ಪ್ರಚಲಿತ

ಸ್ವಾತಂತ್ರ್ಯ ಬಂದಂದಿನಿಂದ ಭಾರತಕ್ಕೆ ಭಯೋತ್ಪಾದಕರ ಸಮಸ್ಯೆ ಆರಂಭವಾಗಿದೆ: ಎಸ್. ಜೈಶಂಕರ್

ಭಾರತದಾಚೆಗೆ ಅಂದರೆ ವಿದೇಶಗಳಲ್ಲಿಯೂ ಭಾರತ ವಿರೋಧಿ ಉಗ್ರರು ಆಗಾಗ್ಗೆ ನಮ್ಮ ದೇಶದ ವಿರುದ್ಧ ಕುಕೃತ್ಯಗಳನ್ನು ನಡೆಸುತ್ತಾ ಇರುತ್ತಾರೆ. ಭಾರತದಲ್ಲಿ ಇದ್ದುಕೊಂಡು ದೇಶ ವಿರೋಧಿ ಕೃತ್ಯ ನಡೆಸಲು ಸಾಧ್ಯವಾಗದ ಕೆಲವು ದುರುಳರು, ವಿದೇಶಗಳಲ್ಲಿ ಭಾರತ ವಿರೋಧಿ ಚಟುವಟಿಕೆ ನಡೆಸುವಲ್ಲಿ ಯಶಸ್ಸು ಕಾಣುತ್ತಿರುವುದು ದುರಂತವೇ ಸರಿ.

ಇತ್ತೀಚಿನ ದಿನಗಳಲ್ಲಿ ಕೇವಲ ಪಾಕಿಸ್ತಾನದ ಉಗ್ರರಷ್ಟೇ ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಿ ಸುದ್ದಿಯಾಗುತ್ತಿರುವುದಲ್ಲ. ಬದಲಾಗಿ, ಖಲಾಸ್ತಾನಿ ಉಗ್ರರು ಸಹ ಭಾರತ ವಿರೋಧಿ ಕೃತ್ಯಗಳನ್ನು ವಿದೇಶಗಳಲ್ಲಿ ನಡೆಸಿ ಸದ್ದು ಮಾಡುತ್ತಿರುವುದು ಕಂಡು ಬರುತ್ತಿದೆ. ಭಾರತದ ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ವಿದೇಶಗಳಲ್ಲಿ ಇರುವ ಧಾರ್ಮಿಕ ಆಲಯಗಳ ಮೇಲೆ ತಮ್ಮ ಕ್ರೌರ್ಯ ಮೆರೆಯುವ ಕೆಲಸ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಅಮೆರಿಕಾದಲ್ಲಿನ ಹಿಂದೂ ಆಲಯದ ಗೋಡೆಗಳ ಮೇಲೆ ಭಾರತ ವಿರೋಧಿ, ಪ್ರಧಾನಿ ಮೋದಿ ವಿರೋಧಿ ಬರಹಗಳನ್ನು ಖಲೀಸ್ತಾನಿ ಭಯೋತ್ಪಾದಕರು ಬರೆದು, ವಿಕೃತಿ ಮೆರೆದಿರುವುದೇ ಸಾಕ್ಷಿ.

ಇಂತಹ ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿದ ಹಾಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಿದ್ದು, ಗಡಿಯಾಚೆಗಿನ ಉಗ್ರವಾದ ಎದುರಿಸುವುದಕ್ಕೆ ‌ಸಂಬಂಧಿಸಿದ ಹಾಗೆ ಭಾರತ ಯಾವುದೇ ರೀತಿಯ ಮೃದು ಧೋರಣೆ ತಾಳುವುದಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಲೇ ದೇಶದಲ್ಲಿ ಭಯೋತ್ಪಾದನೆ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.

ನಮಗೆ ಸ್ವಾತಂತ್ರ್ಯ ಸಿಕ್ಕಾಕ್ಷಣ ಪಾಕಿಸ್ತಾನದೆಲ್ಲೆಡೆ ದಾಳಿಕೋರರು ಬಂದಾಕ್ಷಣ ಭಯೋತ್ಪಾದನೆ ಆರಂಭವಾಗಿದೆ. ಸ್ವಾತಂತ್ರ್ಯದ ಮೊದಲ ದಿನದಿಂದ ನಾವು ಭಯೋತ್ಪಾದನೆಯನ್ನು ಎದುರಿಸುತ್ತಲೇ ಬಂದಿದ್ದೇವೆ. ಹಾಗೆಯೇ ಭಯೋತ್ಪಾದನೆ ಎನ್ನುವುದು ನಾವು ಸ್ಪಷ್ಟತೆಯನ್ನು ಹೊಂದಿದ ಬೇಕಾದ ವಿಷಯ ಎಂದು ಅವರು ಹೇಳಿದ್ದಾರೆ.

ನಮ್ಮ ದೇಶದಲ್ಲಿ ಈಗ ಎಲ್ಲಾ ಬದಲಾಗಿದೆ. ಮುಂಬೈ ದಾಳಿಯನ್ನು ನಾನು ಟಿಪ್ಪಿಂಗ್ ಪಾಯಿಂಟ್ ಎಂದು ಭಾವಿಸುತ್ತೇನೆ. ಈ ದಾಳಿಯ ನಿಜವಾದ ಮುಖವನ್ನು ನೋಡುವವರೆಗೂ ನಮ್ಮಲ್ಲಿ ಹಲವರು ಭಯೋತ್ಪಾದವೆಯ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದರು ಎಂದು ಹೇಳಿದ್ದಾರೆ.

ಪ್ರಸ್ತುತ ನಾವು ಭಯೋತ್ಪಾದನೆಯನ್ನು ಎದುರಿಸಬೇಕಾಗಿದೆ. ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕಾಗಿದೆ. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಗೆ ಹೊಡೆಯುವಂತೆ ಕೆನ್ನೆ ತೋರಿಸುವುದು ನಮ್ಮ ದೇಶದ ಜಾಯಮಾನವಲ್ಲ. ಯರಾದರೂ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ತೊಡಗಿದ್ದರೆ ಎಂದರೆ ಅದಕ್ಕೆ ನಾವು ಪ್ರತಿಕ್ರಿಯೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

Tags

Related Articles

Close