ಪ್ರಚಲಿತ

ಬಿಜೆಪಿ ಅಲೆಗೆ ಕೊಚ್ಚಿ ಹೋಗಲಿದೆ ಕಾಂಗ್ರೆಸ್‌ನ ಸುಳ್ಳಿನ ಸರಮಾಲೆ

ಸದಾ ಕಾಲ ಸುಳ್ಳು ಹೇಳಿಕೊಂಡೇ ಜನರನ್ನು ಬುಟ್ಟಿಗೆ ಹಾಕಿಕೊಳ್ಳುವ ಕಾಂಗ್ರೆಸ್, ಈ ಬಾರಿಯ ಚುನಾವಣೆಯಲ್ಲಿ ಒಂದರ ಹಿಂದೆ ಮತ್ತೊಂದು ಎಂಬಂತೆ ಬಿಟ್ಟಿ ಭಾಗ್ಯಗಳನ್ನು ಜಾರಿಗೊಳಿಸುವುದಾಗಿ ನಂಬಿಸಿ, ಮತದಾರರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.

ಈಗಾಗಲೇ ೪ ಉಚಿತ ಯೋಜನೆಗಳನ್ನು ಚುನಾವಣೆಯ ಹಿನ್ನಲೆಯಲ್ಲಿ ಜಾರಿಗೊಳಿಸುವುದಾಗಿಯೂ ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಹೇಳಿದೆ. ಇದನ್ನು ರಾಜ್ಯದ ಜನತೆ ಎಷ್ಟರ ಮಟ್ಟಿಗೆ ನಂಬಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ಕಾಂಗ್ರೆಸ್‌ಗೆ ಮಾತ್ರ ನಾವು ಏನೇ ಸರ್ಕಸ್ ಮಾಡಿದರೂ ಜನತೆ ನಮ್ಮನ್ನು ನಂಬಲಾರರು ಎಂಬ ಸತ್ಯದ ಅರಿವಾದಂತಿದೆ. ಇದಕ್ಕೆ ಪೂರಕ ಎಂಬಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ಶಿವಕುಮಾರ್ ಅವರು ಒಂದು ಹೇಳಿಕೆಯನ್ನು ನೀಡಿದ್ದಾರೆ.

ಡಿಕೆಶಿ ಅವರು ನಾವು ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಕೊಟ್ಟ ಆಶ್ವಾಸನೆಗಳನ್ನು ಈಡೇರಿಸುತ್ತೇವೆ. ಯುಗಾದಿಯ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿಯ ಕೆಟ್ಟ ಆಡಳಿತ ತೊಲಗಲಿ. ರಾಜ್ಯದ ಜನರಿಗಾಗಿ ಕಾಂಗ್ರೆಸ್ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದ್ದು, ಕಾಂಗ್ರೆಸ್ ಸರ್ಕಾರ ಜನಪರವಾಗಿರಲಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮೇಲೆ ನಂಬಿಕೆಯೇ ಇಲ್ಲದ ರಾಜ್ಯದ ಬಹು ಸಂಖ್ಯೆಯ ಜನರನ್ನು ಸೆಳೆಯುವ ವ್ಯರ್ಥ ಪ್ರಯತ್ನ ನಡೆಸಿದ್ದಾರೆ.

ಬಿಜೆಪಿ ಜನರ ಬ್ಯಾಂಕ್ ಖಾತೆಗೆ ೧೫ ಲಕ್ಷ ಹಾಕುತ್ತೇವೆ, ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದೆಲ್ಲಾ ಹೇಳಿತ್ತು. ಆದರೆ ಯಾವುದನ್ನು ಮಾಡಿದೆ. ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಈಡೇರಿಸಿಯೇ ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.

ಆದರೆ ಡಿಕೆಶಿ ಅವರು ಅರ್ಥ ಮಾಡಿಕೊಳ್ಳಬೇಕಾಗಿರುವುದು, ದೇಶದ ಅಭಿವೃದ್ಧಿ ಮೂಲಕ ಬಿಜೆಪಿ ಜನರಿಗೆ ಅವರ ತೆರಿಗೆಯ ಹಣವನ್ನು ಮರುಸಂದಾಯ ಮಾಡಿದೆ. ಕಾಂಗ್ರೆಸ್‌ನಂತೆ ಕುಟುಂಬದ ಉದ್ಧಾರಕ್ಕೆ ಬಳಸಿಕೊಂಡಿಲ್ಲ ಎಂಬುದನ್ನು. ಹಾಗೆಯೇ ಆತ್ಮನಿರ್ಭರ ಭಾರತದ ಕನಸಿನ ಮೂಲಕ ನಿರುದ್ಯೋಗಿ ಯುವಕರಿಗೆ ಸ್ವ ಉದ್ಯೋಗದ ದಾರಿ ತೋರಿಸಿ, ಸ್ವಾವಲಂಬಿಗಳಾಗಿ ಬದುಕುವ ದಾರಿ ತೋರಿಸಿಕೊಟ್ಟಿದೆ ಎನ್ನುವುದನ್ನು. ಯಾವ ಭಾರತೀಯರು ವಿಶ್ವದ ಮುಂದೆ ಕೈ ಕಟ್ಟಿ ನಿಲ್ಲಬೇಕಾಗಿತ್ತೋ, ಅದೇ ಭಾರತೀಯರಿಗೆ ಪ್ರಧಾನಿ ಮೋದಿ ಅವರ ಆಡಳಿತದ ಬಳಿಕ ವಿಶ್ವವೇ ಕೈ ಮುಗಿಯುತ್ತದೆ ಎನ್ನುವುದನ್ನು ಕಾಂಗ್ರೆಸ್ ಅರಿತು, ಅರಗಿಸಿಕೊಳ್ಳಬೇಕಾಗಿದೆ.

ಬಿಜೆಪಿ ಮಾಡಿರುವ ಅಭಿವೃದ್ಧಿಯ ಕೆಲಸಗಳ ಮುಂದೆ ಕಾಂಗ್ರೆಸ್‌ನ ಬಿಟ್ಟಿ ಯೋಜನೆಗಳು ಜನರನ್ನು ಸೆಳೆಯುವ ಬದಲು, ಕಾಂಗ್ರೆಸ್‌ನ ಮೇಲೆ ಜನರಿಗೆ ವಾಕರಿಕೆ ಬರುವಂತೆ ಮಾಡಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

Tags

Related Articles

Close