ಪ್ರಚಲಿತ

ಚುನಾವಣೆಗೂ ಮೊದಲೇ ಮತದಾನಕ್ಕೆ ಬಹಿಷ್ಕಾರ: ಹೇಗಿರುತ್ತೆ ಕರುನಾಡಿನ ಚುನಾವಣಾ ಚಿತ್ರಣ!

ಚುನಾವಣೆ ಬಂದಾಗ ಮತದಾರರ ನೆನಪಾಗುವ ಕೆಲವು ರಾಜಕೀಯ ನಾಯಕರಿಗೆ, ಮತ್ತೆ ಮುಂದಿನ ಚುನಾವಣೆ ಬರುವ ತನಕ ಮತದಾರರ ನೆನಪೂ ಸಹ ಆಗೋದಿಲ್ಲ. ಮತದಾನದ ಸಮಯದಲ್ಲಿ ನಿಮ್ಮ ಊರಿಗೆ ರಸ್ತೆ ಮಾಡಿಸ್ತೇವೆ, ಈಗಾಗಲೇ ಇರೋ ರಸ್ತೆಗೆ ಟಾರು ಹಾಕಿಸ್ತೇವೆ, ವಿದ್ಯುತ್ ವ್ಯವಸ್ಥೆ ಮಾಡಿಸ್ತೇವೆ, ಊರಿಗೆ ನೀರಿಲ್ವಾ? ಸರ್ಕಾರದ ವತಿಯಿಂದ ಫ್ರೀ ನೀರು ಕೊಡಿಸ್ತೇವೆ, ಬಸ್ಸು ಬರೋದಿಲ್ವಾ? ನಾವು ಬಸ್ಸಿನ ವ್ಯವಸ್ಥೆ ಮಾಡಿಸ್ತೇವೆ ಎಂದು ಪುಂಕಾನುಪುಂಕ ಸುಳ್ಳುಗಳನ್ನು ಹೇಳುವವರು, ಒಮ್ಮೆ ಚುನಾವಣೆ ಮುಗಿಯಿತೋ, ಮತ್ತೆ ಕಣ್ಣಿಗೆ ಕಾಣದ ಹಾಗೆ ಮತ್ತು ಕಣ್ಣೇ ಕಾಣದ ಹಾಗೆ ಮಾಯವಾಗಿ ಬಿಡುತ್ತಾರೆ.

ಇವರ ಮಾತನ್ನು ನಂಬಿ ಮತ ನೀಡಿದ ಮತದಾರರು ಮಾತ್ರ ನಮ್ಮ ಮೂರು ಅಭಿವೃದ್ಧಿ ಆಗುತ್ತದೆ ಎನ್ನುವ ಗುಂಗಲ್ಲಿಯೇ ಮುಂದಿನ ಚುನಾವಣೆಗೆ ಕಾಯುತ್ತಾರೆ. ಆದರೆ ತಮಾಷೆ ಏನೆಂದರೆ, ಬಡ ಮತದಾರರ ಈ ಮುಗ್ದತೆಯನ್ನೇ ತಮ್ಮ ಓಟ್ ಬ್ಯಾಂಕ್ ಆಗಿ ಮಾಡಿಕೊಳ್ಳುವ ರಾಜಕಾರಣಿಗಳು ಮುಂದಿನ ಚುನಾವಣೆಯಲ್ಲಿ ಮತ್ತೆ ಈ ಹಿಂದಿನ ಚುನಾವಣೆಯಲ್ಲಿ ಹೇಳಿದ ಸುಳ್ಳುಗಳನ್ನೇ ಮತ್ತೆ ಹೇಳಿ, ಜೊತೆಗೆ ಹಣ, ವಸ್ತುಗಳನ್ನು ನೀಡಿ ಜನರನ್ನು ಮತ್ತೆ ಹುಟ್ಟಿಗೆ ಹಾಕಿಕೊಳ್ಳುತ್ತಾರೆ.

ಆದರೆ ಈಗ ಕಾಲ ಸ್ವಲ್ಪ ಬದಲಾಗಿದೆ. ಕೆಲ ಊರಿನ ಮತದಾರರು ಸಹ ಭ್ರಷ್ಟ ರಾಜಕಾರಣಿಗಳ ಬಣ್ಣದ ಮಾತುಗಳಿಗೆ ಮರುಳಾಗುತ್ತಿಲ್ಲ. ಬದಲಾಗಿ ನಮ್ಮ ಊರಿಗೆ ಅಭಿವೃದ್ಧಿ ಮರೂಚಿಕೆಯಾಗಿದೆ. ನಾವು ಈ ಬಾರಿ ಯಾರಿಗೂ ಮತ ನೀಡಿ ಮೋಸ ಹೋಗುವುದಿಲ್ಲ. ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಊರ ದ್ವಾರದಲ್ಲೇ ದೊಡ್ಡ ದೊಡ್ಡ ಫ್ಲೆಕ್ಸ್‌ಗಳನ್ನು ಅಳವಡಿಸಿ, ನಮ್ಮೂರಿಗೆ ಮತ ಕೇಳಲು ಬರಬೇಡಿ ಎನ್ನುವುದನ್ನು ಅದರಲ್ಲಿ ಸೇರಿಸಿ ನೇತು ಹಾಕಿದ್ದಾರೆ.

ರಾಜಕೀಯ ನಾಯಕರು ಮಾತ್ರವಲ್ಲ, ನಾವೂ ಜಾಣರಾಗುತ್ತಿದ್ದೇವೆ. ನಾವು ತೆರಿಗೆ ಕಟ್ಟಿದರೂ, ಅದರಿಂದ ನಮಗೇನೂ ಲಾಭವಿಲ್ಲ. ತೆರಿಗೆ ಕಟ್ಟುವವರು ನಾವು ಲಾಭ ಪಡೆಯುವವರು ರಾಜಕಾರಣಿಗಳು, ಅಧಿಕಾರಿಗಳು. ನಾವು ನಂಬಿಕೆ ಇಟ್ಟು ಆಯ್ಕೆ ಮಾಡಿದವರೇ ನಮಗೆ ಮೋಸ ಮಾಡುವಾಗ, ಅವರಿಗೆ ನಾವ್ಯಾಕೆ ಮತ ನೀಡಬೇಕು ಎನ್ನುವ ಎಚ್ಚರಿಕೆ ಮತದಾರ ಪ್ರಭುವಿಗೆ ಬಂದಿರುವುದು ಸಂತೋಷದ ವಿಷಯ.

ಪ್ರತಿ ಹಳ್ಳಿ ಹಳ್ಳಿಯಲ್ಲಿಯೂ ಯಾವುದೇ ಆಮಿಷಕ್ಕೆ ತುತ್ತಾಗದೆ, ನಮ್ಮ ಊರಿಗೆ ಮೂಲಭೂತ ಸೌಕರ್ಯ ವ್ಯವಸ್ಥೆ ಮಾಡಿದಲ್ಲಿ ಮಾತ್ರ ಮತ ನೀಡುತ್ತವೆ. ಇಲ್ಲವಾದಲ್ಲಿ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ರಾಜಕಾರಣಿಗಳಿಗೆ ಬಿಸಿ ಮುಟ್ಟಿಸುವಂತಾಗಬೇಕು. ಅದಕ್ಕಾಗಿ ಅಭಿವೃದ್ಧಿ ಮಾಡದೆ ಮತ ಕೇಳಿ ಮರ್ಯಾದೆ ಕಳೆದುಕೊಳ್ಳಬೇಡಿ ಎನ್ನುವ ಬ್ಯಾನರ್ ‌ಗಳು ರಾರಾಜಿಸುವಂತಾಗಬೇಕು. ಮತದಾರರು ಎಚ್ಚೆತ್ತಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ. ಹಾಗಾಗಲ್ಲಿ ಮಾತ್ರ ಭಾರತ ಮುಂದುವರಿದ ರಾಷ್ಟ್ರವಾಗುವುದು ಸಾಧ್ಯ. ಎಚ್ಚರ ಮತದಾರ ಎಚ್ಚರ.

Tags

Related Articles

Close