ಪ್ರಚಲಿತ

ಸಮುದ್ರ ಸಿಂಹಗಳೆಂದೇ ಖ್ಯಾತಿವೆತ್ತ ನೌಕಾ ಸೇನೆಯ ಕಮಾಂಡೋ “ಮಾರ್ಕೋಸ್” ರಣಭೂಮಿಗೆ ಇಳಿದರೆ ಸಾಕು ಶತ್ರುಗಳು ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗಿ ಹೋಗುವರು!!

ಭಾರತೀಯ ಭೂ ಸೈನ್ಯದಲ್ಲಿ ಗೋರ್ಖಾ ರೆಜಿಮೆಂಟ್ ಎಂದರೆ ಹೇಗೆ ಶತ್ರುಗಳು ಥರಗುಟ್ಟುವರೋ ಅಂತೆಯೇ ನೌಕಾ ಸೇನೆಯ “ಮಾರ್ಕೋಸ್” ಎಂದರೆ ಸಾಕು ಶತ್ರುಗಳ ಹೃದಯವೇ ಬಾಯಿಗೆ ಬಂದಂತಾಗುವುದು. ಜಲ, ಆಕಾಶ, ಅಗ್ನಿ, ಭೂಮಿ ಮತ್ತು ವಾಯು, ನೀವು ಹೆಸರಿಸಿ, ಅಲ್ಲಿ ನಮ್ಮ ಮಾರ್ಕೋಸ್ ಹಾಜರಿರುತ್ತಾರೆ ಮಾತ್ರವಲ್ಲ ಶತ್ರುಗಳನ್ನು ನರಕದ ದ್ವಾರಕ್ಕೆ ಕಳುಹಿಸುತ್ತಾರೆ. ಹುಟ್ಟಿದ್ದೇ ದೇಶ ಸೇವೆಗಾಗಿ, ಬದುಕುವುದೇ ಶತ್ರು ಸಂಹಾರಕ್ಕಾಗಿ. ಸಾಯಲು ಸದಾ ಸಿದ್ದ ಆದರೆ ಸಾವು ಹತ್ತಿರವೂ ಸುಳಿಯದೆನ್ನುವ ಮಾರ್ಕೋಸ್ ಅವರ ಸಿದ್ದಾಂತ “The Few The Fearless” ಎನ್ನುವುದೇ ಆಗಿದೆ. ನಿಜ, ಭಯವೆಂದರೆ ಏನೆಂದು ಅವರಿಗೆ ಗೊತ್ತೆ ಇಲ್ಲ!! ಅವರಿಗೆ ಗೊತ್ತಿರುವುದು ಒಂದೆ ಶತ್ರು ಸಂಹಾರ.

1985 ರಲ್ಲಿ ಭಾರತೀಯ ನೌಕಾ ಪಡೆಗೆ ಸೇರಿಕೊಂಡ ಮಾರ್ಕೋಸ್ ಅಥವಾ ಸಮುದ್ರ ಕಮಾಂಡೋ ಆಗುವುದೆಂದರೆ ಹಲ್ವಾ ತಿಂದಷ್ಟು ಸುಲಭದ ಮಾತಲ್ಲ. ಗಟ್ಟಿ ಗುಂಡಿಗೆ ಇರುವವರಷ್ಟೇ ಮಾರ್ಕೋಸ್ ಕಮಾಂಡೋ ಆಗಲು ಸಾಧ್ಯ. ಮಾರ್ಕೋಸ್ ತರಬೇತಿಯೆಂದರೆ ಹಾಗೆ. ಮೃತ್ಯುವಿನ ಬಾಯಿಗೆ ಹೋಗಿ ಹಿಂದೆ ಬರುವಂತೆ ಇರುತ್ತದೆ ಇವರ ತರಬೇತಿ. ಮಾರ್ಕೋಸ್ ಆಗಬಯಸುವವರಲ್ಲಿ 80% ಆಕಾಂಕ್ಷಿಗಳು ಅಯ್ಕೆಯ ಸುತ್ತಿನಲ್ಲೇ ಹೊರಹೋಗುತ್ತಾರೆಂದರೆ ಆಯ್ಕೆ ಪ್ರಕ್ರಿಯೆಯೇ ಎಷ್ಟು ಕಠಿಣವಾಗಿರಬೇಕು? ಕಮಾಂಡೋ ಆಗಲು ಆಯ್ಕೆ ಆದಂತಹವರಿಗೆ ವಿಶೇಷತೆಗನುಗುಣವಾಗಿ ಒಂದೂವರೆ ಇಂದ ಮೂರು ವರ್ಷದವರೆಗೆ ಕಠಿಣ ತರಬೇತಿ ಇರುತ್ತದೆ. ತರಬೇತಿಯ ಮೊದಲೆನೇ ಐದು ವಾರಗಳನ್ನು “ನರಕದ ವಾರ” ಎನ್ನುತ್ತಾರೆಂದರೆ ಅಲ್ಲಿ ಸಾಕ್ಷಾತ್ ನರಕ ದರ್ಶನ ಮಾಡಿಸುತ್ತಾರೆಂದರ್ಥ.

ನರಕ ಸದೃಶ ತರಬೇತಿಯಿಂದ ಪಾರಾಗಿ ಬರುವುದರಿಂದಲೇ ಅವರಿಗೆ ಮೃತ್ಯುವಿನ ಭಯವೇ ಇರುವುದಿಲ್ಲ. ಈ ನರಕದ ವಾರದಲ್ಲಿ ಐದು ದಿನಗಳಲ್ಲಿ ಕೇವಲ ನಾಲ್ಕೇ ಘಂಟೆ ನಿದ್ದೆ ಮಾಡಲು ಬಿಡಲಾಗುತ್ತದೆ, ಇದರ ಜೊತೆಗೆ ಶಾರೀರಿಕವಾಗಿ ಈ ಕಮಾಂಡೋಗಳನ್ನು ಬೆಂಡಿತ್ತಿ ಬಿಡಲಾಗುತ್ತದೆ. ಪ್ರಪಂಚದ ಅತ್ಯಂತ ಕಠಿಣ ತರಬೇತಿಯೆಂದರೆ ಅದೆ ಮಾರ್ಕೋಸ್ ತರಬೇತಿ. ಅದೂ ಭಾರತದ ಮಾರ್ಕೋಸ್ ತರಬೇತಿ ಜಗತ್ತಿನಲ್ಲೇ ಕ್ಲಿಷ್ಟವಾದದ್ದು. ಅಮೇರಿಕಾದಲ್ಲಿ ನಡೆದ ‘ನೇವೀ ಸೀಲ್’ ಎಂಬ ನೌಕಾ ಕಾರ್ಯಕ್ರಮದಲ್ಲಿ ವಿಶ್ವದ ಎಲ್ಲಾ ಕಮಾಂಡೋಗಳನ್ನು ಹಿಂದಿಕ್ಕಿ ಭಾರತೀಯ ಕಮಾಂಡೋ ಮೊದಲನೇ ಸ್ಥಾನದ ಗೌರವ ಪಡೆದಿದ್ದಾನೆಂದರೆ ನಮ್ಮ ಮಾರ್ಕೋಸ್ ಕಮಾಂಡೋಗಳ ತಾಕತ್ತು ಇನ್ನೆಂಥದ್ದಿರಬೇಕು? ಅದಕ್ಕೆ ಅಲ್ಲವೇ ಭಾರತೀಯ ಮಾರ್ಕೋಸ್ ಎಂದರೆ ಶತ್ರುಗಳು ಥರಗುಟ್ಟುವುದು. ಸಮುದ್ರ, ಪರ್ವತ, ಕಾಡು, ಮರಳುಗಾಡು ಮತ್ತು ನೌಕಾನೆಲೆ ಅಭಿಮನ್ಯುವಿನಲ್ಲಿ ತರಬೇತಿ ಹೊಂದುವ ಮಾರ್ಕೋಸ್ ಶೌರ್ಯಕ್ಕೆ ಇನ್ನೊಂದೇ ಹೆಸರು.

ಪ್ರಪಂಚದ ಅತ್ಯಾಧುನಿಕ ಶಸ್ತ್ರಗಳು ಮಾರ್ಕೋಸ್ ಬಳಿಯಲ್ಲಿರುತ್ತದೆ. ಇವರು ಸಮುದ್ರದಲ್ಲೂ ಯುದ್ದ ನಿರತರಾಗಿರುವುದರಿಂದ ಇಸ್ರೇಲಿನ ಅತ್ಯಾಧುನಿಕ Tavor TAR-21 ರೈಫಲ್ ಅನ್ನು ಇವರಿಗೆ ನೀಡಲಾಗಿದೆ. ಘಂಟೆಗಟ್ಟಲೆ ಹೊಂಚು ಹಾಕಿ ಶತ್ರುಗಳ ಮೇಲೆ ಹುಲಿಯಂತೆ ಛಂಗನೆ ಎಗರುವ ಇವರ ತಂತ್ರಕ್ಕೆ ಪ್ರತಿತಂತ್ರವೇ ಇಲ್ಲ. ದೇಶದ ಎಲ್ಲಾ ಸೈನ್ಯ ತರಬೇತಿ ಕೇಂದ್ರ ಗಳಲ್ಲಿ ತರಬೇತಿ ಹೊಂದುವ ಏಕೈಕ ಕಮಾಂಡೋಗಳು ಮಾರ್ಕೋಸ್. ಇವರ ಸಾಹಸದ ದಂತಕಥೆಗಳು ವಿಶ್ವದ ಮೂಲೆ ಮೂಲೆಯಲ್ಲೂ ಹರಡಿದೆ. ಇಂಗ್ಲಿಷ್ ಚಲನಚಿತ್ರಗಳಲ್ಲಿ ಹೇಗೆ ಶತ್ರು ಪಾಳಯಕ್ಕೆ ನುಗ್ಗಿ ಅವರ ನೆಲೆಗಳನ್ನು ಉಡೀಸ್ ಮಾಡುವುದನ್ನು ತೋರಿಸುತ್ತಾರೋ ಅದನ್ನು ನಿಜದಲ್ಲಿ ನಮ್ಮ ಮಾರ್ಕೋಸ್ ಮಾಡುತ್ತಾರೆ.

ಶ್ರೀಲಂಕಾದ ಆಪರೇಷನ್ ಪವನ್ ಸಮಯದಲ್ಲಿ ಸಮುದ್ರದಲ್ಲೆ ಹದಿನೆರಡು ಕಿಲೋಮೀಟರ್ ಈಜುತ್ತಾ ಸಾಗಿ ಎಲ್.ಟಿ.ಟಿ.ಇ ಯ ಹಡಗನ್ನು ಉಡಾಯಿಸಿ ಅವರು ದಾಳಿ ನಡೆಸಿದಾಗ ಪ್ರತಿದಾಳಿ ನಡೆಸಿ ಶತ್ರುಗಳಿಗೆ ಮಣ್ಣುಮುಕ್ಕಿಸಿ ವಾಪಾಸಾಗಿದ್ದರು ಸಮುದ್ರ ಸಿಂಹಗಳು. . ಕಾರ್ಗಿಲ್ ಯುದ್ದದಲ್ಲಿ ಸೀಮಾ ರೇಖೆಯನ್ನು ದಾಟಿ ಪಾಕಿಸ್ತಾನದ ನುಸುಳುಕೋರರನ್ನು ಹಿಂದಿನಿಂದ ಗುಂಡಿಕ್ಕಿ ಕೊಂದರವರು ಮಾರ್ಕೋಸ್. ಮಾಲ್ದೀವ್ ನಲ್ಲಿ ರಾಜಕೀಯ ಅಸ್ಥಿರತೆ ಸೃಷ್ಠಿಸಿ ಓಡಿಹೋದ ನಲ್ವತ್ತಾರು ಸೈನಿಕರು ಮತ್ತು ಬಂಧಕರ ಜಹಾಜನ್ನು ಬೆನ್ನಟ್ಟಿ ಹಿಡಿದು ತಂದವರು ಮಾರ್ಕೋಸ್. ಮಂಬೈ ದಾಳಿಯ ಸಮಯದಲ್ಲಿ ಒಬೆರಾಯ್ ಮತ್ತು ತಾಜ್ ಹೋಟಲಿನಲ್ಲಿ ಅಡಗಿದ್ದ ಉಗ್ರರನ್ನು ಹುಡುಕಿ ಕೊಂದು ಹಾಕಿದ ಕಾಲ ಭೈರವರು ಇವರು. ಕಾಶ್ಮೀರದ ಉಗ್ರರು ಇವರನ್ನು “ದಾಢೀವಾಲಾ ಫೌಜ್” ಅಂದರೆ “ಗಡ್ಡಧಾರಿ ಸೈನ್ಯ” ಎಂದು ಕರೆಯುತ್ತಾರಂತೆ. ವೇಷ ಬದಲಾಯಿಸಿ ಶತ್ರುಗಳಿಗೆ ಚಳ್ಳೆಹಣ್ಣು ತಿನ್ನಿಸಿ ಅವರ ಹೆಡೆಮುರಿ ಕಟ್ಟುವುದರಲ್ಲಿ ನಿಸ್ಸೀಮರು ಈ ಮಾರ್ಕೋಸ್.

ಪ್ರಪಂಚದ ಯಾವುದೇ ಸೈನ್ಯಕ್ಕೂ ಮಾರ್ಕೋಸ್ ಕಮಾಂಡೋಗಳನ್ನು ಸೋಲಿಸುವುದು ಸಾಧ್ಯವಾಗಿಲ್ಲ. ಎಂಥದ್ದೇ ವಿಷಮ ಪರಿಸ್ಥಿತಿ ಇರಲಿ ಮಾರ್ಕೋಸ್ ಕಮಾಂಡೋಗಳು ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಸಮುದ್ರದ ಆಳದಲ್ಲಿ ಈಜಾಡುತ್ತಾ ಶಾರ್ಕ್ ಗಳಂತೆ ಎರಗುವ ಮಾರ್ಕೋಸ್ ಎಂದರೆ ದೇಶದ ಶತ್ರುಗಳಿಗೆ ಭಯ. ಇಂತಹ ಎಂಟೆದೆಯ ಭಂಟರು ನಮ್ಮ ನೌಕಾ ಸೇನೆಯಲ್ಲಿರುವುದು ನಮ್ಮೆಲ್ಲರ ಪುಣ್ಯ. ಹಿಮಾಲಯದ ತುತ್ತ ತುದಿಯಿಂದ ಮಹಾಸಾಗರದ ಆಳದವೆರೆಗೂ ಪ್ರಾಣವನ್ನು ಪಣಕ್ಕಿಟ್ಟು ಸದಾ ದೇಶಕ್ಕಾಗಿ ದುಡಿಯುವ ಭಾರತೀಯ ಸೇನೆ ನಮ್ಮ ಗೌರವ, ನಮ್ಮ ಹೆಮ್ಮೆ. ಭಾರತವನ್ನು ಅನುಕ್ಷಣವೂ ಕಾಯುವ ಭೂ, ನೌಕಾ ಮತ್ತು ವಾಯುಸೇನೆಗೆ ನಮ್ಮ ನಮನ. ಜೈ ಜವಾನ್…

source: https://www.indiatimes.com/culture/who-we-are/15-reasons-the-indian-navy-marcos-are-the-best-in-the-world-232296.html

sharvari

Tags

Related Articles

Close