ಅಂಕಣ

ಕನಸಿನ ಗ್ರಾಮೀಣಾಭಿವೃದ್ಧಿ ಯೋಜನೆಗೆ ಮೋದಿಯವರ “ಸಂಸದರ ಆದರ್ಶ ಗ್ರಾಮ ಯೋಜನೆ”!

ಗ್ರಾಮೀಣಾಭಿವೃದ್ಧಿ! ದೇಶಾಭಿವೃದ್ಧಿ!

ಆದರ್ಶ ಗ್ರಾಮಗಳು ಸ್ಥಳೀಯ ಅಭಿವೃದ್ಧಿ ಮತ್ತು ಆಡಳಿತಕ್ಕೆ ಮಾದರಿ ಆಗಬೇಕು, ಇತರ ಗ್ರಾಮ ಪಂಚಾಯಿತಿಗಳಿಗೆ ಸ್ಫೂರ್ತಿ ತುಂಬುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕನಸಿನ ಗ್ರಾಮೀಣಾಭಿವೃದ್ಧಿ ಯೋಜನೆಯಾದ “ಸಂಸದರ ಆದರ್ಶ ಗ್ರಾಮ ಯೋಜನೆ”ಯನ್ನು ಜಾರಿಗೆ ತಂದಿದ್ದಾರೆ!!

ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯಡಿ ಇಡೀ ಗ್ರಾಮವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಯೋಜನೆಯಡಿ, ಸಂಸತ್ ಸದಸ್ಯರು ತಮ್ಮ ಆಯ್ಕೆಯ ಗ್ರಾಮ ಪಂಚಾಯತ್ ವೊಂದನ್ನು ದತ್ತು ಪಡೆದುಕೊಂಡು ಸಂಪೂರ್ಣವಾಗಿ ಅಭಿವೃದ್ಧಿ ಮಾಡಬೇಕಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಅಭಿವೃದ್ಧಿಯನ್ನೂ ಸಾಧಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಅಕ್ಟೋಬರ್ 11, 2014ರ ಲೋಕನಾಯಕ ಜಯ ಪ್ರಕಾಶ್ ನಾರಾಯಣ ಅವರ ಜಯಂತಿ ದಿನದಂದು ತಮ್ಮ ಮಹತ್ವಾಕಾಂಕ್ಷೆಯ ‘ಸಂಸದರ ಆದರ್ಶ ಗ್ರಾಮ ಯೋಜನೆ’ಗೆ ಪ್ರಧಾನಿ ಚಾಲನೆ ನೀಡಿದರು. ಆ ವೇಳೆ, ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜೀವನ ಶೈಲಿ ಸುಧಾರಣೆ ತರುವ ಸಲುವಾಗಿ ಪ್ರಧಾನಿ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದು, ದೇಶ ಬದಲಾಗಬೇಕು ಎಂದರೆ ಮೊದಲು ಹಳ್ಳಿಗಳ ಸ್ಥಿತಿ ಬದಲಾಗಬೇಕು ಎಂದು ಹೇಳಿದ್ದರು.

ಹಾಗಾಗಿ ಸಚಿವರು ಗ್ರಾಮಗಳ ಅಭಿವೃದ್ಧಿಗಳತ್ತ ಗಮನ ಹರಿಸಬೇಕಿದ್ದು, ಹಳ್ಳಿಗಳ ಅಭಿವೃದ್ಧಿಗಾಗಿ ಇದೀಗ ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಈ ಯೋಜನೆಯಲ್ಲಿ ಒಬ್ಬೊಬ್ಬ ಸಚಿವರು ಒಂದೊಂದು ಗ್ರಾಮಗಳನ್ನು ದತ್ತು ಪಡೆದು, ಆ ಗ್ರಾಮಗಳನ್ನು ಅಭಿವೃದ್ಧಿ ಪಡೆಸುವ ಜವಾಬ್ದಾರಿ ಹೊಂದಬೇಕು. ಗ್ರಾಮ ದತ್ತು ಪಡೆದ ಸಂಸದರು ಆ ಗ್ರಾಮದ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಅಷ್ಟೇ ಅಲ್ಲದೇ, ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ರೂಪಿಸಲಾಗಿರುವ ಮಹತ್ವಾ­ಕಾಂಕ್ಷೆಯ “ಸಂಸದ ಆದರ್ಶ ಗ್ರಾಮ ಯೋಜನೆ”ಯಡಿ ಐದು ವರ್ಷಗಳಲ್ಲಿ ಪ್ರತಿಯೊಬ್ಬ ಸಂಸದನೂ ಕನಿಷ್ಠ ಮೂರು ಗ್ರಾಮ­ಗಳನ್ನು ಮಾದರಿ ಗ್ರಾಮಗಳನ್ನಾಗಿ ಸಮಗ್ರವಾಗಿ ಅಭಿವೃದ್ಧಿ­ಪಡಿಸಬೇಕಾಗಿದೆ. ಬದಲಾಗುತ್ತಿರುವ ಸಮಾಜದೊಂದಿಗೆ ಗ್ರಾಮಗಳು ಬದಲಾಗಬೇಕಾಗಿದ್ದು, ಪ್ರತಿ ಗ್ರಾಮಸ್ಥನೂ ತನ್ನ ಗ್ರಾಮದ ಪರಿಸರ ಮತ್ತು ಅಭಿವೃದ್ಧಿ ಬಗ್ಗೆ ಹೆಮ್ಮೆ ಪಡುವಂತಾಗಬೇಕು. ಆ ದಿಸೆಯಲ್ಲಿ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ!!

ಮೋದಿ ಅವರ ಈ ಯೋಜನೆಗೆ ಸಂಸದರಿಂದ ಉತ್ತಮ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸಂತಸದ ವಿಚಾರವಾಗಿದೆ. ಅಷ್ಟೇ ಅಲ್ಲದೇ, “ಇದು ಹಣದ ಯೋಜನೆ ಅಲ್ಲ. ಜನ ಹಿತದ ಯೋಜನೆ. ಎಲ್ಲವನ್ನೂ ಒಂದೇ ದಿನದಲ್ಲಿ ಬದಲಾವಣೆ ಮಾಡಿ­ಬಿಡುತ್ತೇನೆ ಎಂದು ನಾನು ಹೇಳುವುದಿಲ್ಲ. ಈ ಯೋಜನೆಯಿಂದಲೇ ಎಲ್ಲ ಗ್ರಾಮಗಳು ಅಭಿವೃದ್ಧಿಯಾಗಿ ಬಿಡುತ್ತವೆ ಎಂದೂ ಹೇಳುವುದಿಲ್ಲ. ಮೊದಲು ಕೆಲಸ ಮಾಡೋಣ. ಕಾಲ­ಕ್ರಮೇಣ ಬದಲಾವಣೆ ಮತ್ತು ಅಭಿವೃದ್ಧಿ ತಾವಾಗಿಯೇ ಗೋಚರಿಸುತ್ತವೆ” ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದರು!! ಹಾಗಾಗಿ ಈ ಯೋಜನೆಯು ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೆಲಸ ಮಾಡಲಿದೆ ಎನ್ನುವುದು ಸಂತಸದ ವಿಚಾರ.

ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಎಲ್ಲ ಸರ್ಕಾರಗಳು ಗ್ರಾಮೀಣ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿವೆ. ಬದಲಾದ ಕಾಲಕ್ಕೆ ಅನುಗುಣವಾಗಿ ಈ ಯೋಜನೆ ರೂಪಿಸಲಾಗಿದ್ದು, ಜನರನ್ನು ನೇರವಾಗಿ ತೊಡಗಿಸಿಕೊಳ್ಳುವ ಕಾರಣ ಈ ಯೋಜನೆ ಇನ್ನಿತರ ಸರ್ಕಾರಿ ಯೋಜನೆಗಳಂತೆ ಅಲ್ಲ. ಇಲ್ಲಿ ಸಂಸದ ಕೇವಲ ಪ್ರೇರಕ ಶಕ್ತಿ; ಜನಶಕ್ತಿಯೇ ಈ ಯೋಜನೆಯ ಜೀವಾಳವಾಗಿದೆ. ಇನ್ನು ಈ ಸಂಸದರ ಆದರ್ಶ ಗ್ರಾಮ ಯೋಜನೆ ಜನರ ಇಚ್ಛೆ ಮೇರೆಗೆ ಅವರ ನಿರ್ದೇಶನ ಮತ್ತು ಪಾಲ್ಗೊಳ್ಳುವಿಕೆಯನ್ನು ಅವಲಂಭಿಸಿದೆ.

ಯೋಜನೆಯ ಮುಖ್ಯಾಂಶಗಳು:

* ಮಹಾತ್ಮ ಗಾಂಧಿ ಅವರ “ಸ್ವರಾಜ್” ಅನ್ನು “ಸುರಾಜ್” (ಉತ್ತಮ ಆಡಳಿತ) ಆಗಿ ಪರಿವರ್ತಿಸುವ ಆಶಯವನ್ನು ಆಧರಿಸಿ ಯೋಜನೆಯ ನೀಲನಕ್ಷೆ ಸಿದ್ಧ.
* ಯಾವುದೇ ಸಂಸದ ತನ್ನದೇ ಗ್ರಾಮವನ್ನು ಅಥವಾ ತನ್ನ ಪತ್ನಿಯ ತವರು ಗ್ರಾಮವನ್ನು ಆಯ್ದುಕೊಳ್ಳಬಾರದು.
* 543 ಲೋಕಸಭಾ ಸದಸ್ಯರು, 250 ರಾಜ್ಯಸಭಾ ಸದಸ್ಯರು ಸೇರಿ ಒಟ್ಟು 793 ಸಂಸದರು.
* ಬಯಲು ಸೀಮೆಯಲ್ಲಿ ಮೂರು ಸಾವಿರದಿಂದ ಐದು ಸಾವಿರ ಜನಸಂಖ್ಯೆ ಇರುವ ಗ್ರಾಮಗಳ ಆಯ್ಕೆ ಮಾಡಬೇಕು
* ಗುಡ್ಡಗಾಡು ಪ್ರದೇಶದಲ್ಲಿ ಒಂದು ಸಾವಿರದಿಂದ ಮೂರು ಸಾವಿರ ಜನಸಂಖ್ಯೆ ಇರುವ ಗ್ರಾಮಗಳ ಆಯ್ಕೆ ಮಾಡಬೇಕು
* ಗ್ರಾಮಸ್ಥರ ವೈಯಕ್ತಿಕ ಅಭಿವೃದ್ಧಿ, ಗ್ರಾಮಗಳಲ್ಲಿನ ಮಾನವ ಸಂಪನ್ಮೂಲ, ಸಾಮಾಜಿಕ ಮತ್ತು ಪರಿಸರ ಅಭಿವೃದ್ಧಿಗೆ ಒತ್ತು
* ಪ್ರತಿ ಗ್ರಾಮಕ್ಕೂ ಪ್ರತ್ಯೇಕ ಅಭಿವೃದ್ಧಿ ಯೋಜನೆ
* ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಜತೆಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಹಣದ ಬಳಕೆ
* ಯೋಜನೆಯ ಅನುಷ್ಠಾನ ಮೇಲ್ವಿಚಾರಣೆಗೆ ರಾಷ್ಟ್ರ ಮಟ್ಟದಲ್ಲಿ ಎರಡು ಸಮಿತಿಗಳ ರಚನೆ
* 2016ರ ವೇಳೆಗೆ ಪ್ರತಿ ಸಂಸದರಿಂದ ತಲಾ ಒಂದರಂತೆ 800 ಗ್ರಾಮಗಳ ಅಭಿವೃದ್ಧಿ ಗುರಿ
* 2019ರ ವೇಳೆಗೆ 2400 ಗ್ರಾಮಗಳ ಅಭಿವೃದ್ಧಿ ಗುರಿ

ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಅಭಿವೃದ್ಧಿಯನ್ನೂ ಸಾಧಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆದರ್ಶ ಗ್ರಾಮಗಳು ಸ್ಥಳೀಯ ಅಭಿವೃದ್ಧಿ ಮತ್ತು ಆಡಳಿತದ ಶಾಲೆಗಳಾಗಿ ಉಳಿದ ಗ್ರಾಮ ಪಂಚಾಯತ್ ಗಳಿಗೆ ಸ್ಫೂರ್ತಿಯಾಗಬೇಕಾಗಿದೆ. ಹಾಗಾಗಿ ಗ್ರಾಮದ ನಿವಾಸಿಗಳ ಸಹಭಾಗಿತ್ವದಲ್ಲಿ ವೈಜ್ಞಾನಿಕ ಸಾಮರ್ಥ್ಯಗಳನ್ನು ಬಳಸಿಕೊಂಡು ಸಂಸದರ ನೇತೃತ್ವದಲ್ಲಿ ಗ್ರಾಮ ಅಭಿವೃದ್ಧಿ ಯೋಜನೆಯನ್ನು ತಯಾರಿಸಲಾಗುತ್ತದೆ. ಅದಾದ ಬಳಿಕ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ರಾಜ್ಯ ಸರ್ಕಾರಗಳಿಗೆ ಸಲ್ಲಿಸಬೇಕಾಗುತ್ತದೆ. ರಾಜ್ಯ ಮಟ್ಟದ ಉನ್ನತಾಧಿಕಾರ ಸಮಿತಿಯು ಆದ್ಯತೆ ಮೇರೆಗೆ ಸಂಪನ್ಮೂಲಗಳನ್ನು ಹಂಚಿಕೆ ಮಾಡುತ್ತದೆ. ಸಧ್ಯ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು 21 ಯೋಜನೆಗಳಿಗೆ ತಿದ್ದುಪಡಿ ತಂದು, ಸಂಸದ್ ಆದರ್ಶ ಗ್ರಾಮ ಯೋಜನೆಯ ಗ್ರಾಮ ಪಂಚಾಯತ್ ನ ಯೋಜನೆಗಳಿಗೆ ನೆರವಾಗುತ್ತಿವೆ.

ಜಿಲ್ಲಾ ಮಟ್ಟದಲ್ಲಿ, ಮಾಸಿಕ ಪರಿಶೀಲನಾ ಸಭೆಗಳನ್ನು ಪ್ರತಿ ಗ್ರಾಮ ಪಂಚಾಯತ್ ಗೂ ಸಂಸದರ ನೇತೃತ್ವದಲ್ಲಿ ನಡೆಸಲಾಗುತ್ತದೆ. ಯೋಜನೆಯಲ್ಲಿ
ಪಾಲುದಾರರಾಗಿರುವ ಪ್ರತಿಯೊಂದು ಇಲಾಖೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿಯೇ ಪರಿಶೀಲನೆ ನಡೆಸಲಾಗುತ್ತದೆ. ಎಲ್ಲ ಸಂಸದರು 2016ರೊಳಗೆ ಒಂದು ಗ್ರಾಪಂ, 2019ರೊಳಗೆ 2 ಹಾಗೂ 2024ರೊಳಗೆ 5 ಗ್ರಾಪಂಗಳನ್ನು ಮಾದರಿಯಾಗಿ ರೂಪಿಸಬೇಕೆಂದು ನಿರೀಕ್ಷಿಸಲಾಗಿದೆ. ಯೋಜನೆಯಡಿ ದೇಶದೆಲ್ಲೆಡೆ 696 ಗ್ರಾಪಂಗಳನ್ನು ಸಂಸದರು ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸುತ್ತಿದ್ದಾರೆ.

ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಕೇಂದ್ರ ಸರ್ಕಾರ ಈಗಾಗಲೇ 40.10 ಕೋಟಿ ರೂ. ಬಿಡುಗಡೆ ಮಾಡಿದ್ದು, ಅದಕ್ಕಾಗಿ ಹೆಚ್ಚುವರಿಯಾಗಿ ರಾಜ್ಯ ಸರ್ಕಾರ 40 ಕೋಟಿ ರೂ. ಮೀಸಲಿಟ್ಟಿದೆ. ಈ ಯೋಜನೆಗೆ ಚಿತ್ರದುರ್ಗ, ಕೋಲಾರ, ಮೈಸೂರು, ಚಾಮರಾಜನಗರ ಹಾಗೂ ಕಲಬುರಗಿ ಜಿಲ್ಲೆಗಳ 200 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಅನುಮೋದನೆಯನ್ನೂ ಸಹ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಸೇರಿ ಒಟ್ಟು 80 ಕೋಟಿ ರೂ. ವೆಚ್ಚದಲ್ಲಿ ಗ್ರಾಮಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದು. ಪ್ರಧಾನಮಂತ್ರಿ ಆದರ್ಶ ಗ್ರಾಮ ಮತ್ತು ಮುಖ್ಯಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಪ್ರತ್ಯೇಕ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ನರೇಂದ್ರ ಮೋದಿಯವರ ಹೇಳಿಕೆ:

* ಆದರ್ಶ ಗ್ರಾಮಕ್ಕೆ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಸಂಸದರಿಗೆ ಪ್ರಧಾನಿ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಸಂಸದರು ತಮ್ಮ ಸ್ವಂತ ಅಥವಾ ಪತ್ನಿಯ ಗ್ರಾಮವನ್ನು ದತ್ತು ತೆಗೆದುಕೊಳ್ಳಬಾರದು ಎಂದು ಪ್ರಧಾನಿ ಮನವಿ ಮಾಡಿದರು.
* ಆದರ್ಶ ಗ್ರಾಮ ಯೋಜನೆಯಿಂದ ದೇಶದ ಎಲ್ಲಾ ಹಳ್ಳಿಗಳೂ ಉದ್ದಾರವಾಗಿ ಹೋಗುತ್ತದೆ ಎಂಬ ಭ್ರಮೆ ನನಗಿಲ್ಲ. ಗ್ರಾಮಗಳ ಅಭಿವೃದ್ಧಿಗೆ ಇದೇ ಅಂತಿಮ ಪರಿಹಾರ ಎಂದೂ ನಾನು ಹೇಳುತ್ತಿಲ್ಲ. ಹಿಂದಿನ ಯೋಜನೆಗಳಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಈ ಯೋಜನೆ ಮೂಲಕ ಮಾಡಲಾಗುವುದು,” ಎಂದು ಮೋದಿ ಹೇಳಿದರು.
* ಯೋಜನೆಯಡಿ ಪ್ರತಿ ಸಂಸದರು ಅವರು ಪ್ರತಿನಿಧಿಸುವ ಕ್ಷೇತ್ರದ ಮೂರು ಗ್ರಾಮಗಳನ್ನು ದತ್ತು ತೆಗೆದುಕೊಂಡು ಮಾದರಿ ಗ್ರಾಮಗಳನ್ನಾಗಿ ರೂಪಿಸಬೇಕು. ಮೊದಲ ಗ್ರಾಮದ ಅಭಿವೃದ್ಧಿ ಕಾರ್ಯ 2016ಕ್ಕೆ ಹಾಗೂ ಉಳಿದೆರಡು ಗ್ರಾಮಗಳಲ್ಲಿ 2019ಕ್ಕೆ ಕಾರ್ಯ ಪೂರ್ಣಗೊಳ್ಳಬೇಕು. ನಗರ ಪ್ರದೇಶಗಳ ಸಂಸದರು ನಗರಕ್ಕೆ ಸಮೀಪದ ಗ್ರಾಮಗಳ ಬಗ್ಗೆ ಲಕ್ಷ್ಯ ವಹಿಸಬೇಕು.
* ಒಂದು ವೇಳೆ ಒಬ್ಬ ಸಂಸದರು ಮೂರು ಗ್ರಾಮಗಳನ್ನು ದತ್ತು ತೆಗೆದುಕೊಂಡರೆ ಮುಂದಿನ ಐದು ವರ್ಷಗಳಲ್ಲಿ 2,379 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಮಹಾತ್ಮ ಗಾಂಧಿಯ ಮೌಲ್ಯ ಹಾಗೂ ತತ್ತ್ವಗಳಿಂದ ಪ್ರೇರಿತಗೊಂಡಿರುವ ಯೋಜನೆ, ರಾಷ್ಟ್ರೀಯತಾವಾದ, ಸಮುದಾಯ ಸ್ಫೂರ್ತಿ, ಆತ್ಮವಿಶ್ವಾಸ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಿದೆ. ಸಾರ್ವಜನಿಕ ಬದುಕಿನಲ್ಲಿ ಜನರ ಸಹಭಾಗಿತ್ವ, ಮಹಿಳೆಯರಿಗೆ ಪ್ರಾಧಾನ್ಯ, ಸಾಮಾಜಿಕ ನ್ಯಾಯ, ಸಮುದಾಯ ಸೇವೆಸ್ಪೂರ್ತಿ, ಸ್ವಚ್ಛತೆ, ಪರಿಸರ ಸ್ನೇಹಿ, ಹಾಗೂ ಶಾಂತಿ ಸೌಹಾರ್ದತೆ, ಪರಸ್ಪರ ಸಹಕಾರ, ಸ್ವಾಲಂಬನೆ, ಸ್ಥಳೀಯ ಆಡಳಿತ, ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಮುಂತಾದ ಮೌಲ್ಯಗಳನ್ನು ಅಳವಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.

– ಅಲೋಖಾ

Tags

Related Articles

Close