹವಿಲ್ಲದೆ ಹೇಳಬಹುದು.

ಪಾಕ್ ಜೊತೆಗಿನ ಒಂದು ಸಂದರ್ಭವನ್ನು ಹೀಗೆ ನೆನಪಿಸಿಕೊಳ್ಳಬಹುದು. ಒಂದು ಬಾರಿ ಅಮೃತ ಸರ್‌ನಿಂದ ಲಾಹೋರ್‌ಗೆ ಬಸ್ಸು ಸೇವೆ ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಅಟಲ್ ಜಿ ಲಾಹೋರ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗುತ್ತಿತ್ತು. ಇದರಲ್ಲಿ ಭಾಗವಹಿಸಿದ್ದ ಪತ್ರಕರ್ತೆಯೊಬ್ಬಳು ಅಟಲ್ ಜೀ ಅವರಿಗೆ ‘ನಾನು ನಿಮ್ಮನ್ನು ಮದುವೆಯಾಗುತ್ತೇನೆ, ಅದಕ್ಕೆ ಪ್ರತಿಯಾಗಿ ನೀವು ಪಾಕಿಸ್ತಾನಕ್ಕೆ ಕಾಶ್ಮೀರವನ್ನು ಬಿಟ್ಟು ಕೊಡಿ’ ಎಂದಿದ್ದಳು. ಇದಕ್ಕೆ ಬಹಳ ರೋಚಕವಾಗಿ ಅಟಲ್ ಜೀ ಉತ್ತರಿಸಿದ್ದರು. ‘ನಾನು ನಿಮ್ಮನ್ನು ಮದುವೆಯಾಗುತ್ತೇನೆ, ಬದಲಾಗಿ ನೀವು ವರದಕ್ಷಿಣೆ ರೂಪದಲ್ಲಿ ಸಂಪೂರ್ಣ ಪಾಕಿಸ್ತಾನವನ್ನು ಭಾರತಕ್ಕೆ ಬಿಟ್ಟು ಕೊಡಿ’ ಎಂದಿದ್ದರು.

ಈಗ ಅಟಲ್ ಜೀ ಅವರ ಜೀವನ ಚರಿತ್ರೆ ಆಧರಿತ‌ ಚಿತ್ರ ತಯಾರಾಗುತ್ತಿದ್ದು, ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅವರು ಅಟಲ್ ಜೀ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನೆಮಾದ ಟ್ರೈಲರ್ ‌ಸಿದ್ಧವಾಗಿದ್ದು, ರಿಲೀಸ್ ಸಹ ಆಗಿದೆ. ಇದರಲ್ಲಿ ವಾಜಪೇಯಿ ಅವರ ಮದುವೆಯ ಪ್ರಸಂಗದ ಬಗೆಗಿನ ಸನ್ನಿವೇಶಗಳನ್ನು ಸಹ ಚಿತ್ರಿಸಲಾಗಿದೆ.

ರವಿ ಯಾದವ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಅಭಿಪ್ರಾಯ ಸಹ ವ್ಯಕ್ತಪಡಿಸಿದ್ದು, ದೇಶಕ್ಕೆ ವಾಜಪೇಯಿ ಅವರು ನೀಡಿದ ಕೊಡುಗೆಗಳನ್ನು ಅವರ ಜರ್ನಿ ಯನ್ನು ನಾನು ಬಾಲ್ಯದಿಂದಲೇ ಹಿಂಬಾಲಿಸಿಕೊಂಡು ಬಂದಿದ್ದೇನೆ. ನಮ್ಮ ದೇಶದ ಅತ್ಯಂತ ಜನಪ್ರಿಯ ನಾಯಕನ ಬಗ್ಗೆ ನಿರೂಪಣೆ ಮಾಡಲು ನನಗೆ ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಾಗೆಯೇ ಸಿನೆಮಾದಲ್ಲಿ ಅಟಲ್ ಜಿ ಪಾತ್ರ ಮಾಡುತ್ತಿರುವ ಪಂಕಜ್ ತ್ರಿಪಾಠಿ ಮಾತನಾಡಿದ್ದು, ಅಟಲ್ ಜೀ ಅವರ ಜರ್ನಿಯಲ್ಲಿ ಭಾಗಿಯಾಗಿದ್ದು ನನ್ನ ಹೃದಯಕ್ಕೆ ಹತ್ತಿರವೆನಿಸಿದೆ. ಅಟಲ್ ಜೀ ನಿಜಕ್ಕೂ ಒಬ್ಬ ಲೆಜೆಂಡ್. ಅವರ ಸ್ಪೂರ್ತಿದಾಯಕ ಜೀವನ ಪಯಣವನ್ನು ಪ್ರಪಂಚಕ್ಕೆ ಪರಿಚಯಿಸುತ್ತಿರುವುದಕ್ಕೆ ಹೆಮ್ಮೆ ಇರುವುದಾಗಿ ಹೇಳಿದ್ದಾರೆ.

ಭಾನುಶಾಲಿ ಸ್ಟುಡಿಯೋಸ್ ಲಿ. ಮತ್ತು ಲೆಗೆಂಡ್ ಸ್ಟುಡಿಯೋ ಪ್ರೊಡಕ್ಷನ್ ‘ಮೆ ಅಟಲ್ ಹೂ’ ಚಿತ್ರವನ್ನು ನಿರ್ಮಾಣ ಮಾಡಿದೆ. ಈ ಚಿತ್ರ ಮುಂದಿನ ಕ್ಯಾಲೆಂಡರ್ ವರ್ಷದ ಜನವರಿ 19 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

Tags

Related Articles

Close