ಪ್ರಚಲಿತ

ಕರ್ನಾಟಕ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಇಂದು ರಾಜ್ಯದಲ್ಲಿ ಹಬ್ಬದ ವಾತಾವರಣ. ಈ ವರ್ಷ ನಾವು 68 ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದೇವೆ. ರಾಜ್ಯದೆಲ್ಲೆಡೆ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ ಎಂದರೆ ತಪ್ಪಾಗಲಾರದು.

ಕರ್ನಾಟಕ ರಾಜ್ಯೋತ್ಸವ, ಕನ್ನಡಿಗರ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯಗಳನ್ನು ತಿಳಿಸಿದ್ದಾರೆ. ನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡದ ಈ ಹಬ್ಬವನ್ನು ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಕನ್ನಡಿಗರಿಗೆ ಪ್ರಧಾನಿ ಮೋದಿ ಅವರೂ ಶುಭಕಾಮನೆಗಳನ್ನು ತಿಳಿಸುವ ಮೂಲಕ ಈ ಸಂಭ್ರಮವನ್ನು ನೂರ್ಮಡಿಗೊಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಕನ್ನಡದಲ್ಲಿಯೇ ಟ್ವೀಟ್ ಮಾಡುವ ಮೂಲಕ ಕರ್ನಾಟಕ ರಾಜ್ಖೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಕರ್ನಾಟಕ ರಾಜ್ಯೋತ್ಸವ ದಿನದಂದು ಕರ್ನಾಟಕದ ಚೈತನ್ಯವನ್ನು ನಾವು ಸಂಭ್ರಮಿಸುತ್ತಿದ್ದೇವೆ. ಪ್ರಾಚೀನ ಆವಿಷ್ಕಾರ ಮತ್ತು ಆಧುನಿಕ ಉದ್ಯಮದ ತೊಟ್ಟಿಲು ಕರ್ನಾಟಕವಾಗಿದೆ. ಪ್ರೀತಿ ಮತ್ತು ಬುದ್ಧಿವಂತಿಕೆ ಈ ಎರಡನ್ನೂ ತಮ್ಮೊಳಗೆ ಮಿಳಿತವಾಗಿಸಿಕೊಂಡಿರುವವರು ಕನ್ನಡಿಗರು. ಕರ್ನಾಟಕ ರಾಜ್ಯವು ಸತತ ಶ್ರೇಷ್ಠತೆಯ ಕಡೆಗೆ ಮುನ್ನಡೆಯುವ ಹಾಗೆ ಕನ್ನಡಿಗರು ಉತ್ತೇಜನ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹಾಗೆಯೇ, ಕರ್ನಾಟಕ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿ. ಮತ್ತಷ್ಟು ನಾವೀನ್ಯತೆಯ ಜೊತೆಗೆ ಎಲ್ಲರಿಗೂ ಸ್ಫೂರ್ತಿ ತುಂಬುವಂತಾಗಲಿ ಕರ್ನಾಟಕ ಎಂದು ಅವರು ಹಾರೈಸಿದ್ದಾರೆ

ಹಾಗೆಯೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಶುಭ ಹಾರೈಸಿದ್ದು, ಇಂದು ಕನ್ನಡಿಗರ ಪಾಲಿನ ವಿಶೇಷ ದಿನ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರು ಒಂದಾದ ಪವಿತ್ರ ದಿನ. ಇಂತಹ ಕನಸೊಂದು ಸಾಕಾರಗೊಳ್ಳಲು ನಿಸ್ವಾರ್ಥದಿಂದ ಶ್ರಮಿಸಿದ ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ಬಲಿದಾನ, ತ್ಯಾಗಗಳೆಲ್ಲವನ್ನು ನಾವೆಲ್ಲರೂ ಗೌರವದಿಂದ ಸ್ಮರಿಸೋಣ. 1973 ರ ನವೆಂಬರ್ 1 ರಂದು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕಕಣವಾಗಿ ಐವತ್ತು ವರ್ಷಗಳು ಸಂದಿವೆ. ಕರ್ನಾಟಕದ ಸುವರ್ಣ ಸಂಭ್ರಮದ ಈ ಸಂದರ್ಭದಲ್ಲಿ ಕನ್ನಡ ನಾಡ ಭಾಷೆಯಷ್ಟೇ ಆಗದೆ, ನಾಡಿನ ಪ್ರತಿ ಮನೆಯ ಆಡುಭಾಷೆಯಾಗಲಿ. ಈ ದಿನ ಕನ್ನಡಿಗರಿಗೆ ನಿತ್ಯೋತ್ಸವವಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

Tags

Related Articles

Close