ಅಂಕಣಪ್ರಚಲಿತ

ಚಾಚಾ ನಹೀ – ಮಹಾತ್ಮಾ ಭೀ ನಹೀ! ಒಬ್ಬ ವೀರನ ದೂರದೃಷ್ಟಿಯ ಒಂದೇ ಮಾತು ಭಾರತವನ್ನು ಸ್ವಾತಂತ್ರ್ಯದ ಹೊಸ್ತಿಲಿಗೆ ತಂದು ನಿಲ್ಲಿಸಿತು! ಚಾಣಾಕ್ಷರಾದ ಕುತಂತ್ರಿ ಬ್ರಿಟಿಷರು ಸ್ವಾತಂತ್ರ್ಯ ಕೊಡಲು ಮುಂದಾದರು. ಅವರ್ಯಾರು ಗೊತ್ತೇ?

“1947ಕ್ಕೆ ಬಹಳ ಹಿಂದೆಯೇ ಗಾಂಧಿಯವರ ಕ್ವಿಟ್ ಇಂಡಿಯಾ ‌ಆಂದೋಲನ ನೆಲ ಕಚ್ಚಿತ್ತು. ಬ್ರಿಟಿಷರು ತರಾತುರಿಯಲ್ಲಿ ಭಾರತ‌ಬಿಟ್ಟು ಹೋಗಬೇಕಾದಂತಹ ಒತ್ತಡದ‌ಯಾವ ಸನ್ನಿವೇಶವೂ ಭಾರತದಲ್ಲಿರಲಿಲ್ಲ. ಹೀಗಿದ್ದರೂ ಬ್ರಿಟಷರು ನಿರ್ಣಯ‌ ಕೈಗೊಂಡಿದ್ದು ಯಾಕೆ ?”

ಇಂತಹದ್ದೊಂದು ಪ್ರಶ್ನೆಯನ್ನು ಅಂದಿನ ಬ್ರಿಟಿಷ್ ಪ್ರಧಾನಿಯವರಾಗಿದ್ದ ಆಟ್ಲೀ ಯವರಲ್ಲಿ ಸ್ವಾತಂತ್ರ್ಯದ ನಂತರ ಕೇಳಿದ್ದರು ಕೋಲ್ಕತ್ತಾದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದ ಪಿ.ಬಿ. ಚಕ್ರವರ್ತಿಯವರು. ಅವರ ಈ ಪ್ರಶ್ನೆಗೆ ಆಟ್ಲೀಯವರ ಉತ್ತರ ಬಹಳ ಸ್ಪಷ್ಟವಾಗಿತ್ತು.

“ನಾವು ಭಾರತ ಬಿಟ್ಟು ತೆರಳಲು ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದುದು ನೇತಾಜಿ ಸುಭಾಷರ ಕಾರ್ಯಸರಣಿ. ಆ ಅಭಿಯಾನ ಬ್ರಿಟಿಷ್ ಸರಕಾರಕ್ಕೆ ಭಾರತದಲ್ಲಿ ಲಭ್ಯವಿದ್ದ ಮೂಲ ಆಧಾರವನ್ನೇ ಅಲುಗಾಡಿಸಿತ್ತು. ಬ್ರಿಟಿಷ್ ಪ್ರಭುತ್ವದ ಬಗೆಗೆ ನೌಕಾಸೇನೆಯ ನಿಷ್ಠೆಯೂ ಕುಸಿದಿತ್ತು.”

ಮುಂದುವರಿದು ಚಕ್ರವರ್ತಿಯವರು ಕೇಳ್ತಾರೆ,”ಭಾರತದಿಂದ ನಿರ್ಗಮಿಸಬೇಕೆಂಬ ಬ್ರಿಟಿಷರ ನಿರ್ಣಯದಲ್ಲಿ ಗಾಂಧಿಯವರ ಕಾರ್ಯಸರಣಿಗಳ ಪ್ರಭಾವ ಎಷ್ಟುಮಟ್ಟಿಗೆ ಇದ್ದಿತು?”. ಈ ಪ್ರಶ್ನೆಯನ್ನು ಕೇಳಿ ಆ್ಯಟ್ಲಿ ಉಪಹಾಸಪೂರ್ವಕ ವ್ಯಂಗ್ಯ ನಗೆ ನಕ್ಕು ನಿಧಾನವಾಗಿ ಒಂದೊಂದು ಅಕ್ಷರವನ್ನೂ ಪ್ರತ್ಯೇಕವಾಗಿ ಒತ್ತಿ ಉತ್ತರಿಸಿದರು. “ಅತ್ಯಂತ‌ ಕನಿಷ್ಠ‌ ಪ್ರಮಾಣದ್ದು” (“ಮಿ-ನಿ-ಮಲ್”).

ಭಾರತಕ್ಕೆ ಲಭಿಸಿದ ಸ್ವಾತಂತ್ರ್ಯದ ರೂವಾರಿ ಯಾರೆಂಬ ಪ್ರಶ್ನೆಗೆ ಆ್ಯಟ್ಲಿಯವರ ಉತ್ತರದಿಂದ ಸ್ಪಷ್ಟವಾಗುತ್ತದೆ. ನೇತಾಜಿಯವರು ಕಟ್ಟಿದ ಸೇನೆಯು‌ ಭಾರತದಲ್ಲಿದ್ದ ಪಿರಂಗಿಗಳ ನಿದ್ದೆಕೆಡಿಸಿದ್ದೂ ಅಷ್ಟೇ ಸತ್ಯ. ಅಷ್ಟಕ್ಕೂ ಅವರ ಸೇನೆಗೆ ಒಂದು ಸರಿಯಾದ ದಿಕ್ಕನ್ನು ತೋರಿಸಿದ ವ್ಯಕ್ತಿ‌ ಯಾರು ಗೊತ್ತೇ?? ಹೌದು. ನೇತಾಜಿಯವರಿಗೆ ಸದಾ ಪ್ರೇರಣೆ ಕೊಡುತ್ತಿದ್ದ ವ್ಯಕ್ತಿ ಅವರು. ಅವರ ಕವಿತೆಗಳ ಮೂಲಕ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದವರು.. ವಿನಾಯಕ್ ದಾಮೋದರ್ ಸಾವರ್ಕರ್…..!

ಭಗತ್  ಸಿಂಗ್ ತನ್ನ ಮಾತೃಭೂಮಿಯ ಸ್ವತಂತ್ರಕ್ಕಾಗಿ ಪ್ರಾಣವನ್ನು ಅರ್ಪಿಸಿದ‌ ಕೆಲ ದಿನಗಳ ನಂತರ ಸಾವರ್ಕರ್ ಅವರನ್ನು ಭೇಟಿಯಾದರು ನೇತಾಜಿ. ಯುವ ಪೀಳಿಗೆಯ ನಾಯಕನನ್ನು ಕಂಡು ಅವರಿಗೆ ಬಹಳಷ್ಟು ಆನಂದವಾಯಿತು. ಕುಶಲೋಪರಿಯಾದ ನಂತರ ಸಾವರ್ಕರ್ ನೇರವಾಗಿ ಪ್ರಶ್ನಿಸಿದರು.. ‘ನಿಮ್ಮ ಮುಂದಿನ ಯೋಜನೆಗಳೇನು?’.

“ದೇಶದಾದ್ಯಂತ ಇರುವ ಬ್ರಿಟಿಷ್ ಪ್ರತಿಮೆಗಳನ್ನು ಒಡೆದುಹಾಕುವ ಆಲೋಚನೆ ಮಾಡಿದ್ದೇವೆ. ಈ ಆಂದೋಲನವನ್ನು ನಾನೇ ಹುಟ್ಚು ಹಾಕಲಿದ್ದೇನೆ” ಎಂದರು ಸುಭಾಷ್. ಸಾವರ್ಕರರಿಗೆ ಈ ಯೋಜನೆ ಸರಿಕಾಣಲಿಲ್ಲ. ‘ ಇಂಗ್ಲೆಂಡ್ ಈಗ ಯುದ್ಧದ ವಿಪತ್ತಿನಲ್ಲಿರುವಾಗ ನಿಮ್ಮಂಥನಾಯಕರು, ಇಲ್ಲಿ ಪ್ರತಿಮೆಗಳನ್ನು ಉರುಳಿಸುತ್ತಾ ಕೂರುವುದು ಸರಿಯಲ್ಲ’ ಎಂದರು.

‘ಇನ್ನೇನು ಮಾಡುವುದು? ದೇಶದಲ್ಲಿ ಅಶಾಂತಿಯ‌ ಕಿಚ್ಚು ಹಬ್ಬಿಸಲು ಇಂಥದ್ದೇನಾದರೂ ಮಾಡಲೇಬೇಕಲ್ಲವೇ?’ ಹತಾಶೆಯಿಂದ ನುಡಿದರು ನೇತಾಜಿ.

‘ಇಂತಹ ಅಶಾಂತಿಯಿಂದ ಪ್ರಯೋಜನವೇನು? ನಿಮ್ಮನ್ನು ಜೈಲಿಗಟ್ಟುತ್ತಾರೆಯಷ್ಟೇ. ಈ ಸಂದರ್ಭ ಜೈಲಿಗೆ ಹೋಗಿ ಕುಳಿತುಕೊಳ್ಶುವುದಲ್ಲ. ನೀವು ಇಂಗ್ಲೆಂಡಿನ ಶತ್ರುಗಳ ಗೆಳೆತನ ಸಾಧಿಸಿ, ಇಂಗ್ಲೆಂಡನ್ನು‌ ಮಣಿಸಿ’ ಎಂದರು, ಸಾವರ್ಕರ್.

ಬೋಸರಿಗೆ ಸಿಡಿಲು ಬಡಿದಂತಾಯಿತು. ಮೌನವನ್ನೇ ಕೆಲ ಸಮಯ ಪಾಲಿಸಿದರು. ಯೋಚನಾ ಮಗ್ನರಾದರು. ನಂತರ ಮಾತನಾಡುತ್ತಾ,” ಮುಂದಿನ ವರ್ಷ‌ ಜಪಾನ್ ಕೂಡ ಯುದ್ಧ ರಂಗಕ್ಕಿಳಿಯಲಿದೆ. ಅಲ್ಲಿಂದ ಭಾರತದ ಮೇಲೆ ಆಕ್ರಮಣ ‌ಮಾಡುವುದು ಸುಲಭ.ಅದೇ ವೇಳೆಗೆ ಭಾರತದಲ್ಲಿರುವ ಹಿಂದುಗಳಲ್ಲಿ ಸೈನೀಕರಣದ ಜಾಗೃತಿಯಾದರೆ, ನಮ್ಮೆಲ್ಲರ ಕಾರ್ಯಸಾಧನೆ ಪೂರ್ಣವಾದಂತೆಯೇ!” ಎನ್ನುತ್ತಾ ಸಾವರ್ಕರರಿಗೆ ಕೈಮುಗಿದು ಹೊರಟೇಬಿಟ್ಟರು. ಯಾವ ಕಡೆಗೆ‌ ತೆರಳಿದರು, ಎಲ್ಲಿದ್ದಾರೆನ್ನುವ ಸುಳಿವೇ ನಂತರ ಸಿಗಲಿಲ್ಲ. ಆದರೆ ಸಾವರ್ಕರ್ ಮಾತ್ರ ಸ್ಪಷ್ಟವಾದ‌ ಹೇಳಿಕೆಯನ್ನು ಕೊಟ್ಟಿದ್ದರು, “ಸುಭಾಷ್ ಎಲ್ಲಿಯೇ ಇರಲಿ, ಅವರಿಗೆ ಇಡೀ ರಾಷ್ಟ್ರವೇ ಕೃತಜ್ಞತೆ, ಸಹಾನುಭೂತಿ, ಶುಭಾಶಯಗಳು ಸಲ್ಲುತ್ತವೆ” ಎಂದರು.

ಇದೇ ಸಮಯಕ್ಕೆ ಜಗತ್ತೆಲ್ಲಾ ಸುತ್ತಾಡಿ ಸುಸಜ್ಜಿತವಾದ ಭಾರತೀಯ‌ ಸೇನೆಯೊಂದನ್ನು ಸುಭಾಷರು ಕಟ್ಟಿದ್ದರು. ಅನಂತರ ಟೋಕಿಯೋ ರೇಡಿಯೋದಿಂದ ಭಾರತೀಯರನ್ನುದ್ದೇಶಿಸಿ ಮಾತನಾಡಿದರು.

“ದೆಸೆಗೆಟ್ಟ ರಾಜಕಾರಣದ ಬುದ್ಧಿ ಚಾಪಲ್ಯದಿಂದಾಗಿ ಹಾಗೂ ದೂರದೃಷ್ಟಿಯ ಅಭಾವದಿಂದಾಗಿ ಕಾಂಗ್ರೆಸ್ ನ ನಾಯಕರೆಲ್ಲ , ಭಾರತೀಯ ಸೇನೆಯನ್ನು ಸೈನಿಕರನ್ನು ಬಾಡಿಗೆ ಸಿಪಾಯಿಗಳೆಂದು ಹಳಿಯುತ್ತಿರುವಾಗ, ವೀರಸಾವರ್ಕರರು ಮಾತ್ರ ನಿರ್ಭೀತರಾಗಿ ಭಾರತೀಯ ‌ತರುಣರಿಗೆ ಸೈನ್ಯಕ್ಕೆ ಸೇರಲು ಆದೇಶಿಸುತ್ತಿದ್ದಾರೆ. ಹಾಗೆ ಸೇನೆಗ ಸೇರಿದ ಯುವಕರೇ ನಮ್ಮ ಭಾರತೀಯ ರಾಷ್ಟ್ರೀಯ‌ ಸೇನೆಗೆ ಒಳ್ಳೆಯ ತರಬೇತಿ ಹೊಂದಿದ ಯೋಧರಾಗಿ ತಜ್ಞರಾಗಿ ಹೊರಬರುತ್ತಾರೆ ” ಎಂದರು. ಸಾವರ್ಕರರ ಪ್ರಭಾವ ಇವರ ಪ್ರತೀ ಮಾತಿನಲ್ಲೂ ವ್ಯಕ್ತವಾಗುತ್ತಿತ್ತು.

ಸುಭಾಷರು ಜಪಾನ್ ಬೆಂಬಲ ಪಡೆದು ಅಂಡಮಾನ್ ನಿಕೋಬಾರ್ ದ್ವೀಪಗಳನ್ನು ವಶಪಡಿಸಿದರು. ಅದಕ್ಕೆ ‘ಶಹೀದ್ ದ್ವೀಪ’, ‘ಸ್ವರಾಜ್ಯ ದ್ವೀಪ’ ಎಂದು ನಾಮಕರಣ‌ ಮಾಡಿದರು. ಕೂಡಲೇ ನೆಹರೂ ಹೇಳಿಕೆಯಿತ್ತು, ಸುಭಾಷರಾಗಲೀ ಅವರ ಸೈನ್ಯವಾಗಲೀ ಭಾರತಕ್ಕೆ ಕಾಲಿಟ್ಟರೆ ಅವರೊಡನೆ ಯುದ್ಧ ಮಾಡಿ ಹಿಂದಕ್ಕೆ ಓಡುಸುವೆನೆಂದು ಬಹಿರಂಗವಾಗಿ ಘೋಷಿಸಿ ತಮ್ಮ ಅನನ್ಯ‌ ದೇಶಭಕ್ತಿಯನ್ನು ಪ್ರಕಟಿಸಿದರು. ಮತ್ತೋರ್ವ ಮೀರ್‌ಜಾಫರ್ ಆಗ ಹೊರಟಿದ್ದರು ನೆಹರೂ.

ಇತ್ತ‌ ಸ್ವರಾಜ್ಯದ‌ ಸಂಕಲ್ಪದೊಂದಿಗೆ ಭಾರತೀಯ ಸೇನೆ ಬರ್ಮಾ ಗಡಿಯಲ್ಲಿ ಬ್ರಿಟಿಷ್ ಸೈನ್ಯವನ್ನು ಹಿಮ್ಮೆಟ್ಟಿಸಿ, ಮಣಿಪುರವನ್ನು ವಶಪಡಿಸಿ ಅಲ್ಲಿ ಭಾರತದ ಪತಾಕೆ ಹಾರಿಸಿತು. ಆದರೆ ವಿಧಿ ಕೈ ಕೊಟ್ಟಿತು. ಜಪಾನ್ ಯುದ್ಧದಲ್ಲಿ ಸೋತುಹೋಯಿತು. ನೇತಾಜಿ ವಿಮಾನಪಘಾತದಲ್ಲಿ ತೀರಿಕೊಂಡರು.

ಭಾರತೀಯ‌ ರಾಷ್ಟ್ರೀಯ ಸೇನೆಗೆ ಅಗ್ನಿಪರೀಕ್ಷೆ ಪ್ರಾರಂಭವಾಯಿತು. ಅವರ ವಿಚಾರಣೆ ನಡೆಯಿತು. ಅವರಿಗೆ ಶಿಕ್ಷೆ ನೀಡುವುದನ್ನು ಭಾರತೀಯ ‌ಸೇನೆ ವಿರೋಧಿಸಿತು. ಇಲ್ಲಿನ ಸೇನೆಯಲ್ಲಿ ಅಶಾಂತಿಯ ಹೊಗೆಯಾಡಿತು. ಅವರು ಕ್ರಾಂತಿಗೆ ಸಿದ್ಧರಾದರು. ಚಾಣಾಕ್ಷರಾದ ಕುತಂತ್ರಿ ಬ್ರಿಟಿಷರು ಸ್ವಾತಂತ್ರ್ಯ ಕೊಡಲು ಮುಂದಾದರು.

ಸಾವರ್ಕರ್ ಅವರ ಒಂದು ಯೋಜನೆ ಇಷ್ಟೆಲ್ಲಾ ಮಾಡಿಸಿತು. ಸ್ವಾತಂತ್ರ್ಯ‌ ತಂದುಕೊಡುವಲ್ಲಿಯವರೆಗೆ. ಅದಕ್ಕೋಸ್ಕರವೇ ಹೋರಾಡಿದ ಸುಭಾಷರನ್ನು ಏನನ್ನೋಣ?? ಬಹುಶ: ನಮ್ಮ ದೇಶದ ಪಿತಾಮಹ ಅಂತ‌ ಕರೆಯುವುದಾದರೆ ಅವರನ್ನೇ ಕರಿಯಬೇಕು. ಯಾಕೆಂದರೆ ಅವರ ಸ್ವಾರ್ಥಕ್ಕಾಗಿ ಇತರರನ್ನು‌ ಬಲಿಗೈದವರಲ್ಲ. ರಾಷ್ಟ್ರಕ್ಕಾಗಿ ನಿಸ್ವಾರ್ಥದಿಂದ ಹೋರಾಡಿ ಅಂತಿಮವಾಗಿ ತನ್ನ ರಕ್ತವನ್ನೇ ದೇಶಕ್ಕಾಗಿ ಅರ್ಪಿಸಿದ ಮಹಾನ್ ಚೇತನ….!

– ವಸಿಷ್ಠ

Tags

Related Articles

Close