ಪ್ರಚಲಿತ

ಇಪ್ಪತ್ತು ರಾಜ್ಯಗಳಲ್ಲಿ ಮೋದಿ ವಿಜಯ ಧ್ವಜ ಹಾರಿಸಲು ಕಾರಣಕರ್ತರಾದದ್ದು ಅಮಿತ್ ಶಾ ಅಲ್ಲ, ಪಕ್ಷದ ಕಾರ್ಯಕರ್ತರಲ್ಲ!! ಹಾಗಾದರೆ ಮೋದಿ ವಿಜಯದ ಕಾರಣೀಭೂತರಾರು?

ಹೌಹಾರಿದಿರಾ? ಹೌದು. ಬರೋಬ್ಬರಿ ಇಪ್ಪತ್ತು ರಾಜ್ಯಗಳಲ್ಲಿ ಮೋದಿಯವರು ಗೆದ್ದಿದ್ದಾರೆ. ಭಾರತೀಯ ಜನತಾ ಪಕ್ಷ ಗೆದ್ದಿದೆ. ಈ ಗೆಲುವಿಗೆ ಕಾರಣ ಅಮಿತ್ ಶಾ ರಣತಂತ್ರ ಮತ್ತು ಅದನ್ನು ಕಾರ್ಯರೂಪದಲ್ಲಿ ಅನುಷ್ಠಾನಗೊಳಿಸಿದ ಭಾಜಪಾದ ನಿಷ್ಠಾವಂತ ಕಾರ್ಯಕರ್ತರೆನ್ನುವುದಲ್ಲಿ ಎರಡು ಮಾತೇ ಇಲ್ಲ. ಆದರೆ… ಮೋದಿ ಗೆಲುವಿಗೆ ಇವೆರಡೆ ಕಾರಣವಲ್ಲ. ಮೋದಿಯನ್ನು ಹೃದಯಾಂತರಾಳದಿಂದ ಪ್ರೀತಿಸುವ, ಅವರನ್ನು ದೇವರಂತೆ ಆರಾಧಿಸುವ, ತಮ್ಮ ಆಪದ್ಭಾಂದವನಂತೆ ಬಗೆಯುವ ದೇಶದ ಕೋಟ್ಯಂತರ ಮಹಿಳೆಯರಿಂದಾಗಿ ಇಂದು ಮೋದಿ ಒಂದರ ಮೇಲೊಂದು ಗೆಲುವು ಸಾಧಿಸುತ್ತಲೆ ಬಂದಿದ್ದಾರೆ. ದೇಶದ ಇತಿಹಾಸದಲ್ಲಿ ಕೋಟ್ಯಂತರ ಮಹಿಳೆಯರು ಒಬ್ಬ ಪ್ರಧಾನಮಂತ್ರಿಯನ್ನು  ಈ ಪರಿಯಾಗಿ ಪ್ರೀತಿಸಿದ್ದನ್ನು ಕಂಡು ಕೇಳಿಲ್ಲ. ಅಷ್ಟಕ್ಕೂ ಈ ಮಹಿಳೆಯರು ಮೋದಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವುದೇಕೆ?

“ಯತ್ರ ನಾರ್ಯಸ್ತು ಪೂಜ್ಯಂತೇ ರಮಂತಾ ತತ್ರ ದೇವತಾಃ” ಅನ್ನುತ್ತದೆ ಸನಾತನ. ಈ ವಾಕ್ಯವನ್ನ ಶಿರಸಾ ವಹಿಸಿ ಪಾಲಿಸಿದವರು ಮೋದಿ. ಮೋದಿಯವರು ಯಾವತ್ತಾದರೂ ಒಂದು ಮಹಿಳೆಯ ಕೈಯಿಂದ ಕಾಲು ಮುಟ್ಟಿ ನಮಸ್ಕರಿಕೊಳ್ಳುವುದನ್ನು ನೋಡಿದ್ದೀರಾ? ಇಲ್ಲ. ಯಾಕೆಂದರೆ ಒಬ್ಬ ಮಹಿಳೆ ತನ್ನ ಕಾಲು ಮುಟ್ಟಿ ನಮಸ್ಕರಿಸುವುದನ್ನು ಅವರು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಹೆಣ್ಣು ಆದಿ ಶಕ್ತಿ-ಲಕ್ಷ್ಮಿಯ ಪ್ರತೀಕ ಆಕೆ ಕಾಲು ಮುಟ್ಟಿ ನಮಸ್ಕರಿಸಕೂಡದು ಎನ್ನುವುದು ಅವರ ಅಭಿಪ್ರಾಯ. ತಾನು ಮಾತ್ರ ಒಬ್ಬ ಮಹಿಳೆಯನ್ನು ಭೇಟಿಯಾಗುವ ಸಂಧರ್ಭದಲ್ಲಿ ಆ ಮಹಿಳೆ ತಮಗಿಂತ ಹಿರಿಯರಾಗಿದ್ದರೆ ಅವರ ಕಾಲು ಮುಟ್ಟಿ ನಮಸ್ಕರಿಸುತ್ತಾರೆ ಇಲ್ಲವಾದರೆ ನತಮಸ್ತಕರಾಗುತ್ತಾರೆ. ಕಿರಿಯರಾಗಿದ್ದರೆ ತಲೆ ನೇವರಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ತಮ್ಮ ಕಾಲು ಮುಟ್ಟಲು ಬಿಡುವುದಿಲ್ಲ.  ಮಹಿಳೆಯರನ್ನು ದೇವಿಯರಂತೆ ಕಾಣುವ ನಾಯಕನನ್ನು ದೇಶ ಇದುವರೆಗೂ ನೋಡಿಲ್ಲ!!

ಮೋದಿಯವರು ತೆಗೆದುಕೊಂಡ ಮಹಿಳಾ ಪರ ನಿರ್ಣಯಗಳಾವುದು? 

ಪ್ರಧಾನಮಂತ್ರಿ ಆದ ಕೂಡಲೇ ಮೋದಿ ಅವರು ಬಲಾತ್ಕಾರ ಪೀಡಿತ ಮಹಿಳೆಯರ ಅನುಕೂಲಕ್ಕಾಗಿ “ಒನ್ ಸ್ಟಾಪ್ ಕ್ರೈಸಿಸ್” ಕೇಂದ್ರಗಳ ನಿರ್ಮಾಣ ಮಾಡಿದರು. ಇದರಿಂದ ಬಲಾತ್ಕಾರ ಪೀಡಿತೆ ನ್ಯಾಯಕ್ಕಾಗಿ ಅಲ್ಲಿ ಇಲ್ಲಿ ಅಲೆಯುವುದು ತಪ್ಪಿತು.  “ಬೇಟಿ ಬಚಾವೋ, ಬೇಟಿ ಪಢಾವೋ” ಎಂದು ಘೋಷಣೆ ಕೂಗುತ್ತಾ, ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಸಮರ ಸಾರಿದರು. ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸುವುದು ಅತಿ ಅವಶ್ಯ ಎಂದು ಹೆತ್ತವರಿಗೆ ತಿಳಿ ಹೇಳಿದರು. ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಲ್ಲಿ ತಮ್ಮ ಭಾಷಣದಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋದರೆ ಅವರನ್ನು ಪ್ರಶ್ನೆ ಕೇಳುತ್ತೀರಲ್ಲ ಅದೇ ರೀತಿ ಗಂಡು ಮಕ್ಕಳಿಗೂ ಕೇಳಿ ಎಂದು ಸಮಾನತೆಯ ಪಾಠ ಮಾಡಿದರು. ಸ್ತ್ರೀ ಸಶಕ್ತೀಕರಣದ ಬಗ್ಗೆ ಕೇವಲ ಘೋಷಣೆ ಮಾಡುತ್ತಾ ಕಾಲ ಕಳೆಯಲಿಲ್ಲ ಮೋದಿ ಬದಲಾಗಿ ಕಾರ್ಯದಲ್ಲಿ ಮಾಡಿ ತೋರಿಸಿದರು.

ಮಹಿಳೆಯರಿಗಾಗಿ ಮೋದಿ ತೆಗೆದುಕೊಂಡ ಐತಿಹಾಸಿಕ ನಿರ್ಣಯಗಳು:

ಒಬ್ಬ ಹೆಣ್ಣಿಗೆ ತಾಯ್ತನವೆಂಬುದು ದೇವರು ಕೊಟ್ಟ ವರ. ನವ ಮಾಸ  ಒಡಲಿನಲ್ಲಿ ತನ್ನ ಜೀವದ ಕುಡಿಯನ್ನು ಹೊತ್ತು ತನ್ನ ಪ್ರಾಣ ಒತ್ತೆ ಇಟ್ಟು ಕಂದನನ್ನ ಭೂಮಿಗೆ ತರುತ್ತಾಳೆ ತಾಯಿ. ಆದರೆ ಬದುಕ ಕಟ್ಟಿಕೊಳ್ಳಲು ಹೆಣಗಾಡುತ್ತಾ ತನ್ನ ಹಾಲುಗಲ್ಲದ ಹಸುಳೆಯನ್ನು ಬಿಟ್ಟು ಕೆಲಸಕ್ಕೆ ಹೋಗುವ ಅನಿವಾರ್ಯತೆ ಆಕೆಗೆ. ತನ್ನ ಮಗುವಿನ ಜೊತೆ ಎರಡು ಕ್ಷಣ ಕಳೆಯಲಾಗದ ಅಸಹಾಯಕತೆ. ಅಂತಹ ತಾಯಂದಿರ ಹೃದಯದ ಬೇಗುದಿಯನ್ನು ಹೇಳದೆಯೆ ಅದು ಹೇಗೆ ಅರಿತರು ಮೋದಿ? ಮಾತೃತ್ವ ರಜೆಯನ್ನು 12 ವಾರಗಳಿಂದ ನೇರವಾಗಿ 26 ವಾರಗಳಿಗೆ ಏರಿಸಿ ತಾಯಂದಿರ ಮುಖದಲ್ಲಿ ಮಂದಹಾಸ ತರಿಸಿದ ಮೋದಿಯನ್ನು ಪ್ರೀತಿಸದೆ ಇರುವರೆ ಮಹಿಳೆಯರು? ಹಲವಾರು ಮೈಲಿ ದೂರದಿಂದ ಕಟ್ಟಿಗೆ ಹೊತ್ತು ತಂದು ಅಡುಗೆ ಮಾಡುವಾಗ ಕಟ್ಟಿಗೆಯ ಹೊಗೆಯಿಂದ ಕಣ್ಣು ಹಾಗೂ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದ ಮಹಿಳೆಯರ ಬವಣೆ ಹೇಗೆ ಗೊತ್ತಾಯ್ತು ಮೋದಿಗೆ? ಕಟ್ಟಿಗೆಯ ಹೊಗೆಯಿಂದ ಮುಕ್ತಿ ದೊರಕಿಸಲು “ಉಜ್ವಲಾ ಯೋಜನೆ” ತಂದು ಮಹಿಳೆಯರ ಬಾಳು ಬೆಳಗಿದ ಮೋದಿಯನ್ನು ಪ್ರೀತಿಸಲು ಇಷ್ಟು ಕಾರಣ ಸಾಕೆ?

ಸಮಾಜದಲ್ಲಿ ತುಳಿತಕ್ಕೊಳಗಾಗಿ, ಅನ್ಯಾಯ ಅನುಭವಿಸುತ್ತಿದ್ದ ಮುಸ್ಲಿಂ ಮಹಿಳೆಯರಿಗೆ ಆತ್ಮ ಸಮ್ಮಾನದ ಬದುಕು ಕಟ್ಟಿಕೊಳ್ಳಲು ಕಟಿಬದ್ದರಾಗಿ ತ್ರಿವಳಿ ತಲಾಖ್ ನಿಷೇಧ ಮಾಡಲು ಹೆಣಗಾಡುತ್ತಿರುವ ಮೋದಿಯವರನ್ನು ಪ್ರೀತಿಸದಿರಲು ಸಾಧ್ಯವೆ? ಮುಸ್ಲಿಂ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ವಿಧ್ಯಾಭ್ಯಾಸ ಮಾಡಿದ ಹೆಣ್ಣು ಮಕ್ಕಳಿಗೆ 51 ಸಾವಿರ ರುಪಾಯಿ ಧನರಾಶಿಯ “ಶಾದಿ ಶಗುನ್” ಯೋಜನೆ ತಂದರಲ್ಲ ಮೋದಿ ಇವರನ್ನು ಪ್ರೀತಿಸದೆ ಇನ್ನಾರನ್ನು ಪ್ರೀತಿಸೋಣ ಹೇಳಿ. ಹಜ್ ಯಾತ್ರೆ ಕೈಗೊಳ್ಳುವ ಕನಸು ಕಂಡು ಪುರುಷ ಅಭಿಭಾವಕರಿಲ್ಲದೆ ಹಜ್ ಯಾತ್ರೆ ಕೈಗೊಳ್ಳಲಾಗದೆ ಪರಿ ತಪಿಸುತ್ತಿದ್ದ ಮಸ್ಲಿಂ ಮಹಿಳೆಯರಿಗೆ ಪುರುಷರಿಲ್ಲದೆಯೂ ಹಜ್ ಯಾತ್ರೆ ಮಾಡಿ ಎಂದು ಕಾನೂನು ತಂದವರು ಮೋದಿಯಲ್ಲವೆ?  ಸಮಾಜದಲ್ಲಿ ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ಗುರುತಿಸಿಕೊಂಡ ಮಹಿಳೆಯರಿಗೆ “ನಾರಿ ಶಕ್ತಿ ಪುರಸ್ಕಾರ್” ಕೊಡುತ್ತಿರುವ ಮೋದಿ ನಿಜ ಅರ್ಥದಲ್ಲಿ ಮಹಿಳಾವಾದಿ ನೇತಾರ. ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದು ತಂದ ನಾರಿಯರ ಸನ್ಮಾನ ಮಾಡುತ್ತಾ ” ಬೇಟಿ ಬಚಾವೊ, ಬೇಟಿ ಪಢಾವೋ, ಬೇತಿ ಖಿಲಾವೋ” ಎಂದು ಕರೆಕೊಟ್ಟರು ಮೋದಿ.

ದೇಶದ ರಾಜಕಾರಣದ ಇತಿಹಾಸದಲ್ಲಿ ಸದಾ ತುಳಿತಕ್ಕೊಳಗಾದ ಮಹಿಳೆಯರನ್ನು ಮುನ್ನಲೆಗೆ ತಂದವರು ಮೋದಿ. ತನ್ನ ಕ್ಯಾಬಿನೆಟ್ನಲ್ಲಿ 6 ಮಹಿಳಾ ಮಂತ್ರಿಗಳನ್ನು ಹೊಂದಿರುವ ಏಕೈಕ ಸರಕಾರ ಮೋದಿ ಸರಕಾರ. ಮೋದಿ ಸರಕಾರದಲ್ಲಿ 13% ಮಹಿಳೆಯರಿದ್ದಾರೆ ಮತ್ತು ಇದು ಹಿಂದಿನ ಎಲ್ಲಾ ಸರಕಾರಗಳಿಗಿಂತಲೂ ಹೆಚ್ಚು ಮಹಿಳೆಯರಿರುವ ಏಕೈಕ ಸರಕಾರ.  ದೇಶದ ಅತ್ಯುನ್ನತ ಹುದ್ದೆಗಳಾದಂತಹ ವಿದೇಶ ಮಂತ್ರಾಲಯ, ರಕ್ಷಣಾ ಮಂತ್ರಾಲಯ ಮತ್ತು ಸೂಚನೆ ಮತ್ತು ಪ್ರಸಾರಣ ಮಂತ್ರಾಲಯಗಳನ್ನು ಸುಷ್ಮಾ ಸ್ವರಾಜ್, ನಿರ್ಮಲಾ ಸೀತರಾಮನ್, ಸೃತಿ ಇರಾನಿ ಮಡಿಲಿಗೆ ಹಾಕಿದವರು ಮೋದಿಜಿ. ಈ ಹಿಂದಿನ ಯಾವುದೇ ಸರಕಾರದಲ್ಲೂ ಇಂತಹ ನಿದರ್ಶನಗಳಿಲ್ಲ. ಲೋಕಸಭೆಗೆ ಸುಮಿತ್ರಾ ಮಹಾಜನ್ ಅವರನ್ನು ಸ್ಪೀಕರ್ ಆಗಿ ನಿಯುಕ್ತಿ ಮಾಡಿದ ಮೊದಿ ಸರಕಾರ ಇದೀಗ ದೇಶದ ಸರ್ವೋಚ್ಚ ನ್ಯಾಯಾಲಯದ ಕಮಾನನ್ನು ಇಂದು ಮಲ್ಹೋತ್ರಾ ಎಂಬ ನಾರಿಯ ಕೈಗಿತ್ತಿದೆ. ಇಂತಹ ನಾಯಕನ್ನು ಪ್ರೀತಿಸದೆ ಇರಬಹುದೆ?

ಕಷ್ಟದಲ್ಲಿರುವ ಮಹಿಳೆಯರಿಗೆ “ಸ್ವಾಧಾರ್ ಗೃಹ” ಯೋಜನೆ, ಗ್ರಾಮೀಣ ಭಾಗದ ಮಹಿಳಾ ಕೃಷಿಕರ ಕಲ್ಯಾಣಕ್ಕಾಗಿ “ಮಹಿಳಾ ಕಿಸಾನ್ ಸಶಕ್ತೀಕರಣ್” ಪರಿಯೋಜನೆ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದು ಹವಣಿಸುತ್ತಿರುವ ಮಹಿಳೆಯರಿಗೆ “ಜನಧನ” ಮತ್ತು “ಮುದ್ರಾ ಯೋಜನೆ” , ಪಾಸ್ ಪೋರ್ಟಿನಲ್ಲಿ ಪುರುಷ ಉಪನಾಮದಿಂದ ವಿನಾಯಿತಿ,  ಹನ್ನೆರಡು ವರ್ಷಕ್ಕಿಂತ ಕೆಳಗಿನ ಬಾಲೆಯರ ಅತ್ಯಾಚಾರಕ್ಕೆ ಮರಣ ದಂಡನೆ ಶಿಕ್ಷೆ, ದೇಶದ ಸೈನ್ಯದಲ್ಲಿ ಮಹಿಳೆಯರಿಗೂ ಸಮಾನ ಅವಕಾಶ ಕಲ್ಪಿಸಿ ಕೊಡುತ್ತಾ ಮಹಿಳಾ ಸೈನ್ಯ ತುಕುಡಿಯ ನಿಯೋಜನೆ, ಮೊತ್ತ ಮೊದಲ ಬಾರಿಗೆ ಮಹಿಳೆಯರೇ ಭಾಗವಹಿಸಿದ “ನಾವಿಕಾ” ಪರಿಯೋಜನೆ, ದೇಶದ ಮಹಿಳಾ ಉದ್ಯಮಿಗಳ ಜೊತೆ ನಿಯಮಿತ ಸಮಾಲೋಚನೆ, ಮಹಿಳಾ ಕ್ರೀಡಾ ಪಟುಗಳ ಮನೋಬಲ ಹೆಚ್ಚಿಸಲು ಅವರ ಜೊತೆ ನಿರಂತರ ಸಂಪರ್ಕ ಹೀಗೆ ಒಂದಲ್ಲ, ಎರಡಲ್ಲ ಹತ್ತು ಹಲವು ಮಹಿಳಾ ಪರ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೋದಿಜಿಯವರನ್ನು ಮಹಿಳೆಯರು ಕೈ ಬಿಡುವರೆ?

ಸ್ವಾತಂತ್ರ್ಯಾ ನಂತರ ಮೊತ್ತ ಮೊದಲ ಬಾರಿಗೆ ಮಹಿಳೆ ತನ್ನ ತಲೆ ಎತ್ತಿ  ಅತ್ಮ ಸಮ್ಮಾನದಿಂದ ಬದುಕುವಂತೆ ಅನುವು ಮಾಡಿ ಕೊಟ್ಟಿದ್ದು ಮೋದಿ ಸರಕಾರ. ಬಾಲ್ಯದಲ್ಲಿ ತನ್ನ ತಾಯಿ  ತಮಗಾಗಿ ಪಟ್ಟ ಕಷ್ಟವನ್ನು ಕಣ್ಣಾರೆ ಕಂಡವರು ಮೋದಿ. ಆದ್ದರಿಂದ ಒಬ್ಬ ಹೆಣ್ಣಿನ ಬದುಕು-ಬವಣೆ ಅವರಿಗೆ ಚೆನ್ನಾಗಿ ಅರ್ಥವಾಗುತ್ತದೆ. ಹೂವಿನಂತಹ ಸೂಕ್ಷ್ಮ ಮನಸ್ಸಿನವರು ಮೋದಿ ಚಿಕ್ಕ ಪುಟ್ಟ ವಿಚಾರಗಳಿಗೂ ಭಾವುಕರಾಗುತ್ತಾರೆ.  ಹೆಣ್ಣೆಂದರೆ ಕೀಳು, ಕೆಲಸಕ್ಕೆ ಬರದವಳು ಎನ್ನುವ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮನೆ ಮಾತ್ರವಲ್ಲ, ಸರಕಾರವನ್ನೂ ಚಲಾಯಿಸಬಲ್ಲಳು ಎಂದು ಜಗತ್ತಿಗೇ ತೋರಿಸಿಕೊಟ್ಟಿದ್ದು ಮೋದಿ. ಇವತ್ತು ವಿಶ್ವ ಪಟಲದಲ್ಲಿ “ಭಾರತಾಂಬೆ” ಹೇಗೆ ತಲೆಯಿತ್ತಿ ನಗುತ್ತಾ ನಿಂತಿದ್ದಾಳೋ, ಹಾಗೆ ಭಾರತದಲ್ಲಿ ಮಹಿಳೆ ಸ್ವಾಭಿಮಾನದ ನಗು ನಗುತ್ತಿದ್ದಾಳೆಂದರೆ ಅದಕ್ಕೆ ಕಾರಣ ಮೋದಿ. ತನಗೆ ಆತ್ಮ ಸಮ್ಮಾನದಿಂದ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟು ದೇಶದ ಮಹಿಳೆಯರಿಗೆ ತಂದೆಯಾಗಿ, ಸಹೋದರನಾಗಿ ಒಬ್ಬ ಆಪ್ತ ಸಖನಾಗಿ “ಸದಾ ನಿನ್ನ ಬೆನ್ನ ಹಿಂದೆ ನಾನಿದ್ದೇನೆ” ಎಂದು ಆಶ್ವಾಸನೆ ಕೊಡುತ್ತಿರುವ ಮೋದಿಯವರನ್ನು ಗೆಲ್ಲಿಸದೆ ಇರುತ್ತಾರೆಯೆ ಮಹಿಳೆಯರು? ಮೋದಿ ಸೋತರೆ ಅದು ಭಾರತಾಂಬೆಯ ಸೋಲು. ಭಾರತದ ಸ್ತ್ರೀಯರ ಸೋಲು. ಆದ್ದರಿಂದ ಮೋದಿ ಸೋಲಲು ಮಹಿಳೆಯರು ಬಿಡುವುದಿಲ್ಲ. ಇತಿಹಾಸದಲ್ಲಿ ಮತ್ತೆ ಇಂತಹ ನಾಯಕ ದೊರಕುವುದಿಲ್ಲ ಬರೆದಿಟ್ಟುಕೊಳ್ಳಿ…

-ಶಾರ್ವರಿ

Tags

Related Articles

Close