ಪ್ರಚಲಿತ

ನ್ಯೂಯಾರ್ಕ್ ನಗರದ ಪೋಲಿಸ್ ಅಧಿಕಾರಿಯಾಗಿ ನಿಯುಕ್ತಿ ಆದ ಪ್ರಪ್ರಥಮ ಭಾರತೀಯ ಸಿಖ್ ಮಹಿಳೆ ಗುರ್ ಸೋಚ್ ಕೌರ್ ಗೆ ಭಾರತೀಯರಿಂದ ಅಭಿನಂದನೆಗಳ ಮಹಾಪೂರ!!

ಶೌರ್ಯಕ್ಕೆ ಇನ್ನೊಂದು ಹೆಸರೇನೆಂದು ಕೇಳಿದರೆ ಬಹುಶ ಸಿಖ್ಖರು ಎನ್ನಬಹುದು. ದೇಶ ಮತ್ತು ಧರ್ಮ ರಕ್ಷಣೆಗಾಗಿ ಪ್ರಾಣತ್ಯಾಗಕ್ಕೂ ಸಿದ್ದ ಈ ಸಿಖ್ ಸಮುದಾಯ. ಭಾರತದ ಪುರುಷರು ಎಷ್ಟು ಪರಾಕ್ರಮಿಗಳೋ ಮಹಿಳೆಯರೂ ಅಷ್ಟೇ ವೀರ ರಮಣಿಯರು. ಭಾರತೀಯ ಸಿಖ್ ಸಮುದಾಯದ ಮಹಿಳೆಯೊಬ್ಬಳು ನ್ಯೂಯಾರ್ಕ್ ನಗರದ NYPD ಅಲ್ಲಿ ಪೋಲೀಸ್ ಅಧಿಕಾರಿಯಾಗಿ ನಿಯುಕ್ತಿ ಆಗಿರುವುದು ಕೇವಲ ಸಿಖ್ ಸಮುದಾಯಕ್ಕೆ ಮಾತ್ರವಲ್ಲ, ದೇಶಕ್ಕೇ ಹೆಮ್ಮೆಯ ವಿಷಯ.

ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಒಬ್ಬ ಪಗಡಿ ತೊಟ್ಟ ಸಿಖ್ ಮಹಿಳೆ, ನ್ಯೂಯಾರ್ಕಿನ ಪೋಲಿಸ್ ಅಧಿಕಾರಿಯಾಗಿ ನಿಯುಕ್ತಿ ಆಗಿರುವುದು ಸಾಮಾನ್ಯ ವಿಷಯವಲ್ಲ. ನ್ಯೂಯಾರ್ಕ್ ನಗರ ಪೊಲೀಸ್ ಇಲಾಖೆಯ ಸಹಾಯಕ ಪೋಲೀಸ್ ಅಧಿಕಾರಿಯಾಗಿ ನಿಯುಕ್ತಿ ಆಗಿರುವ ಗುರು ಸೋಚ್ ಕೌರ್ ಕೋಟ್ಯಂತರ ಭಾರತೀಯ ನಾರಿಯರಿಗೆ ಪ್ರೇರಣೆ ಆಗಲಿದ್ದಾರೆ. ಭಾರತದಿಂದ ಸಾವಿರಾರು ಮೈಲಿ ದೂರವಿರುವ ಅಮೇರಿಕಾದ ನ್ಯೂಯಾರ್ಕ್ ನಗರದ ಪ್ರತಿಷ್ಟಿತ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಅಧಿಕಾರಿಯಾಗಿ ನಿಯುಕ್ತಿ ಆಗಿರುವುದು ಸಾಮಾನ್ಯ ವಿಷಯವೆ? ಪುರುಷರಿಗೇ ಕಬ್ಬಿಣದ ಕಡಲೆಯಾಗಿರುವ ಈ ಇಲಾಖೆಯಲ್ಲಿ ಒಬ್ಬ ಮಹಿಳೆ, ಅದೂ ಭಾರತೀಯ ಮೂಲದ ಮಹಿಳೆ, ಉನ್ನತ ಹುದ್ದೆ ಅಲಂಕರಿಸಿರುವುದು ಸಾಧನೆಯೆ ಸರಿ.

ಸಿಖ್ ಸಮುದಾಯದ 160 ಮಂದಿ ಇಲಾಖೆಯ ವಿವಿಧ ವಿಭಾಗಗಲಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಇವರೆಲ್ಲರೂ ಪುರುಷರೆ ಆಗಿದ್ದರು. ಮೊತ್ತ ಮೊದಲ ಬಾರಿಗೆ ಇಲಾಖೆಯಲ್ಲಿ ಸಿಖ್ ಮಹಿಳೆಗೆ ಅವಕಾಶ ನೀಡಲಾಗಿದೆ. ನ್ಯೂಯಾರ್ಕ್ ಸಿಟಿ ಪೊಲೀಸ್ ಅಕಾಡೆಮಿಯಿಂದ ತೇರ್ಗಡೆ ಹೊಂದಿ ಕಳೆದ ವಾರ ಪದವಿ ಪಡೆದ ನಂತರ, ಕೌರ್ ನ್ಯೂಯಾರ್ಕ್ ಪೋಲಿಸ್ ಇಲಾಖೆಯ ಸಹಾಯಕ ಪೋಲಿಸ್ ಆಫೀಸರ್ (ಎಪಿಒ) ಆಗಿ ನಿಯುಕ್ತಿ ಹೊಂದಿದ್ದಾರೆ. ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಸಹ ಕೌರ್ ಬಗ್ಗೆ ಟ್ವೀಟ್ ಮಾಡಿ ಹರ್ಷ ವ್ಯಕ್ತ ಪಡಿಸಿದ್ದಾರೆ. ಅಮೆರಿಕದಲ್ಲಿ ಸಿಖ್ ಧರ್ಮದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಸೃಷ್ಟಿಸಲು ಕೌರ್ ನಿಯುಕ್ತಿ ಸಹಾಯ ಮಾಡಲಿದೆ ಎಂದು ಆಶಾ ಭಾವನೆ ಹೊಂದಿದ್ದಾರೆ ಹರ್ದೀಪ್ ಸಿಂಗ್. ನ್ಯೂಯಾರ್ಕಿನ ಸಹಾಯಕ ಪೋಲೀಸ್ ಆಫೀಸರ್ ಆಗಿ ನಿಯುಕ್ತಿ ಆಗಿದ್ದಕ್ಕೆ ಕೌರ್ ಗೆ ಭಾರತದಿಂದಲೂ ಅಭಿನಂದನೆಗಳ ಮಹಾಪೂರವೆ ಹರಿದು ಬರುತ್ತಿದೆ.

ಅಮೇರಿಕಾದಲ್ಲಿ ಸಿಖ್ ಸಮುದಾಯದ ಬಗ್ಗೆ ಇರುವ ಪೂರ್ವಾಗ್ರಹಗಳನ್ನು ಕಡಿಮೆ ಮಾಡಲು ‘ಸಿಖ್ ಪಗಡಿ” ತೊಟ್ಟ ಮಹಿಳೆಯ ನಿಯುಕ್ತಿ ಸಹಾಯಕವಾಗಬಹುದೆನ್ನುವುದು ಸಿಖ್ ಸಮುದಾಯದ ಭಾವನೆ. ಒಬ್ಬ ನಿಜವಾದ ಸಿಖ್ ತನ್ನ ಪಗಡಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾನೆ. ಅದು ಆತನ ಆತ್ಮ ಸಮ್ಮಾನದ ಸಂಕೇತ. ಆದರೆ 9/11 ಬಳಿಕ ಅಮೇರಿಕಾದಲ್ಲಿ ಸುರಕ್ಷತೆಯ ನೆಪವೊಡ್ಡಿ ಅಲ್ಲಿನ ಅಧಿಕಾರಿಗಳು ಸಿಖರು ತಮ್ಮ ಪಗಡಿ ಬಿಚ್ಚುವಂತೆ ಬಲವಂತ ಮಾಡುತ್ತಿರುತ್ತಾರೆ. ಇದು ಒಬ್ಬ ಸಿಖ್ ವ್ಯಕ್ತಿಗೆ ಅತ್ಯಂತ ಅವಮಾನಕರ ವಿಷಯ. ಈಗ ಪಗಡಿ ತೊಟ್ಟ ಹೆಣ್ಣು ಮಗಳೊಬ್ಬಳು ಪೋಲಿಸ್ ಹುದ್ದೆ ಅಲಂಕರಿಸಿರುವುದು ಸಿಖ್ ಸಮುದಾಯದಲ್ಲಿ ಆನೆಬಲವನ್ನು ತಂದಿದೆ. ಅಮೇರಿಕಾದಲ್ಲಿ ನೆಲೆಸಿರುವ ಸಿಖ್ ಸಮುದಾಯ ಈ ಬಗ್ಗೆ ಸಂತೋಷ ವ್ಯಕ್ತ ಪಡಿಸಿದೆ.

ಅಮೇರಿಕಾದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಗುರ್ ಸೋಚ್ ಕೌರ್ ಅವರ ವೃತ್ತಿ ಜೀವನ ಸುಖಮಯವಾಗಿರಲಿ. ಸಿಖ್ ಸಮುದಾಯ ಮಾತ್ರವಲ್ಲ, ದೇಶವೇ ಮೆಚ್ಚುವಂತಹ ಕೆಲಸಗಳು ಅವರ ಕೈಯಿಂದ ನಡೆದು ಭಾರತ ಹೆಮ್ಮೆ ಪಡುವಂತಾಗಲಿ ಎನ್ನುವುದು ಕೋಟ್ಯಂತರ ಭಾರತೀಯರ ಹಾರೈಕೆ… ಗುರ್ ಸೋಚ್ ಕೌರ್ ಮಹಿಳೆಯರಿಗೆ ಆದರ್ಶವಾಗಲಿ ಮತ್ತು ಇನ್ನಷ್ಟು ಮತ್ತಷ್ಟು ಮಹಿಳೆಯರು ಎಲ್ಲಾ ವಿಭಾಗಗಳಲ್ಲೂ ಪುರುಷರ ಸಮಬಲರಾಗಿ ನಿಲ್ಲುವಂತಾಗಲಿ..

-ಶಾರ್ವರಿ

Tags

Related Articles

Close