ಪ್ರಚಲಿತ

ಲೋಕಸಭಾ ಚುನಾವಣಾ ಹಬ್ಬಕ್ಕೆ ಮುಹೂರ್ತ ಫಿಕ್ಸ್

ಚುನಾವಣಾ ಆಯೋಗವು ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದೆ.

ಈ ಸಂಬಂಧ ಚುನಾವಣಾ ಆಯೋಗವು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, 2024 ರ ಲೋಕಸಭಾ ಚುನಾವಣೆಯ ಕುರಿತಾದ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದೆ.

ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಆಯೋಗ ತೆಗೆದುಕೊಂಡ ನಿರ್ಣಯಗಳ ಕುರಿತಾಗಿ ಸಮಗ್ರ ಮಾಹಿತಿಗಳನ್ನು ಮಾಧ್ಯಮಗಳ ಮುಂದೆ ಇಟ್ಟಿರುವುದಾಗಿದೆ. ದೇಶದಲ್ಲಿ 97 ಕೋಟಿ ಮತದಾರರು ನೋಂದಣಿ ಮಾಡಿಕೊಂಡಿದ್ದು, ಮಹಿಳಾ ಮತದಾರರ ಸಂಖ್ಯೆ ಗಣನೀಯವಾದ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಭಾರತದಲ್ಲಿ ಪ್ರತಿ 1000 ಪುರುಷ ಮತದಾರರಿಗೆ 948 ಮಹಿಳಾ ಮತದಾರರು ಇರುವುದಾಗಿ ಅವರು ತಿಳಿಸಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಗೆ 55 ಲಕ್ಷ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಬಳಕೆ ಮಾಡಲಾಗುವುದು. ಎಂಬತೈದು ವರ್ಷಕ್ಕಿಂತ ಹೆಚ್ಚು ಪ್ರಾಯದ ಎಂಬತ್ತೆರಡು ಲಕ್ಷ ಮತದಾರರು ಈ ಚುನಾವಣಾ ಹಬ್ಬದಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ. ದೇಶದ 12 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ನಲವತ್ತೆಂಟು ಸಾವಿರ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಈ‌ ಮಾಧ್ಯಮ ಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.

ವೃದ್ಧ ಮತದಾರರನ್ನು ಮತಗಟ್ಟೆಗೆ ಮತದಾನಕ್ಕೆ ಕರೆ ತರಲು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮತದಾನ ನಡೆಯುವ ಕೇಂದ್ರದಲ್ಲಿ ಮಾಹಿತಿ ಕೇಂದ್ರ, ಕುಡಿಯುವ ನೀರು, ಭದ್ರತೆ, ಹಾಲಿ ಕುರ್ಚಿ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಎಂಬತ್ತು ವರ್ಷಕ್ಕಿಂತ ಅಧಿಕ ಪ್ರಾಯದ ವೃದ್ಧರಿಗೆ ಮತಗಟ್ಟೆಗೆ ಬರಲು ವಾಹನ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದ್ದಾರೆ. ದೇಶದಲ್ಲಿ 2.18 ಲಕ್ಷ ಶತಾಯುಷಿಗಳು ಮತ ಚಲಾಯಿಸಲಿದ್ದಾರೆ. ಹಾಗೆಯೇ 1.8 ಕೋಟಿ ಜನರು ಮೊದಲ ಬಾರಿಗೆ ಮತದಾನ ಹಬ್ಬದಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಹಾಗೆಯೇ ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳು ತಮ್ಮ ಮೇಲೆ ಕ್ರಿಮಿನಲ್ ಕೇಸು ಇದ್ದಲ್ಲಿ, ಅದರ ಸಂಪೂರ್ಣ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡತಕ್ಕದ್ದು ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಏಳು ಹಂತಗಳಲ್ಲಿ ಈ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ಎಪ್ರಿಲ್ 26 ಕ್ಕೆ ಮೊದಲ ಹಂತದಲ್ಲಿ ಮತ್ತು ಮೇ 7 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಜೂನ್ 4 ರಂದು ಅಭ್ಯರ್ಥಿಗಳ ಭವಿಷ್ಯ ಫಲಿತಾಂಶ ರೂಪದಲ್ಲಿ ಪ್ರಕಟವಾಗಲಿದೆ.

ಈ ಸಂಬಂಧ ದೇಶದಲ್ಲಿ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರಲಿದೆ. ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಹಾಗೆ ಈ ಚುನಾವಣೆ ನಡೆಯಲಿದೆ. ಜೂನ್ 16 ಕ್ಕೆ ಲೋಕಸಭಾ ಚುನಾವಣೆಯ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡು, ಹೊಸ ಸರ್ಕಾರವನ್ನು ರಚನೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಆಯುಕ್ತರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Tags

Related Articles

Close