ಪ್ರಚಲಿತ

ಸ್ನೇಹಿತರನ್ನು ಬದಲಾಯಿಸಬಹುದು, ನೆರೆಹೊರೆಯವರನ್ನಲ್ಲ

ಪಾಕಿಸ್ತಾನದ ಹಾಗೆಯೇ ಚೀನಾ ಸಹ ಭಾರತಕ್ಕೆ ಆಗಾಗ್ಗೆ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಾ ಬಂದಿದೆ. ಭಾರತದ ವಿರುದ್ಧ ಕಾರ್ಯಾಚರಣೆ ನಡೆಸುವ ಮೂಲಕವೇ ಚೀನಾ ಭಾರತದ ಜೊತೆಗಿನ ತನ್ನ ಸಂಬಂಧವನ್ನು ಹಾಳು ಮಾಡಿಕೊಳ್ಳುತ್ತಿದೆ ಎನ್ನುವುದು ಸ್ಪಷ್ಟ.

ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿದ್ದು, ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡಿದೆ. ಈ ಸಂಬಂಧ ಭಾರತ ಬಲವಾದ ನಿಲುವನ್ನು ಪ್ರಕಟಿಸಿದೆ ಎಂದಿರುವ ಅವರು, ಚೀನಾಕ್ಕೆ ದೊಡ್ಡ ಪ್ರಶ್ನೆಯೊಂದನ್ನು ‌ಮಾಡಿದ್ದಾರೆ.

ಭಾರತ ಸಹ ಚೀನಾದ ಕೆಲವು ಪ್ರದೇಶಗಳಿಗೆ ಮರುನಾಮಕರಣ ಮಾಡುತ್ತದೆ. ಹಾಗಾದಲ್ಲಿ ಆ ಪ್ರದೇಶಗಳು ಭಾರತಕ್ಕೆ ಸೇರಿದಂತಾಗುವುದೇ? ಎಂದು ಅವರು ಚೀನಾ‌ಗೆ ತಿರುಗೇಟು ನೀಡಿರುವುದಾಗಿದೆ. ಅರುಣಾಚಲ ಪ್ರದೇಶ ನಮಗೆ ಸೇರಿದ ಮನೆ. ಇಲ್ಲಿನ ಕೆಲವು ಸ್ಥಳಗಳಿಗೆ ಚೀನಾ ಮರು ಹೆಸರಿಸಿ ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ. ಆದರೆ ಹೆಸರು ಬದಲಾಯಿಸಿದ ಕೂಡಲೇ ಏನನ್ನೂ ಸಾಧಿಸಲಾಗದು ಎಂದು ಆ ದೇಶ ಅರ್ಥ ಮಾಡಿಕೊಳ್ಳಬೇಕಿದೆ. ಇದು ನಮ್ಮ ನೆರೆಹೊರೆಯ ಎಲ್ಲಾ ರಾಷ್ಟ್ರಗಳಿಗೂ ನಾನು ಹೇಳುವ ಮಾತು ಎಂದು ಅವರು ನುಡಿದಿದ್ದಾರೆ.

ನಾಳೆ ನಾವು ಸಹ ಚೀನಾದ ಕೆಲವು ಭಾಗಗಳಿಗೆ ಹೆಸರು ಬದಲಾವಣೆ ಮಾಡುತ್ತೇವೆ. ಆಗ ಆ ಭಾಗಗಳು ನಮ್ಮದಾಗುತ್ತವೆಯೇ?. ಇಂತಹ ತಪ್ಪನ್ನು ಯಾರೂ ಮಾಡಬಾರದು ಎಂದು ಅವರು ಭಾರತದ ಪರ ಚೀನಾಗೆ ಟಾಂಗ್ ನೀಡಿದ್ದಾರೆ.

ಚೀನಾ ತೆಗೆದುಕೊಳ್ಳುವ ಇಂತಹ ನಿರ್ಣಯಗಳು ಉಭಯ ದೇಶಗಳ ನಡುವಿನ ಸಂಬಂಧವನ್ನು ಹಾಳು ಮಾಡುತ್ತದೆ. ನಮ್ಮ ಮಾಜಿ ಪ್ರಧಾನಿ ದಿ. ಅಟಲ್ ಜೀ ಅವರು ಒಂದು ಮಾತನ್ನು ಹೇಳುತ್ತಿದ್ದರು. ನಮ್ಮ ಸ್ನೇಹಿತರನ್ನು ಬದಲಾವಣೆ ಮಾಡಬಹುದು. ಆದರೆ ನೆರೆಹೊರೆಯವರನ್ನಲ್ಲ ಎಂದು ಅವರು ನುಡಿದಿದ್ದಾರೆ.

ಭಾರತದ ಆತ್ಮಗೌರವಕ್ಕೆ ಧಕ್ಕೆಯಾಗುವ ಪ್ರಶ್ನೆ ಬಂದಲ್ಲಿ ಅದನ್ನು ಹಿಮ್ಮೆಟ್ಟಿಸುವ ಶಕ್ತಿ ನಮಗಿದೆ. ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರ ಪಡೆಯುವ ಮೊದಲು ಚೀನಾಗೆ ದೊಡ್ಡ ಪ್ರಮಾಣದ ಭೂಮಿಯನ್ನು ಬಿಟ್ಟು ಕೊಡಲಾಗಿದೆ ಎಂದು ಅವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಪ್ರಸ್ತುತ ಕೇಂದ್ರದಲ್ಲಿರುವ ಪ್ರಧಾನಿ ಮೋದಿ ಸರ್ಕಾರ ಈ ಭಾಗದಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದು, ಇದು ನಾವು ಇಲ್ಲಿನ ಕಾಳಜಿ ವಹಿಸುತ್ತೇವೆ ಎನ್ನುವುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.

Tags

Related Articles

Close