ಅಂಕಣ

ಬಾಣ ಸ್ಥಂಭದ ಮೂಲಕ ತೋರಿಸಲಾದ ಗುಜರಾತಿನ ಸೋಮನಾಥ ಮಂದಿರದಿಂದ ಅಂಟಾರ್ಕಟಿಕಾ ಖಂಡದವರೆಗೆ ಸರಳ ರೇಖೆಯಲ್ಲಿ ಬರುವ ಜ್ಯೋತಿರ್ಮಾರ್ಗದ ಮಧ್ಯೆ ಭೂಖಂಡವೇ ಇಲ್ಲ!!

ಸನಾತನವೆಂದರೆ ನಿತ್ಯ ನೂತನ. ಸನಾತನ ನಿತ್ಯ ಕುತೂಹಲಗಳ ಕಣಜ. ಸನಾತನವೆಂದರೆ ಸಾವಿಲ್ಲದ್ದು, ವಿಜ್ಞಾನಕ್ಕೂ ನಿಲುಕದ್ದು!! ಹೌದು ನಮ್ಮ ಸನಾತನದ ಜ್ಞಾನ ಯಾವುದೇ ತರ್ಕ-ಕುತರ್ಕಗಳಿಗೆ ನಿಲುಕುವುದೇ ಇಲ್ಲ. ಸನಾತನ ಪರಂಪರೆಯ ಪ್ರತ್ಯಕ್ಷ್ಯ ಸಾಕ್ಷಿ ಭಾರತದ ಉದ್ದಗಲಕ್ಕೂ ದೊರೆಯುವ ಮಂದಿರ ಮತ್ತು ಸ್ಮಾರಕಗಳು. ಈ ಮಂದಿರ ಮತ್ತು ಸ್ಮಾರಕಗಳನ್ನು ಹೇಗೆಂದರೆ ಹಾಗೆ, ಎಲ್ಲೆಂದರಲ್ಲಿ, ತಮಗೆ ಬೇಕಾದಂತೆ ಕಟ್ಟಲಾಗಿಲ್ಲ. ವಿಜ್ಞಾನ, ವಾಸ್ತುಕಲೆ ಮತ್ತು ತಂತ್ರಜ್ಞಾನದ ಅಭೂತಪೂರ್ವ ಸಂಗಮದಿಂದ ಭಾರತದ ಮಂದಿರ-ಸ್ಮಾರಕಗಳನ್ನು ಕಟ್ಟಲಾಗಿದೆ. ಅದರಲ್ಲೇನು ವಿಶೇಷ ಎಂದಿರಾ? ವಿಶೇಷವಿದೆ. ಸಾವಿರಾರು ವರ್ಷಗಳ ಹಿಂದೆ ಭೂಮಿಯ ಕೇಂದ್ರ ಬಿಂದುಗಳನ್ನು ಗುರುತಿಸಿ ಅಲ್ಲಿ ಮಂದಿರಗಳನ್ನು ಕಟ್ಟಿರಬೇಕಾದರೆ ನಮ್ಮ ಪೂರ್ವಜರ ತಂತ್ರಜ್ಞಾನ ಮತ್ತು ತಾಂತ್ರಿಕತೆ ಯಾವ ಮಟ್ಟದ್ದಾಗಿದ್ದಿರಬಹುದು ಊಹಿಸಿ.

ಸೋಮನಾಥ ಮಂದಿರ ಭಾರತದ ಹೆಮ್ಮೆಯ, ಸಮೃದ್ದಿಯ ಮತ್ತು ಸ್ವಾಭಿಮಾನದ ಪ್ರತೀಕ. ಹತ್ತು ಹಲವು ಬಾರಿ ಮತಾಂಧರ ಕಿಚ್ಚಿನ ದಾಳಿಗೆ ಒಳಗಾಗಿ ನುಚ್ಚು ನೂರಾಗಿದ್ದರೂ ಮತ್ತೆ ಮತ್ತೆ ತಲೆಯಿತ್ತಿ ನಿಂತ ಸೋಮನಾಥ ದೇವಾಲಯ ಭಾರತದ ಗೌರವದ ಪ್ರತೀಕ. 79 ಡಿಗ್ರಿ 41 ನಿಮಿಷದ ರೇಖಾಂಶದಲ್ಲಿ ಸ್ಥಿತವಾಗಿರುವ ಈ ಮಂದಿರ ಶಿವನ ಮೊತ್ತ ಮೊದಲ ಜ್ಯೋತಿರ್ಲಿಂಗ ಕ್ಷೇತ್ರವಾಗಿದೆ. ಆಶ್ಚರ್ಯವೆಂದರೆ ಈ ಮಂದಿರದ ಪ್ರಾಂಗಣದಲ್ಲಿ ಸಮುದ್ರದ ದಂಡೆಯಲ್ಲಿ ಒಂದು ಬಾಣಸ್ಥಂಭವಿದೆ. “ಸೋಮನಾಥ ಮಂದಿರದಿಂದ ದಕ್ಷಿಣ ಧ್ರುವದವರೆಗೆ ಅಭಾದಿತ ಜ್ಯೋತಿರ್ಮಾರ್ಗ” ಎಂದು ಈ ಬಾಣ ಸ್ಥಂಭದದ ಮೇಲೆ ಸಂಸ್ಕೃತ ಶ್ಲೋಕದಲ್ಲಿ ಬರೆಯಲಾಗಿದೆ!

ಸೋಮನಾಥ ಮಂದಿರದಿಂದ ಅಂಟಾರ್ಕಟಿಕಾ ಖಂಡದವರೆಗಿನ ಭೂಪಟವನ್ನು ನೋಡಿದರೆ ನಮಗೆ ಈ ಮಾರ್ಗದಲ್ಲಿ ಒಂದೇ ಒಂದು ತುಂಡು ಭೂಮಿಯೂ ಕಾಣಲು ಸಿಗದು! ಇದು ಹೇಗೆ ಸಾಧ್ಯ? ಸಾವಿರಾರು ವರ್ಷಗಳ ಹಿಂದೆ ಈ ಸರಳ ರೇಖೆಯಲ್ಲಿ ಒಂದೇ ಒಂದು ಭೂ ಖಂಡವಿಲ್ಲವೆನ್ನವುದನ್ನು ಅನ್ವೇಷಿಸಿದ್ದಾದರೂ ಹೇಗೆ? ಜಲ ಮಾರ್ಗದ ಮೂಲಕವೇ? ಇಲ್ಲ, ಆಕಾಶದ ಮೂಲಕವೇ? ಅಥವಾ ಉಪಗ್ರಹದ ಮೂಲಕವೇ? ಉತ್ತರ: ನಿರುತ್ತರ! ಬಲ್ಲವರ ಪ್ರಕಾರ ಈ ಬಾಣ ಸ್ಥಂಭವನ್ನು ಆರನೆ-ಏಳನೇ ಶತಮಾನದಲ್ಲಿ ಸ್ಥಾಪಿಸಲಾಯಿತು. ಆದರೆ ಆರನೇ-ಏಳನೇ ಶತಮಾನದಲ್ಲಿ ಉಪಯೋಗಿಸಲಾದ ತಂತ್ರಜ್ಞಾನ ಯಾವುದು? ಯಾರಿಗೂ ಗೊತ್ತಿಲ್ಲ. ಬಾಣ ಸ್ಥಂಭವನ್ನು ಭರತ ಖಂಡದ ಉತ್ತರದಿಂದ ದಕ್ಷಿಣದವರೆಗಿನ ಮೊದಲನೆ ಬಿಂದುವಿನಲ್ಲಿ ಸ್ಥಾಪಿಸಲಾಗಿದೆ. ಆಧುನಿಕ ತಂತ್ರಜ್ಞಾನಕ್ಕೂ ವಿವರಿಸಲಾಗದ ರಹಸ್ಯವಾದ ಈ ಬಿಂದುವನ್ನು ಅನ್ವೇಷಣೆ ಮಾಡಿದ್ದು ಯಾರು?

ಬಾಣ ಸ್ಥಂಭ ಸ್ಥಾಪಿಸಬೇಕಾದರೆ ಇಲ್ಲಿ ಜ್ಯೋತಿರ್ಮಾರ್ಗ ಇರುವುದು ಮೊದಲೇ ಗೊತ್ತಿರಬೇಕು. ಹಾಗಾದರೆ ಈ ರೇಖೆಯಲ್ಲಿ ಜ್ಯೋತಿರ್ಮಾರ್ಗ ಇರುವುದನ್ನು ಕಂಡು ಹಿಡಿದ್ದದ್ದು ಯಾರು? ಹೇಗೆ? ಸನಾತನದ ರಹಸ್ಯ ಮಾನವ ಮಾತ್ರರಿಗೆ ತಿಳಿಯುವುದೆ? ವೇದ-ಉಪನಿಷತ್ತುಗಳಲ್ಲಿ ಅಡಗಿದ ಸತ್ಯ ಪ್ರಾಜ್ಞರಿಗಲ್ಲದೆ ಪಾಮರರಿಗೆ ಅರಿವಾಗುವುದೆ? ಸನಾತನ ಧರ್ಮದಲ್ಲಿ ಶಿವನನ್ನು ಮೂಲ ಪುರುಷನಾಗಿ ಉಲ್ಲೇಖಿಸಲಾಗಿದೆ. ಆತ ಸಂಸ್ಕೃತ ಮತ್ತು ತಮಿಳು ಭಾಷೆಯ ಜನಕ. ಆತ ನಾದ-ಸ್ವರ-ಲಯ-ನಾಟ್ಯದ ಪಿತಾಮಹ. ಆತನ ಮಾಯೆ ಆತನಿಗೇ ತಿಳಿಯಬೇಕು. ಸೋಮನಾಥದ ಜ್ಯೋತಿರ್ಲಿಂಗದ ಉಲ್ಲೇಖ ಸ್ಕಂದ ಪುರಾಣ, ಶಿವ ಪುರಾಣ ಮತ್ತು ಭಾಗವತ ಪುರಾಣದಲ್ಲೂ ಇದೆ.

ಭಾರತದ ಅತ್ಯಂತ ಪುರಾತನ ಜ್ಯೋತಿರ್ಲಿಂಗ ಮಂದಿರವನ್ನು ಚಂದ್ರನು ಚಿನ್ನದಿಂದ, ರಾವಣನು ಬೆಳ್ಳಿಯಿಂದ, ಶ್ರೀ ಕೃಷ್ಣನು ಮರದಿಂದ ಮತ್ತು ಅನ್ಹಿಲ್ವಾಡಾದ ರಾಜ ಭೀಮ ದೇವನು ಕಲ್ಲಿನಿಂದ ಕಟ್ಟಿಸಿದ್ದನೆನ್ನಲಾಗುತ್ತದೆ. ಇಷ್ಟು ಪುರಾತನ ಇತಿಹಾಸವಿರುವ ಮಂದಿರದ ಬಾಣ ಸ್ಥಂಭವೂ ಅಷ್ಟೇ ಪುರಾತನವಾಗಿದ್ದಿರಬೇಕು. ಈ ಬಾಣ ಸ್ಥಂಭವನ್ನು ದಿಕ್ಕನ್ನು ನಿರ್ದೇಶಿಸಲೂ ಬಳಸಲಾಗುತ್ತಿಂತೆಂದು ಹೇಳಲಾಗುತ್ತದೆ. ಅಂದರೆ ಭೂಮಿ ಗುಂಡಗಿದೆ ಮತ್ತು ಕೆಳಗೆ ದಕ್ಷಿಣ ಧ್ರುವ ಇದೆ ಎನ್ನುವುದನ್ನು ನಮ್ಮ ಪೂರ್ವಜರು ಸಾವಿರ ಸಾವಿರ ವರ್ಷಗಳ ಹಿಂದೆಯೇ ಕಂಡು ಹಿಡಿದಿದ್ದರೆಂದಾಯ್ತು. ಈಗ ಈ ಬುದ್ದಿ ಜೀವಿಗಳು ಏನು ಹೇಳುತ್ತಾರೆ? ವೇದ-ಪುರಾಣ ಕಾಗೆ-ಗೂಬೆ ಕಥೆ ಎನ್ನುತ್ತಾರೋ? ಅವರು ಏನಂದರೆ ನಮಗೇನು? ಮೂರ್ಖರ ಜೊತೆ ವಾದ ಮಾಡಿ ಪ್ರಯೋಜನವಿಲ್ಲ.

ಸನಾತನ ಆಧುನಿಕ ವಿಜ್ಞಾನದ ಯಾವುದೇ ತರ್ಕಗಳಿಗೂ ನಿಲುಕುವುದಿಲ್ಲ. ಆದ್ದರಿಂದಲೇ ಅದು ನಿತ್ಯ ನೂತನ. ವೇದ-ಉಪನಿಷತ್ತುಗಳಲ್ಲಿರುವ ಜ್ಞಾನವನ್ನು ಲೇವಡಿ ಮಾಡದೆ, ಪೂರ್ವಗ್ರಹಗಳಿಲ್ಲದೆ ಒಪ್ಪಿದರೆ ಎಲ್ಲಾ ರಹಸ್ಯಗಳಿಂದ ಪರದೆ ಹರಿಯುವುದು ಮತ್ತು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುವುದು.

-ಶಾರ್ವರಿ

Tags

Related Articles

Close