ಪ್ರಚಲಿತ

ಶ್ರೀರಾಮ ಮಂದಿರ ಲೋಕಾರ್ಪಣೆಗೆ ಆಹ್ವಾನ: ಅತ್ತ ದರಿ, ಇತ್ತ ಪುಲಿ ಎಂಬಂತಾಯ್ತು ಕಾಂಗ್ರೆಸ್ ಸ್ಥಿತಿ

ಪ್ರಭು ಶ್ರೀರಾಮ, ಅಯೋಧ್ಯೆ, ರಾಮ ಮಂದಿರ ಮೊದಲಾದವುಗಳ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಲೇ ಬಂದಿದೆ. ಇವುಗಳನ್ನು ರಾಜಕೀಯಕ್ಕಾಗಿ ‌ಕಾಂಗ್ರೆಸ್ ಪಕ್ಷ ಬಳಸಿಕೊಳ್ಳುತ್ತಿರುವುದು ಇಂದು ನಿನ್ನೆಯ ವಿಷಯವಲ್ಲ. ಬಹಳ ಹಿಂದಿನಿಂದಲೂ ಪ್ರಭು ಶ್ರೀರಾಮ, ಆತನ ಜನ್ಮಭೂಮಿ, ಮಂದಿರ ಸಂಬಂಧಿತ ವಿಷಯಗಳಲ್ಲಿ ಹಿಂದೂಗಳನ್ನು ಕೆಣಕುತ್ತಲೇ ಬಂದ ಪಕ್ಷ ಕಾಂಗ್ರೆಸ್‌ ಎಂದರೂ ತಪ್ಪಾಗಲಾರದೇನೋ.

ಇದೀಗ ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಯೋದ್ಯೆಯಲ್ಲಿ ಶ್ರೀರಾಮ ಮಂದಿರದ ಬಹುಕೋಟಿ ‌ಹಿಂದೂಗಳ, ಭಾರತೀಯರ ಕನಸನ್ನು ನನಸಾಗಿಸುವಲ್ಲಿ ‌ಮಹತ್ವದ ಪಾತ್ರ ವಹಿಸಿದೆ. 2014 ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೀಡಿದ ಭವ್ಯ ಶ್ರೀರಾಮ ಮಂದಿರ ನಿರ್ಮಾಣದ ಭರವಸೆಯನ್ನು ಈಡೇರಿಸುತ್ತಿದೆ. ಆ ಮೂಲಕ ನಾವು ಭರವಸೆ ನೀಡುವುದಷ್ಟೇ ಅಲ್ಲ, ಅದನ್ನು ಈಡೇರಿಸುತ್ತೇವೆ ಕೂಡಾ. ಹಾಗೆಯೇ ನಾವು ಇತರರ ಹಾಗೆ ಬಿಟ್ಟಿ ಭರವಸೆಗಳನ್ನು ನೀಡುವುದಿಲ್ಲ. ಬದಲಾಗಿ ನಾವು ನೀಡುವ‌ ಭರವಸೆ, ಅದು ಈಡೇರಿದ‌ ನಂತರ ಇತಿಹಾಸ ಬರೆಯುತ್ತದೆ ಎನ್ನುವುದನ್ನು ಸಹ ಬಿಜೆಪಿ ರಾಮ ಮಂದಿರ ನಿರ್ಮಾಣವೂ ‌ಸೇರಿದಂತೆ ಇನ್ನೂ ಅನೇಕ ವಿಚಾರಗಳಲ್ಲಿ ಸಾಬೀತು ಮಾಡಿದೆ.

ಈಗಾಗಲೇ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದ ಉದ್ಘಾಟನೆ ಮುಂದಿನ ಕ್ಯಾಲೆಂಡರ್ ವರ್ಷದ ಜನವರಿ 22 ರಂದು ಅದ್ದೂರಿಯಾಗಿ ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುಮಾರು 2000 ಜನರಿಗೆ ಆಮಂತ್ರಣ ನೀಡುತ್ತಿದೆ.

ಆಮಂತ್ರಣ ನೀಡುವುದರಲ್ಲಿ ಕೇವಲ ಬಿಜೆಪಿ ಮತ್ತು ಇತರ ದೇಶ ಭಕ್ತರು, ಗಣ್ಯರಷ್ಟೇ ಸೇರಿಲ್ಲ. ಬದಲಾಗಿ ಶ್ರೀ ರಾಮನ ಹೆಸರಿನಲ್ಲಿ ರಾಜಕೀಯ ಮಾಡಿದ, ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ರಾಜಕೀಯ ಮಾಡಿ, ಅದನ್ನು ವಿರೋಧಿಸಿದ ಕಾಂಗ್ರೆಸ್ ಪಕ್ಷದ ನಾಯಕರಿಗೂ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆಯನ್ನು ಟ್ರಸ್ಟ್ ನೀಡಿದೆ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಮೊದಲಾದವರಿಗೆ ‌ಟ್ರಸ್ಟ್ ಆಹ್ವಾನ ನೀಡಿದ್ದು, ಇವರೆಲ್ಲರೂ ಆಹ್ವಾನ ಪತ್ರಿಕೆ ಸ್ವೀಕರಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರು ಈ ಹಿಂದೆ ಪ್ರಭು ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದ್ದರು. ಇಂತಹ ರಾಮ ವಿರೋಧಿಗಳು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆಯೇ? ಎನ್ನುವ ಪ್ರಶ್ನೆ ಭಾರತದ ಬಹುಕೋಟಿ ರಾಮಭಕ್ತರದ್ದು. ಶ್ರೀರಾಮ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದವರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಅವರ ನಿಲುವುಗಳನ್ನು ಬಿಟ್ಟು ಪ್ರಭು ಶ್ರೀರಾಮಚಂದ್ರನನ್ನು ಒಪ್ಪಿಕೊಂಡ ಹಾಗಾಗದೇ? ಎನ್ನುವ ಪ್ರಶ್ನೆಯೂ ಜನರದ್ದು. ಒಂದು ವೇಳೆ ತಮ್ಮ ಸಿದ್ದಾಂತಕ್ಕೆ ಬದ್ಧರಾಗಿ ಕಾರ್ಯಕ್ರಮಕ್ಕೆ ಹೋಗದೇ ಇದ್ದಲ್ಲಿ, ಬಹುಕೋಟಿ ಹಿಂದೂಗಳ ವಿರೋಧವನ್ನೂ ಕಟ್ಟಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ.

ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಓಲೈಕೆ, ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ತಾವೇ ತೋಡಿದ ಖೆಡ್ಡಾಕ್ಕೆ ತಾವೇ ಬಿದ್ದಂತಾಗಿದೆ ಎನ್ನುವುದು ಸತ್ಯ. ಹೋದರೆ ಅಲ್ಪಸಂಖ್ಯಾತರ ಆಕ್ರೋಶ, ರೋಗ ದೇ ಇದ್ದರೆ ಕೋಟ್ಯಂಂತರ ಹಿಂದೂಗಳ ಆಕ್ರೋಶಕ್ಕೆ ಕಾಂಗ್ರೆಸ್ ತುತ್ತಾಗಬೇಕಿದೆ. ಸದ್ಯ ಕಾಂಗ್ರೆಸ್ ಪರಿಸ್ಥಿತಿ ಅತ್ತ ದರಿ, ಇತ್ತ ಪುಲಿ ಎಂಬಂತಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.

Tags

Related Articles

Close