ಇತಿಹಾಸ

ಅಯೋಧ್ಯೆಗೂ, ಕೊರಿಯಾಗೂ ಎತ್ತಣಂದೆತ್ತ ಸಂಬಂಧವಯ್ಯಾ ?! ಕೊರಿಯಾದ ಮೂಲ ರಾಮ ಜನ್ಮಭೂಮಿ ಎಂಬ ನಂಬಿಕೆಯ ಹಿಂದಿನ ರಹಸ್ಯ ಇತಿಹಾಸ !

ಅಯೋಧ್ಯಾ… ಭಗವಾನ್ ಶ್ರೀರಾಮಚಂದ್ರ ಹುಟ್ಟಿದ ಪುಣ್ಯ ಸ್ಥಳ. ಅಯೋಧ್ಯಾ ಭೂಮಿ ಮೇಲಿನ ಸ್ವರ್ಗದಂತೆ ಇತ್ತು ಎಂದು ಅಥರ್ವಣ ವೇದದಲ್ಲಿ ಬಣ್ಣಿಸಲಾಗಿದೆ.

ಅಯೋಧ್ಯಾ ನಗರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸ್ವತಃ ತ್ರೇತಾಯುಗದಲ್ಲೇ ಈ ನಗರವಿದ್ದು, ಶ್ರೀರಾಮ ಹುಟ್ಟಿ ಬೆಳೆದು, ರಾಜ್ಯವಾಳಿದ ಸ್ಥಳವಾಗಿದೆ. ಇದೇ ಅಯೋಧ್ಯದ ಬಗ್ಗೆ ಒಂದು ಕುತೂಹಲಕಾರಿ ವಿಷಯವೊಂದಿದೆ. ಅದೇನಪ್ಪಾ ಅಂದ್ರೆ, ಕೊರಿಯಾ ದೇಶಕ್ಕೂ ಭಾರತದ ಪುಣ್ಯ ಸ್ಥಳ ಅಯೋಧ್ಯೆಗೂ ಏನೋ ಒಂದು ಅವಿನಾಭಾವ ಸಂಬಂಧ ಇದೆ ಎಂಬ ವಿಷಯ. ಹೌದು ನಮಗೆ ಇದು ಅಚ್ಚರಿಯಾಗ್ಲೇಬೇಕು. ಕೊರಿಯಾದ ಹಲವು ಕುಲೀನ ಕುಟುಂಬಗಳ ವಂಶಜರು ಅಯೋಧ್ಯಾ ಮೂಲದ ರಾಣಿ ಎಂದು ನಂಬುತ್ತಾರೆ. ಇದು ಭಾರತೀಯರಾದ ನಮಗೆಲ್ಲಾ ಹೆಮ್ಮೆ ತರುವಂತಹಾ ವಿಷಯವಾಗಿದೆ.

ಅದು ಕ್ರಿ.ಶ 48ರ ಸಮಯ. ಕೊರಿಯಾದ ಮೊದಲ ರಾಣಿ ಸುರೋ ಹಾಗೂ ರಾಜ ಹಿವೋ ಹ್ವಾಂಗ್ ಓಕ್ ಅವರಿಬ್ಬರು ಅಯೋಧ್ಯಾದಿಂದ ಕೊರಿಯಾಕ್ಕೆ ಪ್ರಯಾಣ ಬೆಳೆಸುತ್ತಾರೆ. ಈ ವೇಳೆ ಅವರು ಅಯೋಧ್ಯಾದಿಂದ ಮೀನಿನಂಥಾ ರಚನೆಯುಳ್ಳ ಕಲ್ಲನೊಂದನ್ನು ತೆಗೆದುಕೊಂಡು ಸಮುದ್ರದ ಮೂಲಕ ಕೊರಿಯಾಕ್ಕೆ ತೆರಳಿದ್ದಾರೆಂದು ಹೇಳಲಾಗುತ್ತದೆ. ಅಯೋಧ್ಯೆಯ ರಾಜಮನೆತನದ ಹುಡುಗಿಯಾದ ಸುರೋ ಕೊರಿಯಾದ ಹುಡುಗ ಹಿವೋ ಹ್ವಾಂಗ್ ಓಕ್ ಎಂಬವನನ್ನು ಮದುವೆಯಾಗಿ, ಕೊರಿಯಾಕ್ಕೆ ತೆರಳಿದ್ದಳು. ಈ ಮುಂಚೆ ಸಾಮಾನ್ಯ ಪ್ರದೇಶವಾಗಿದ್ದ ಕೊರಿಯಾ ಅಯೋಧ್ಯೆಯ ರಾಣಿ ಬಂದ ಬಳಿಕ ಅಲ್ಲಿನ ಸ್ಥಿತಿಗತಿಯೇ ಬದಲಾವಣೆಗೊಂಡಿತು. ಭಗವಾನ್ ಶ್ರೀರಾಮ ಹುಟ್ಟಿದ ಸ್ಥಳದಿಂದ ಬಂದವಳೆಂಬ ಕಾರಣಕ್ಕೆ ಅಲ್ಲಿನ ಜನತೆ ಈಕೆಯನ್ನು ತಾಯಿಯಂತೆ ನೋಡಿಕೊಂಡರು. ಈಕೆಯಿಂದಾಗಿ ಚದುರಿಹೋಗಿದ್ದ ಕೊರಿಯನ್ ಸಾಮ್ರಾಜ್ಯವೇ ಏಕೀಕರಣಗೊಂಡಿತು ಎಂದೂ ಹೇಳಲಾಗುತ್ತದೆ. ಸುರೋ ಕೊರಿಯಾದ ರಾಣಿಯಾದರೆ ಗಂಡ ರಾಜನಾಗಿ ರಾಜ್ಯಭಾರ ಮಾಡಲಾರಂಭಿಸಿದ. ಇವರ ರಾಜಧಾನಿ ಕೊರಿಯಾದ ಕಿಮ್ಹೆ ಎಂಬ ನಗರವಾಗಿತ್ತು. ರಾಣಿ ಸುರೋ ಶ್ರೀರಾಮನ ಅಯೋಧ್ಯ ನಗರದಲ್ಲಿ ಹುಟ್ಟಿದಳೆಂಬ ಕಾರಣಕ್ಕೆ ಭಾರೀ ರಾಜಮರ್ಯಾದೆಯನ್ನು ನೀಡಿ ಗೌರವಿಸುತ್ತಿದ್ದರು.

ಅಯೋಧ್ಯದಲ್ಲಿನ ಅವಳಿ ಮೀನಿನ ಕಲ್ಲಿಗೂ ಕೊರಿಯಾದಲ್ಲಿನ ಈ ಅವಳಿಮೀನಿನ ಕಲ್ಲಿಗೂ ಒಂದು ಸಾಮ್ಯತೆ ಇರುವುದನ್ನು ಪುರಾತತ್ವ ಇಲಾಖೆ ಪತ್ತೆಹಚ್ಚಿದೆ. ಇಂಥಾ ಕಲ್ಲು ಅಯೋಧ್ಯೆ ಹೊರತುಪಡಿಸಿ ಕೊರಿಯಾದ ಬೇರೆಲ್ಲೂ ಸಿಗದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಈ ಕಲ್ಲನ್ನು ಸಾಕ್ಷಿಯಾಗಿರಿಸಿದರೆ ಕೊರಿಯಾ ಮತ್ತು ಭಾರತಕ್ಕಿರುವ ಸಹಸ್ರ ಸಹಸ್ರ ಶತಮಾನಗಳ ಹಿಂದಿನ ಸಂಬಂಧವನ್ನು ವರ್ಣಿಸಬಹುದು. ಇಂದಿಗೂ ಅನೇಕ ಮಂದಿ ಕೊರಿಯನ್ನರು ಅಯೋಧ್ಯೆಗೆ ಆಗಮಿಸಿ ಭಗವಾನ್ ಶ್ರೀರಾಮನಿಗೆ ಕೈ ಮುಗಿಯುತ್ತಾರೆ. ಅಲ್ಲದೆ ಇಲ್ಲಿನ ಕಲ್ಲುಗಳಿಗೆ ಹೂ ಮುತ್ತೊಂದನ್ನು ನೀಡಿ ಗತಕಾಲದ ವೈಭವವನ್ನು ಸ್ಮರಿಸುತ್ತಾರೆ.

ರಾಣಿ ಸುರೋ ಕೊಂಡೊಯ್ದ ಕಲ್ಲು ಮೀನುಗಳೆರಡು ಪರಸ್ಪರ ಎದುರುಬದುರಾಗಿ ಮುತ್ತು ನೀಡುವ ರೀತಿಯಲ್ಲಿ ಇದೆ ಎನ್ನಲಾಗುತ್ತದೆ. ಕೊರಿಯಾದ ಪುರಾತತ್ವ ಇಲಾಖೆ ಕೂಡಾ ಅಯೋಧ್ಯ ಹಾಗೂ ಕೊರಿಯಾದ ಕಿಮ್ಹೆ ನಗರಕ್ಕೂ ಇರುವ ಸಂಬಂಧದ ಬಗ್ಗೆ ಅಧ್ಯಯನದಲ್ಲಿ ನಿರತವಾಗಿದೆ. ಇಂಥದ್ದೇ ಕಲ್ಲಿನ ರಚನೆಗಳು ಆಮೇಲೆ ಬಂದ ಕಯಾ ಸಾಮ್ರಾಜ್ಯದಲ್ಲೂ ಕಂಡುಬಂದಿದೆ. ಇಂಥದ್ದೇ ಮೀನಿನ ಚಿನ್ಹೆ ಇರುವ ಕಲ್ಲುಗಳು ಅಯೋಧ್ಯೆಯ ಶ್ರೀಮಂತ ಮಿಶ್ರಾ ಕುಟುಂಬದಲ್ಲೂ ಕಂಡುಬಂದಿದೆ. ಕಯಾ ಸಾಮ್ರಾಜ್ಯದ ರಾಣಿ ಹತ್ತು ಮಕ್ಕಳಿಗೆ ಜನ್ಮ ನೀಡಿದಳು. ಇದಾದ ಬಳಿಕ ಕೊರಿಯದಾದ ಕಿಮ್ಹೆ ನಗರ ಅತ್ಯಂತ ಶಕ್ತಿಶಾಲಿ ನಗರವಾಗಿ ಬದಲಾಯಿತು. ಹೀಗೆ ಕೊರಿಯಾದ ರಾಜಮನೆತನಕ್ಕೂ ಅಯೋಧ್ಯೆಗೂ ಒಂದಕ್ಕೊಂದು ಸಂಬಂಧವಿರುವುದನ್ನು ಕಂಡುಕೊಳ್ಳಲಾಗಿದೆ.

ಕೊರಿಯಾದ ರಾಷ್ಟ್ರೀಯ ಪುರಾತತ್ವ ಇಲಾಖೆಯ ಪ್ರೊ. ಎಮಿರಿಟಸ್ ಹಾಗೂ ಪ್ರೊ. ಬ್ಯುಂಗ್ ಮೊ ಕಿಮ್ ಅವರ ಪ್ರಕಾರ ಅಯೋಧ್ಯೆಯ ಜನರಿಗೂ ಕೊರಿಯಾದ ಜನರಿಗೂ ಒಬ್ಬರಿಗೊಬ್ಬರು ಅನುವಂಶಿಕ ಸಂಬಂಧ ಇರುವುದನ್ನು ಕಂಡುಕೊಂಡಿದ್ದಾರೆ. ಈ ಬಗ್ಗೆ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯೂ ವರದಿ ಮಾಡಿದೆ.

ಕಿಮ್ ಅವರ ಹೇಳಿಕೆಯ ಪ್ರಕಾರ, ನಾನು ನನ್ನ ವರ್ಣತಂತು(ಜೀನ್)ವನ್ನು ಭಾರತೀಯರೊಂದಿಗೆ ಹಂಚಿಕೊಂಡು ಹುಟ್ಟಿದ್ದೇನೆ. ಅಂದಿನ ಕಾಲದಲ್ಲಿ ಭಾರತ ಮತ್ತು ಕೊರಿಯಾದ ಮಧ್ಯೆ ವ್ಯಾಪಾರ ಸಂಬಂಧಗಳಷ್ಟೇ ಇರದೆ, ಮದುವೆ ಇತ್ಯಾದಿಗಳ ಅನುವಂಶಿಕ ಸಂಬಂಧವೂ ಇತ್ತು. ಕಾರಾ ಸಾಮ್ರಾಜ್ಯದ ಪ್ರಥಮ ರಾಣಿ ಸುರೋ ಭಾರತದ ಅಯೋಧ್ಯಾ ಮೂಲದವಳು. ಈಕೆ ಕಾರಾ ವಂಶದ ರಾಜನನ್ನು ಮದುವೆಯಾದಳು. ಈಕೆ ಸಹೋದರರು ಅಯೋಧ್ಯೆಯ ರಾಜರಾದರು. ಆದ್ದರಿಂದ ನನ್ನ ವಂಶಾವಳಿ ಪುಣ್ಯ ಸ್ಥಳ ಅಯೋಧ್ಯೆಯೊಂದಿಗೆ ಬೆಸೆದುಕೊಂಡಿದೆ’ ಎಂದು ಹೇಳಿದ್ದಾರೆ.

ಇನ್ನೊಂದು ಕಡೆ ಅವರು, `ಕೊರಿಯಾದ ಪ್ರಸಿದ್ಧ, ಶಕ್ತಿಯುತ ಹೋಹ್ ರಾಜಮನೆತನದ ರಾಣಿ ಅಯೋಧ್ಯೆಯಿಂದ ಬಂದವಳು. ಆದ್ದರಿಂದ ಅಯೋಧ್ಯೆ ಎಂಬುವುದು ನಮಗೆ ತವರಿದ್ದ ಹಾಗೆ. ಅಯೋಧ್ಯೆಯ ರಾಣಿ ಸಾಗರದ ಮೂಲಕ ಸಂಚರಿಸಿ ಕಾರಾ ರಾಜಮನೆತನದ ರಾಜ ಕಿಮ್ ಸುರೋನನ್ನು ವಿವಾಹವಾದಳು. ಕಿಮ್ ಕಾರಾ ಸಾಮ್ರಾಜ್ಯದ ಮೊದಲ ರಾಜ. ಇಂದು ಕೊರಿಯಾದ ಮೂರಲ್ಲಿ ಎರಡು ಭಾಗ ಜನರು ಈಕೆಯ ವಂಶಜರು’ ಎಂದು ಅಭಿಪ್ರಾಯಿಸುತ್ತಾರೆ. ಅಯೋಧ್ಯೆಯ ರಾಜಮನೆತನದ ಯುವತಿಯನ್ನು ಕೊರಿಯಾದ ರಾಜ ಮದುವೆಯಾಗದೇ ಇರುತ್ತಿದ್ದರೆ ಇಂದು ಕೊರಿಯಾದ ಅಸ್ತಿತ್ವವೇ ಇರುತ್ತಿರಲಿಲ್ಲ. ಇದಾದ ಬಳಿಕ ಕೊರಿಯಾ ಶಕ್ತಿಶಾಲಿಯಾಗಿ ಮುಂದುವರಿಯಿತು ಎಂಬ ಅಭಿಪ್ರಾಯ ಕಿಮ್ ಅವರದ್ದಾಗಿದೆ.

ಕೊರಿಯಾದಲ್ಲಿರುವ ಮೀನಿನ ಚಿನ್ಹೆಗೂ ಅಯೋಧ್ಯೆಗೂ ಇರುವ ಸಂಬಂಧವೇನು ಎಂಬ ಬಗ್ಗೆ ಪ್ರಶ್ನೆಯೂ ಈ ಸಂದರ್ಭದಲ್ಲಿ ಹುಟ್ಟುತ್ತದೆ. ಇಂದಿಗೂ ಉತ್ತರಪ್ರದೇಶ ರಾಜ್ಯದ ಪ್ರಮುಖ ಚಿನ್ಹೆ ಅವಳಿ ಮೀನುಗಳು. ಅಲ್ಲದೆ ಈ ಮೀನುಗಳು ಅಯೋಧ್ಯಾ ರಾಜದ ಸಂಕೇತವಾಗಿದೆ. ಅದೇ ರೀತಿ ಕೊರಿಯಾದ ಶ್ರೀಮಂತ ಕುಟುಂಬಗಳು ಇಂದಿಗೂ ಅವಳಿ ಮೀನಿನ ಚಿನ್ಹೆಯನ್ನು ಇಟ್ಟುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಕೊರಿಯಾದ ಹಲವಾರು ಮಂದಿ ಭಗವಾನ್ ಶ್ರೀರಾಮನನ್ನು ಆರಾಧ್ಯದೇವರಾಗಿ ಪೂಜಿಸುತ್ತಾರೆ.

ಕಿಮ್ ಪ್ರಕಾರ, `ನನ್ನಲ್ಲಿ ಕೆಲವು ಚಿತ್ರಸಹಿತ ದಾಖಲೆಗಳು ಭಾರತ ಮತ್ತು ಕೊರಿಯಾದ ಸಂಬಂಧದ ಬಗ್ಗೆ ಪುಷ್ಠಿ ನೀಡುತ್ತದೆ. ಅವಳಿ ಮೀನುಗಳು ಮೂಲತಹ ಮೆಡಿಟರೇನಿಯನ್ ಪ್ರದೇಶಗಳಲ್ಲೂ ಕಂಡುಬರುತ್ತದೆ. ನಾನು ಲಖ್ನೌದಲ್ಲೂ ಹಲವು ಕಾಲಗಳ ತಂಗಿದ್ದು, ಅಧ್ಯಯನ ಮಾಡಿದ್ದೇನೆ. ಮೀನಿನ ಚಿನ್ಹೆಗಳು ಪ್ರಾಚೀನ ಕಾಲದ ಹಲವಾರು ಕಟ್ಟಡಗಳಲ್ಲಿ ಕಂಡುಬಂದಿದೆ. ಈ ರಚನೆಗಳು ನೇಪಾಳ, ಪಾಕಿಸ್ತಾನ, ಚೀನಾ ಮತ್ತು ಜಪಾನ್‍ಗಳಲ್ಲೂ ಕಂಡುಬಂದಿದೆ. ಇದರಿಂದ ಶ್ರೀರಾಮನ ಸಾಮ್ರಾಜ್ಯ ಅಖಂಡವಾಗಿತ್ತು ಎಂಬುವುದನ್ನು ಸ್ಮರಿಸಬಹುದು. ಅದಕ್ಕಿಂತಲೂ ಮುಖ್ಯವಾಗಿ ಕೊರಿಯಾದ ಕಿಮ್ಹೆ ನಗರದ ರಾಣಿ ಸುರೋನ ಸಮಾಧಿಯಲ್ಲಿ ಅವಳಿ ಮೀನಿನ ಚಿನ್ಹೆಗಳಿವೆ’ ಎಂದು ಭಾವನಾತ್ಮಕವಾಗಿ ವಿವರಿಸುತ್ತಾರೆ. ರಾಣಿ ಸುರೋ ಬರೋಬ್ಬರಿ 157 ವರ್ಷಗಳ ಕಾಲ ಬದುಕಿದ್ದಳು ಎಂದು ದಂತಕತೆಗಳು ವಿವರಿಸುತ್ತವೆ.

-ಚೇಕಿತಾನ

Tags

Related Articles

Close