ಪ್ರಚಲಿತ

ಭಯೋತ್ಪಾದನೆಗೆ ಸಂಬಂಧಿಸಿದ ಹಾಗೆ ಪ್ರಧಾನಿ ಮೋದಿ ಸರ್ಕಾರದ ನಿಲುವು ಸ್ಪಷ್ಟ: ಅಮಿತ್ ಶಾ

ಭಾರತದ ಆಡಳಿತ ಚುಕ್ಕಾಣಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡದ ಕೈ ಸೇರಿದ ಮೇಲೆ ದೇಶ ಧನಾತ್ಮಕವಾಗಿ ಹಲವಾರು ಬದಲಾವಣೆಗಳಿಗೆ ತೆರೆದುಕೊಂಡಿದೆ. ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದ ಹಲವಾರು ವಿಷಯಗಳಿಗೆ ಕೊಕ್ ಸಿಕ್ಕಿದೆ. ಸಮಾಜ ಅಭಿವೃದ್ಧಿಯ ಆಶಯದ ಜೊತೆಗೆ ವೇಗವಾಗಿ ಮುನ್ನುಗ್ಗುತ್ತಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರ ಎಂದು ಎದೆ ತಟ್ಟಿ ಹೇಳಬಹುದಾಗಿದೆ.

ಅಮಿತ್ ಶಾ ಅವರು ಪ್ರಧಾನಿ ಮೋದಿ ಅವರ ಸರ್ಕಾರದ ಗೃಹ ಸಚಿವರಾಗಿದ್ದು, ಸಮಾಜಘಾತುಕ ವಿಚಾರಗಳಿಗೆ ಸಂಬಂಧಿಸಿದ ಹಾಗೆ ಅವುಗಳ ವಿರುದ್ಧ ಮಹತ್ವದ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಗೊತ್ತಿರುವ ಸಂಗತಿ. ದೇಶಕ್ಕೆ ಕಂಟಕಪ್ರಾಯವಾದ ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ಹಲವಾರು ದಿಟ್ಟ ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಭಯೋತ್ಪಾದನ ಕೃತ್ಯಗಳು, ಭಯೋತ್ಪಾದಕರ ವಿರುದ್ಧ ತೊಡೆ ತಟ್ಟಿ ನಿಂತಿರುವುದು ಸತ್ಯ ಸಂಗತಿ.

ಈಗಾಗಲೇ ದೇಶಕ್ಕೆ ಮಾರಕ ಎನಿಸಿರುವ ಹಲವಾರು ಉಗ್ರ ಸಂಘಟನೆಗಳು, ಉಗ್ರರಿಗೆ ಬೆಂಬಲ ನೀಡುವ ಸಂಘಟನೆಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ನಿಷೇಧಿತ ಸಂಘಟನೆಗಳ ಪಟ್ಟಿಗೆ ಈಗ ಮತ್ತೊಂದು ಭಯೋತ್ಪಾದಕ ಸಂಘಟನೆ ಸೇರಿಕೊಂಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ’ ಎನ್ನುವ ಸಂಘಟನೆಯನ್ನು ಭಯೋತ್ಪಾದನಾ ವಿರೋಧಿ ಕಾನೂನು ಮತ್ತು ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ‘ಕಾನೂನು ಬಾಹಿರ ಸಂಘಟನೆ’ ಎಂದು ಘೋಷಿಸಿದ್ದಾರೆ. ಈ ಸಂಘಟನೆಯು ಪ್ರತ್ಯೇಕವಾದಿ ನಾಯಕ ಸೈಯದ್ ಆಲಿ ಶಾ ಗಿಲಾನಿ ನೇತೃತ್ವದ ಆಲ್ ಇಂಡಿಯಾ ಹುರಿಯತ್ ಕಾನ್ಫರೆನ್ಸ್‌ನ ಹಂಗಾಮಿ ಬಣದ ಹಂಗಾಮಿ ಅಧ್ಯಕ್ಷ ಮಸರತ್ ಆಲಂ ಎಂಬಾತನಿಂದ ಮುನ್ನಡೆಸಲ್ಪಡುತ್ತಿದೆ.

ಈ ಸಂಘಟನೆಯ ಸದಸ್ಯರು ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸಲು ಕುಮ್ಮಕ್ಕು, ಬೆಂಬಲ ನೀಡುತ್ತಿದ್ದಾರೆ. ರಾಜ್ಯದಲ್ಲಿ ಮುಸ್ಲಿಂ ಆಡಳಿತವಾಗಿ ಇಸ್ಲಾಂ ಆಳ್ವಿಕೆ ಸ್ಥಾಪಿಸಲು ಜನರನ್ನು ಪ್ರಚೋದನೆ ಮಾಡುವ ಮೂಲಕ ದೇಶ ವಿರೋಧಿ ಕೃತ್ಯಗಳಲ್ಲಿ, ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶಾ ಹೇಳಿದ್ದಾರೆ.

ಹಾಗೆಯೇ ಭಾರತ ದೇಶದ ಏಕತೆ, ಸಮಗ್ರತೆಗೆ ಚ್ಯುತಿ ತರುವ, ವಿರುದ್ಧವಾಗಿ ಕಾರ್ಯ ನಿರ್ವಹಿಸುವ ಯಾರನ್ನೂ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದ್ದಾರೆ. ಅಂತಹವರಿಗೆ ಕಾನೂನಾತ್ಮಕ ಪಾಠವನ್ನು ಹೇಳಿಕೊಡಲಾಗುವುದು ಎಂದೂ ಶಾ ಗುಡುಗಿದ್ದಾರೆ. ಭಯೋತ್ಪಾದನೆಗೆ ಸಂಬಂಧಿಸಿದ ಹಾಗೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ನಿಲುವು ಸ್ಪಷ್ಟವಾಗಿದೆ ಎಂದೂ ಶಾ ತಿಳಿಸಿದ್ದಾರೆ.

Tags

Related Articles

Close