ಪ್ರಚಲಿತ

ಸ್ಥಳೀಯ ಉತ್ಪನ್ನಗಳ ಖರೀದಿಗೆ ಒತ್ತು ನೀಡಲು ಪ್ರಧಾನಿ ಮೋದಿ ಕರೆ

ಪ್ರಧಾನಿ ಮೋದಿ ಅವರು ದೇಶದ ಆಡಳಿತ ವಹಿಸಿಕೊಂಡ ಮೇಲೆ ಭಾರತದಲ್ಲಿ ಹಲವಾರು ಸಕಾರಾತ್ಮಕ ಬದಲಾವಣೆಗಳಾಗಿವೆ.‌ ಪ್ರಧಾನಿ ಮೋದಿ ಅವರು ಜನಸಾಮಾನ್ಯರನ್ನು ಸುಲಭವಾಗಿ ತಲುಪುವ ನಿಟ್ಟಿನಲ್ಲಿ, ಅವರ ಸಮಸ್ಯೆಗಳಿಗೆ ನೇರವಾಗಿ ಕಿವಿಯಾಗುವ, ಅದನ್ನು ಪರಿಹರಿಸುವ ನಿಟ್ಟಿನಲ್ಲಿಯೂ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಭಾರತದ ಅಭಿವೃದ್ಧಿಯ ದೃಷ್ಟಿಕೋನವನ್ನು ಇರಿಸಿಕೊಂಡು ಅನೇಕ ಯೋಜನೆಗಳಿಗೆ ಮೂರ್ತ ರೂಪ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಿನ್ನೆ ನಡೆದಿದ್ದು, ಇದರಲ್ಲಿ ಅವರು ಸ್ಥಳೀಯ ಉತ್ಪಾದನೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅವುಗಳನ್ನ ಹೆಚ್ಚೆಚ್ಚು ಖರೀದಿ ಮಾಡುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪ್ರವಾಸ ಅಥವಾ ತೀರ್ಥಯಾತ್ರೆಯ ಸಂದರ್ಭದಲ್ಲಿ ವಸ್ತುಗಳನ್ನು ಖರೀದಿ ಮಾಡುವಾಗ ಸ್ಥಳೀಯ ಉತ್ಪನ್ನಗಳ ಖರೀದಿಗೆ ಹೆಚ್ಚು ಆಸಕ್ತಿ ವಹಿಸಿ ಎಂದು ಅವರು ಭಿನ್ನವಿಸಿಕೊಂಡಿದ್ದಾರೆ.

ಹಾಗೆಯೇ ಸ್ಥಳೀಯ ಉತ್ಪನ್ನಗಳ ಖರೀದಿಯ ಸಂದರ್ಭದಲ್ಲಿ ಅದರ ಮೊತ್ತ ಪಾವತಿಸುವಾಗ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಯುಪಿಐ ಅನ್ನೇ ಹೆಚ್ಚಾಗಿ ಬಳಕೆ ಮಾಡುವಂತೆಯೂ ಹೇಳಿದ್ದಾರೆ.

ಅಕ್ಟೋಬರ್ 31 ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮದಿನವಾಗಿದ್ದು, ಈ ಸಂದರ್ಭದಲ್ಲಿ ರಾಷ್ಟ್ರವ್ಯಾಪಿ ‘ಮೇರಾ ಯುವ ಭಾರತ್’ ಸಂಘಟನೆಯನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಚೀನಾದಲ್ಲಿ ಕೆಲ ದಿನಗಳ ಹಿಂದೆ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಸಾಧನೆ ಮಾಡಿದ ಭಾರತೀಯ ಕ್ರೀಡಾಪಟುಗಳ ಸಾಮರ್ಥ್ಯವನ್ನು ಅವರು ಕೊಂಡಾಡಿದ್ದಾರೆ. ಈ ಹಬ್ಬದ ಋತುವಿನಲ್ಲಿ ದೇಶದಲ್ಲಿ ಕ್ರೀಡೆಯ ಧ್ವಜಗಳು ಹಾರಾಡುತ್ತಿವೆ. ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿಯೂ ಭಾರತದ ಕ್ರೀಡಾಪಟುಗಳು ಅದ್ಭುತ ಯಶಸ್ಸು ಸಾಧಿಸಿದ್ದಾರೆ ಎನ್ನುವ ಮೂಲಕ ಭಾರತೀಯ ಕ್ರೀಡಾಪಟುಗಳನ್ನು ಶ್ಲಾಘಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹಬ್ಬ ಹರಿ ದಿನಗಳ ಆಗರವಾದ ಈ ಸಮಯದಲ್ಲಿ ಭಾರತೀಯ ನಾಗರಿಕರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಮೂವತ್ತು ನಿಮಿಷಗಳ ಈ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ದೇಶವಾಸಿಗಳನ್ನು ಕುರಿತು ಹಲವಾರು ವಿಷಯಗಳನ್ನು ಪ್ರಸ್ತಾಪ ಮಾಡಿ ಮಾತನಾಡಿದ್ದಾರೆ.

Tags

Related Articles

Close