ಪ್ರಚಲಿತ

ಸಿಎಎ ಹಿಂದೆಗೆದುಕೊಳ್ಳುವ ಮಾತೇ ಇಲ್ಲ: ಅಮಿತ್ ಶಾ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದ ಬಳಿಕ ವಿರೋಧ ಪಕ್ಷಗಳು ಮತ್ತು ಇತರ ವಿರೋಧಿಗಳಿಗೆ ಉರಿವಲ್ಲಿಗೆ ಉಪ್ಪಿಟ್ಟ ಹಾಗಾಗಿದೆ.

ಏನಾದರೂ ಮಾಡಿ ಪ್ರಧಾನಿ ಮೋದಿ ಅವರ ನೇಮ್ ಆ್ಯಂಡ್ ಫೇಮ್ ಎರಡನ್ನೂ ಹಾಳು ಮಾಡಬೇಕು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಿಎಎಯನ್ನೇ ಅಸ್ತ್ರವಾಗಿ ‌ಬಳಸಿ, ಹೇಗಾದರೂ ಕೇಂದ್ರದಲ್ಲಿ ಅಧಿಕಾರ ಹಿಡಿಯಬೇಕು ಎಂದು ವಿರೋಧಿಗಳು ಯೋಜನೆ ರೂಪಿಸುತ್ತಿದ್ದಾರೆ. ಅದರಂತೆ ಈ ಕಾಯ್ದೆ ದೇಶದ ಮುಸಲ್ಮಾನರಿಗೆ ಅಪಾಯಕಾರಿ ಎನ್ನುವ ಸುಳ್ಳು ಬಿತ್ತುವ ಕಾಯಕವನ್ನು ಮಾಡುತ್ತಿದ್ದಾರೆ.

ವಿಪಕ್ಷಗಳ ಇಂತಹ ಆರೋಪಗಳಿಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ನೀಡಿದ್ದಾರೆ. ಸಿಎಎ ಜಾರಿಯಿಂದ ಭಾರತೀಯ ಮುಸಲ್ಮಾನರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಈ ಕಾಯ್ದೆ ಮುಸಲ್ಮಾನರ ವಿರುದ್ಧ ಇರುವುದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಮುಸಲ್ಮಾನರ ಪೌರತ್ವ ಕಿತ್ತುಕೊಳ್ಳಲಾಗುತ್ತದೆ ಎಂದು ಪ್ರತಿಪಕ್ಷಗಳು ಸುಳ್ಳು ಬಿತ್ತುವ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಎ ಗೆ ಸಂಬಂಧಿಸಿದ ಹಾಗೆ ನಾನು ಈಗಾಗಲೇ ಕನಿಷ್ಟ 41 ವೇದಿಕೆಗಳಲ್ಲಿ ಮಾಹಿತಿ ಹಂಚಿಕೊಂಡಿದ್ದೇನೆ. ಈ ಬಗ್ಗೆ ವಿವರವಾಗಿ ತಿಳಿಸಿ, ಇದರಿಂದ ದೇಶದ ಮುಸಲ್ಮಾನರು ಭಯಪಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದೇನೆ. ಈ ಕಾಯ್ದೆ ಭಾರತದ ಯಾವುದೇ ನಾಗರಿಕ ಹಕ್ಕನ್ನು ಕಿತ್ತುಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. 2014 ರ ಡಿಸೆಂಬರ್ 14 ಕ್ಕಿಂತ ಮೊದಲೇ ಭಾರತಕ್ಕೆ ಆಗಮಿಸಿದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ನಿರಾಶ್ರಿತ ಹಿಂದೂ, ಪಾರ್ಸಿ, ಜೈನ, ಸಿಖ್, ಕ್ರೈಸ್ತ, ಬೌದ್ಧರಿಗೆ, ಮುಸ್ಲಿಮೇತರ ‌ವಲಸಿಗರಿಗೆ ಈ ದೇಶದ ಪೌರತ್ವ ನೀಡುವುದನ್ನು ಈ ಕಾಯ್ದೆ ಹೇಳುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಂವಿಧಾನದ ನಿಯಮಕ್ಕೆ ಅನುಗುಣವಾಗಿ ಮುಸಲ್ಮಾನರು ಈ ದೇಶದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ಆದರೆ ಸಿಎಎ ಕಾನೂನು ಪಾಕ್, ಬಾಂಗ್ಲಾ, ಅಫ್ಘಾನಿಸ್ತಾನ ‌ಗಳಿಂದ ಕಿರುಕುಳಕ್ಕೆ ಒಳಪಟ್ಟು ಭಾರತಕ್ಕೆ ಆಗಮಿಸಿ, ಇಲ್ಲಿ ನೆಲೆಸಿದವರಿಗೆ ‌ಪೌರತ್ವ ನೀಡುವುದರ ಬಗ್ಗೆ ಇರುವುದಾಗಿದೆ ಎಂದು ಅವರು ಹೇಳಿದ್ದಾರೆ.

ಈ ಕಾಯ್ದೆ ಜಾರಿಯಾದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳು ಆರಂಭವಾದರೂ ಇದನ್ನು ಹಿಂದೆಗೆದುಕೊಳ್ಳುವ ಮಾತೇ ಇಲ್ಲ. ಈ ಕಾನೂನನ್ನು ಜಾರಿಗೆ ತಂದಿರುವುದರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಮತ್ತು ತಾವು ಅಧಿಕಾರಕ್ಕೆ ಬಂದರೆ ಈ ಕಾನೂನನ್ನು ರದ್ದು ಮಾಡುವ ಹೇಳಿಕೆ ನೀಡುತ್ತಿರುವ ಇಂಡಿ ಒಕ್ಕೂಟಕ್ಕೆ, ತಾವು ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಸತ್ಯ ತಿಳಿದಿದೆ ಎಂದು ವ್ಯಂಗ್ಯವಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎ ಜಾರಿಗೆ ತಂದಿದೆ. ಇದನ್ನು ಯಾರೂ ರದ್ದು ಮಾಡುವುದು ಸಾಧ್ಯವಿಲ್ಲ. ರದ್ದು ಮಾಡುವ ಆಸೆ ಹೊತ್ತವರಿಗೆ ‌ಸ್ಥಾನ ಸಿಗದಂತೆ ಮಾಡಲು ನಾವು ರಾಷ್ಟ್ರಾದ್ಯಂತ ಜಾಗೃತಿ ಮೂಡಿಸುತ್ತೇವೆ ಎಂದು ಶಾ ತಿಳಿಸಿದ್ದಾರೆ.

Tags

Related Articles

Close