ಪ್ರಚಲಿತ

ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ನಾಲ್ವರು ಮಹಿಳೆಯರು

ಭಾರತದ ನಾಲ್ವರು ಮಹಿಳೆಯರಿಗೆ ಫೋರ್ಬ್ಸ್ ಬ್ಯುಸಿನೆಸ್ ಮ್ಯಾಗಜಿನ್‌ನಲ್ಲಿ ಸ್ಥಾನ ದೊರೆತಿದೆ. 2023 ಕ್ಕೆ‌ಲಂಬಂಧಿಸಿದ ಹಾಗೆ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪೈಕಿ ನಾಲ್ವರು ಭಾರತೀಯರು ಸಹ ಗುರುತಿಸಲ್ಪಟ್ಟಿದ್ದು, ಇದು ಭಾರತದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಬಹುದು.

ಫೋರ್ಬ್ಸ್ ಈ ವರ್ಷದ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ‌. ಇದರಲ್ಲಿ ಭಾರತದ ಕೇಂದ್ರ ಸಚಿವೆ ‌ನಿರ್ಮಲಾ‌ ಸೀತಾರಾಮನ್, ರೋಶನಿ ನಾಡರ್ ಮಲ್ಹೋತ್ರ, ಸೇನಾ ಮೊಂಡೆಲ್ ಮತ್ತು ಕಿರಣ್ ಮಜುಂದಾರ್ ಶಾ ಅವರು ಕ್ರಮವಾಗಿ 32, 60, 70, 76 ನೇ ಶ್ರೇಯಾಂಕ ಗಳಲ್ಲಿ ಸ್ಥಾನ ಪಡೆದಿದ್ದಾರೆ. ಜಾಗತಿಕ ವೇದಿಕೆಯಲ್ಲಿ ತಮ್ಮ ಛಾಪನ್ನು ಅಚ್ಚೊತ್ತಿರುವ ಈ ಭಾರತೀಯ ನಾರೀಮಣಿಯರು ವೈವಿಧ್ಯಮಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಪ್ರಭಾವಿ ಭಾರತೀಯ ಮಹಿಳಾ ಧ್ವನಿ ಗಳಾಗಿ ಹೊರಹೊಮ್ಮಿದ್ದಾರೆ ಎನ್ನುವುದು ಸ್ಪಷ್ಟ.

ನಿರ್ಮಲಾ ಸೀತಾರಾಮನ್: ಇವರು ಪ್ರಧಾನಿ ನರೇಂದ್ರ ಮೋದಿ ಅವರ‌ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ವಿತ್ತ ಸಚಿವರಾಗಿ ದೇಶದ ಆರ್ಥಿಕ ಸ್ಥಿತಿಯನ್ನು ಸಮತೋಲನ ಮಾಡುತ್ತಿರುವ ವ್ಯಕ್ತಿ. ಒಂದರ್ಥದಲ್ಲಿ ಸರ್ಕಾರದ ಹಣಕಾಸು ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಇರುವ, ಸಮರ್ಥವಾಗಿ ಮುನ್ನಡೆಸುತ್ತಿರುವ ನಾರೀ ಶಕ್ತಿ ಎಂದರೂ ತಪ್ಪಾಗಲಾರದು. ಇವರು ಫೋರ್ಬ್ಸ್ ಬ್ಯುಸಿನೆಸ್ ಮ್ಯಾಗಜಿನ್‌ನ ಪ್ರಪಂಚದ ಅತ್ಯಂತ ಪ್ರಭಾವಶಾಲಿ,‌‌ ಶಕ್ತಿಯುತ ಮಹಿಳೆಯರ ಪಟ್ಟಿಯಲ್ಲಿನ 32 ನೇ ಸ್ಥಾನವನ್ನು ಅಲಂಕರಿಸಿಕೊಂಡಿದ್ದಾರೆ.

ರೋಶನಿ ನಾಡರ್ ಮಲ್ಹೋತ್ರಾ: ಇವರು HCL ಸಂಸ್ಥಾಪಕ ಶಿವ ನಾಡರ್ ಅವರ ಒಬ್ಬರೇ ಒಬ್ಬ ಪುತ್ರಿ. ಪ್ರಸ್ತುತ HCL ಟೆಕ್ನಾಲಜೀಸ್ ನ ಅಧ್ಯಕ್ಷರಾಗಿದ್ದಾರೆ. ಇವರು ಭಾರತದಲ್ಲಿ ಪಟ್ಟಿ ಮಾಡಲಾದ ಐಟಿ ಕಂಪನಿಯೊಂದನ್ನು ನಿಭಾಯಿಸುತ್ತಿರುವ ಪ್ರಥಮ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. ಭಾರತೀಯ ಬಿಲಿಯನೇರ್ ‌ಮತ್ತು ಸಮಾಜಮುಖಿ ಕೆಲಸಗಳನ್ನು ನಡೆಸುತ್ತಿರುವ ಇವರಿಗೆ 42 ವರ್ಷ.‌ IIFL wealthhuran India rich list 2019 ಪ್ರಕಾರ ಇವರು ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

ಸೋಮಾ ‌ಮೊಂಡೆಲ್: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಅಧ್ಯಕ್ಷೆ. 2021 ರಿಂದ ತೊಡಗಿ ದಂತೆ ಇವರು ಈ ಸ್ಥಾನವನ್ನು ಅಲಂಕರಿಸಿದ್ದಾರೆ. ಎಲೆಕ್ಟ್ರಿಕ್ ಎಂಜಿನಿಯರಿಂಗ್ ಮುಗಿಸಿರುವ ಅವರು, ಮೆಟಲ್ ಉದ್ಯಮದಲ್ಲಿ 35 ವರ್ಷಗಳ ಸುಧೀರ್ಘ ಅನುಭವ ಹೊಂದಿದವರು. NALCO ಆರಂಭ ಮಾಡಿದವರು. ಇದರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದವರು. ಇದಾದ ಬಳಿಕ SAIL ನಲ್ಲಿ ಮೊದಲ ಕಾರ್ಯಕಾರಿ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾದವರು.‌ ಇವರು ಫೋರ್ಬ್ಸ್ ‌ನ ವಿಶ್ವದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ 70 ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಕಿರಣ್ ಮಜುಂದಾರ್ ಶಾ: ಈ ಹೆಸರು ಹೆಚ್ಚಿನ ಭಾರತೀಯರಿಗೆ ಪರಿಚಿತ. ಇವರು ಫೋರ್ಬ್ಸ್ ಬ್ಯುಸಿನೆಸ್ ಮ್ಯಾಗಜಿನ್ ನ ಪಟ್ಟಿಯಲ್ಲಿ 76 ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಭಾರತದ ಪ್ರಮುಖ ಬಿಲಿಯನೇರ್ ಉದ್ಯಮಿಯಾಗಿರುವ ಇವರು ಬೆಂಗಳೂರಿನ ಬಯೋಕಾನ್ ಲಿಮಿಟೆಡ್ ಮತ್ತು ಬಯೋಕಾನ್ ಬಯೋಲಾಜಿಕ್ಸ್ ಲಿ. ಅನ್ನು ಸ್ಥಾಪನೆ ಮಾಡಿದವರು. ಜೈವಿಕ ತಂತ್ರಜ್ಞಾನ ಕಂಪನಿಗಳಲ್ಲಿ ಅವರ ಪಾತ್ರ ಹಿರಿದು. ಇವರು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ‌ನ ಮಾಜಿ ಅಧ್ಯಕ್ಷರಾಗಿದ್ದವರು. ಇವರು ವಿಜ್ಞಾನ ಮತ್ತು ರಾಸಾಯನಶಾಸ್ತ್ರ ವಲಯದಲ್ಲಿ ಮಾಡಿದ ಸಾಧನೆ, ನೀಡಿದ ಕೊಡುಗೆಗಳಿಗೆ 2014 ರಲ್ಲಿ ಓತ್ಮರ್ ಗೋಲ್ಡ್ ಮೆಡಲ್‌‌ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಭಾಜನರಾದವರು. 2011 ರಲ್ಲಿ ಫಿನಾನ್ಶಿಯಲ್ ಟೈಮ್ಸ್‌ನ ಟಾಪ್ 50 ಮಹಿಳೆಯರ ಪಟ್ಟಿಯಲ್ಲಿಯೂ ಇವರ ಹೆಸರಿತ್ತು.

Tags

Related Articles

Close