ಪ್ರಚಲಿತ

ಸುಳ್ಳು ಹಬ್ಬುವವರೇ ಎಚ್ಚರ: ನಿಮ್ಮನ್ನು ಗ(ದ)ಮನಿಸುತ್ತದೆ ಮೋದಿ ಸರ್ಕಾರ

ಸುಳ್ಳು, ನಕಲಿ ಸುದ್ದಿಗಳನ್ನು ಹರಡುವ, ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಕೆಲಸ ಮಾಡುವ, ಭಾರತದೊಂದಿಗಿನ ವಿದೇಶಿ ಸಂಬಂಧಗಳಿಗೆ ಅಪಾಯವನ್ನು ಮಾಡುವ ವಾಹಿನಿಗಳ ನಿರ್ಬಂಧಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೂಟ್ಯೂಬ್ ಜೊತೆಗೆ ಕೈ ಜೋಡಿಸಿ ಕೆಲಸ ಮಾಡಲು ಮುಂದಾಗಿದೆ.

ಈ ನಿಟ್ಟಿನಲ್ಲಿ ಅಪಾಯವನ್ನು ನಿಗ್ರಹಿಸಿ, ಕೃತಕ ಬುದ್ಧಿಮತ್ತೆ ಬಳಸಿ ಅನುಸರಿಸಬಹುದಾದ ಕಾರ್ಯಗಳ ಬಗ್ಗೆ ಕೇಂದ್ರ ಸರ್ಕಾರ ಅವಲೋಕನ ನಡೆಸುತ್ತಿದೆ. ಕಳೆದೆರಡು ವಾರಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಖಲಿಸ್ತಾನಿಗಳ ಪರ ಭಾವನೆಗಳನ್ನು ಅನುಮೋದಿಸುವ ಕನಿಷ್ಟ ೮ ಯೂಟ್ಯೂಬ್ ಚಾನೆಲ್‌ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು.

ನಕಲಿ ಸುದ್ದಿಗಳನ್ನು ಹಬ್ಬುವ ಯೂಟ್ಯೂಬ್ ಚಾನೆಲ್‌‌ಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಲು ಪೂರಕವಾಗುವಂತಹ ಕೃತಕ ಬುದ್ಧಿಮತ್ತೆಯನ್ನು ಬಳಸಿ ಕಾರ್ಯನಿರ್ವಹಿಸುವ ವ್ಯವಸ್ಥೆಗಳ ಬಗ್ಗೆ ಸರ್ಕಾರ ಯೂಟ್ಯೂಬ್ ಅಧಿಕಾರಿಗಳ ಜೊತೆಗೆ ಸಂವಾದ ನಡೆಸುತ್ತಿರುವುದಾಗಿಯೂ ಮೂಲಗಳು ತಿಳಿಸಿವೆ.

ಯೂಟ್ಯೂಬ್ನಲ್ಲಿ ಕೋಟ್ಯಾಂತರ ವೀಡಿಯೋಗಳಿದ್ದು, ಅವುಗಳನ್ನು ವ್ಯಕ್ತಿಚಾಲಿತವಾಗಿ ನಿಯಂತ್ರಣ ಮಾಡುವುದು ಸುಲಭಸಾಧ್ಯವಲ್ಲ. ಹೀಗಾಗಿ ಸ್ವಯಂಚಾಲಿತ ವ್ಯವಸ್ಥೆಯೊಂದಕ್ಕೆ ಕೇಂದ್ರ ಸರ್ಕಾರ ದಾರಿ ಹುಡುಕುತ್ತಿದೆ. ಭಾರತ ವಿರೋಧಿ ಕಾರ್ಯನಿರ್ವಹಣೆ ಮಾಡುವ ವಿಡಿಯೋಗಳನ್ವು ಪತ್ತೆ ಮಾಡುವಲ್ಲಿ ಟ್ವಿಟರ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮ ಗಳಿಗೂ ಕೇಂದ್ರ ಸರ್ತಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರ್ದೇಶನ ನೀಡುತ್ತಿದೆ.

ಇದೇ ಮೊದಲು ಐಟಿ ನಿಯಮಗಳ ಅನ್ವಯ ಪಾಕಿಸ್ತಾನದಿಂದ ಕಾರ್ಯ ನಿರ್ವಹಿಸುತ್ತಿದ್ದ ಇಪ್ಪತ್ತು ಯೂಟ್ಯೂಬ್ ವಾಹಿನಿಗಳು ಮತ್ತು ಎರಡು ವೆಬ್ಸೈಟ್ ‌ಗಳ ಮೇಲೆ ನಿಷೇಧ ಹೇರುವ ಮೂಲಕ ಭಾರತದ ಬಗ್ಗೆ ಸುಳ್ಳುಗಳನ್ನು ಹಬ್ಬುವ, ಭಾರತಕ್ಕೆ ಮಾರಕವೆನಿಸುವ ವಾಹಿನಿಗಳ ವಿರುದ್ಧ ಸಚಿವಾಲಯದ ದಿಟ್ಟ ನಡೆ ೨೦೨೧ ರಲ್ಲಿ ಆರಂಭವಾಯಿತು.

ಒಟ್ಟಿನಲ್ಲಿ ದೇಶಕ್ಕೆ, ದೇಶದ ಜನರಿಗೆ, ದೇಶದ ಸೌಹಾರ್ಧತೆಗೆ ಧಕ್ಕೆ ಮಾಡುವವರ ವಿರುದ್ಧ ಪ್ರಧಾನಿ ಮೋದಿ ಅವರ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಲೇ ಇದ್ದು, ದೇಶ ವಿರೋಧಿಗಳ ಹುಟ್ಟಡಗಿಸುವ ನಿರಂತರ ಕೆಲಸವನ್ನು ಮಾಡುತ್ತಲೇ ಇರುವುದು ಹೆಮ್ಮೆಯ ವಿಚಾರ.

Tags

Related Articles

Close