ಪ್ರಚಲಿತ

ಉಗ್ರವಾದ ಎಂಬುದು ಒಪ್ಪಕೊಳ್ಳಬಹುದಾದ ವಿಷಯವಲ್ಲ: ಎಸ್. ಜೈ ಶಂಕರ್

ಉಗ್ರವಾದ ಎಂಬುದು ಸ್ವೀಕಾರಾರ್ಹವಲ್ಲ. ಪ್ಯಾಲೆಸ್ತೇನ್ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದರ ಅಗತ್ಯವಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ಅವರು ತಿಳಿಸಿದ್ದಾರೆ.

ಪ್ರಸ್ತುತ ಇಟಲಿಗೆ ಪ್ರವಾಸ ತೆರಳಿ ಇರುವ ಅವರು, ರೋಮ್‌ನ ಸೆನೆಟ್‌ನ ವಿದೇಶಾಂಗ ವ್ಯವಹಾರಗಳು ಮತ್ತು ರಕ್ಷಣಾ ಆಯೋಗದ ಜಂಟಿ ಕಾರ್ಯದರ್ಶಿ ಅಧಿವೇಶನದಲ್ಲಿ ಈ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್ 7 ರಂದು ನಡೆದಿರುವುದು ದೊಡ್ಡ ಭಯೋತ್ಪಾದನಾ ಕೃತ್ಯ. ಆ ಬಳಿಕವೂ ಇಂತದ್ದೇ ವಿದ್ವಂಸಕ ಕೃತ್ಯಗಳು ನಡೆದಿವೆ. ಈ ಘಟನೆ ಇಡೀ ಸ್ಥಳವನ್ನು ವಿಭಿನ್ನವಾದ ಆಯಾಮಕ್ಕೆ ತೆಗೆದುಕೊಂಡು ಹೋಗಿದೆ. ಘರ್ಷಣೆ ನಡೆದ ಪ್ರದೇಶ ಸಾಮಾನ್ಯ ಸ್ಥಿತಿಯಲ್ಲಿ ಇರುವುದು ಅಸಾಧ್ಯ. ಆದರೆ ಅದು ಮತ್ತೆ ಸುಸ್ಥಿರವಾದ, ಸಾಮಾನ್ಯ ಪರಿಸ್ಥಿತಿಗೆ ಮರಳಬೇಕಿದೆ ಎಂದು ಅವರು ಇಸ್ರೇಲ್ – ಪ್ಯಾಲೆಸ್ತೇನ್‌ಗೆ ಸಂಬಂಧಿಸಿದ ಹಾಗೆ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವಿನ ಸಂಘರ್ಷದಲ್ಲಿ ‘ಎರಡು ರಾಜ್ಯ’ ಪರಿಹಾರದ ಭಾರತದ ನಿಲುವನ್ನು ಅವರು ಪುನರುಚ್ಚರಿಸಿದ್ದಾರೆ. ಈ ಎರಡೂ ರಾಜ್ಯಗಳು ವಿಭಿನ್ನ ವಿಷಯಗಳ ಮೇಲೆ ಸಮತೋಲನ ಸಾಧಿಸುವ ಅಗತ್ಯ ಇದೆ ಎಂದೂ ಅವರು ನುಡಿದಿದ್ದಾರೆ. ಮಧ್ಯ ಪ್ರಾಚ್ಯ ಬಿಕ್ಕಟ್ಟಿಗೆ ಎರಡು ರಾಜ್ಯ ಪರಿಹಾರವನ್ನು ಜೈ ಶಂಕರ್ ದೃಢವಾಗಿ ಬೆಂಬಲಿಸಿದ್ದಾರೆ. ಸಂವಾದ ಮತ್ತು ಮಾತುಕತೆಗಳ ಮೂಲಕ ಮಾತ್ರವೇ ಈ ಪರಿಸ್ಥಿತಿಯನ್ನು ನಿಭಾಯಿಸಲು, ಪರಿಹರಿಸಲು ಸಾಧ್ಯ ಎಂದೂ ಅವರು ನುಡಿದಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಹಲವು ದಿನಗಳಿಂದ ಯುದ್ಧ ನಡೆಯುತ್ತಿದೆ. ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ, ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಹಮಾಸ್ ಉಗ್ರರನ್ನು ಹುಟ್ಟಡಗಿಸುವ ಪ್ರತಿಜ್ಞೆ ಮಾಡಿತ್ತು. ಅದರಂತೆ ಗಾಜಾ ಪಟ್ಟಿಗೆ ತನ್ನ ಸೇನೆಯನ್ನು ನುಗ್ಗಿಸಿ, ಅಲ್ಲಿ ಅಡಗಿದ್ದ ಉಗ್ರರನ್ನು, ಅವರು ಅಡಗಿದ್ದ ಮಸೀದಿಯನ್ನು ಹೇಳ ಹೆಸರಿಲ್ಲದ ಹಾಗೆ ಮಾಯವಾಗಿಸಿತ್ತು ಇಸ್ರೇಲ್.

ಆ ಬಳಿಕ ಪ್ಯಾಲೆಸ್ತೇನ್‌ಗೆ ಉಸಿರಾಡುವುದಕ್ಕೂ ಸಾಧ್ಯವಾಗದ ರೀತಿಯಲ್ಲಿ ಇಸ್ರೇಲ್ ತನ್ನ ಪ್ರತೀಕಾರದ ರುಚಿ ತೋರಿಸಿತ್ತು ಎನ್ನುವುದನ್ನು ನಾವು ಮರೆಯುವ ಹಾಗಿಲ್ಲ. ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ‌ನ ಹಮಾಸ್ ಉಗ್ರರ ನಡುವಿನ ಕಾದಾಟ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು ಎನ್ನುವುದು ಸಹ ಅಕ್ಷರಶಃ ಸತ್ಯ.

Tags

Related Articles

Close