ಪ್ರಚಲಿತ

ಶಿವಾಜಿ ಮಹಾರಾಜರು ಮತಾಂತರ ಮಾಡುವ ಕ್ರೈಸ್ತ ಮಿಶನರಿಗಳ ತಲೆ ಉರುಳಿಸಿದ್ದು ಯಾಕೆ?! ಕುರಾನ್ ಬಗ್ಗೆ ಶಿವಾಜಿಯ ನಿಲುವೇನಿತ್ತು ಗೊತ್ತೇ?!

ಈ ದೇಶದಲ್ಲಿ ಮುಸ್ಲಿಂ ದಾಳಿಕೋರರ ದಾಳಿ ನಡೆಯುತ್ತಿದ್ದ ಸಂದರ್ಭ ಹೈಂದವೀ ಸಮಾಜವನ್ನು ಕಟ್ಟಬೇಕೆಂದು ನಿರ್ಧರಿಸಿದ ಶಿವಾಜಿ ಮಹಾರಾಜರು ಅದಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟರು. ಮುಸ್ಲಿಂ ದಾಳಿಕೋರರು ಹಿಂದೂ ದೇಗುಲಗಳನ್ನು ಧ್ವಂಸ ಮಾಡುತ್ತಿದ್ದರೆ ಅದೇ ರೀತಿಯ ಉತ್ತರವನ್ನು ಶಿವಾಜಿ ಮಹಾರಾಜರಿಗೂ ಕೊಡಬಹುದಿತ್ತು. ಆದರೆ ಶಿವಾಜಿ ಆ ರೀತಿ ಮಾಡಲೇ ಇಲ್ಲ.

ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮದ ರಕ್ಷಣೆಯ ಪಣ ತೊಟ್ಟಿದ್ದರು ನಿಜ. ಆದರೆ ಇಸ್ಲಾಂ ಮತದ ವಿರುದ್ಧ ವೈರತ್ವವನ್ನು ಕಟ್ಟಲಿಲ್ಲ. ತನ್ನ ವಿರುದ್ಧ ಕಠೋರವಾಗಿ ವರ್ತಿಸಿದ ಧರ್ಮಾಂಧರ ವಿರುದ್ಧ ಅದೇ ರೀತಿ ಕಠೋರವಾಗಿ ವರ್ತಿಸಿದರೇ ಹೊರತು, ನ್ಯಾಯದ ಪರಿಧಿಯನ್ನು ದಾಟಲಿಲ್ಲ.

ಯಾಕೆಂದರೆ ಅವರೆಂದೂ ಕುರಾನನ್ನು ಅವಮಾನಿಸಲಿಲ್ಲ, ಯಾವ ಮಸೀದಿಯನ್ನೂ ಕೆಡವಲಿಲ್ಲ, ಯಾವ ಫಕೀರನನ್ನೂ ಗಲ್ಲಿಗೇರಿಸಲಿಲ್ಲ. ಅವರ ನೌಕಾಪಡೆಯ ಪ್ರಮುಖನು ಮುಸಲ್ಮಾನನಾಗಿದ್ದ. ಆದರೆ ಧರ್ಮದ ಮರೆಯಲ್ಲಿ ಯಾರಾದರೂ ಹಿಂದೂ ಧರ್ಮದ ಮೇಲೆ ಘಾತವೆಸಗಿದ್ದು ಕಂಡರೆ, ಅವನನ್ನೆಂದೂ ಬಿಡುತ್ತಿರಲಿಲ್ಲ.

ಶೇಜ್ವಲ್ಕರ್ ಎಂಬ ಖ್ಯಾತ ಇತಿಹಾಸಕಾರರು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಮತಾಂತರ ಮಾಡುವವನ ಕತ್ತು ಕತ್ತರಿಸಬೇಕೆಂದು ನಮ್ಮ ಧರ್ಮಾಜ್ಞೆಯಿದೆ

ಗೋವಾದ ಮೇಲೆ ಶಿವಾಜಿ ಮಹಾರಾಜರು ದಂಡೆತ್ತಿ ಹೋದಾಗ, ಕೆಲವು ಕ್ರೈಸ್ತ ಮಿಶನರಿಗಳು ಬಂಧಿಸಲ್ಪಟ್ಟರು. ಈ ಮಿಶನರಿಗಳು ಹೆದರಿಸಿ ಬೆದರಿಸಿ ಹಿಂದುಗಳನ್ನು ಮತಾಂತರ ಮಾಡುತ್ತಿದ್ದರು. ನೀವು ಈ ಕಾರ್ಯವನ್ನು ಬಿಟ್ಟುಬಿಡಿ, ಎಂದು ಶಿವಾಜಿ ಮಹಾರಾಜರು ಅವರಿಗೆ ಹೇಳಿದರು. ಆಗ ಅವರು, ಮತಾಂತರ ಮಾಡುವುದು ನಮ್ಮ ಧರ್ಮಾಜ್ಞೆಯಾಗಿದೆ ಎಂದರು. ಮಹಾರಾಜರು ಹೇಳಿದರು, ಹೀಗಿದ್ದರೆ ಮತಾಂತರ ಮಾಡುವವನ ಕತ್ತು ಕತ್ತರಿಸಬೇಕೆಂದು ನಮ್ಮ ಧರ್ಮಾಜ್ಞೆಯಿದೆ. ಅದೇ ರೀತಿ ಶಿವಾಜಿ ಮಹಾರಾಜರು ಇಬ್ಬರು ಮಿಶನರಿಗಳ ಕತ್ತು ಕತ್ತರಿಸಿದರು.

ಸರ್ವಧರ್ಮ ಸಮಭಾವ ಎಂದರೆ ಭೋಳೆ ಹಿಂದುಗಳನ್ನು ಹೆದರಿಸಿ ಬೆದರಿಸಿ ಮುಸಲ್ಮಾನರನ್ನಾಗಿ ಮಾಡುವುದಲ್ಲ, ಇದು ಅಧರ್ಮದ ಕಾರ್ಯ. ಹಿಂದೂ ಧರ್ಮದ ವಿರುದ್ಧ ಕಾರ್ಯವಾಗಿದ್ದು, ಅದಕ್ಕಾಗಿ ಈ ಕಾರ್ಯ ಮಾಡುವವರೊಂದಿಗೆ ಯಾವ ರೀತಿ ವ್ಯವಹರಿಸಬೇಕೆಂದು ಛತ್ರಪತಿ ಶಿವಾಜಿ ಉದಾಹರಣೆ ನೀಡಿದ್ದಾರೆ.

ಬಲಿಷ್ಠ ಸೇನಾಪಡೆ..

ತನ್ನ ಸೇನಾ ಪಡೆ ಸ್ವಾವಲಂಬಿಯಾಗಿರಬೇಕೆಂದು ಶಿವಾಜಿ ನಿರ್ಧರಿಸಿದ್ದರು. ಫಿರಂಗಿಗಳನ್ನು ತಯಾರಿಸುವ ಕಾರ್ಖಾನೆ, ಮದ್ದುಗುಂಡು ತಯಾರಿಸುವ ಕಾರ್ಖಾನೆಯನ್ನು ಅವರು ಪ್ರಾರಂಭಿಸಿದ್ದರು. ಒಳ್ಳೆಯ ಕುದುರೆಗಳು ಹುಟ್ಟುವಂತೆ ಅವರ ಗಮನವಿರುತ್ತಿತ್ತು. ಆ ಕಾಲದ ಕಬ್ಬಿಣದ ಶಸ್ತ್ರಗಳು ನಮ್ಮ ದೇಶದಲ್ಲೇ ತಯಾರಾಗುವಂತೆ ಅವರು ಪ್ರಯತ್ನಿಸಿದ್ದರು. ಒಳ್ಳೆಯ ನಾಣ್ಯಗಳನ್ನು (ಮೆಟಾಲಿಕ್ ಕಾಯಿನ್ಸ್) ತಯಾರಿಸುವ ಒಂದು ಸಲಹೆಯನ್ನು ಇಂಗ್ಲಿಷರು ಅವರಿಗೆ ನೀಡಿದ್ದರು. ಮಹಾರಾಜರು ಈ ಸಲಹೆಯನ್ನು ತಿರಸ್ಕರಿಸಿದರು. ನಮ್ಮ ಸ್ಥಳೀಯ ಮಜೂರರೇ ನಾಣ್ಯಗಳನ್ನು ತಯಾರಿಸುವರೆಂದು ಹೇಳಿದರು.

ರಾಜ್ಯವ್ಯವಹಾರ ಭಾಷೆಯ ಕೋಶವನ್ನು ಅವರು ತಯಾರಿಸಿ ರಾಜ್ಯ ವ್ಯವಹಾರದಿಂದ ಪಾರ್ಸಿ, ಅರಬೀ ಭಾಷೆಗಳನ್ನು ಉಚ್ಚಾಟಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕದ ಸ್ಮರಣೆಯು ಕೇವಲ ಇತಿಹಾಸದ ಸ್ಮರಣೆಯಲ್ಲ. ನಮ್ಮ ರಾಷ್ಟ್ರವು ಈಗ ಎಚ್ಚೆತ್ತುಕೊಂಡಿದೆ. ಒಂದು ನವ ಜಾಗೃತಿ ಮತ್ತು ನವಚೈತನ್ಯದ ಕಾಲಖಂಡ ಬಂದಿದೆ. ನಮ್ಮ ರಾಷ್ಟ್ರವು ಸನಾತನ ರಾಷ್ಟ್ರ. ನಮ್ಮದೇ ವಿಶೇಷತೆಗಳಿವೆ. ನಮ್ಮದೇ ಜೀವನದರ್ಶನವಿದೆ, ನಮ್ಮದೇ ರಾಜಕೀಯ ಪರಿಕಲ್ಪನೆಯಿದೆ. ಇವೆಲ್ಲವನ್ನೂ ಪುನರುಜ್ಜೀವನಗೊಳಿಸುವ ಕಾಲಖಂಡ ಬಂದಿದೆ.

ಸಹಸ್ರಾರು ವರ್ಷಗಳವರೆಗೆ ನಾವು ಪರಕೀಯರ ಪ್ರಭಾವದಲ್ಲಿದ್ದೆವು. ಸ್ವಾತಂತ್ರ್ಯ ಬಂದನಂತರವೂ ನಾವು ನಮ್ಮ ಸತ್ಯವನ್ನೆಂದೂ ಶೋಧನೆ ಮಾಡಿಲ್ಲ, ನಾವು ಸ್ವತಂತ್ರಗೊಂಡರೂ ತಂತ್ರದಿಂದ ಪರತಂತ್ರರು. ಈಗ ನಾವು ನೈಜ ಅರ್ಥದಲ್ಲಿ `ಸ್ವ’ದ ಬೋಧೆ ಪಡೆಯಬೇಕು, ಸ್ವ-ತಂತ್ರವನ್ನು ಶೋಧನೆ ಮಾಡಬೇಕು. ಕಾಲ ಬದಲಾಯಿಸುತ್ತದೆ, ಸಂದರ್ಭಗಳು ಬದಲಾಯಿಸುತ್ತವೆ, ಪರಿಸ್ಥಿತಿ ಬದಲಾಯಿಸುತ್ತದೆ. ಹೀಗಾಗಿ ಛತ್ರಪತಿ ಶಿವಾಜಿಯನ್ನು ಅನುಕರಣೆ ಮಾಡಲು ಸಾಧ್ಯವಿಲ್ಲ, ಅನುಕರಣೆ ಮಾಡುವ ಅವಶ್ಯಕತೆಯೂ ಇಲ್ಲ, ಆದರೆ ಶಿವಾಜಿ ಮಹಾರಾಜರ ತಂತ್ರವನ್ನು ನಾವು ಅಧ್ಯಯನ ಮಾಡಬಲ್ಲೆವು. ತಂತ್ರದ ಮೂಲಭೂತ ಸಿದ್ಧಾಂತಗಳು ಎಂದೂ ಬದಲಾಗುವುದಿಲ್ಲ. ಆ ಸಿದ್ಧಾಂತಗಳನ್ನು ಇಂದಿನ ಪರಿಸ್ಥಿತಿಯಲ್ಲಿ ಕಾರ್ಯರೂಪಕ್ಕೆ ತರುವ ಬಗೆ ಹೇಗೆಂದು ಆಲೋಚಿಸಬೇಕಾಗಿದೆ, ಮತ್ತು ಅವನ್ನು ಜಾರಿಗೆ ತರಬೇಕು. ಸ್ವರಾಜ್ಯ ಮತ್ತು ಸುಶಾಸನದ ಪರಂಪರೆಯನ್ನು ಶಿವಾಜಿ ಮಹಾರಾಜರು ನಮಗೆ ನೀಡಿದ್ದಾರೆ, ಈ ಪರಂಪರೆಯನ್ನು ನಾವೀಗ ನಮ್ಮ ರಾಷ್ಟ್ರಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು.

ಬಾಜಿಪ್ರಭು ದೇಶಪಾಂಡೆಯ ತ್ಯಾಗ

ಒಮ್ಮೆ ಪನ್ಹಾಳಗಡದಿಂದ ಶಿವಾಜಿ ಮಹಾರಾಜರು ಸಿದ್ಧಿ ಜೌಹರ್‍ನ ಕಣ್ತಪ್ಪಿಸಿ ವಿಶಾಲಗಡದ ಕಡೆ ಹೋಗುತ್ತಿದ್ದರು. ಸಿದ್ಧಿ ಜೌಹರ್‍ನಿಗೆ ಇದರ ಸುಳಿವು ಸಿಕ್ಕಿತು, ಆತ ಅವರನ್ನು ಹಿಂಬಾಲಿಸಿದ. ಮಾರ್ಗದಲ್ಲಿ ಒಂದು ದುರ್ಗಮ ದಾರಿಯಿತ್ತು, ಅದನ್ನು ಮರಾಠಿಯಲ್ಲಿ ಖಿಂಡ್ (ಖಿಂಡಿ) ಎನ್ನುತ್ತಾರೆ. ಅದರ ಮೂಲಕ ಇಬ್ಬರು-ಮೂವರಷ್ಟೇ ಹೋಗಬಹುದು.

ಆ ಘಾಟಿಯಲ್ಲಿ ಬಾಜಿಪ್ರಭು ದೇಶಪಾಂಡೆಯು ತನ್ನ ಕೆಲ ಸಂಗಡಿಗರೊಂದಿಗೆ ನಡೆಸಿದ ಸೆಣಸಾಟವನ್ನು ಮತ್ತಾವ ಕದನದೊಂದಿಗೂ ಹೋಲಿಸಲು ಸಾಧ್ಯವಿಲ್ಲ. ಸಹಸ್ರಾರು ಸಂಖ್ಯೆಯ ಸೈನ್ಯವನ್ನು ಆತ ತಡೆಗಟ್ಟಿದ, ಕೊನೆಯಲ್ಲಿ ಆತ ಧರೆಗುರುಳಿದ. ವಿಶಾಲಗಡಕ್ಕೆ ಶಿವಾಜಿ ಮಹಾರಾಜರು ಕ್ಷೇಮವಾಗಿ ತಲಪಿದ ಸದ್ದು ಬರುವವರೆಗೂ ಆತ ತನ್ನ ಪ್ರಾಣವನ್ನು ಹಿಡಿದಿಟ್ಟುಕೊಂಡ. ಒಬ್ಬ ವ್ಯಕ್ತಿ ಮತ್ತು ಅವನ ಸಂಗಡಿಗರು ಹತ್ತು ಸಹಸ್ರ ಸೈನಿಕರೊಂದಿಗೆ ಸೆಣಸುವ ಈ ಕಾರ್ಯವು ದೈವೀ ನಿಷ್ಠೆಯಿಂದಾಗಿಯೇ ಸಾಧ್ಯವಾಯಿತು.

ಪ್ರಜೆಗಳ ಆಡಳಿತ

ಛತ್ರಪತಿ ಶಿವಾಜಿ ಮಹಾರಾಜರ ಆಡಳಿತವು ಭೋಂಸ್ಲೆ ಮನೆತನದ ಆಡಳಿತವಾಗಿರಲಿಲ್ಲ. ಅವರು ವಂಶವಾದಕ್ಕೆ ರಾಜಕಾರಣದಲ್ಲಿ ಅವಕಾಶ ನೀಡಲಿಲ್ಲ. ಅವರ ಆಡಳಿತವು ನೈಜ ಅರ್ಥದಲ್ಲಿ ಪ್ರಜೆಗಳ ಆಡಳಿತವಾಗಿತ್ತು. ಆಡಳಿತದಲ್ಲಿ ಎಲ್ಲರ ಸಹಭಾಗಿತ್ವವಿತ್ತು. ಸಾಮಾನ್ಯ ಬೆಸ್ತನಿಂದ ಹಿಡಿದು ವೇದಶಾಸ್ತ್ರ ಪಂಡಿತರ ವರೆಗೆ ಎಲ್ಲರೂ ಅವರ ರಾಜ್ಯಾಡಳಿತದಲ್ಲಿ ಪಾಲ್ಗೊಂಡಿದ್ದರು. ಅಸ್ಪೃಶ್ಯತೆಗೆ ಯಾವ ಸ್ಥಾನವೂ ಇರಲಿಲ್ಲ.

ಪನ್ಹಾಳಗಡದ ಮುತ್ತಿಗೆಯಲ್ಲಿ ನಕಲಿ ಶಿವಾಜಿಯಾಗಿದ್ದವನ ಹೆಸರು ಶಿವಾ ಕಾಶಿದ್. ಆತ ಜಾತಿಯಲ್ಲಿ ಕ್ಷೌರಿಕ. ಅಫ್ಜಲ್‍ಖಾನನೊಂದಿಗೆ ಕದನ ಪ್ರಸಂಗದಲ್ಲಿ ಶಿವಾಜಿಯ ಪ್ರಾಣರಕ್ಷಣೆ ಮಾಡುತ್ತಿದ್ದವನು ಜೀವಾ ಮಹಾಲಾ. ಆಗ್ರಾದ ಸೆರೆಯಲ್ಲಿ ಅವರ ಸೇವೆ ಮಾಡುತ್ತಿದ್ದವನು ಮದಾರಿ ಮೆಹತರ್, ಒಬ್ಬ ಮುಸಲ್ಮಾನ. ಆತನ ಕೋಟೆ ಮುಖ್ಯಸ್ಥರು ಎಲ್ಲ ಜಾತಿಗಳಿಗೆ ಸೇರಿದವರಾಗಿದ್ದರು.

ಮಹಾರಾಜರ ಒಂದು ನಿಯಮವಿತ್ತು, ಸೂರ್ಯ ಮುಳುಗಿದ ಬಳಿಕ ಕೋಟೆಯ ದ್ವಾರ ಮುಚ್ಚಬೇಕು, ಅಲ್ಲದೆ ಯಾವ ಪರಿಸ್ಥಿತಿಯಲ್ಲೂ ಕೋಟೆಯೊಳಗೆ ಪ್ರವೇಶ ನೀಡಬಾರದು. ಬಹು ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸಲಾಗುತ್ತಿತ್ತು. ಗಡಿಭಾಗದ ರಕ್ಷಣೆಯನ್ನು ಈ ರೀತಿ ನಿರ್ವಹಿಸಬೇಕಾಗುತ್ತಿತ್ತು. ಅನಪೇಕ್ಷಿತ ಜನರಿಗೆ ಪ್ರವೇಶಿಸಲು ಬಿಡಬಾರದು. ಇಂದು ಭಾರತದಲ್ಲಿ ಬಾಂಗ್ಲಾದೇಶಿಗಳು ಸ್ವೇಚ್ಛೆಯಾಗಿ ಅಕ್ರಮಪ್ರವೇಶ ಮಾಡುತ್ತಾರೆ ಹಾಗೂ ಗಡಿ ರಕ್ಷಿಸುವವರೇ ಅವರಿಗೆ ಸಹಾಯ ಮಾಡುತ್ತಾರೆ.

ಮಹಾರಾಷ್ಟ್ರದ ಶ್ರೇಷ್ಠ ಇತಿಹಾಸಕಾರ ನ. ರ. ಫಾಟಕ್ ಅವರು ಒಂದು ಪ್ರಸಂಗ ಹೇಳಿದ್ದರು. ಪುಣೆ ಸಮೀಪದ ಕೋಟೆಗೆ ಕೆಲವು ಯುವಕರು ಹೋಗಿದ್ದರು. ಕೋಟೆಯ ಮುಖ್ಯಸ್ಥ ವೃದ್ಧನಾಗಿದ್ದ. ಆತ ಬುರುಜಿನ ಮೇಲೆ ನಿಂತುಕೊಂಡು ಮೇಲಿನಿಂದ ಅಕ್ಕಿಯ ಕಾಳುಗಳನ್ನು (ಅಕ್ಷತೆ)ಕೆಳಕ್ಕೆ ಹಾಕುತ್ತಿದ್ದ. ಯುವಕರು ಅವನಿಗೆ ಕೇಳಿದರು, “ಚಾಚಾಜಿ, ನೀವು ಇದೇನು ಮಾಡುತ್ತಿದ್ದೀರಾ?” ಕಿಲೇದಾರ ಹೇಳಿದ, “ಕೆಳಕ್ಕೆ ಊರಿನಲ್ಲಿ ನನ್ನ ಮೊಮ್ಮಗನ ಲಗ್ನವಿದೆ, ಅದಕ್ಕಾಗಿ ಮೇಲಿನಿಂದ ಮಂಗಳ ಅಕ್ಷತೆ ಹಾಕುತ್ತಿದ್ದೇನೆ. ನಾನು ಕೋಟೆಯ ಕಿಲೇದಾರ. ಕಿಲೇದಾರನು ಅನುಮತಿಯಿಲ್ಲದೆ ತನ್ನ ಕೋಟೆಯನ್ನು ಬಿಡಬಾರದೆಂದು ಮಹಾರಾಜರ ಆಜ್ಞೆಯಿತ್ತು. ಈಗ ಮಹಾರಾಜರಿಲ್ಲ, ಅನುಮತಿ ಯಾರಿಂದ ಕೇಳಲಿ? ಆದರೆ ಮಹಾರಾಜರ ನಿಯಮವನ್ನು ನಾನು ಮುರಿಯಲಾರೆ.” ಶಿವಾಜಿ ಮಹಾರಾಜರು ಯಾವ ಪರಿವರ್ತನೆ ಮಾಡಿದರು, ಎಂತಹ ನಿಷ್ಠೆ ಮೂಡಿಸಿದರು ಎಂಬುದಕ್ಕೆ ಇದೊಂದು ಸುಂದರ ಉದಾಹರಣೆ.

ಹಿಂದೂ ರಾಜನೀತಿಯ ಹರಿಕಾರ ಶಿವಾಜಿ

ರಾಜನು ಹಿಂದೂ ರಾಜನೀತಿಯ ಸಿದ್ಧಾಂತಗಳ ಪ್ರಕಾರ ಉಪಭೋಗಶೂನ್ಯ ಒಡೆಯನು. ಪ್ರಜೆಗಳು ಅವನ ದೃಷ್ಟಿಯಲ್ಲಿ ತನ್ನ ಮಕ್ಕಳಿಗೆ ಸಮಾನರು. ರಾಜ್ಯದಲ್ಲಿ ಯಾರೂ ಹಸಿದಿರಬಾರದು, ಯಾರ ಮೇಲೂ ಅನ್ಯಾಯವಾಗದಂತೆ ಅವರ ಬಗ್ಗೆ ಕಾಳಜಿ ವಹಿಸಬೇಕು. ಪ್ರಜೆಗಳು ತಮ್ಮ ತಮ್ಮ ನಂಬಿಕೆಗನುಸಾರ ಉಪಾಸನಾ ಪದ್ಧತಿಯನ್ನು ಅನುಸರಿಸುತ್ತಾರೆ, ರಾಜನು ಪ್ರಜೆಗಳಿಗೆ ಎಲ್ಲ ರೀತಿಯ ಉಪಾಸನಾ ಸ್ವಾತಂತ್ರ್ಯವನ್ನು ನೀಡಬೇಕು.

ಪ್ರಜೆಗಳ ಧಾರ್ಮಿಕ ಕರ್ಮಕಾಂಡಗಳಿಗೆ ರಾಜ್ಯದ ವತಿಯಿಂದ ಯಥಾಶಕ್ತಿ ಸಹಾಯವನ್ನೂ ಮಾಡಬೇಕು. ನ್ಯಾಯವು ಎಲ್ಲರಿಗೂ ಸಮಾನವಾಗಿರಬೇಕು. ಉಚ್ಚಪದಸ್ಥರಿಗೆ ಒಂದು ನ್ಯಾಯ ಮತ್ತು ಸಾಮಾನ್ಯರಿಗೆ ಇನ್ನೊಂದು ನ್ಯಾಯ, ಇದು ಅಧರ್ಮವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ರಾಜನೀತಿಯ ಸಿದ್ಧಾಂತ ಮತ್ತು ತಮ್ಮ ರಾಜ್ಯವ್ಯವಹಾರವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರು. ಅವರ ಮಾವ ಭ್ರಷ್ಟಾಚಾರ ಮಾಡಿದರು. ಆಗ ಶಿವಾಜಿ ಮಹಾರಾಜರು ಅವರನ್ನು ಅವರ ಹುದ್ದೆಯಿಂದ ವಜಾ ಮಾಡಿದರು, ಅಲ್ಲದೆ ತಮ್ಮ ರಾಜ್ಯದಿಂದ ಹೊರಹಾಕಿದರು. ಮಗ ಸಂಭಾಜಿಯು ಏನೋ ಅಪರಾಧ ಮಾಡಿದಾಗ, ಅವನನ್ನು ಸೆರೆಹಿಡಿದು ಪನ್ಹಾಳಗಡದಲ್ಲಿಟ್ಟರು.

ರಾಂಝಾದ ಪಾಟೀಲನು ಒಬ್ಬ ಯುವತಿಯ ಮೇಲೆ ಅತ್ಯಾಚಾರವೆಸಗಿದಾಗ, ಅವನ ಕೈಕಾಲು ಕಡಿಯುವ ಶಿಕ್ಷೆ ವಿಧಿಸಿದರು. ವಿಜಯದುರ್ಗದ (ಸಮುದ್ರದಲ್ಲಿ ದುರ್ಗ ನಿರ್ಮಿಸುವ ಕಾರ್ಯ ನಡೆಯುತ್ತಿತ್ತು) ಕಾರ್ಯದಲ್ಲಿ ಒಬ್ಬ ಬ್ರಾಹ್ಮಣ ಆಡಳಿತಾಧಿಕಾರಿಯು ಸಾಮಗ್ರಿಗಳನ್ನು ಕಳುಹಿಸಲು ವಿಳಂಬಿಸಿದನು. ಮಹಾರಾಜರು ಅವನಿಗೆ ಪತ್ರ ಬರೆದು, “ನೀವು ಬ್ರಾಹ್ಮಣರೆಂದು ನಿಮಗೆ ಶಿಕ್ಷೆಯಾಗದೆಂದು ಭ್ರಮಿಸಬೇಡಿ. ಸರ್ಕಾರದ ಕಾರ್ಯವನ್ನು ಚೆನ್ನಾಗಿ ಮಾಡಿಲ್ಲವೆಂದು ನಿಮಗೆ ಶಿಕ್ಷೆಯಾಗುವುದು” ಎಂದು ತಿಳಿಸಿದರು. ಛತ್ರಪತಿ ಶಿವಾಜಿ ಮಹಾರಾಜರು ತಾವು ಗೋಬ್ರಾಹ್ಮಣ ಪ್ರತಿಪಾಲಕರೆಂದು ಹೇಳಿಕೊಳ್ಳುತ್ತಿದ್ದರು. ಬ್ರಾಹ್ಮಣ ಜಾತಿಯ ಪ್ರತಿಪಾಲಕರೆಂದು ಇದರರ್ಥವಲ್ಲ. ಇಲ್ಲಿ ಬ್ರಾಹ್ಮಣ ಶಬ್ದದ ಅರ್ಥವು, ಧರ್ಮದಂತೆ ನಡೆಯುವವನು, ಧಾರ್ಮಿಕ ವಿಧಿಗಳನ್ನು ತಿಳಿದವನು. ಇಂದಿನ ಪರಿಭಾಷೆಯಲ್ಲಿ ಹೇಳುವುದಾದರೆ, ರಾಜ್ಯವು ಕಾನೂನಿಗನುಸಾರವಾಗಿ ನಡೆಯುವುದು, ಎಂದು ಮಹಾರಾಜರು ಹೇಳುತ್ತಿದ್ದರು.

ಹೈಂದವೀ ಸಮಾಜವನ್ನು ಕಟ್ಟಿದ ಪುಣ್ಯ ಪುರುಷ ಶಿವಾಜಿಯಿಂದಾಗಿ ಈ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೆ. ಇಲ್ಲದೇ ಹೋಗಿದ್ದರೆ ಭಾರತವು ಇಂದು ಇಸ್ಲಾಂ ರಾಷ್ಟ್ರವಾಗಿರುತ್ತಿತ್ತು. ಶಿವಾಜಿಯ ಆಡಳಿತ ಶೈಲಿಯನ್ನು ಸರಿಯಾಗಿ ಅರ್ಥಮಾಡಿಕೊಂಡು, ಅದನ್ನು ಇಂದಿನ ಆಡಳಿತ ಶೈಲಿಯಲ್ಲಿ ಅಳವಡಿಸಲು ನಾವೆಲ್ಲಾ ಕಠಿಬದ್ದರಾಗಬೇಕು…

Tags

Related Articles

Close