ಪ್ರಚಲಿತ

ತಮ್ಮ ಸಾಹಸದಿಂದ ಸಮುದ್ರರಾಜನನ್ನೆ ಮಣಿಸಿ ಪ್ರಪಂಚ ಪರ್ಯಟನೆಗೈದ INSV ತಾರಿಣಿಯ ಯಶೋಗಾಥೆ ಪ್ರತಿ ಭಾರತೀಯ ಮಹಿಳೆಯರಿಗೆ ಪ್ರೇರಣಾದಾಯಿಯಾಗಿ ಸಾಧಿಸಲು ಪ್ರೇರೇಪಿಸಲಿ

ಭಾರತದ ಮಹಿಳೆಯರು ಸನಾತನ ಕಾಲದಿಂದಲೂ ಧೈರ್ಯ ಶಾಲಿಗಳೆ. ಕಾಳಿ, ಭೈರವಿ, ದುರ್ಗೆ,ಚಾಮುಂಡಿ ಅವತರಿಸಿದ ನಾಡಿದು. ಮತಾಂಧ ಕಾಮುಕರ ಆಕ್ರಮಣ ಈ ದೇಶದ ಮೇಲಾಗದಿರುತ್ತಿದ್ದರೆ ಪ್ರಪಂಚ ಕಂಡು ಕೇಳರಿಯದಂತಹ ಸಾಧನೆಗಳನ್ನು ಶತಮಾನಗಳ ಹಿಂದೆಯೆ ಸಾಧಿಸುತ್ತಿದ್ದರು ನಮ್ಮ ವೀರ ರಮಣಿಯರು. ಶತಮಾನಗಳ ಬೌದ್ಧಿಕ ದಿವಾಳಿತನದಿಂದ ತತ್ತರಿಸುತ್ತಿರುವ ಭಾರತೀಯರು, ಸನಾತನ ಧರ್ಮದಲ್ಲಿ ಸ್ತ್ರೀಯರನ್ನು ಪುರುಷರಂತೆ ಸಮಾನವಾಗಿ(ಅರ್ಧ ನಾರೀಶ್ವರ) ಕಾಣಲಾಗುತ್ತದೆ ಎನ್ನುವುದನ್ನು ಮರೆತೆ ಬಿಟ್ಟಿದ್ದಾರೆ. ವೇದ-ಉಪನಿಷತ್ತುಗಳನ್ನು ಕೇವಲ ಋಶಿಗಳು ಮಾತ್ರವಲ್ಲ, ಋಷಿಕಾಗಳೂ ಬರೆದಿದ್ದಾರೆ ಎನ್ನುವುದನ್ನು ಮರೆತಿದ್ದಾರೆ. ಭಾರತ ಮತ್ತೆ ಸನಾತನ ಸಂಸ್ಕೃತಿಗೆ ಮರಳುತ್ತಿದೆ. ಬಲವಂತವಾಗಿ ತನಗೆ ತೊಡಿಸಿದ ದಾಸ್ಯದ ಬೇಡಿಗಳನ್ನು ಕಳಚಿಕೊಂಡು ದಿಗ್ವಿಜಯ ಯಾತ್ರೆ ಕೈಗೊಳ್ಳುವ ಪ್ರಯತ್ನದಲ್ಲಿ ನಮ್ಮ ಭಾರತೀಯ ನಾರಿಯರು ಹೆಜ್ಜೆ ಇಟ್ಟಿದ್ದಾರೆ. ಇದಕ್ಕೆ ಅತ್ಯುತ್ತಮ ನಿದರ್ಶನ INSV ತಾರಿಣಿಯ ಭೂ ಪರಿಕ್ರಮಣ.

INSV ತಾರಿಣಿಯ ಆರು ಮಹಿಳೆಯರ ದಂಡಯಾತ್ರೆ ಅಂದು ಕೊಂಡಷ್ಟು ಸುಲಭವಾಗಿರಲಿಲ್ಲ. ಮೂಲದಲ್ಲಿ ಮಾತೃ ಪ್ರಧಾನವಾಗಿದ್ದ ಸಮಾಜ ಜಿಹಾದಿಗಳ ಆಕ್ರಮಣದ ಬಳಿಕ ಪುರುಷ ಪ್ರಧಾನ ಸಮಾಜವಾಗಿ ಮಾರ್ಪಟ್ಟಿತು. ಭಾರತೀಯ ಸೇನೆ ಎಂದರೆ ಅಲ್ಲಿಗೆ ಪುರುಷರಿಗೇ ಪ್ರಾಧಾನ್ಯ. ಅಂತಹ ಪುರುಷ ಪ್ರಧಾನ ಮನಸ್ಥಿತಿಗೆ ಸಡ್ಡು ಹೊಡೆದು ಸಾಧಿಸಿ ತೋರಿಸುವ ಛಲದಿಂದ ಸಮುದ್ರ ಮಾರ್ಗದಲ್ಲಿ ಭೂ ಪರಿಕ್ರಮಣ ಮಾಡುವ ನಿರ್ಧಾರ ಕೈಗೊಳ್ಳುತ್ತಾರೆ ಆರು ವೀರ ರಮಣಿಯರು. ಸ್ತ್ರೀ ಸಶಕ್ತೀಕರಣಕ್ಕೆ ಹೆಚ್ಚು ಒತ್ತು ಕೊಡುವ ಮೋದಿಜಿಯವರ ಶ್ರೀ ರಕ್ಷೆ ಮತ್ತು ಸ್ವತಃ ಮಹಿಳಾ ರಕ್ಷಣಾ ಸಚಿವೆಯನ್ನು ಹೊಂದಿರುವ ಸೇನೆಯ ಅಭಯ ಹಸ್ತ ದೊರೆತ ಮೇಲೆ ಕೇಳಬೇಕೆ? ನೌಕಾಸೇನೆಯ ಸಹಾಯದಿಂದ ಈ ಹೆಣ್ಣು ಮಕ್ಕಳು ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ.

ಗೋವಾದಲ್ಲಿ ಆರಂಭವಾದ “ನವಿಕಾ ಸಾಗರ್ ಪರಿಕ್ರಮ”ವು 21,600 ನಾಟಿಕಲ್ ಮೈಲುಗಳಷ್ಟು ದೂರ ಕ್ರಮಿಸಿ ಜಗತ್ತಿಗೇ ಸುತ್ತು ಬರುವ ಯೋಜನೆ. ಗಟ್ಟಿ ಗುಂಡಿಗೆಯ ಗಂಡಸರಿಗೆ ಕಷ್ಟವಾಗುವಂತಹ ಈ ಪರಿಕ್ರಮವನ್ನು ಆರು ಹೆಣ್ಣು ಮಕ್ಕಳು ಯಾವೊಬ್ಬ ಪುರುಷನ ಸಹಾಯವಿಲ್ಲದೆಯೆ ಸಾಧಿಸಿ ತೋರಿಸಿದ್ದಾರೆ.

ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಶಿ,
ಲೆಫ್ಟಿನೆಂಟ್ ಕಮಾಂಡರ್ ಪ್ರತಿಭಾ ಜಾಮ್ವಾಲ್,
ಲೆಫ್ಟಿನೆಂಟ್ ಐಶ್ವರ್ಯಾ ಬೊಡ್ಡಪತಿ,
ಲೆಫ್ಟಿನೆಂಟ್ ಕಮಾಂಡರ್ ಪತಾಪಪಲ್ಲಿ ಸ್ವಾತಿ,
ಲೆಫ್ಟಿನೆಂಟ್ ವಿಜಯ ದೇವಿ ಮತ್ತು
ಲೆಫ್ಟಿನೆಂಟ್ ಪಾಯಲ್ ಗುಪ್ತಾ

ಈ ಆರು ಮಹಿಳಾ ನೌಕಾಧಿಕಾರಿಗಳು ಪೃಥ್ವಿ ಪರಿಭ್ರಮಣೆ ಮಾಡಬೇಕೆಂಬ ತೀರ್ಮಾನ ಕೈಗೊಂಡಾಗ ಪುರುಷರ ಸಹಾಯವಿಲ್ಲದೆ ಹೇಗೆ ದೋಣಿಯನ್ನು ನಿಭಾಯಿಸುತ್ತೀರಿ ಮತ್ತು ನ್ಯಾವಿಗೇಟ್ ಮಾಡುತ್ತೀರಿ ಎಂದು ಸ್ವತಃ ಅವರ ಪುರುಷ ಸಹವರ್ತಿಗಳೆ ಹುಬ್ಬೇರಿಸಿದ್ದರೆನ್ನುತ್ತಾರೆ ಲೆಫ್ಟಿನೆಂಟ್ ಐಶ್ವರ್ಯಾ ಬೊಡ್ಡಪತಿ. ಇದು ಕೇವಲ ಸ್ನಾಯು ಶಕ್ತಿಯ ವಿಚಾರವಲ್ಲ. ಎಷ್ಟೋ ಸಾರಿ ಅನುಭವಿ ಯುವಕರೂ ಕೂಡಾ ದೋಣಿಯನ್ನು ಹಾನಿಗೊಳಪಡಿಸುತ್ತಾರೆ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಐಶ್ವರ್ಯ. ಕುಖ್ಯಾತ ಡ್ರೇಕ್ ಪ್ಯಾಸೇಜ್ ಅನ್ನು ಹಾದು ಹೋಗುವುದು ಪುರುಷರಿಗೂ ಕಷ್ಟ, ಅಂತಹದರಲ್ಲಿ ಆರು ಮಹಿಳೆಯರು ಇದನ್ನು ಸಾಧಿಸಿದ್ದಾರೆಂದರೆ ಅವರ ಸಾಧನೆಗೆ ಸೈ ಎನ್ನಲೇ ಬೇಕು.

INSV ತಾರಿಣಿ ಕೇಪ್ ಟೌನ್ ಗೆ ತಲುಪಿದಾಗ ಅಲ್ಲಿನ ಇಮಿಗ್ರೇಶನ್ ಆಫೀಸಿನ ವ್ಯಕ್ತಿಯೊಬ್ಬರು ಆರು ಹುಡುಗಿಯರನ್ನು ಕಂಡು ಆಶ್ಚರ್ಯ ಚಕಿತರಾಗುತ್ತಾರೆ ಮತ್ತು ಹುಡುಗಿಯರಿಗೆ “ಆರು ಹುಡುಗಿಯರು. ನ್ಯಾವಿಗೇಟರ್ ಎಲ್ಲಿದ್ದಾರೆ?” ಎಂದು ಪ್ರಶ್ನೆ ಮಾಡಿದಾಗ ಬಿದ್ದು ಬಿದ್ದು ನಕ್ಕಿದ್ದರಂತೆ ಹುಡುಗಿಯರು. ಇಪ್ಪತ್ತೊಂದನೆ ಶತಮಾನದಲ್ಲಿದ್ದರೂ ಇವತ್ತಿಗೂ ಪುರುಷನ ಸಹಾಯವಿಲ್ಲದೆ ಮಹಿಳೆ ಏನನ್ನೂ ಸಾಧಿಸಲಾರಳು ಎಂದು ಹಲವರು ಆಲೋಚಿಸುತ್ತಾರೆ. ಅಂತಹವರ ಪೂರ್ವಾಗ್ರಹಗಳನ್ನು ಛಿದ್ರಗೊಳಿಸಿದೆ ನವಿಕಾ ಪರಿಕ್ರಮ!

ಹುಡುಗಿಯರ ಈ ಸಾಧನೆಯನ್ನು ದೇಶವೇ ಕೊಂಡಾಡಿದೆ. ಭಾರತೀಯ ನೌಕಾ ಸೇನೆಯು ಇದನ್ನು ದಿಗ್ಭ್ರಮೆಗೊಳಿಸುವ ಸಾಧನೆ ಎಂದು ಬಣ್ಣಿಸಿದೆ ಮಾತ್ರವಲ್ಲ ಹೆಣ್ಣು ಮಕ್ಕಳು ದೊಡ್ದ ಕನಸನ್ನು ಕಾಣಬಲ್ಲರು ಹಾಗೂ ಅದನ್ನು ನನಸಾಗಿಸಬಲ್ಲರು ಎಂದಿದೆ. ತಾರಿಣಿಯ ಯಶಸ್ಸು ಭಾರತೀಯ ಮಹಿಳೆಯರು ಇನ್ನೊಂದು ಗಾಜಿನ ಚಾವಣಿಯನ್ನು ಛಿದ್ರಗೊಳಿಸಿರುವ ಪ್ರಮಾಣ. ಮಹತ್ತರವಾದುದನ್ನು ಸಾಧಿಸಬೇಕೆಂದು ಕನಸು ಕಾಣುತ್ತಿರುವ ದೇಶದ ಲಕ್ಷಾಂತರ ಮಹಿಳೆಯರು ತಾರಿಣಿಯಿಂದ ಪ್ರೇರಣೆ ಪಡೆಯಬಹುದು. ತಾರಿಣಿಯ ಯಶಸ್ಸಿಗೆ ಪ್ರಪಂಚವೆ ಬೆಕ್ಕಸ ಬೆರಗಾಗಿದೆ. ವಿಶ್ವದೆದುರು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ತಾರಿಣಿ ತಂಡಕ್ಕೆ ದೇಶ ಚಿರರುಣಿ.

ಸುಂಟರಗಾಳಿ, ಬಿರುಗಾಳಿ, ಎತ್ತರೆತ್ತರದ ಅಲೆಗಳು, ಮಧ್ಯೆ ಬೋಟಿನಲ್ಲಾದ ತಾಂತ್ರಿಕ ತೊಡಕುಗಳು ಇವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಿ ಎರಡು ಬಾರಿ ಭೂಮಧ್ಯೆ ರೇಖೆಯನ್ನು ದಾಟಿದೆ ತಾರಿಣಿ ತಂಡ!! ಸಾಧಿಸುವ ಛಲವೊಂದಿದ್ದರೆ ಮಾರ್ಗದಲ್ಲಿ ಬರುವ ಕಷ್ಟಗಳು ನಮ್ಮನ್ನು ಧೃತಿಗೆಡಿಸಲಾರವು ಎಂಬುದಕ್ಕೆ “ತಾರಿಣಿಗಳೆ” ಸಾಕ್ಷಿ. ಭಾರತದ ಸನಾತನ ಧರ್ಮದ ತಿರುಳೇ “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತಾ ತತ್ರ ದೇವತಾ”. ಹೆಣ್ಣನ್ನು ಕೀಳಾಗಿ ಕಾಣುವ ಪ್ರವೃತ್ತಿ ಸನಾತನ ಧರ್ಮದಲ್ಲಿಲ್ಲ. ಇದೆಲ್ಲ ಮತಾಂಧರ ಕೊಡುಗೆ. ನಮ್ಮ ಹೆಣ್ಣು ಮಕ್ಕಳು ಕನಸು ಕಾಣಲಿ, ಕಂಡ ಕನಸನ್ನು ನನಸಾಗಿಸಲಿ ಎನ್ನುತ್ತಾ ತಾರಿಣಿ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಈ ತಂಡದಿಂದ ದೇಶವೆ ಹೆಮ್ಮೆ ಪಡುವಂತಹ ಕಾರ್ಯ ಮತ್ತಷ್ಟು ನಡೆಯಲಿ.

-ಶಾರ್ವರಿ

Tags

Related Articles

Close