ಪ್ರಚಲಿತ

ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಮೋದಿ ಎಸೆದ ಸವಾಲೇನು ಗೊತ್ತಾ?

ದೇಶದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದ್ದಾರೆ. ದೇಶ ಅಭಿವೃದ್ಧಿಯ ಪಥದಲ್ಲಿ ಮುಂದೆ ಸಾಗುತ್ತಿದೆ. ಇಡೀ ವಿಶ್ವಕ್ಕೆಯೇ ಭಾರತದ ಅತ್ಯಂತ ಪ್ರಿಯವಾದ ರಾಷ್ಟ್ರವಾಗಿ ಮಾರ್ಪಟ್ಟಿದೆ. ಇವೆಲ್ಲವೂ ಪ್ರಧಾನಿ ಮೋದಿ ಅವರ ಅತ್ಯಂತ ಸಮರ್ಥ ನಾಯಕತ್ವದ ಫಲ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇನ್ನೇನು ಕೆಲವೇ ದಿನಗಳಲ್ಲಿ ದೇಶದಲ್ಲಿ ಲೋಕಸಭಾ ಚುನಾವಣೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತೊಮ್ಮೆ ದೇಶದಲ್ಲಿ ಅಧಿಕಾರ ಹಿಡಿಯುತ್ತದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಲೋಕಸಭಾ ಚುನಾವಣಾ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಭ್ರಷ್ಟ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ದೇಶದಲ್ಲಿ ಚುನಾವಣಾ ಸಮಯದಲ್ಲಿ ಪ್ರತ್ಯೇಕವಾದಿಗಳು ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡುತ್ತಿದ್ದು, ಇಂತಹ ಘಟನೆಗಳು ಪ್ರಸ್ತುತ ಇತಿಹಾಸದ ಪುಟ ಸೇರಿದೆ ಎಂದು ಅವರು ಹರ್ಷಿಸಿದ್ದಾರೆ‌.

ಸದ್ಯ ದೇಶದಲ್ಲಿ ಶಾಂತಿಯುತವಾದ ಮತದಾನ ನಡೆಯುವಂತಾಗಿದೆ. ಗಡಿಯಾಚೆಯಿಂದ ಗುಂಡಿನ ದಾಳಿ, ಕಲ್ಲು ತೂರಾಟ, ಭಯೋತ್ಪಾದನೆ ಮೊದಲಾದ ಯಾವುದೇ ರೀತಿಯ ಹಿಂಸಾತ್ಮಕ ಪ್ರಕ್ರಿಯೆಗಳ ಭಯ ಇಲ್ಲದೆಯೇ, ಶಾಂತಿಯುತವಾಗಿ ಮತದಾನ ಕಾರ್ಯಗಳು ನಡೆಯುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಸಹ ವಾಗ್ದಾಳಿ ನಡೆಸಿರುವ ಅವರು, ದೇಶದ ಜನತೆ ಅನುಭವಿಸುತ್ತಿರುವ ‌ಸಂಕಷ್ಟಗಳನ್ನು ಪರಿಹರಿಸುವ ಕೆಲಸವನ್ನು ನಾನು ಮಾಡಿದ್ದೇನೆ. ಕಾಶ್ಮೀರದ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗಿದೆ. ಸಾಧ್ಯವಿದ್ದರೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಆರ್ಟಿಕಲ್ 370ಯನ್ನು ಮರು ಜಾರಿ ಮಾಡಲಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ಕಳೆದ ಐದು ದಶಕಳಿಂದಲೂ ನಾನು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದೇನೆ. 1992 ರಲ್ಲಿ ಇಲ್ಲಿನ ಲಾಲ್ ಚೌಕ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದು ನನಗೆ ಈಗಲೂ ನೆನಪಿದೆ. 2014 ರಲ್ಲಿ ವೈಷ್ಣೋದೇವಿಯಲ್ಲಿ ಪೂಜೆ ಸಲ್ಲಿಸಿ ಬಂದು ನಾನು ನಿಮ್ಮ ಜೊತೆಗೆ ಮಾತನಾಡಿದ್ದೆ. ಈ ಸಂದರ್ಭದಲ್ಲಿ ಉಗ್ರವಾದದಿಂದ ಕಾಶ್ಮೀರದ ಜನರನ್ನು ಪಾರು ಮಾಡುವ ಭರವಸೆಯನ್ನು ಸಹ ನೀಡಿದ್ದೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಆ ಭರವಸೆಯನ್ನು ಈಡೇರಿಸಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.

ಹಿಂದೆಲ್ಲಾ ಅಮರನಾಥ, ವೈಷ್ಣೋದೇವಿ ಯಾತ್ರಿಗಳಿಗೆ ಭದ್ರತೆಯೇ ದೊಡ್ಡ ಸವಾಲಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಕಣಿವೆ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದ್ದು, ಕೇಂದ್ರ ಸರ್ಕಾರದ ಮೇಲೆ ಇಲ್ಲಿನ ಜನರ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ನಾನು ಕಾಂಗ್ರೆಸ್ ಪಕ್ಷಕ್ಕೆ ನೇರ ಸವಾಲು ಹಾಕುತ್ತೇನೆ. ಕಾಂಗ್ರೆಸ್ ಪಕ್ಷ ಸಂವಿಧಾನದ 370 ನೇ ವಿಧಿಯನ್ನು ಮರು ಸ್ಥಾಪನೆ ಮಾಡುತ್ತೇವೆ ಎಂದು ಘೋಷಿಸಿ. ಆಗ ದೇಶ ನಿಮ್ಮ ಮುಖವನ್ನು ಸಹ ನೋಡದು ಎಂದು ವ್ಯಂಗ್ಯವಾಡಿದ್ದಾರೆ. ಈಗ ಕಣಿವೆ ರಾಜ್ಯದ ತಾಯಂದಿರಿಗೆ ತಮ್ಮ ಮಕ್ಕಳು ಹಾದಿ ತಪ್ಪುತ್ತಾರೆ ಎನ್ನುವ ಭಯ ಇಲ್ಲ. ಕಲ್ಲು ತೂರಾಟದ ಭಯ ಇಲ್ಲ. ಇದಕ್ಕಾಗಿ ಅವರು ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

Tags

Related Articles

Close