ಅಂಕಣ

ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದ್ದ ಧರ್ಮಾಧಿಕಾರಿಗಳು ಮೋದಿಯನ್ನು ಅಪ್ಪಿಕೊಂಡಿದ್ಯಾಕೆ ಗೊತ್ತಾ?! ಧರ್ಮಸ್ಥಳದಿಂದ ದೆಹಲಿಯತ್ತ ಒಂದು ಪಯಣ…

ಅವರಿಬ್ಬರದ್ದೂ ಒಂದೇ ಧೃಷ್ಟಿ ಕೋನ, ಅವರಿಬ್ಬರೂ ಅಪ್ಪಟ ದೈವಭಕ್ತರು, ಅವರಿಬ್ಬರೂ ಆಪತ್ಬಾಂಧವರು, ಅವರಿಬ್ಬರೂ ಗ್ರಾಮಾಭಿವೃದ್ಧಿಯ ಹರಿಕಾರರು,
ಅವರಿಬ್ಬರೂ ಬಡ ಜನರನ್ನು ಆರ್ಥಿಕವಾಗಿ ಸಬಲಗೊಳಿಸಿದವರು, ಅವರಿಬ್ಬರೂ ಕೋಟ್ಯಾಂತರ ಜನರಿಗೆ ಬ್ಯಾಂಕ್‍ನ ಮುಖ ತೋರಿಸಿದವರು, ಅವರಿಬ್ಬರೂ ಸ್ವಚ್ಚ ಭಾರತದ ಕನಸನ್ನು ಹೊತ್ತುಕೊಂಡವರು, ಅವರಿಬ್ಬರೂ ಮದ್ಯಪಾನ ಮುಕ್ತ ಸಮಾಜಕ್ಕಾಗಿ ಹೋರಾಟ ಮಾಡಿದವರು, ಅವರಿಬ್ಬರೂ ಮಹಿಳೆಯರ ಹಾಗೂ ಹೆಣ್ಣು ಮಕ್ಕಳ ಪರ ಧ್ವನಿಯಾದವರು, ಅವರಿಬ್ಬರೂ ಭ್ರಷ್ಟಾಚಾರ ಮುಕ್ತ ಭಾರತಕ್ಕಾಗಿ ಹೋರಾಟ ಮಾಡಿದವರು, ಅವರಿಬ್ಬರೂ ಆರೋಗ್ಯಕ್ಕಾಗಿ ಯೋಗವನ್ನು ವಿಶ್ವದಲ್ಲೇ ಪಸರಿಸಿದವರು, ಅವರಿಬ್ಬರೂ ಸನಾತನ ಹಿಂದೂ ಸಂಸ್ಕøತಿಯ ಆರಾಧಕರು…

ಸಂಶಯವೇ ಇಲ್ಲ. ನಾವು ಹೇಳುತ್ತಿರುವುದು ಕಳೆದು ಹೋಗಿದ್ದ ಭಾರತದ ವೈಭವವನ್ನು ಮರಳಿ ತಂದು ವಿಶ್ವವೇ ಗೌರವಿಸುವಂತೆ ಮಾಡಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ರಾಷ್ಟ್ರದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಬಗ್ಗೆ. ಒಂದೇ ಚಿಂತನೆಗಳು ಹಾಗೂ ಒಂದೇ ಧೃಷ್ಟಿಕೋನಗಳನ್ನು ಹೊಂದಿಕೊಂಡಿರುವ ನರೇಂದ್ರ ಹಾಗೂ ವೀರೇಂದ್ರರು ಭಾರತ ಕಂಡ ನಿಜವಾದ ರತ್ನಗಳು. ಈ ಇಬ್ಬರು ನಾಯಕರು ಭಾರತದಲ್ಲಿ ಮಾತ್ರವಲ್ಲದೆ ಭಾರತದ ಕಂಪನ್ನು ಹೊರ ದೇಶಗಳಲ್ಲೂ ಪಸರಿಸಿ ಭಾರತವನ್ನು ಜಗದ್ಗುರುವನ್ನಾಗಿಸಲು ಪಣ ತೊಟ್ಟವರು.

ಭವ್ಯ ಭಾರತದ ನಿರ್ಮಾಪಕರು ಮೋದಿ…

ನರೇಂದ್ರ ಮೋದಿಯೆಂದರೆ ಕೇಳಬೇಕಾ. ಜಗತ್ತಿನ ಯಾವುದೇ ಮೂಲೆಗೇ ಹೋದರೂ ಮೋದಿ ಎಂಬ ವ್ಯಕ್ತಿಯ ಹೆಸರು ಚಿರ ಪರಿಚಿತ. ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಟ್ಟಾಳು ಆಗಿ, ಭಾರತೀಯ ಜನತಾ ಪಕ್ಷದ ನಾಯಕನಾಗಿ, ಗುಜರಾತಿನ ಮುಖ್ಯಮಂತ್ರಿಯಾಗಿ, ನಂತರ ತನ್ನ ಸಾಧನೆಯ ಮೂಲಕ ದೇಶದ ಗಮನ ಸೆಳೆದು ಭಾರತದ ಪ್ರಧಾನ ಮಂತ್ರಿಯಾಗಿ ಜಗತ್ತೇ ತಿರುಗಿ ನೋಡುವಂತೆ ಮಾಡಿದ ಮೋದಿ ಮೋಡಿಯ ಬಗ್ಗೆ ಅದೆಷ್ಟು ಹೇಳಿದರೂ ಮುಗಿಯದ ಕಥೆ. ಮೋದಿ ಬರುತ್ತಾರೆ ಎಂದರೆ ಜಗತ್ತೇ “ನಮೋ ನಮೋ” ಎಂದು ಝೇಂಕಾರಿಸುತ್ತದೆ, ಮೋದಿ ಬರುತ್ತಾರೆಂದರೆ ವಿಶ್ವ ನಾಯಕರು ಛಾತಕ ಪಕ್ಷಿಗಳಂತೆ ಕಾಯುತ್ತಾ ಕುಳಿತಿರುತ್ತಾರೆ, ಮೋದಿ ಬರುತ್ತಾರೆಂದರೆ ವಿಶ್ವನಾಯಕರು ಶಿಷ್ಟಾಚಾರವನ್ನೆಲ್ಲಾ ಬದಿಗೊತ್ತಿ ವಿಮಾನ ನಿಲ್ದಾಣಕ್ಕೆ ತೆರಳಿ ಅವರನ್ನು ಸ್ವಾಗತಿಸಲು ತುದಿಗಾಲಿನಲ್ಲಿ ನಿಲ್ಲುತ್ತಾರೆ. ಮೋದಿ ಬರ್ತಾರೆಂದರೆ ವಿಶ್ವದ ಭಯೋತ್ಪಾದನಾ ಸಂಘಟನೆಗಳು ಬೆಚ್ಚಿ ಬೀಳುತ್ತದೆ, ಮೋದಿ ಯಾವುದೇ ರಾಷ್ಟ್ರಕ್ಕೇ ತೆರಳಿದರೂ ಪಾಕಿಸ್ಥಾನ ಎಂಬ ಪಾಪಿ ರಾಷ್ಟ್ರಕ್ಕೆ ನಡುಕ ಆರಂಭವಾಗುತ್ತದೆ. ಮೋದಿ ಬರ್ತಾರೆಂದರೆ ಅನಿವಾಸಿ ಭಾರತೀಯರು ತಮ್ಮೆಲ್ಲಾ ಕೆಲಸಗಳನ್ನೂ ಬದಿಗೊತ್ತಿ ಮೋದಿ ದರ್ಶನಕ್ಕಾಗಿ ಲಕ್ಷೋಪ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗೆ ಮೋದಿ ಎಲ್ಲಾ ರಂಗಗಳಲ್ಲೂ ಭಾರತವನ್ನು ಹೊಸ ವೈಭವದತ್ತ ಕರೆದೊಯ್ಯಲು ಪ್ರಯತ್ನ ಪಡುತ್ತಲೇ ಇರ್ತಾರೆ.

ಗ್ರಾಮಾಭಿವೃದ್ಧಿಯ ಹರಿಕಾರ ಹೆಗ್ಗಡೆ…

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೂ ಓರ್ವ ವಿಶೇಷ ವ್ಯಕ್ತಿ. ತನ್ನ ತಾಯಿಯ ಕನಸಿನಂತೆ ಗ್ರಾಮಾಭಿವೃದ್ಧಿಯ ಯೋಜನೆಯನ್ನು ಕೈಗೆತ್ತಿಕೊಂಡು, ಪ್ರತಿ ಗ್ರಾಮದಲ್ಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಆಯೋಜಿಸಿ, ಗ್ರಾಮಾಂತರ ಜನರಿಗೆ ಸಾಲ ಹಾಗೂ ಆರ್ಥಿಕ ಸೌಲಭ್ಯಗಳನ್ನು ನೀಡುವ ಮೂಲಕ ಆರ್ಥಿಕ ಕ್ರಾಂತಿಗೆ ಅಡಿಪಾಯ ಹಾಕಿದವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು. ಗ್ರಾಮಾಂತರದ ಜನರಿಗೆ ಮನೆ ಕಟ್ಟಲು, ಮದುವೆ ಮಾಡಲು, ಹೊಸ ಉಧ್ಯೋಗ ನಡೆಸಲು ಸಹಿತ ಅನೇಕ ಕೆಲಸಗಳಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತಂದು, ತಮ್ಮ ಯೋಜನೆಯ ಮೂಲಕ ಸಾಲಗಳನ್ನು ನೀಡುವ ಮೂಲಕ ಆ ಜನರನ್ನು ಮೇಲೆತ್ತುವ ಮಹಾ ಕಾರ್ಯವನ್ನು ಮಾಡಿದವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು.

ಹೀಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ಬಹಳನೇ ಸಾಮ್ಯತೆಗಳಿವೆ. ಭಾರತದ ಈ ಇಂದ್ರರುಗಳ ಒಂದೊಂದೇ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಸಾಮ್ಯತೆಗಳನ್ನು ನೋಡೋಣ ಬನ್ನಿ…

ಗ್ರಾಮಾಭಿವೃದ್ಧಿ ಯೋಜನೆ…

ಭಾರತದ ಪ್ರಧಾನಿಯಾದ ನಂತರ ನರೇಂದ್ರ ಮೋದಿ ಅದೆಷ್ಟೋ ಯೋಜನೆಗಳನ್ನೇ ಜಾರಿಗೆ ತಂದಿದ್ದಾರೆ. ಅದರಲ್ಲಿ ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಒತ್ತು ನೀಡುತ್ತಾ ಬಂದಿದ್ದಾರೆ. ಸಂಸದರ ಆದರ್ಶ ಗ್ರಾಮ ಯೋಜನೆಯ ಮೂಲಕ ಗ್ರಾಮವನ್ನು ಅಭಿವೃದ್ಧಿಯ ಪಥದೆಡೆಗೆ ಸಾಗಿಸಲು ಒತ್ತು ನೀಡಿದ್ದಾರೆ. ಪಂಚಾಯತ್‍ಗಳಿಗೆ ವಿಶೇಷ ಅನುದಾನ ನೀಡುವ ಮೂಲಕ ಗ್ರಾಮ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಿದ್ದಾರೆ. ನೀರು, ವಿದ್ಯುತ್, ಮನೆ ಸಹಿತ ಅನೇಕ ಮೂಲಭೂತ ಸೌಕರ್ಯಗಳಿಗೆ ಪ್ರಾಶಸ್ತ್ಯ ನೀಡಿದ್ದಾರೆ.

ಹಾಗೆಯೇ ಹೆಗ್ಗಡೆಯವರು ಕೂಡಾ ಹಲವಾರು ವರ್ಷಗಳ ಹಿಂದೆಯೇ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಸ್ಥಾಪಿಸಿ ಹೆಗ್ಗಳಿಕೆಯನ್ನು ಗಳಿಸಿದವರು. ಬಡ ಗ್ರಾಮಸ್ಥರನ್ನು ಮೇಲೆತ್ತುವ ಸಲುವಾಗಿ ಹೆಗ್ಗಡೆಯವರು ಶ್ರಮಿಸಿದ ಸಾಧನೆ ಅಮೋಘ. ತನ್ನ ಮನೆಯ ರಿಪೇರಿ ಅಥವ ಮಕ್ಕಳ ಮದುವೆಗೆ ಮನೆಯವರು ಪರಿತಪಿಸುವ ಸಂದರ್ಭ ಎದುರಾದಾಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾರಿಗೆ ತಂದು ಅದರ ಮೂಲಕ ಬಡ ಜನರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿ ಅವರನ್ನು ಮೇಲೆತ್ತುವ ಕೆಲಸವನ್ನು ಮಾಡಿದ್ದರು ಹೆಗ್ಗಡೆಯವರು. ಈ ಮೂಲಕ ಕೇವಲ ಪೇಟೆಯ ಜನರಿಗೆ ಸೀಮಿತವಾಗಿದ್ದ ಆರ್ಥಿಕ ಕ್ರಾಂತಿಯನ್ನು ಗ್ರಾಮಾಂತರದವರೆಗೂ ತಲುಪಿಸಿ ಗ್ರಾಮ ಗ್ರಾಮದಲ್ಲಿಯೂ ಹೊಸ ಇತಿಹಾಸವನ್ನು ಸೃಷ್ಟಿಸಿದವರು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಗೂ ವೀರೇಂದ್ರ ಹೆಗ್ಗಡೆಯವರಿಗೂ ಅರ್ಥ ವ್ಯವಸ್ಥೆಯಲ್ಲೂ ಸಾಮ್ಯತೆಯನ್ನು ಕಂಡುಕೊಳ್ಳಬಹುದು.

ಕೃಷಿ ಕ್ರಾಂತಿಯಲ್ಲಿ ದಿಟ್ಟ ಹೆಜ್ಜೆ…

ಈ ಉಭಯ ನಾಯಕರು ಕೃಷಿ ಕ್ರಾಂತಿಯಲ್ಲೂ ಮಹತ್ವದ ಹೆಜ್ಜೆಯನ್ನಿಟ್ಟು ಸಾಧನೆಯನ್ನು ಮಾಡಿದ್ದಾರೆ. ಗುಜರಾತಿನಲ್ಲಿ ಸಾವಯುವ ಕೃಷಿಯ ಮೂಲಕ ಕೃಷಿಗೆ ಹೊಸ ಭಾಷ್ಯ ಬರೆದಿದ್ದ ನರೇಂದ್ರ ಮೋದಿ, ಪ್ರಧಾನಿಯಾದ ಬಳಿಕ ಅದನ್ನು ಭಾರತದೆಲ್ಲೆಡೆ ಪಸರಿಸಿ ಕೃಷಿಗೆ ವಿಶೇಷ ಸ್ಥಾನ ನೀಡಿದ್ದರು. ಮೋದಿ ಸರ್ಕಾರದ ಫಸಲ್ ಭೀಮಾ ಯೋಜನೆಯು ಕೇವಲ ಕರ್ನಾಟಕವೊಂದರಲ್ಲೆ 2 ಕೋಟಿಗೂ ಅಧಿಕ ಜನತೆಯನ್ನು ತಲುಪಿದ್ದು ಮೋದಿ ಸರ್ಕಾರದ ಸಾಧನೆಯೆಂದೇ ಪರಿಗಣಿಸಬಹುದು. ಇವಿಷ್ಟು ಮಾತ್ರವಲ್ಲ ರೈತರು ಬೆಳೆದ ಪ್ರತಿ ಬೆಳೆಗೂ ವಿಶೇಷ ಬೆಲೆಯನನು ನಿಗದಿಪಡಿಸಿ ಹಾಗೂ ಆ ಬೆಳೆಗಳನ್ನು ಕಂಪನಿಗಳ ಉತ್ಪನ್ನಗಳೊಂದಿಗೆ ಬೆರಸಿ ಅವರಿಗೆ ಉತ್ತೇಜನ ನೀಡಲು ಆದೇಶಿಸಿರುವುದು ಕೃಷಿ ಬಗೆಗಿನ ಮೋದಿಯವರ ವಿಶೇಷ ಚಿಂತನೆಯನ್ನು ಪರಿಗಣಿಸಬಹುದು.

ವೀರೇಂದ್ರ ಹೆಗ್ಗಡೆಯವರೂ ಕೂಡಾ ಕೃಷಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಕೃಷಿಗೆ ವಿಶೇಷವಾಗಿ ಉತ್ತೇಜಿಸುವ ಹೆಗ್ಗಡೆಯವರು ತಮ್ಮ ಗ್ರಾಮಾಭಿವೃದ್ಧಿಯ ಯೋಜನೆಯ ಮೂಲಕವೇ ಕೃಷಿಗೆ ಉತ್ತೇಜನ ನೀಡಿದ್ದರು. ಮಲ್ಲಿಗೆ, ಅಡಿಕೆ, ತೆಂಗು ಸಹಿತ ಅನೇಕ ಕೃಷಿ ಬೆಳೆಯನ್ನು ತಮ್ಮ ಕ್ಷೇತ್ರದಿಂದಲೇ ನೀಡಿ ಗ್ರಾಮಾಂತರ ಜನರನ್ನು ವಿಶೇಷ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡಿದ್ದರು. ವರ್ಷದಲ್ಲೊಮ್ಮೆ ವಿಶೇಷ ಕೃಷಿ ಮೇಳವನ್ನು ಹಮ್ಮಿಕೊಂಡು ರಾಜ್ಯದಾದ್ಯಂತ ಅದನ್ನು ಪ್ರಚುರ ಪಡಿಸಿದ್ದರು. ಈ ವೇಳೆ ವಿಶೇಷ ತರಭೇತಿಗಳನ್ನು ನೀಡಿ ಕೃಷಿಕರನ್ನು ಮತ್ತಷ್ಟು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದರು.

ಸ್ವ-ಉಧ್ಯೋಗದಲ್ಲೂ ಛಾಪು…

ಸ್ವ-ಉಧ್ಯೋಗದಲ್ಲೂ ಈ ಇಬ್ಬರು ನಾಯಕರ ಚಿಂತನೆಗಳೂ ಒಂದೇ ಆಗಿದೆ. ತಾನು ಬೆಳೆಯ ಬೇಕು ಮತ್ತೊಬ್ಬರನ್ನೂ ಬೆಳೆಸಬೇಕು ಈ ಮೂಲಕ ದೇಶವನ್ನು ನಿರೋಧ್ಯೋಗ ಮುಕ್ತ ದೇಶವನ್ನಾಗಿ ಮಾಡಬೇಕು ಎಂದು ಕನಸನ್ನು ಕಟ್ಟಿಕೊಂಡವರು ಈ ಉಭಯ ನಾಯಕರು.

ನರೇಂದ್ರ ಮೋದಿ ಪ್ರಧಾನಿಯಾದ ನಂತರ ತಮ್ಮ ಯೋಜನೆಯಲ್ಲಿ ಹಲವಾರು ಮಹತ್ವಾಕಾಂಕ್ಷೆ ಯೋಜನೆಯನ್ನು ಜಾರಿಗೊಳಿಸಿದ್ದು ಅದರಲ್ಲಿ ಸ್ವ-ಉಧ್ಯೋಗಕ್ಕೆ ನೀಡಿದ್ದ ಪ್ರೋತ್ಸಾಹವೇ ಹೆಚ್ಚು. ಪ್ರಧಾನಿ ನರೇಂದ್ರ ಮೋದಿಯವರು ನಿರುಧ್ಯೋಗಿಗಳಿಗೆ ಮುದ್ರಾ ಯೋಜನೆಯನ್ನು ಜಾರಿಗೋಲಿಸುವ ಮೂಲಕ ಸ್ವ-ಉಧ್ಯೋಗಕ್ಕೆ ಭಾರೀ ಮಹತ್ವವನ್ನು ನೀಡಿದ್ದರು. ಭಾರತದಲ್ಲೇ ಸ್ವ-ಉಧ್ಯೋಗವನ್ನು ಸೃಷ್ಟಿಸಿ ಅದಕ್ಕೆ ಉತ್ತೇಜನವನ್ನು ನೀಡಿ ಒಂದು ಕಡೆ ಸ್ವಂತ ಬಲದ ಮೇಲೆ ಭಾರತೀಯರು ನಿಲ್ಲುವ ಹಾಗೆಯೂ ಮತ್ತೊಂದು ಕಡೆ ಭಾರತೀಯ ಆರ್ಥಿಕ ವ್ಯಸ್ಥೆಯನ್ನು ಸುಧಾರಿಸಲೂ ಆದ್ಯತೆಯನ್ನು ನೀಡಿದ್ದಾರೆ.

ಸ್ವ-ಉಧ್ಯೋಗದ ವಿಚಾರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರೂ ಹಿಂದೆ ಬಿದ್ದಿಲ್ಲ. ಅನೇಕ ವರ್ಷಗಳಿಂದಲೂ ಧರ್ಮಾಧಿಕಾರಿಗಳು ಸ್ವ-ಉಧ್ಯೋಗದ ಕನಸನ್ನು ಕಟ್ಟಿಕೊಂಡೇ ಬರುತ್ತಿರುವವರು. ಸ್ವ-ಉಧ್ಯೋಗಕ್ಕಾಗಿ “ರುಡ್ ಸೆಟ್” (ಗಾಮಾಭಿವೃದ್ಧಿ ಹಾಗೂ ಸ್ವ-ಉಧ್ಯೋಗ ತರಭೇತಿ ಸಂಸ್ಥೆ) ಎಂಬ ಸಂಸ್ಥೆಯನ್ನು 5ಕ್ಕಿಂತಲೂ ಅಧಿಕ ಕಡೆಗಳಲ್ಲಿ ಕಟ್ಟಿ ಲಕ್ಷಕ್ಕಿಂತಲೂ ಅಧಿಕ ಮಂದಿಗೆ ಸ್ವ-ಉಧ್ಯೋಗದ ತರಭೇತಿ ಹಾಗೂ ಅದಕ್ಕೆ ಬೇಕಾಗುವ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ವಿಶೇಷ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಇದು ಕರ್ನಾಟಕ ಮಾತ್ರವಲ್ಲದೆ ದೇಶದ ಇತಿಹಾಸದಲ್ಲೇ ಒಂದು ಮೈಲಿಗಲ್ಲು ಎಂದೇ ಪರಿಗಣಿಸಬಹುದು.

ಯೋಗದಲ್ಲೂ ವಿಶ್ವ ದಾಖಲೆ..!

ಎಸ್… ಪ್ರಧಾನಿ ನರೇಂದ್ರ ಮೋದಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಯೋಗದಲ್ಲೂ ವಿಶೇಷ ಆಸಕ್ತಿಯನ್ನು ಹೊಂದಿದ್ದು, ಅದರ ಪ್ರಚಾರಕ್ಕಾಗಿ ಭಾರೀ ಆಂದೋಲನವನ್ನೇ ನಡೆಸಿದ್ದಾರೆ. ಮೋದಿ ಪ್ರಧಾನಿಯಾದ ತಕ್ಷಣ ಜಗತ್ತಿನ ವಿವಿಧ ರಾಷ್ಟ್ರಗಳನ್ನು ಕರೆದು ಆರೋಗ್ಯಕ್ಕಾಗಿ ಯೋಗದಿನವನ್ನು ಆಚರಿಸಿದರೆ ಹೇಗೆ ಎಂಬ ಪ್ರಶ್ನೆಯನ್ನು ಇಟ್ಟಿದ್ದರು. ಇದಕ್ಕೆ ಜಗತ್ತಿನ 150ಕ್ಕಿಂತಲೂ ಅಧಿಕ ರಾಷ್ಟ್ರಗಳು ಬೆಂಬಲವನ್ನು ಸೂಚಿಸಿ ಭಾರತದ ಪುರಾಣ ಪ್ರತೀತಿ ಹೊಂದಿರುವ ಯೋಗವನ್ನು ಮುಸ್ಲಿಂ ಹಾಗೂ ಕ್ರೈಸ್ತ ರಾಷ್ಟ್ರಗಳೂ ಸೇರಿದಂತೆ ಎಲ್ಲಾ ರಾಷ್ಟ್ರಗಳೂ ಆಚರಿಸುವಂತೆ ಮಾಡಿದ್ದಾರೆ. ಇದು ನರೇಂದ್ರ ಮೋದಿಯವರ ಆರೋಗ್ಯದ ಬಗೆಗಿನ ಕಾಳಜಿಯೊಂದಿಗೆ ಭಾರತದಲ್ಲಿ ಹುಟ್ಟಿರುವ ಯೋಗವನ್ನು ವಿಶ್ವದಾದ್ಯಂತ ಪ್ರಚಾರ ಮಾಡುವ ಉದ್ದೇಶವಾಗಿತ್ತು. ಪ್ರತಿವರ್ಷ ಜೂನ್21ಕ್ಕೆ ನಡೆಯುವ ವಿಶ್ವ ಯೋಗ ದಿನಾಚರಣೆಗೆ ಜಗತ್ತೇ ಮಾರುಹೋಗಿದ್ದು ಮೋದೀಜಿಯ ಕಾರ್ಯ ನೈಪುಣ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.

ಇನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರೂ ಕೂಡಾ ಯೋಗದಲ್ಲಿ ಬಹಳ ಆಸಕ್ತಿ ಹೊಂದಿದ್ದು, ಹಲವಾರು ವರ್ಷಗಳಿಂದಲೂ ಯೋಗದಲ್ಲಿ ಜನತೆಯನ್ನು ಜಾಗೃತಿಪಡಿಸಿಕೊಂಡೇ ಬರುತ್ತಿದ್ದಾರೆ. ಆರಂಭದಿಂದಲೇ ಯೋಗದ ಕುರಿತಾದ ಮಹತ್ವವನ್ನು ಸಾರುತ್ತಾ ಬರುತ್ತಿದ್ದ ಧರ್ಮಾಧಿಕಾರಿಗಳು ತಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ ಹಾಗೂ ಗ್ರಾಮಸ್ಥರಿಗೆ ಓರ್ವ ಯೋಗ ಶಿಕ್ಷಕನನ್ನು ನೇಮಿಸಿ ಎಲ್ಲರಿಗೂ ಯೋಗದ ಲಾಭವನ್ನು ಪಡೆಯುವಲ್ಲಿ ಇತಿಹಾಸ ಸೃಷ್ಟಿಸಿದ್ದರು. ಮಾತ್ರವಲ್ಲದೆ ಒಂದೇ ಬಾರಿ 50 ಸಾವಿರ ಮಂದಿ ಯೋಗವನ್ನು ಏಕಕಾಲದಲ್ಲಿ ಮಾಡುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಬರೆದಿದ್ದರು. ಇದು ಕೂಡಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಧರ್ಮಾಧಿಕಾರಿಗಳ ಕಾರ್ಯ ವೈಖರಿಯನ್ನು ಬಣ್ಣಿಸಬಹುದಾದ ಸಾಮ್ಯತೆಗಳಾಗಿವೆ.

ದೈವಾರಾಧನೆಯಲ್ಲೂ ಸೇಮ್ ಫೇಸ್…!

ನರೇಂದ್ರ ಮೋದಿಯವರ ದೈವ ಭಕ್ತಿ ಹೊಸತೇನಲ್ಲ. ಅವರು ಮಾಡುವ ಒಂದೊಂದೂ ಆಚರಣೆಯೂ ದೈವ ಭಕ್ತಿಯ ಧ್ಯೋತಕವಾಗಿರುತ್ತದೆ. ಅಮೇರಿಕಾಗೆ
ಪ್ರಯಾಣ ಬೆಳೆಸಿದಾಗ ಅವರು ನವರಾತ್ರಿ ಆಚರಣೆಯನ್ನು ಪಾಲಿಸುತ್ತಿದ್ದರು. ಈ ವೇಳೆ ಅವರು ನೀರು ಹಾಗೂ ನಿಂಬೆ ರಸದ ಹೊರತಾಗಿ ಬರೋಬ್ಬರಿ ಹತ್ತು ದಿನಗಳ ಕಾಲ ಯಾವುದೇ ಆಹಾರಗಳನ್ನು ಸ್ವೀಕರಿಸುತ್ತಿರಲಿಲ್ಲ. ಆದರೂ ಅವರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಚತುರತೆಯನ್ನು ನೋಡಿದ ವಿಶ್ವದ ದೊಡ್ಡಣ್ಣನೇ ಬೆಚ್ಚಿ ಬಿದ್ದಿದ್ದ. 10 ದಿನಗಳ ಕಾಲ ಊಟ ಮಾಡದೆ ಹೀಗೂ ಇರಲು ಸಾಧ್ಯವೇ ಎಂದು ಮೂಗಿನ ಮೇಲೆ ಬೆರಳಿಟ್ಟುಬಿಟ್ಟಿದ್ದರು. ಅದುವೇ ನಮ್ಮ ಭಾರತದ ಶಕ್ತಿ ಎಂದು ಮೋದಿ ಜಗತ್ತಿಗೆ ಸಾರಿದ್ದರು.

ಇತ್ತೀಚೆಗೆ ಧರ್ಮಸ್ಥಳಕ್ಕೆ ಬಂದ ವೇಳೆ ಕೂಡಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಾವುದೇ ಆಹಾರವನ್ನೂ ಸ್ವೀಕರಿಸದೆ ಮಂಜುನಾಥನ ದರ್ಶನವನ್ನು
ಮಾಡಿದ್ದರು. ಈ ವೇಳೆ ಸ್ವತಃ ಉಪವಾಸ ನಿರತರಾಗಿದ್ದ ಮೋದಿಯವರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಸಿಯಾಳವನ್ನು ಕೊಟ್ಟು ಉಪಚರಿಸಿದ್ದರು. ಮೋದಿ ಮಂಜುನಾಥನ ಬಳಿ ವಿಶೇಷ ಮಾಡುವ ಉದ್ದೇಶದಿಂದ ಈ ವೃತ ಕೈಗೊಂಡಿದ್ದಾಗಿ ಹೆಗ್ಗಡೆ ಬಳಿಯಲ್ಲಿ ಹೇಳಿಕೊಂಡಿದ್ದರು. ಶುದ್ಧ ಸಸ್ಯಾಹಾರಿಯಾಗಿರುವ ನರೇಂದ್ರ ಮೋದಿಯವರು ದೈವ ಭಕ್ತಿಯಲ್ಲಿ ಯಾವುದೇ ರಾಜಿಯನ್ನೂ ಮಡಿಕೊಳ್ಳುವುದಿಲ್ಲ.

ಇನ್ನು ಧರ್ಮಾಧಿಕಾರಿಗಳ ದೈವ ಭಕ್ತಿಯನ್ನು ಹೇಳಬೇಕೆಂದೇನಿಲ್ಲ. ಮಂಜುನಾಥನೆಂದರೆ ಧರ್ಮಾಧಿಕಾರಿಗಳ ಮುಂದೆ ಯಾವುದೂ ಇಲ್ಲ. ಸಾವಿರಾರು
ದೇವಸ್ಥಾನಗಳಿಗೆ ಅವರು ನೀಡುವ ಅನುದಾನ ಹಾಗೂ ದೇವಸ್ಥಾನಗಳಿಗೆ ಅವರು ನೀಡುವ ಪ್ರೋತ್ಸಾಹ ಎಲ್ಲ ಅಗ್ರಗಣ್ಯ. ತಮ್ಮ ಗ್ರಾಮಾಭಿವೃದ್ಧಿಯ ಯೋಜನೆಯ ಮೂಲಕ ಪ್ರತಿ ಗ್ರಾಮದಲ್ಲೂ ಪ್ರತಿ ವರ್ಷವೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಮಾಡುವ ಮೂಲಕ ಮತ್ತೊಂದು ದಾಖಲೆಯನ್ನೂ ಬರೆದಿದ್ದರು.

ಸ್ವಚ್ಚ ಭಾರತದ ಹರಿಕಾರರು ಇವರು…

ಸ್ವಚ್ಚ ಭಾರತ, ಈ ಹೆಸರು ಕೇಳಿದರನೇ ಪ್ರಧಾನಿ ನರೇಂದ್ರ ಮೋದಿಯವರು ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ಭಾರತದಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು ಎನ್ನುವ ಜಾಗೃತಿಯನ್ನು ಸ್ವತಃ ವಿರೋಧ ಪಕ್ಷಗಳೂ ಒಪ್ಪುವಂತೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರತಿಯೊಬ್ಬರ ಕೈನಲ್ಲೂ ಪೊರಕೆ ಹಿಡಿದುಕೊಳ್ಳುವಂತೆ ಮಾಡಿದ್ದರು. ಇದು ರಾಷ್ಟ್ರ ಮಟ್ಟದಲ್ಲೇ ಆಂದೋಲನವನ್ನು ಸೃಷ್ಟಿಸಿತ್ತು. ಸಂಘ ಸಂಸ್ಥೆಗಳು ಸಹಿತ ಅನೇಕ ಸಿನಿತಾರೆಯರೂ ಮೋದಿಯವರ ಈ ಸ್ವಚ್ಚ ಭಾರತ ಆಂದೋಲನಕ್ಕೆ ಕೈ ಜೋಡಿಸಿ ಸೈ ಎಂದೆನಿಸಿ ಬಿಟ್ಟಿದ್ದರು.

ಸ್ವಚ್ಚತಾ ಕಾರ್ಯಕ್ರಮಗಳಲ್ಲೂ ವೀರೇಂದ್ರ ಹೆಗ್ಗಡೆಯವರು ಹಿಂದೆ ಬಿದ್ದಿಲ್ಲ. ತಮ್ಮ ಕ್ಷೇತ್ರ ಮಾತ್ರವಲ್ಲದೆ ತನ್ನ ಗ್ರಾಮಾಭಿವೃದ್ಧಿ ಯೋಜನೆ ವ್ಯಾಪಿಸಿರುವ ಅಷ್ಟೂ ಪ್ರದೇಶಗಳಲ್ಲೂ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿದ್ದರು. ಅದರಲ್ಲೂ ವಿಶೇಷವೆಂದರೆ ತಾವು ಧರ್ಮಾಧಿಕಾರಿಗಳಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳವು ದೇಶದ ಅತ್ಯಂತ ಸ್ವಚ್ಚ ಧಾರ್ಮಿಕ ಕ್ಷೇತ್ರ ಎಂಬ ಕೀರ್ತಿಗೆ ಪಾತ್ರವಾಗಿರುವುದೂ ಹೆಗ್ಗಡೆಯವರ ಕಾರ್ಯದಕ್ಷತೆಗೆ ಕೈಗನ್ನಡಿಯಾಗಿದೆ.

ಪಾನ ಮುಕ್ತದ ಸಂಕಲ್ಪ ಇಂದು ನಿನ್ನೆಯದಲ್ಲ…

ಪ್ರಧಾನಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದೆಲ್ಲೆಡೆ ಮದ್ಯಪಾನವನ್ನು ನಿಷೇಧ ಮಾಡಿದ್ದರು. ಗುಜರಾತಿನಲ್ಲಿ ಮದ್ಯಪಾನ ಮುಕ್ತ ರಾಜ್ಯವನ್ನಾಗಿ ಮೊಟ್ಟ ಮೊದಲ ಬಾರಿಗೆ ಹೊಸ ಅಧ್ಯಾಯಕ್ಕೆ ಭಾಷ್ಯವನ್ನು ಬರೆದಿದ್ದರು. ನಂತರ ಇಂತಹ ಯೋಜನೆಗಳು ಹಲವಾರು ಕಡೆಗಳಲ್ಲಿ ಜಾರಿಗೆ ಬಂದಿತ್ತು.

ಇದನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳು ವಿಶೇಷವಾಗಿಯೇ ನಡೆಸಿದ್ದರು. ಮದ್ಯಪಾನ ಮುಕ್ತ ಸಮಾಜಕ್ಕಾಗಿ ಜನ ಜಾಗೃತಿಯನ್ನು ನಡೆಸಿ ಮತ್ತೊಂದು ವಿಶ್ವ ದಾಖಲೆಯನ್ನು ಬರೆದಿದ್ದರು. ಮದ್ಯಪಾನ ಮುಕ್ತಿಗಾಗಿ ಶಿಬಿರಗಳನ್ನು ಆಯೋಜಿಸುವ ಮೂಲಕ ಜಾಗೃತಿಯನ್ನು ಮೂಡಿಸುತ್ತಿದ್ದು, ಒಂದು ಶಿಬಿರಗಳಲ್ಲಿ ನೂರಕ್ಕೂ ಅಧಿಕ ಜನರ ಪಾನ ವ್ಯಸನಿಗಳನ್ನು ಸೇರಿಸಿ ಶಿಬಿರಗಳನ್ನು ಮಾಡಿ ನವ ಜೀವನಕ್ಕೆ ಕಾಲಿಡುವ ಸಂಕಲ್ಪವನ್ನು ಮಾಡಲಾಗುತ್ತಿದೆ. ಈಗಾಗಲೇ 1100ಕ್ಕೂ ಅಧಿಕ ಶಿಬಿರಗಳನ್ನು ಧರ್ಮಸ್ಥಳದ ವತಿಯಿಂದ ನಡೆದಿದ್ದು, ಲಕ್ಷಾಂತರ ಮಂದಿ ತಮ್ಮಲ್ಲಿದ್ದ ಮದ್ಯ ವ್ಯಸನದಿಂದ ದೂರವಾಗಿ ನವ ಜೀವನವನ್ನು ಆರಂಭಿಸಿದ್ದಾರೆ. ಇದಕ್ಕಾಗಿ ಹೆಗ್ಗಡೆಯವರು ನವ ಜೀವನ ಸಮಿತಿಯೊಂದನ್ನೂ ರಚಿಸಿದ್ದಾರೆ.

ರಾಜಕೀಯದಲ್ಲೂ ಅವಕಾಶ…!

ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ರಾಜಕೀಯದಲ್ಲೂ ಬಹಳ ಅವಕಾಶಗಳಿದ್ದವು. ಈ ಹಿಂದೆ ರಾಷ್ಟ್ರಪತಿ ಚುನಾವಣೆಗೆ ಭಾರತೀಯ ಜನತಾ ಪಕ್ಷದಿಂದ ಹೆಸರು ಕೇಳಿ ಬಂದಿತ್ತು. ನಂತರ ರಾಜ್ಯಸಭೆಯಲ್ಲೂ ಹೆಗ್ಗಡೆಯವರು ಸ್ಪರ್ಧಿಸುತ್ತಾರೆ ಎನ್ನುವ ಊಹಾಪೋಹವೂ ಇತ್ತು. ಆದರೆ ಹೆಗ್ಗಡೆಯವರು ರಾಜಕೀಯದಲ್ಲಿ ಅಷ್ಟೊಂದು ಆಸಕ್ತಿಯನ್ನು ಹೊಂದಿರದ ಕಾರಣ ರಾಜಕೀಯದ ಯಾವುದೇ ಮಜಲುಗಳ ಗೋಜಿಗೆ ಹೋಗಿಲ್ಲ ಎನ್ನಲಾಗಿದೆ.

ಸಿದ್ದರಾಮಯ್ಯರೆಂದರೆ ಯಾಕೆ ದೂರ..?

ಮುಖ್ಯಮಂತ್ರಿ ಸಿದ್ದರಾಮಯ್ಯರೆಂದರೆ ಪಕ್ಕಾ ಬಲಪಂಥೀಯ ಚಿಂತಕರಿಕೆ ಸ್ವಲ್ಪ ದೂರವೇ. ಯಾಕೆಂದರೆ ಸದಾ ಆಸ್ತಿಕ ವಿರೋಧಿ ಹೇಳಿಕೆ ಹಾಗೂ ನಡವಳಿಕೆಗಳ ಮೂಲಕ ಹೆಸರಾಗಿರುವ ಮುಖ್ಯಮಂತ್ರಿಗಳನ್ನು ಕಂಡರೆ ಸ್ವತಃ ಹೆಗ್ಗಡೆಯವರಿಗೂ ದೂರ. ಕೆಲ ತಿಂಗಳುಗಳ ಹಿಂದೆ ಮಾಂಸಾಹಾರ ತಿಂದು ಧರ್ಮಸ್ಥಳಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳ ಮೇಲೆ ಹೆಗ್ಗಡೆಯವರಿಗೆ ಸಿಟ್ಟು ಇತ್ತು. ನಂತರ ಮಠಗಳನ್ನು ಹಾಗೂ ದೇವಸ್ಥಾನಗಳನ್ನು ಸರ್ಕಾರದ ಸುಪರ್ಧಿಗೆ ತೆಗೆದುಕೊಳ್ಳುವ ವಿಚಾರವಾಗಿ ಹೆಗ್ಗಡೆಯವರು ಬಹಿರಂಗವಾಗಿಯೇ ಮುಖ್ಯಮಂತ್ರಿಗಳ ನಡೆಯನ್ನು ಖಂಡಿಸಿದ್ದು ಸಿದ್ದರಾಮನಯ್ಯರ ಮೇಲೆ ಮತ್ತಷ್ಟು ಕೋಪಗೊಳ್ಳುವಂತೆ ಮಾಡಿತ್ತು.

ಒಟ್ಟಾರೆ ಹೇಳುತ್ತಾ ಹೋದರೆ ಒಂದಲ್ಲಾ ಎರಡಲ್ಲ, ನೂರಾರು ಹೋಲಿಕೆಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರಿಗೆ ಇದೆ. ಹೀಗಾಗಿಯೇ ಅವರು ಎಲ್ಲಾ ವಿಚಾರಗಳಲ್ಲೂ ಸಮಾನ ಅರ್ಹತೆಯನ್ನೂ ಹಾಗೂ ಸಮಾನ ಅವಕಾಶವನ್ನೂ ಹೊಂದಿದ್ದಾರೆ. ಒಬ್ಬರು ರಾಜಕೀಯದ ಮಾರ್ಗವಾಗಿ ಇತಿಹಾಸ ಸೃಷ್ಟಿಸಿದ್ದರೆ ಮತ್ತೊಬ್ಬರು ಧಾರ್ಮಿಕ ಕ್ಷೇತ್ರದ ಮಾರ್ಗವಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಹೆಗ್ಗಡೆಯವರೂ ರಾಜಕೀಯಕ್ಕೆ ಬಂದರೆ ಮೋದಿಯಂತಹಾ ಚಿಂತನೆಗಳನ್ನು ಒಳಗೊಂಡು ಅಂತಹಾ ನಾಯಕತ್ವವನ್ನೇ ಪಾಲಿಸಿಕೊಂಡು ಬರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.

-ಸುನಿಲ್ ಪಣಪಿಲ

Tags

Related Articles

Close