ಪ್ರಚಲಿತ

ಭಾರತದ ಸುರಕ್ಷತೆಯ ಬಗ್ಗೆ ಆತಂಕ ಬೇಡ: ರಾಜನಾಥ್ ಸಿಂಗ್

ಭಾರತ ಮತ್ತು ಭಾರತ ದೇಶದ ಗಡಿ ಗಳಿಗೆ ಸಂಬಂಧಿಸಿದ ಹಾಗೆ ಯಾವುದೇ ಆತಂಕ ಬೇಡ, ಅದು ಸುರಕ್ಷಿತವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.

ಭಾರತೀಯ ಸಶಸ್ತ್ರ ಪಡೆಗಳ ಮೇಲೆ ಸಾರ್ವಜನಿಕರು ಸಂಪೂರ್ಣ ನಂಬಿಕೆ ಇರಿಸಬೇಕು. ಭಾರತದ ಹಿತಾಸಕ್ತಿಗೆ ಅನುಗುಣವಾಗಿ ಭಾರತದ ರಕ್ಷಣೆಗೆ ಸಂಬಂಧಿಸಿದ ಹಾಗೆ ಏನೆಲ್ಲಾ ಹೇಳಲು ಸಾಧ್ಯವೋ, ಅದೆಲ್ಲವನ್ನೂ ನಾನು ಹೇಳುತ್ತೇನೆ. ಆದರೆ ದೇಶದ ರಕ್ಷಣೆ, ಕಾರ್ಯತಂತ್ರಕ್ಕೆ ಸಂಬಂಧಿಸಿದ ಹಾಗೆ ಪ್ರಾಮುಖ್ಯತೆ ವಹಿಸಿದ ಹಲವಾರು ವಿಚಾರಗಳಿವೆ. ಅವೆಲ್ಲವುಗಳನ್ನೂ ಸಾರ್ವಜನಿಕವಾಗಿ ಹೇಳುವುದು ಅಸಾಧ್ಯ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ಐದು ವರ್ಷಗಳ‌ ಕಾಲ ರಕ್ಷಣಾ ಸಚಿವನಾಗಿ, ಅದಕ್ಕೂ ಮೊದಲು ಗೃಹ ಸಚಿವನಾಗಿದ್ದ ಅನುಭವದ ಆಧಾರದ ಮೇಲೆ ನಾನು ಈ ದೇಶದ ಜನರಿಗೆ ಭರವಸೆ ನೀಡುತ್ತೇನೆ. ನಮ್ಮ ದೇಶ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ದೇಶದ ಸುರಕ್ಷತೆಯ ಬಗ್ಗೆ ಜನರು ಯಾವುದೇ ಆತಂಕ ಪಡಬೇಕಿಲ್ಲ. ಈ ದೇಶದ ಯೋಧರ ಮೇಲೆ ಜನರು ನಂಬಿಕೆ ಇರಿಸಬೇಕು ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅಗ್ನಿವೀರ್ ಬಗೆಗೂ ಮಾತನಾಡಿದ್ದು, ದೇಶದ ಯುವ ಪಡೆ ರಾಷ್ಟ್ರ ರಕ್ಷಣಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಸಶಸ್ತ್ರ ಪಡೆಗಳಲ್ಲಿ ಯುವಕರು ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದಕ್ಕೆ ಅಗ್ನಿವೀರ್ ಯೋಜನೆ ಪೂರಕವಾಗಿದೆ. ಜೊತೆಗೆ ಈಗಾಗಲೇ ಇರುವ ಹಿರಿಯ ಯೋಧರು ಸಹ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಈಗ ಡಿಜಿಟಲ್, ತಂತ್ರಜ್ಞಾನದ ಯುಗ. ಭಾರತೀಯ ಯುವ ಜನತೆ ಸಹ ತಂತ್ರಜ್ಞಾನದ ಜ್ಞಾನ ಹೊಂದಿರಬೇಕು. ಅಂತಹವರಿಗೆ ಅಗ್ನಿವೀರ ಯೋಜನೆಯಲ್ಲಿ ಅವಕಾಶ ಇದೆ. ಈ ಯೋಜನೆ ಯುವಜನತೆಯ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರದು. ಈ ಯೋಜನೆಯಲ್ಲಿ ನೇಮಕವಾದವರ ಭವಿಷ್ಯ ಭದ್ರ ಪಡಿಸಲು ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Tags

Related Articles

Close