ಅಂಕಣ

ಬ್ರಿಟಿಷರ ಪಾಲಿಗೆ ಸಿಂಹವಾಗಿ ಕಾಡಿದ್ದ ಈ ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ನಿಮಗೆ ಗೊತ್ತೇ?

ಭಾರತ ವಿವಿಧತೆಯಲ್ಲಿ ಏಕತೆಯನ್ನು ಕಂಡಂತಹ ರಾಷ್ಟ್ರ. ಹಲವಾರು ದೇಶಗಳಂತೆ ಈ ದೇಶವೂ ಆಕ್ರಮಣಕಾರಿಗಳ ಆಳ್ವಿಕೆಯಲ್ಲಿ ನಲುಗಿ ಹೋಗಿತ್ತು. ಭಾರತೀಯರು ಗುಲಾಮರಾಗಿದ್ದರು. ಇಂದು ಭಾರತ ಎಂದರೆ ಜಗತ್ತೇ ನಿಬ್ಬೆರಾಗಾಗಿ ನೋಡುತ್ತಿದೆ. ಆದರೆ ಅಂದು ಭಾರತದ ಸ್ಥಿತಿಯೇ ಬೇರೆನೇ ಆಗಿತ್ತು. ಇಂದು ಭಾರತದಲ್ಲಿ ಉತ್ತಮ ಸಿಟಿಗಳನ್ನು ನೋಡುತ್ತಿದ್ದೇವೆ. ಆದರೆ ಶತಕದ ಹಿಂದಿನ ಭಾರತವನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಇಂದು ಎಲ್ಲರೂ ಅಕ್ಷರಸ್ಥರಾಗಿದ್ದೇವೆ. ಆದರೆ ಅಂದಿನ ಭಾರತದಲ್ಲಿ ಒಂದನೇ ತರಗತಿ ಓದಲೂ ಕಷ್ಟದ ವಿಷಯವಾಗಿತ್ತು. ಇಂದು ನಾವು ಅತ್ಯುತ್ತಮ ಸಂಪರ್ಕ ಸಾಧನಗಳನ್ನು ಉಪಯೋಗಿಸುತ್ತಿದ್ದೇವೆ. ಆದರೆ ನಮ್ಮ ಪೂರ್ವಜರು ಇದ್ಯಾವುದೂ ಇಲ್ಲದೆ ತಮ್ಮ ಜೀವಗಳನ್ನೇ ಕಳೆದುಕೊಳ್ಳುತ್ತಿದ್ದರು.

ಹೌದು. ಅಂದಿನ ಭಾರತಕ್ಕೂ ಇಂದಿನ ಭಾರತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ದೇಶಕ್ಕೆ ಆಕ್ರಮಣಕಾರಿಗಳು ಬರೋದಕ್ಕೂ ಮುಂಚೆ ಈ ದೇಶ ವೈಭವದಿಂದ ಕೂಡಿತ್ತು. ವಿಜಯ ನಗರ ಸಾಮ್ರಾಜ್ಯ ಸಹಿತ ಅನೇಕ ರಾಜಾಡಳಿತದಲ್ಲಿ ದೇಶದಲ್ಲಿ ಸಂಭ್ರಮ ಮನೆ ಮಾಡಿತ್ತು. ಜನರೆಲ್ಲಾ ನೆಮ್ಮದಿಯಿಂದ ಬಾಳುತ್ತಿದ್ದರು. ಚಿನ್ನ, ವಜ್ರ, ವೈಡೂರ್ಯಗಳನ್ನು ಬೀದಿಯಲ್ಲಿಟ್ಟು ಸೇರು ಸೇರುಗಳಂತೆ ಮಾರಾಟ ಮಾಡಲಾಗಿತ್ತಂತೆ. ಆದರೆ ನಂತರ ಬಂದ ಆಕ್ರಮಣಕಾರಿಗಳು ಈ ಎಲ್ಲಾ ಸಂಭ್ರಮಗಳನ್ನು ಕಿತ್ತು ಹಾಕಿದ್ದರು. ಭಾರತವನ್ನು ಹಿಂದೆಂದೂ ಕಾಣದಂತಹ ಪಾತಾಳಕ್ಕೆ ದೂಡಿ ಹಾಕಿದ್ದರು. ಸಂಪದ್ಭರಿತ ಈ ದೇಶದಲ್ಲಿದ್ದ ಎಲ್ಲಾ ಸಂಪತ್ತುಗಳನ್ನು ಕೊಳ್ಳೆ ಹೊಡೆದಿದ್ದರು. ದೇಶ ಅಕ್ಷರಷಃ ನಲುಗಿ ಹೋಗಿತ್ತು.

ಡಚ್ಚರು, ಫ್ರೆಂಚರು, ಮೊಘಲರು, ನವಾಬರು, ನಿಜಾಮರು, ಪೋರ್ಚುಗೀಸರು ಸಹಿತ ಅನೇಕ ಆಕ್ರಮಣಕಾರಿಗಳು ಈ ದೇಶವನ್ನು ಕೊಳ್ಳೆ ಹೊಡೆದಿದ್ದರು. ಇದರಲ್ಲಿ ಕಡೇಗೆ ಬಂದು ದೋಚಿ ನಂತರ ಕೈಸುಟ್ಟುಕೊಂಡವರು ಬ್ರಿಟಿಷರು. ಮೊದ ಮೊದಲು ಇದರ ಅರಿವಿಲ್ಲದಿದ್ದ ಭಾರತೀಯರು ವ್ಯಾಪಾರಕ್ಕಾಗಿ ಬಂದ ಬ್ರಟಿಷರಲ್ಲಿ ಸಹಜವಾಗಿಯೇ ಸಾಮಾನ್ಯವಾಗಿ ವರ್ತಿಸುತ್ತಿದ್ದರು. ಆದರೆ ನಂತರ ಒಂದೊಂದೇ ಕೃತ್ಯಗಳನ್ನು ಮಾಡುತ್ತಾ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದ ಬ್ರಿಟಿಷರ ನಡೆ ಭಾರತೀಯರಿಗೆ ಅರ್ಥವಾಗಿತ್ತು. ಆದರೆ ಅಷ್ಟರಲ್ಲಿ ಇಡಿಯ ಭಾರತವನ್ನು ಬ್ರಿಟಿಷರು ತನ್ನ ವಶವಾಗಿಸಿಕೊಂಡಿದ್ದರು. ಆವಾಗಲೇ ಭಾರತ ವಿನಾಶದ ಅಂಚನ್ನು ತಲುಪಿಯಾಗಿತ್ತು.

ಭಾರತದಲ್ಲಿ ಸ್ವಾತಂತ್ರ್ಯದ ಕಹಳೆ ಜಾಗೃತಗೊಳ್ಳುತ್ತೆ. ಅಲ್ಲಲ್ಲಿ ಜಾತ್ಯಾತೀತವಾದಿಗಳ ಸಮಿತಿಗಳು ರಚನೆಯಾಗುತ್ತದೆ. ಬ್ರಿಟಿಷರಲ್ಲಿ ಸಂದಾನ ನಡೆಸಿ ಸ್ವಾತಂತ್ರ್ಯ ಪಡೆದು, ನಾವು ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರೆಂದು ಬೀಗಿಕೊಳ್ಳಲೂ ಹಾಗೂ ಮುಂದಿನ ದಿನಗಳಲ್ಲಿ ದೇಶದಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿಕೊಳ್ಳಲು ಸಿದ್ಧರಾಗಿದ್ದರು.

ಈ ಸೆಕ್ಯುಲರಿಸಮಿಗಳ ಅಧಿಕಾರದ ದಾಹ ಏರುತ್ತಲೇ ಇತ್ತ ಭಾರತ ಮಾತೆಯನ್ನು ದಾಸ್ಯದಿಂದ ಮುಕ್ತಿಗೊಳಿಸಲು ಕ್ರಾಂತಿಕಾರಿಗಳ ತಂಡಗಳು ಸದ್ದಿಲ್ಲದೆ ಕೆಲಸ ಮಾಡುತ್ತಿತ್ತು. ಇಂದೋ ನಾಳೆನೋ ಸ್ವಾತಂತ್ರ್ಯ ಸಿಗಬಹುದು ಎಂಬ ಕಲ್ಪನೆಯಲ್ಲಿದ್ದ ದೇಶದ ಜನರೆಲ್ಲಾ ಕಾಯುತ್ತಲೇ ನಿಂತಿದ್ದರು. ತಮ್ಮ ಜೀವದ ಹಂಗನ್ನು ತೊರೆದು ಬಾಂಬ್, ಪಿಸ್ತೂಲ್‍ಗಳನ್ನು ಅಸ್ತ್ರವಾಗಿರಿಸಿಕೊಂಡು ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಸನ್ನದ್ಧರಾಗಿ ನಿಂತಿದ್ದರು ಈ ಕ್ರಾಂತಿಕಾರಿಗಳು.

ಸ್ವಾತಂತ್ರ್ಯಕ್ಕೆ ಬಲಿಯಾಗಿದ್ದು ಕ್ರಾಂತಿಕಾರಿಗಳ ಸಂಖ್ಯೆ ಅದೆಷ್ಟೋ ಲಕ್ಷ-ಅವರಲ್ಲಿದ್ದದ್ದು ಮಾತ್ರ ಒಂದೇ, ಅದು ಸ್ವಾತಂತ್ರ್ಯದ ಲಕ್ಷ್ಯ…

ಕ್ರಾಂತಿಕಾರಿಗಳು ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬಂದು ನಿಲ್ಲುವುದು ಭಗತ್ ಸಿಂಗ್, ರಾಜ್ ಗುರು, ಸುಖದೇವ್, ನೇತಾಜಿ ಬೋಸ್, ಮದನ್ ಲಾಲ್ ದಿಂಗ್ರಾ… ಹೀಗೆ ಅನೇಕ ಕ್ರಾಂತಿಕಾರಿಗಳು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ದೇಶ ಪ್ರೇಮಿಗಳ ಮೈಮನ ಪುಳಕಿತಗೊಳ್ಳುತ್ತೆ. ಇಂದಿಗೂ ಅಂತಹ ಲಕ್ಷಾಂತರ ಕ್ರಾಂತಿಕಾರಿಗಳನ್ನು ನಾವು ಪೂಜಿಸಿಕೊಂಡು ಬರುತ್ತಿದ್ದೇವೆ. ಹೌದು… ಖಂಡಿತವಾಗಿಯೂ ಅವರಂದು ಪಿಸ್ತೂಲ್ ಹಿಡಿಯದಿದ್ರೆ ನಾವಿಂದು ಕನಿಷ್ಟ ಮೋಬೈಲ್ ಹಿಡಿಯುವ ಸ್ವಾತಂತ್ರ್ಯವೂ ಬಂದಿರುತ್ತಿರಲಿಲ್ಲ. ಹಾ… ಅಷ್ಟಕ್ಕೂ ಅಂದು ಅವರ ಲಕ್ಷ್ಯ ಇದ್ದದ್ದು ಸ್ವಾತಂತ್ರ್ಯದತ್ತವೇ ಹೊತರು ಜಾತ್ಯಾತೀತವಾದಿಗಳಂತೆ ಹೆಸರು ಮಾಡುವ ಉದ್ಧೇಶ ಇದ್ದೇ ಇರಲಿಲ್ಲ.

ಎಷ್ಟೂ ಸಾಹಸವಂತ ನೀನೇ “ಬಲವಂತಾ”…

ಅದೆಷ್ಟೋ ಕ್ರಾಂತಿಕಾರಿಗಳ ಹೆಸರನ್ನು ನಾವು ಕೇಳಿದ್ದೇವೆ. ಆದರೆ 19ನೇ ಶತಮಾನದಲ್ಲೇ ಕ್ರಾಂತಿಯ ಬೆಂಕಿಯನ್ನು ಹಚ್ಚಿದ್ದ ಈ ಮಹಾ ಪುರುಷನ ಕಥೆಯನ್ನು ಹೆಚ್ಚಿನವರು ಕೇಳಲಿಕ್ಕಿಲ್ಲ. ಮನೆಯಲ್ಲಿ ಆಸ್ತಿ ಅಂತಸ್ತು ತುಂಬಿ ತುಳುಕುತ್ತಿದ್ದರೂ, ಅದನ್ನೆಲ್ಲಾ ತ್ಯಜಿಸಿ ಭಾರತ ಮಾತೆಯ ದಾಸ್ಯಮುಕ್ತಿಗಾಗಿ, ಬ್ರಿಟಿಷರ ಪಾಲಿಗೆ ಸಿಂಹವಾಗಿ ಕಾಡಿದ್ದ ಇವರೇ “ವಾಸುದೇವ ಬಲವಂತ ಫಡಕೆ”…

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತ ತಣ್ಣಗಾಗಿ ಹೋಗಿದೆ, ಭಾರತೀಯರು ತಮ್ಮ ಗುಲಾಮರಾಗಿದ್ದಾರೆ ಎಂದೇ ಭಾವಿಸಿದ್ದ ಬ್ರಿಟಿಷರಿಗೆ ಭಾರತೀಯರ ಕಿಚ್ಚು ಇನ್ನೂ ಆರಿಲ್ಲ ಎಂದು ತೋರಿಸಿದ ಕ್ರಾಂತಿ ಪುರುಷ, ಸ್ವಾತಂತ್ರ್ಯದ ದಾಹದ ಕುದುರೆ, ವಾಸುದೇವ ಬಲವಂತ ಫಡಕೆ. ಆತನ ಮನೆಯಲ್ಲಿ ಎಲ್ಲವೂ ಇತ್ತು. ಹಣ, ಸುಖ, ಶಾಂತಿ, ನೆಮ್ಮದಿ ಹೀಗೆ ಎಲ್ಲವೂ ಇದ್ದು ಶ್ರೀಮಂತಿಕೆಯಲ್ಲಿ ತುಂಬಿ ತುಳುಕುತ್ತಿತ್ತು. ಆದರೆ ದೇಶದಲ್ಲಿ ಇದ್ಯಾವುದೂ ಇಲ್ಲ ಎಂಬ ಕಾರಣಕ್ಕೆ ಆತ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಗಿಳಿದ ವೀರ ಪುರುಷ.

ಚಿಕ್ಕಂದಿನಿಂದಲೇ ಅಜ್ಜ ಹಾಗೂ ತಂದೆಯಿಂದ ದೇಶಭಕ್ತಿಯ ಕಥೆಗಳನ್ನು ಕೇಳುತ್ತಾ ಬೆಳೆದ ವಾಸುದೇವನಿಗೆ ಹೇಗಾದರೂ ಮಾಡಿ ದೇಶವನ್ನು ದಾಸ್ಯಮುಕ್ತಿಗೊಳಿಸಬೇಕೆಂಬ ಹಂಬಲವಾಗಿತ್ತು. 1859ರಲ್ಲಿ ತನ್ನ ಕಾಲೇಜು ಶಿಕ್ಷಣದ ನಂತರ ಆತ ಪುಣೆಯ ಮಿಲಿಟರಿ ಫೈನಾನ್ಸ್ ಕಛೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಬ್ರಿಟಿಷ್ ಸರ್ಕಾರದ ಕೆಲಸವಾದರೂ ಒಳಗೊಳಗೇ ಆತನ ಸ್ವಾತಂತ್ರ್ಯದ ಆಸೆ ಬಲಗೊಳ್ಳುತ್ತಲೇ ಇತ್ತು. ಅದೇ ಸಮಯಕ್ಕೆ ವಾಸುದೇವನ ತಾಯಿ ಅನಾರೋಗ್ಯ ಪೀಡಿತರಾದಾಗ ಆತ ಕೆಲಸಕ್ಕೆ ರಜೆ ಕೇಳಿದ. ಬ್ರಿಟಿಷ್ ಅಧಿಕಾರಿಗಳ ಕೃಪಾಕಟಾಕ್ಷದಿಂದ ರಜೆ ದೊರೆಯುವ ವೇಳೆಗೆ ವಾಸುದೇವನ ತಾಯಿ ತೀರಿಕೊಂಡಿದ್ದರು. ತನ್ನ ತಾಯಿಯ ಅಂತಿಮ ದರ್ಶನಕ್ಕೂ ಅವಕಾಶ ನೀಡದ ಬ್ರಿಟಿಷರ ವಿರುದ್ಧ ಸಿಡಿದೆದ್ದ ವಾಸುದೇವ “ಇವರು ನನ್ನ ತಾಯಿಯನ್ನು ಮಾತ್ರವಲ್ಲ, ಭಾರತಮಾತೆಯಿಂದಲೂ ನಮ್ಮನ್ನು ದೂರಮಾಡುತ್ತಿದ್ದಾರೆ” ಎಂಬ ಭಾವದಿಂದ ಬ್ರಿಟಿಷರ ವಿರುದ್ಧ ಸಿಂಹದಂತೆ ತಿರುಗಿ ಬಿದ್ದಿದ್ದ. ಬ್ರಿಟಿಷರ ಅಡಿಯಲ್ಲಿ ಮಾಡುತ್ತಿದ್ದ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಭಾರತೀಯರ ಎಲ್ಲಾ ಸಮಸ್ಯೆಗಳಿಗೆ, ಸಂಕಟಗಳಿಗೆ ಮೂಲ ಕಾರಣ ಗುಲಾಮ ಗಿರಿಯ ಜೊತೆಗೆ ಶಿಕ್ಷಣದ ಕೊರತೆ ಎಂಬುವುದನ್ನು ಗುರುತಿಸಿ “ಪೂಣಾ ನೇಟಿವ್ ಇನ್ಸ್ಟಿಟ್ಯೂಷನ್” ಎಂಬ ವಿದ್ಯಾಕೇಂದ್ರವನ್ನು ಸ್ಥಾಪಿಸಿದ. ಇದೇ ಮುಂದೆ “ಮಹಾರಾಷ್ಟ್ರ ಎಜ್ಯುಕೇಷನ್ ಸೊಸೈಟಿ” ಎಂಬ ಹೆಸರಿನಿಂದ ವೈಭವಪೂರಿತವಾದ ರೂಪವನ್ನು ತಾಳಿತ್ತು.

ಕಾನೂನಿನ ಮೂಲಕ ಬ್ರಿಟಿಷರನ್ನು ಓಡಿಸುವುದು ಅಸಾಧ್ಯವೆಂದು ಭಾವಿಸಿದ ವಾಸುದೇವ ಬಲವಂತ ಫಡಕೆ ಸಶಸ್ತ್ರ ಕ್ರಾಂತಿಯೇ ದಾರಿ ಎಂದು ನಂಬಿದ್ದ. ಬಡವರೂ ಅನಕ್ಷರಸ್ಥರೂ ಆದ ರಾಮೋಶಿ ಎಂಬ ಗುಡ್ಡಗಾಡು ಜನರನ್ನು ಸಂಘಟಿಸಿ ಕ್ರಾಂತಿಗೆ ಪ್ರೇರೇಪಿಸಿದ. ಸಿಕ್ಕ ಸಿಕ್ಕಲ್ಲಿ ಬ್ರಿಟಿಷರಿಗೆ ಹಾಗೂ ಬ್ರಿಟಿಷ್ ಸೈನ್ಯಕ್ಕೆ ಮಾರಣಾಂತಿಕ ಹೊಡೆತ ನೀಡುತ್ತಾ ಬಂದಿದ್ದ. ವಾಸುದೇವನ ಬಂಡಾಯದಿಂದ ಬ್ರಟಿಷ್ ಸರ್ಕಾರ ಅಕ್ಷರಷಃ ನಲುಗಿ ಹೋಗಿತ್ತು. ಸರ್ಕಾರವು ಆತನ ಬಂಧನಕ್ಕೆ ಮುಂದಾಯ್ತು. ಆದರೆ ಆತ ಬ್ರಿಟಿಷರಿಂದ ತಪ್ಪಿಸಿಕೊಂಡು ತನ್ನ ಕ್ರಾಂತಿಕಾರಿ ಚಟುವಟಿಕೆಗಳನ್ನು ವಿಜ್ರಂಭಣೆಯಿಂದ ಮಾಡುತ್ತಿದ್ದ. ಸರ್ಕಾರ ಆತನನ್ನು ಹಿಡಿದು ಒಪ್ಪಿಸಿದವರಿಗೆ ನಾಲ್ಕು ಸಾವಿರ ರೂಗಳ ಬಹುಮಾನವನ್ನು ಘೋಷಿಸಿತ್ತು. ಆದರೆ ಈ ಬಲವಂತ ತುಂಬಾನೆ ಬುದ್ಧಿವಂತನಾಗಿದ್ದ. ತನ್ನ ಬಂಧನಕ್ಕೆ ಬೆಲೆ ಕಟ್ಟಿದ ಬ್ರಿಟಿಷರಿಗನೇ ಬೆಲೆಕಟ್ಟಿದ್ದ. ವಾಸುದೇವ ತನ್ನ ಬಂಧನಕ್ಕೆ ಘೋಷಿಸಿದ್ದ ಬೆಲೆಗಿಂತ ಹೆಚ್ಚಿನ ಬೆಲೆ ಘೋಷಣೆ ಮಾಡಿ ಗವರ್ನರ್ ಹಾಗೂ ಜಿಲ್ಲಾಧಿಕಾರಿಗಳನ್ನು ಕೊಂದು ಹಾಕುವಂತೆ ಘೋಷಿಸಿದ. ವಾಸುದೇವ ಬಲವಂತ ಫಡಕೆ ಎಂಬ ಯುವಕನ ಹೆಸರು ಸೂರ್ಯ ಮುಳುಗದ ಸಾಮ್ರಾಜ್ಯದ ಮೂಲೆ ಮೂಲೆಗೂ ಹರಡಿತ್ತು. ಹಲವಾರು ವರ್ತಮಾನ ಪತ್ರಿಕೆಯಲ್ಲಿ ಈ ಕ್ರಾಂತಿಯ ಕಥೆ ಪ್ರಕಟವಾಗಿತ್ತು.

ಆಗಿನ “ಅಮೃತ ಬಜಾರ್” ಪತ್ರಿಕೆಯು ವಾಸುದೇವನನ್ನು “ಹಿಮಾಲಯದ ಉತ್ತುಂಗ ಪುರುಷ” ಎಂದು ಗೌರವಿಸಿತ್ತು. ಇಂಗ್ಲೆಂಡಿನಲ್ಲಿ ಬಹು ಪ್ರಸಿದ್ಧವಾದ ವೃತ್ತ ಪತ್ರಿಕೆ, ಲಂಡನ್ ಟೈಮ್ಸ್‍ನಲ್ಲೂ ಫಡಕೆಯ ಪ್ರತಾಪದ ವರ್ಣನೆಯಾಯ್ತು. ಇಂಗ್ಲಿಷ್ ಪಾರ್ಲಿಮೆಂಟಿನಲ್ಲಿ ಈತನ ಚಟುವಟಿಕೆಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಯಿತು. ಹೇಗಾದರೂ ಮಾಡಿ ಈತನನ್ನು ಹಿಡಿದು ಶಿಕ್ಷಿಸಬೇಕೆಂದು ಬ್ರಿಟಿಷ್ ಸರ್ಕಾರದ ಕಟ್ಟಪ್ಪಣೆಯಾಯಿತು. ಅತ್ಯಂತ ಶ್ರೇಷ್ಟ ಹಾಗೂ ಶಕ್ತಿಶಾಲಿಯುತವಾದ 1800 ಸೈನಿಕರ ತಂಡವನ್ನು ಕಟ್ಟಿಕೊಂಡು ಬ್ರಿಟಿಷ್ ಅಧಿಕಾರಿ ಡೇನಿಯಲ್ ಎಂಬಾತನ ನೇತೃತ್ವದಲ್ಲಿ ವಾಸುದೇವನ ಬೇಟೆಗೆ ಹೊರಡಿತ್ತು. ಡೇನಿಯಲ್‍ನ ಸೇನೆಗೂ ಈ ಬಲವಂತ ಮಣ್ಣುಮುಕ್ಕಿಸಿಬಿಟ್ಟಿದ್ದ. ಆದರೆ ಕೆಲವು ವಿಶ್ವಾಸ ದ್ರೋಹಿಗಳು ಹಣದ ಆಸೆಗೆ ವಾಸುದೇವರ ಗುಪ್ತ ಸ್ಥಳದ ಮಾಹಿತಿಯನ್ನು ನೀಡಿದ್ದರಿಂದ ವಾಸುದೇವನನ್ನು ಡೇನಿಯಲ್ ಸೆರೆ ಹಿಡಿಯುತ್ತಾನೆ. ಬ್ರಿಟಿಷರು ವಾಸುದೇವನನ್ನು ಪುಣೆಗೆ ಕರೆತರುತ್ತಾರೆ. ಬ್ರಿಟಿಷರ ವಿರುದ್ಧ ಯುದ್ಧ ಸಾರಿದ್ದ ಈ ಮಹಾನ್ ವೀರ ಪುರುಷನನ್ನು ನೋಡಲು ಜನ ಕಿಕ್ಕಿರಿದು ಸೇರಿದ್ದರು. ಈ ಕ್ರಾಂತಿಕಾರಿ ವೀರನ ಮೇಲೆ ಹಲವು ಮೊಕದ್ದಮೆ ಹೂಡಿ ಜೀವಾವಧಿ ಶಿಕ್ಷೆ ವಿಧಿಸಿ ದೂರದ ಏಡನ್ ಜೈಲಿಗೆ ಕಳುಹಿಸಲಾಯಿತು. ಜೈಲಿನಲ್ಲಿ ಬ್ರಿಟಿಷರು ಈ ಕ್ರಾಂತಿಕಾರಿಗೆ ಚಿತ್ರ ಹಿಂಸೆ ನೀಡಿ ಅತ್ಯಂತ ಕ್ರೂರ ರೀತಿಯಲ್ಲಿ ನಡೆಸಿಕೊಂಡರು. ಕಾಲ ಕ್ರಮೇಣ ವಾಸುದೇವನ ಶರೀರ ಜರ್ಜರಿತವಾಯಿತು. ಬ್ರಿಟಿಷರ ಕರಾಳ ಹಿಂಸೆಯಿಂದೆ ಕಾಯಿಲೆಗೆ ತುತ್ತಾದ ಆತನ ದೇಹ ಅಸ್ತಿಪಂಜರವಾಗಿ ಹೋಗಿತ್ತು. ಪ್ರತಿದಿನವೂ ಭಾರತಾಂಬೇ ಭಾರತಾಂಬೇ ಎಂದು ಸ್ವಾತಂತ್ರ್ಯದ ಧ್ಯಾನವನ್ನು ಮಾಡುತ್ತಿದ್ದ, ಅದರ ದಾಹದಿಂದ ಕೊರಗುತ್ತಾ 1883ರಲ್ಲಿ ಫೆಬ್ರವರಿ 17ರಂದು ವಾಸುದೇವ ಬಲವಂತ ಫಡಕೆ ಎಂಬ ಅತಿ ದೊಡ್ಡ ಸಿಂಹ ಭಾರತ ಮಾತೆಯ ಮಡಿಲಲ್ಲಿ ಎರಗಿ ತನ್ನ ಜೀವವನ್ನೇ ಅರ್ಪಿಸಿತ್ತು.

ಕೇವಲ 38 ವರ್ಷಕ್ಕೆ ದೇಶದ ಸ್ವಾತಂತ್ರ್ಯದ ಕನಸಿನಲ್ಲಿ ಬಲಿದಾನ ಮಾಡಿದ ಈ ಕ್ರಾಂತಿಪುರುಷನ ಸ್ಮರಣೆ ದೇಶಭಕ್ತರಿಗೆ ಸ್ಪೂತಿದಾಯಕವಾಗಿದೆ. ಹೀಗೆ ಇನ್ನೂ ಅನೇಕ ಕ್ರಾಂತಿಕಾರಿಗಳು ನಮ್ಮ ದೇಶಕ್ಕೆ ಜೀವವನ್ನೇ ಕೊಟ್ಟಿದ್ದರು. ಆದರೆ ಇಂದಿನ ಯುವಜನತೆ ಆಧುನಿಕ ಮೋಹಕ್ಕೆ ಒಳಗಾಗಿ ಅಂತಹ ವೀರ ಪುರುಷರ ಕಥೆಯನ್ನೇ ಮರೆತುಬಿಟ್ಟಿದೆ. ಮತ್ತೆ ನೆನಪಿಸೋಣ ಕ್ರಾಂತಿಕಾರಿಗಳನ್ನು. ಜೈ ಅನ್ನೋಣ ಬಲವಂತನ ಮಹಾ ಸಾಹಸಗಳನ್ನು…

-ಸುನಿಲ್ ಪಣಪಿಲ

Tags

Related Articles

Close