ಪ್ರಚಲಿತ

‘ಕೈ’ ನಾಯಕನಿಂದ ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಮಾತು: ಬೆವರಿಳಿಸಿದ ಪ್ರಲ್ಹಾದ ಜೋಶಿ

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡಿ ತಾವು ಪ್ರಚಾರ ಗಿಟ್ಟಿಸಿಕೊಳ್ಳುವುದು ಎಂದರೆ ಕಾಂಗ್ರೆಸ್‌ ಪಕ್ಷದ ನಾಯಕರಿಗೆ ಖಯಾಲಿ.

ತಮ್ಮ ಆಡಳಿತಾವಧಿಯಲ್ಲಿ ಕೇವಲ ನುಂಗಿ ನೀರ್ಕುಡಿಯುವುದರಲ್ಲೇ ತಲ್ಲೀನರಾಗುವ ಕಾಂಗ್ರೆಸ್ ನಾಯಕರು, ಚುನಾವಣೆ ಬಂತೆಂದರೆ ಸಾಕು ತಮ್ಮ ಇರುವಿಕೆಯನ್ನು ಗುರುತಿಸಿಕೊಳ್ಳಲು ಸರ್ಕಸ್ ಮಾಡುತ್ತಾರೆ. ಅದರಲ್ಲೂ ಬಿಜೆಪಿ, ಪ್ರಧಾನಿ ಮೋದಿ ಮತ್ತು ಅವರ ಆಡಳಿತದಲ್ಲಿ ಸಮರ್ಥವಾಗಿ ಮುಂದೆ ಸಾಗುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಏನೇನೋ ಒದರಿ, ಆ ಮೂಲಕ ನಕಾರಾತ್ಮಕವಾಗಿಯಾದರೂ ಸರಿ ತಾವು ಇದ್ದೇವೆ ಎನ್ನುವುದನ್ನು ತೋರಿಸಿಕೊಳ್ಳುವ ಚಟ. ಇಂತಹ ಚಟದ ಹಟಕ್ಕೆ ಬಿದ್ದು ಈ ಬಾರಿ ಸಾರ್ವಜನಿಕರ ಕೆಂಗಣ್ಣಿಗೆ ತುತ್ತಾದವರು ಕಾಂಗ್ರೆಸ್ ಪಕ್ಷದ ನಾಯಕ ಶಿವರಾಜ್ ತಂಗಡಗಿ.

ತಂಗಡಗಿ ಅವರು ಮಾತನಾಡುವ ಭರದಲ್ಲಿ ಪರಿಣಾಮವನ್ನು ಆಲೋಚನೆ ಮಾಡದೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದರು. ಪ್ರಧಾನಿ ಮೋದಿ ಮೋದಿ ಎಂದು ಮೋದಿಗೆ ಜೈಕಾರ ಹಾಕುವ ಯುವಕರ ಕಪಾಳಕ್ಕೆ ಹೊಡೆಯಿರಿ ಎನ್ನುವ ಮೂಲಕ ಪ್ರಧಾನಿ ಅಭಿಮಾನಿ ವಲಯದ ಆಕ್ರೋಶಕ್ಕೆ ಗುರಿಯಾಗಿದ್ದರು.

ತಂಗಡಗಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಿಡಿ ಕಾರಿದ್ದು, ಪ್ರಧಾನಿ ಮೋದಿ ಅವರನ್ನು ಬೆಂಬಲಿಸುವ ಹಿ ಬಾಲಕರ ಕಪಾಳಕ್ಕೆ ಹೊಡೆಯುವ ತಾಕತ್ತು ‘ಕೈ’ ಗೆ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಆಸ್ತಿ. ಈ ದೇಶದ ಪರಿವಾರಕ್ಕೆ ಸೇರಿದವರು. ದೇಶವಾಸಿಗಳನ್ನು ರಕ್ಷಣೆ ಮಾಡುವವರು. ಈ ಕಾರಣಕ್ಕೆ ಇಡೀ ದೇಶವೇ ಪ್ರಧಾನಿ ಮೋದಿ ಅವರಿಗೆ ಜಯಕಾರ ಹಾಕುತ್ತದೆ. ಅವರೆಲ್ಲರ ಕಪಾಳಕ್ಕೆ ಹೊಡೆಯುವ ತಾಕತ್ತು ಕಾಂಗ್ರೆಸಿಗರಿಗೆ ಇದೆಯೇ ಎಂದು ಅವರು ಕೇಳಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಜಯ ಕಾರ ಹಾಕುವವರಿಗೆ ಯಾವ ಕಾರಣಕ್ಕೆ ಕೆನ್ನೆಗೆ ಹೊಡೆಯಬೇಕು? ಈ ದೇಶವನ್ನು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಸಿದ್ದಾರೆ ಎನ್ನುವ ಕಾರಣಕ್ಕೆಯೇ? ಎಂದು ಅವರು ಕೇಳಿದ್ದಾರೆ. ಅವರು ಜನರ ಒಳಿತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದಕ್ಕಾಗಿ ಜನರು ಅವರಿಗೆ ಜಯಕಾರ ಹಾಕುತ್ತಾರೆ. ಜನರ ಜೀವನ ರೂಪಿಸಿದ ಕಾರಣಕ್ಕಾಗಿ ಅವರ ಕಪಾಳಕ್ಕೆ ಹೊಡೆಯಬೇಕೇ? ಎಂದು ಶಿವರಾಜ್ ತಂಗಡಗಿ ಅವರನ್ನು ಜೋಶಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ಈ ದೇಶದ ಪ್ರಧಾನಿಗಳಿಗೆ ಯಾವ ರೀತಿಯಲ್ಲಿ ಮರ್ಯಾದೆ ನೀಡಬೇಕು ಎನ್ನುವುದೇ ತಿಳಿದಿಲ್ಲ. ಅವರನ್ನು ಗೌರವಿಸುವ ಸೌಜನ್ಯ ಸಹ ಇಲ್ಲ. ಉಡಾಫೆಯಿಂದಲೇ ಕಾಂಗ್ರೆಸ್‌ನವರು ಮಾತನಾಡುತ್ತಾರೆ. ಅವರ ಈ ಮನಸ್ಥಿತಿಗೆ ಯುವ ಪಡೆಯೇ ಉತ್ತರ ನೀಡುತ್ತದೆ ಎಂದು ಜೋಶಿ ಹೇಳಿದ್ದಾರೆ. ಹಾಗೆಯೇ ಪ್ರಧಾನಿ ಮೋದಿ ಅವರ ವಿರುದ್ಧ ಇಂತಹ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಶಿವರಾಜ್ ತಂಗಡಗಿ ಅವರ ನಡೆ ಅಕ್ಷಮ್ಯ ಎಂದು ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags

Related Articles

Close