ಅಂಕಣಪ್ರಚಲಿತರಾಜ್ಯ

‘Mop-up’ ರೌಂಡ್ ಹೆಸರಿನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ಕರ್ನಾಟಕ ಸರಕಾರ!!!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examinations Authority) ದ ಹೆಸರು ನಾವೆಲ್ಲರೂ ಕೇಳಿದ್ದೇವೆ! ಕರ್ನಾಟಕ ಸರಕಾರ ಇಂಜಿನಿಯರಿಂಗ್ ಸೇರಿದಂತೆ ಅನೇಕ ಪದವಿಗಳಿಗೆ ಪ್ರವೇಶಾತಿ, ಅಷ್ಟೇ ಅಲ್ಲದೇ, ಅನೇಕ ಸರಕಾರಿ ಹುದ್ದೆಗಳಿಗೆ ಪ್ರವೇಶ ಪರೀಕ್ಷೆ ನಡೆಸಿ ಅವುಗಳನ್ನು ಭರ್ತಿ ಮಾಡುವುದು ಇದೇ KEA ಮುಖಾಂತರವೇ! ಪ್ರಸ್ತುತ ಸರಕಾರ ಹಾಗೂ ಪ್ರಾಧಿಕಾರ ಎರಡೂ ಕೂಡ ಹೊಸದೊಂದು ವಿವಾದಕ್ಕೆ ಗುರಿಯಾಗಿದೆ.

ವಾಸ್ತವವಾಗಿ ಇದೇನೂ ಹೊಸ ಸಮಸ್ಯೆಯೇನಲ್ಲ! ಹೊಸ ಶೀಸೆಯಲ್ಲಿ ಹಳೇ ಭಟ್ಟಿ ಎನ್ನುವಂತೆ ಹಳೇ ಭೂತವೇ ಹೊಸ ರೂಪ ಪಡೆದು ಪೆಡಂಭೂತವಾಗಿ ಮೈದಳೆದಂತಿದೆ! CET CELL ಎಂಬ ಹೆಸರು ಕೇಳಿದರೆ ನಮಗೆಲ್ಲ ಮೊದಲು ನೆನಪಾಗುವುದು ‘ಗೊಂದಲದ ಗೂಡು’ ಎಂಬುದೇ! ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ, ವೈದ್ಯಕೀಯ ಸೀಟುಗಳ ಹಂಚಿಕೆಗೆ, ದೇಶಾದ್ಯಂತ ಏಕರೂಪ ವ್ಯವಸ್ಥೆಯಾದ neet ಪರೀಕ್ಷೆ ಜಾರಿಯಾಗಿದೆಯಾದರೂ, ಪರೀಕ್ಷಾನಂತರದ ಪ್ರಕ್ರಿಯೆಗಳು ರಾಜ್ಯದಲ್ಲಿ ನಡೆಯುವುದು ಇದೇ keaದ ಛಾವಣಿಯ ಅಡಿಯಲ್ಲಿ. ವೈದ್ಯಕೀಯ ಸೀಟುಗಳ ಹಂಚಿಕೆ ಎಂದರೆ ಗೊಂದಲದ ವಿಷಯಗಳನ್ನು ಬದಿಗೊತ್ತಲಾದೀತೇ?

ಅಸಲಿಗೆ ಪ್ರಸ್ತುತ ಸಾಲಿನ (2017) ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸೀಟುಗಳ ಹಂಚಿಕೆಯಲ್ಲಿ ಎರಡು ಸುತ್ತಿನ ಕೌನ್ಸಲಿಂಗ್ ಆಗಲೇ ಮುಗಿದು ಹೋಗಿದೆ! ಉಳಿವ ಸೀಟುಗಳಿಗಾಗಿ ಪ್ರಾಧಿಕಾರವು ದಿಢೀರನೇ “Mop-up’ ಸುತ್ತು ಎಂಬ ವಿಶೇಷ ಸುತ್ತೊಂದನ್ನು ಹಮ್ಮಿಕೊಂಡಿದೆ! ‘Mop-up round’ ಎಂದರೆ ಎರಡು ಸುತ್ತುಗಳ ನಂತರ ಉಳಿದ ಸೀಟುಗಳು, NEET ನ ಆಲ್ ಇಂಡಿಯಾ ಕೋಟಾ (15%) ದಲ್ಲಿ ಉಳಿದ ಸೀಟುಗಳು, ಖಾಸಗಿ ಕಾಲೇಜುಗಳ ಪ್ರಾಧಿಕಾರಕ್ಕೆ ಒಪ್ಪಿಸಿದ ಸೀಟುಗಳಿಗಾಗಿ ನಡೆಸುವ ಸುತ್ತು ಎಂದರ್ಥ! ಇದರಲ್ಲಿ, ಗೊಂದಲ ಹಾಗೂ ವಿವಾದ ಏನಿದೆ?! ಸ್ಪಷ್ಟವಾಗಿರಲಾರದು! ಆದರೆ, ವಿಷಯ ಇರುವುದೇ ಅಲ್ಲಿ!

ಸರಕಾರದ ಆದೇಶದ ಮೇರೆಗೆ ಪ್ರಾಧಿಕಾರ Mop-up ರೌಂಡ್ ಬಗ್ಗೆ ಅಧಿಸೂಚನೆ ನೀಡಿದ್ದು 22/08/17ರಂದು! ಅದರ ಪ್ರಕಾರ, ಪ್ರಕ್ರಿಯೆ ನಡೆಯಬೇಕಿದ್ದ ಅವಧಿ ನೀಡಿದ್ದು ಆಗಸ್ಟ್ 26 ರಿಂದ ಆಗಸ್ಟ್ 28 ರ ತನಕ! ಇದನ್ನು ಹೊರಡಿಸಿದ ಪ್ರಾಧಿಕಾರ ಅದೇ ವಾರದಲ್ಲಿ ನಾಲ್ಕು ರಜಾದಿನಗಳಿವೆ ಎಂಬುದನ್ನು ಮರೆತುಬಿಟ್ಟಿತ್ತೋ ಏನೋ! ಅಭ್ಯರ್ಥಿಗಳು ‘ಡಿಡಿ’ ಗಳನ್ನು ತೆಗೆದುಕೊಂಡೇ ಕೌನ್ಸೆಲಿಂಗ್ ಗೆ ಹಾಜರಾಗಬೇಕು ಎಂದೂ ಸ್ಲಷ್ಟವಾಗಿ ಆದೇಶಿಸಿಬಿಟ್ಟಿತ್ತು!

ಬ್ಯಾಂಕ್ ರಜಾದಿನಗಳಂದು ‘ಡಿಡಿ’ ಪಡೆಯುವುದೇ ಪಾಲಕರ ಪಾಲಿಗೆ ಕಗ್ಗಂಟಾಗಿದೆ. ಅಭ್ಯರ್ಥಿಗಳ ಪ್ರಕಾರ, ಪ್ರಾಧಿಕಾರವು ಅಧಿಸೂಚನೆಯನ್ನೇನೋ ಆಗಸ್ಟ್ 22 ರಂದೇ ನೀಡಿತ್ತಾದರೂ, ಅಭ್ಯರ್ಥಿಗಳಿಗೆ ಸ್ಪಷ್ಟ ಸೂಚನೆಗಳನ್ನೊಳಗೊಂಡ ಪ್ರಕಟಣೆ ಜಾಲತಾಣದಲ್ಲಿ ಪ್ರತ್ಯಕ್ಷವಾಗಿದ್ದು ಆಗಸ್ಟ್ 26 ರಂದು!ಅಂದರೆ.. ಗಣೇಶ ಚತುರ್ಥಿಯ ದಿನ! ಇದು ತಂತ್ರಜ್ಞಾನ ಪ್ರಮಾದವೇ ಅಥವಾ ತಂತ್ರಗಾರಿಕೆಯೋ ಒಂದೂ ತಿಳಿಯದು!

ಸಮಸ್ಯೆ ಇಷ್ಟಕ್ಕೇ ಮುಗಿಯಲಿಲ್ಲ!
ಆಗಸ್ಟ್ 27 ಹಾಗೂ 28 ರಂದು ನಡೆಯಬೇಕಿದ್ದ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಸೀಟುಗಳಿದ್ದರೂ ಖಾಲಿಯಾಗಿದೆ ಎಂದು ಘೋಷಿಸಿ, ನಂತರ ಉಳಿದ ಸೀಟುಗಳನ್ನು NRI ಕೋಟಾಗೆ ಪರಿವರ್ತಿಸಿದ್ದೇವೆ ಎಂಬ ಉತ್ತರವನ್ನು ಪ್ರಾಧಿಕಾರದವರು ಕೊಡುತ್ತಿದ್ದಾರೆ ಎಂದು ಅಭ್ಯರ್ಥಿಗಳು ಹಾಗೂ ಪೋಷಕರು ಆರೋಪಿಸುತ್ತಿದ್ದಾರಲ್ಲದೇ, ತಮ್ಮ ಮಾನಸಿಕ ಖೇದವನ್ನು ಪ್ರತಿಭಟನೆಯ ಮೂಲಕ ವ್ಯಕ್ತಪಡಿಸುತ್ತಿದ್ದಾರೆ!

ಒಟ್ಟಾರೆ ಪ್ರಕರಣವನ್ನು ಪರಿಶೀಲಿಸಿದಾಗ ಮೂಡುವ ಸಂಶಯಾಸ್ಪದ ಪ್ರಶ್ನೆಗಳೇನೆಂದರೆ ‘Mop-up’ ಸುತ್ತುಗಳನ್ನು ಏಕಾಏಕಿ ಆಯೋಜಿಸಿದ್ದು ಯಾಕೆ? ವಾರದ ನಾಲ್ಕು ದಿನ ಬ್ಯಾಂಕ್ ರಜೆ ಇದ್ದಾಗ ‘ಡಿಡಿ’ ವ್ಯವಸ್ಥೆಯ ಅನಾನುಕೂಲಗಳನ್ನು ಯೋಚಿಸಲಿಲ್ಲವೇಕೆ? ‘ಡಿಡಿ’ ಬದಲು ಪರ್ಯಾಯ ವ್ಯವಸ್ಥೆಯೂ ಇಲ್ಲವೇಕೆ? ವಿಸ್ತೃತ ಅಧಿಸೂಚನೆಗಳನ್ನು ಜಾಲತಾಣದಲ್ಲಿ ಮೊದಲೇ ಏಕೆ ಪ್ರಕಟಿಸಲಿಲ್ಲ? ಸೀಟುಗಳು ಇದ್ದಾಗಲೂ NRI ಕೋಟಾಗೆ ಪರಿವರ್ತನೆಯಾಗಿದ್ದು ಯಾಕೆ?! ಅಭ್ಯರ್ಥಿಗಳು ಹಾಗು ಪಾಲಕರ ಪ್ರತಿಭಟನೆಯ ಮಧ್ಯೆಯೂ ಸರಕಾರ ಮೌನವಾಗಿರುವುದೇಕೆ?
ಅಭ್ಯರ್ಥಿಗಳಿಗೆ ನ್ಯಾಯ ಸಿಗುವುದು ಯಾವಾಗ?!

– ವೆಂಕಟೇಶ್ ಕುಲಕರ್ಣಿ

Tags

Related Articles

Close