ಅಂಕಣದೇಶಪ್ರಚಲಿತ

ಹುತಾತ್ಮರಾದ ಮೇಲೆ ಕೊಡುವ ‘ಪರಮವೀರ ಚಕ್ರ’ವನ್ನ ಈ ಯೋಧಬದುಕಿದ್ದಾಗಲೇ ದಕ್ಕಿಸಿಕೊಂಡಿದ್ದ!!

ರೈಫಲ್ ಮ್ಯಾನ್ ಸಂಜಯ್ ಕುಮಾರ್!!!!

ಸಂಜಯ್ ಕುಮಾರ್ ಛತ್ತೀಸ್ಗಢದ ಬಿಲಾಸ್ಪುರ್ ಜಿಲ್ಲೆಯ ಬೈಕಣ್ ಗ್ರಾಮದಲ್ಲಿ ಜನಿಸಿದರು. ಸಂಜಯ್ ಅವರ ಚಿಕ್ಕಪ್ಪ ಕೂಡ ಭಾರತೀಯ ಸೇನೆಯಲ್ಲಿದ್ದು, 1965ರ ಇಂಡೋ-ಚೀನಾ ಯುದ್ಧದಲ್ಲಿ ಭಾಗವಹಿಸಿದ ಹೆಗ್ಗಳಿಕೆ ಪಡೆದಿದ್ದಾರೆ. 1996ರಲ್ಲಿ ಎಸ್ಎಸ್ಎಸಲ್ಸಿ ಪರೀಕ್ಷೆ ಪಾಸಾದ ಸಂಜಯ್ ಕುಮಾರ್, ಮುಂದೆ ಸೈನ್ಯ ಸೇರಿ 13 ಜೆಕ್ ರೈಫಲ್ಸ್ನಲ್ಲಿ ಸಿಪಾಯಿಯಾಗಿ ನಿಯುಕ್ತಿಗೊಂಡರು.

1999ರ ಜುಲೈ 4ರಂದು ನಡೆದ ಕಾರ್ಯಾಚರಣೆ ಯುದ್ಧದ ಇತಿಹಾಸದಲ್ಲಿ ಮಹತ್ವಪೂರ್ಣ ಘಟನೆಯೊಂದು ನಡೆಯುವುದಿತ್ತು. ಏಕೆಂದರೆ ಭಾರತೀಯ ಪಡೆಗಳು ಅಂದು ಪಾಯಿಂಟ್ 4875 ಅನ್ನು ವಶಪಡಿಸಿಕೊಳ್ಳಲು ಹೊರಟಿದ್ದವು.1999ರಲ್ಲಿ ಕಾರ್ಗಿಲ್ ಯುದ್ಧ ಪ್ರಾರಂಭವಾದಾಗ 13 ಜೆಕ್ ರೈಫಲ್ಸ್ ಬಟಾಲಿಯನ್ಗೆ ದರಾಜ್ ಬಳಿಯ ಗುಮರಿ ಬೇಸ್ ಕ್ಯಾಂಪ್ ರಕ್ಷಿಸುವ ಹೊಣೆ ನೀಡಲಾಯ್ತು.

70 ಡಿಗ್ರಿಯಲ್ಲಿ ಬೆಟ್ಟವನ್ನು ಭಾರತೀಯ ಪಡೆಗಳು ಏರಬೇಕಿತ್ತು. ಕೊರೆಯುವ ಚಳಿಯಲ್ಲಿ ಹಗಲು ರಾತ್ರಿಯೆನ್ನದೆ ಬೆಟ್ಟವನ್ನು ಹತ್ತಬೇಕಿತ್ತು. ಶತ್ರುಗಳೊಡನೆ ಮುಖಾಮುಖಿಯಾಗುವ ಅರಿವಿದ್ದರೂ ಪಡೆಗಳು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದವು. ಶತ್ರು ಸಂಖ್ಯೆಯ ಬಲದ ಅರಿವಿಲ್ಲ. ಭಾರತೀಯ ಪಡೆಯ 13ನೇ ಜಮ್ಮು ಮತ್ತು ಕಾಶ್ಮೀರ ರೈಫಲ್ಸಿನ ಚಾರ್ಲಿ ಕಂಪನಿಯ ಹತ್ತು ಜನ ಯೋಧರ ತಂಡ ಅದರ ಉಸ್ತುವಾರಿಯನ್ನು ಹೊತ್ತು ಬೆಟ್ಟ ಏರುತ್ತಿತ್ತು.
ರೈಫಲ್ ಮ್ಯಾನ್ ಗಳ ಈ ತಂಡದಲ್ಲಿದ್ದ ಸಂಜಯ್ ಕುಮಾರ್ ನಿದ್ರೆ ಮಾಡದೆ ಬರೋಬ್ಬರಿ 30 ಗಂಟೆಗಳಾಗಿತ್ತು. ಅಷ್ಟರಲ್ಲಿ ಶತ್ರುಗಳಿಂದ ಗುಂಡಿನ ದಾಳಿ, ಭಾರತೀಯ ಯೋಧರಿಂದ ಪಾಕ್ ಬಂಕರುಗಳತ್ತ ಗ್ರೆನೇಡ್ ಎಸೆತ. ಆದರೂ ನಾನಾ ಕಡೆಗಳಿಂದ ಗುಂಡುಗಳು ಹಾರಿ ಬರುತ್ತಲೇ ಇದ್ದವು. ಸಂಜಯ್ ಕುಮಾರ್ ಗೆಳೆಯರು ಒಬ್ಬೊಬ್ಬರಾಗಿ ಉರುಳುತ್ತಿದ್ದರು. ಆದರೆ ಗಾಯಗೊಂಡ ಸಂಜಯ್ ಕುಮಾರ್ ಗುಂಡಿನ ದಾಳಿಯನ್ನು ನಿಲ್ಲಿಸಲಿಲ್ಲ. ಶತ್ರುಗಳತ್ತ ಗುಂಡು ಹಾರಿಸುತ್ತಾ ಮುನ್ನುಗ್ಗುತ್ತಿದ್ದ ಸಂಜಯ್ ಕುಮಾರ್ ಅವರ ಕಾಲಿಗೆ ನಾಲ್ಕು ಹಾಗೂ ಸೊಂಟದ ಭಾಗದಲ್ಲಿ ಒಂದು ಗುಂಡು ತಗುಲಿತು. ಕೂಡಲೇ ಕುಸಿದು ಬಿದ್ದ ಸಂಜಯ್ ಪಕ್ಕದ ಬಂಡೆಯ ಕೆಳಗೆ ಅವಿತು, ಶತ್ರುಗಳ ಮೇಲೆ ದಾಳಿ ಮುಂದುವರೆಸಿದರು.

ಶತ್ರು ಸೈನ್ಯದ ಬಂಕರ್ ನಾಶ ಮಾಡದೆ ಯುದ್ಧ ಗೆಲ್ಲುವುದು ಅಸಾಧ್ಯ ಎಂದು ಅರಿತ ಸಂಜಯ್ ಕುಮಾರ್,ಗಂಭೀರವಾಗಿ ಗಾಯಗೊಂಡಿದ್ದರೂ ಮುನ್ನುಗ್ಗಿ ಶತ್ರು ಬಂಕರ್ನತ್ತ ಬಾಂಬ್ ಎಸೆದರು.ನೋಡ ನೋಡುತ್ತಿದ್ದಂತೆ ಶತ್ರುಗಳ ಬಂಕರ್ ಸ್ಫೋಟಗೊಂಡು ಅದರಲ್ಲಿದ್ದ ಪಾಕ್ ಸೈನಿಕರು ಹೆಣವಾದರು. ಕೊನೆಗೆ ಅಧಿಕಾರಿಗಳಿಂದ ಶತ್ರು ಸೈನಿಕರಾರೂ ಉಳಿದಿಲ್ಲ ಎಂದು ಮನವರಿಕೆ ಮಾಡುವವರೆಗೆ ಸಂಜಯ್ ಕುಮಾರ್ ಗುಂಡು ಹಾರಿಸುತ್ತಲೇ ಇದ್ದರು. ಆದಾಗಲೇ ಅವರ ಕೈ ಜರ್ಝರಿತವಾಯಿತು. ಪಾಯಿಂಟ್ 4875 ಭಾರತೀಯರ ವಶವಾಗಿತ್ತು. ಅಸಾಧಾರಣ ಪರಾಕ್ರಮದಿಂದ ಶತ್ರುಗಳಿಗೆ ಮುಖಾಮುಖಿಯಾಗಿ ಮುನ್ನುಗ್ಗಿದ ಸಂಜಯ್ ಕುಮಾರ್ ತನ್ನ ಜೀವವನ್ನು ಲೆಕ್ಕಿಸದೆ ಪಾಕ್ ಬಂಕರಿನ ಅತೀ ಸಮೀಪಕ್ಕೆ ಸಾಗಿ ಅದನ್ನು ವಶಪಡಿಸಿಕೊಂಡರು . ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ವಶವಾಗಿತ್ತು. ಸಂಜೆ ಐದೂವರೆ ಗಂಟೆಗೆ ಪಾಯಿಂಟ್ 4875 ವಶವಾಗಿತ್ತಾದರೂ ಕೇಂದ್ರದಿಂದ ಸಂದೇಶ ಬಂದಿರಲಿಲ್ಲ. ಸ್ವತಃ ಪ್ರಥಮ ಚಿಕಿತ್ಸೆಗಳನ್ನು ಮಾಡಿಕೊಂಡರು, ಪೈನ್ ಕಿಲ್ಲರ್ ಗಳನ್ನು ತಿಂದರು. ಅಂಥ ಜಾಗಕ್ಕೆ ಸ್ಟ್ರೆಕ್ಛರ್ ಗಳನ್ನು ಕೊಂಡೊಯ್ಯುವುದೂ ಸುಲಭವಿರಲಿಲ್ಲ. ಮರುದಿನ ಬೆಳಗ್ಗೆ 9.30ಕ್ಕೆ ಗುಮ್ರಿಯ ಆಸ್ಪತ್ರೆಗೆ ಸಂಜಯ್ ಕುಮಾರರನ್ನು ಸಾಗಿಸಲಾಯಿತು. ಅವರ ದೇಹದಲ್ಲಿ ಇನ್ನೂ ಐದು ಬುಲೆಟ್ ಗಳಿದ್ದವು. ಐದು ಬುಲೆಟ್ ಗಳನ್ನು ದೇಹದಲ್ಲಿಟ್ಟುಕೊಂಡೇ ಸಂಜಯ್ ಕುಮಾರ್ ಪಾಯಿಂಟ್ 4875 ವಶಕ್ಕೆ ಸೆಣಸುತ್ತಿದ್ದರು.

ಯುದ್ಧ ಭೂಮಿಯಲ್ಲಿ ತೋರಿದ ಅಪ್ರತಿಮ ಶೌರ್ಯಕ್ಕಾಗಿ ಭಾರತ ಸರ್ಕಾರ ಸಂಜಯ್ ಕುಮಾರ್ ಅವರಿಗೆ ಪರಮವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ.

ಬದುಕಿದ್ದಾಗಲೇ ‘ಪರಮವೀರ ಚಕ್ರ’ ಪುರಸ್ಕಾರ ಪಡೆದ ಮೂವರಲ್ಲಿ ಇವರೂ ಒಬ್ಬರು.

ಕಾರ್ಗಿಲ್ ಉಳಿಸಿಕೊಳ್ಳುವುದಕ್ಕಾಗಿ ಅಂದು 527 ಸೈನಿಕರು ತಮ್ಮ ಜೀವವನ್ನೇ ಬಲಿ ಕೊಟ್ಟರು. 1363 ಸೈನಿಕರು ಊನಗೊಂಡರು, ಅಂಗಾಂಗ ಕಳೆದುಕೊಂಡರು. ಮೇಜರ್ ಪದ್ಮಪಾಣಿ ಆಚಾರ್ಯ ತೀರಿಕೊಂಡಾಗ ಅವರ ಪತ್ನಿಯ ಹೊಟ್ಟೆಯಲ್ಲಿ ಚೊಚ್ಚಲ ಮಗು ಬೆಳೆಯುತ್ತಿತ್ತು, ಕ್ಯಾಪ್ಟನ್ ವಿಕ್ರಂ ಬಾತ್ರಾ ಮಡಿದಾಗ ಅವರ ಭಾವಿ ಪತ್ನಿ ವಿವಾಹಕ್ಕೆ ತಯಾರಿ ನಡೆಸುತ್ತಿದ್ದಳು, ಲೆಫ್ಟಿನೆಂಟ್ ಹನೀಫುದ್ದೀನ್ ಹುತಾತ್ಮನಾಗುವುದರೊಂದಿಗೆ ಆತನ ವಿಧವೆ ತಾಯಿ ಇದ್ದ ಒಬ್ಬಮಗನನ್ನೂ ಕಳೆದುಕೊಂಡಳು, ಕ್ಯಾಪ್ಟನ್ ಕೆ. ಕ್ಲಿಫೋರ್ಡ್ ನೊಂಗ್ರುಮ್ ಮಡಿದಾಗ ಒಂದಿಡೀ ಮೇಘಾಲಯ ರಾಜ್ಯವೇ ಕಣ್ಣೀರ ಕಡಲಾಗಿತ್ತು.
ನಮ್ಮ ರಾಷ್ಟ್ರದ ರಕ್ಷಣೆಗೆ ತಮ್ಮ ಎಲ್ಲವನ್ನೂ ತ್ಯಾಗ ಮಾಡುವ ಯೋಧರೇ ನಮ್ಮ ಸಹೋದರ-ಸಹೋದರಿಯರು. ಅವರೇ ನಮ್ಮ ಆಪತ್ಭಾಂಧವರು. ಅವರೇ ನಮ್ಮ ಹಿತೈಷಿಗಳು. ಅವರೇ ನಮ್ಮ ಜವಾನರು.
– ಮಹೇಶ್

Tags

Related Articles

Close