ಪ್ರಚಲಿತ

ಪ್ರಪಂಚದ ಎಲ್ಲಾ ರಾಷ್ಟ್ರಗಳ ಒಗ್ಗಟ್ಟಿನಿಂದ ವಿಶ್ವ ಶಾಂತಿ ಸಾಧ್ಯ

ಭಾರತವು ಶಾಂತಿಪ್ರಿಯ ರಾಷ್ಟ್ರ. ಇಡೀ ಪ್ರಪಂಚದ ಶಾಂತಿಯನ್ನು ಭಾರತ ಬಯಸುತ್ತದೆ. ಹಾಗೆಂದು ತನ್ನ ತಂಟೆಗೆ ಬಂದವರನ್ನು ಸುಮ್ಮನೆ ಬಿಡುವ ಜಾಯಮಾನವೂ ಭಾರತದ್ದಲ್ಲ. ವಿರೋಧಿಗಳನ್ನು ಮಣ್ಣು ಮುದ್ರಿಸುವ ತಾಕತ್ತು ಹೊಂದಿರುವ ರಾಷ್ಟ್ರ ಭಾರತ. ಭಯೋತ್ಪಾದನೆ, ಹಿಂಸಾಚಾರ ಮೊದಲಾದವುಗಳ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಸಮರ ಸಾರಿದ ಸಮರ್ಥ, ಬಲಿಷ್ಟ ರಾಷ್ಟ್ರ ನಮ್ಮದು ಎಂದರೂ ತಪ್ಪಾಗಲಾರದು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಭಾರತದ ರಾಯಭಾರಿ ರುಚಿರಾ ಕಾಂಬೋಜ್, ಭಖೋತ್ಪಾದನೆಯ ಸಂಬಂಧ ಭಾರತದ ನಿಲುವನ್ನು ಎತ್ತಿ ಹಿಡಿದಿದ್ದಾರೆ.

ಭಯೋತ್ಪಾದನೆ ಯಾವ ರೂಪದಲ್ಲಿಯೇ ಇರಲಿ. ಅದನ್ನು ಬಲವಾಗಿ ವಿರೋಧಿಸುವ ಕೆಲಸವನ್ನು ಭಾರತ‌ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದ್ದಾರೆ. ಭಾರತ ಹಿಂಸಾಚಾರದ ವಿರುದ್ಧವೂ ತೊಡೆ ಕಟ್ಟುತ್ತದೆ ಎಂದು ಕಾಂಬೋಜ್ ಹೇಳಿದ್ದು, ಆ ಮೂಲಕ ಉಗ್ರವಾದ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಹಾಗೆ ಭಾರತದ ಸ್ಪಷ್ಟ ನಿಲುವನ್ನು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಬಗೆಗೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎರಡೂ ರಾಷ್ಟ್ರಗಳ‌ ಯುದ್ಧದ ತೀವ್ರತೆಯನ್ನು ಕಡಿಮೆ ಮಾಡಲು ಜಾಗತಿಕವಾಗಿ ಅಂತರಾಷ್ಟ್ರೀಯ ಸಂಸ್ಥೆಗಳು ತೆಗೆದುಕೊಂಡ ಎಲ್ಲಾ ರೀತಿಯ ಕ್ರಮಗಳನ್ನು ಭಾರತ ಸ್ವಾಗತಿಸುತ್ತದೆ ಎಂದು ಅವರು ಹೇಳಿದ್ದಾರೆ. ಪ್ಯಾಲೆಸ್ತೇನ್ ಈ ಯುದ್ಧದಿಂದ ನಲುಗಿ ಹೋಗಿದೆ. ಅಲ್ಲಿನ ಜನರಿಗೆ ಜೀವನ ನಡೆಸಲು ಬೇಕಾದ ಅವಶ್ಯಕತೆಗಳು ಲಭಿಸಬೇಕು. ಇದು ಭಾರತದ ನಿಲುವಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತವು ಭಯೋತ್ಪಾದನೆ ಯಾವ ರೂಪದಲ್ಲಿಯೇ ಇರಲಿ, ಅದನ್ನು ಖಂಡಿಸುತ್ತದೆ. ಅದನ್ನು ವಿರೋಧಿಸುತ್ತದೆ. ಹಿಂಸೆಯ ವಿರುದ್ಧವೂ ನಮ್ಮ ಧ್ವನಿ ಇದೆ. ಮಾನವೀಯತೆಗೆ ಬೆಂಬಲ ನೀಡುವ ಭಾರತ ಇಸ್ರೇಲ್ – ಹಮಾಸ್ ನಡುವಿನ ತಾತ್ಕಾಲಿಕ ಕದನ ವಿರಾಮವನ್ನು ಬೆಂಬಲಿಸುತ್ತದೆ. ಯುದ್ಧದ ಕಾರಣದಿಂದ ಸಂಕಷ್ಟಕ್ಕೆ‌ ಒಳಗಾದ ಜನರಿಗೆ ಮಾನವೀಯತೆಯ ನೆಲೆಯಲ್ಲಿ ಜೀವನೋಪಾಯದ ಅವಶ್ಯಕತೆಗಳನ್ನು ಒದಗಿಸುವುದು, ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವುದನ್ನು ಭಾರತ ಎದುರು ನೋಡುತ್ತಿದೆ ಎಂದು ಅವರು ನುಡಿದಿದ್ದಾರೆ.

ಶಾಂತಿ ಸ್ಥಾಪನೆಯ ಉದ್ದೇಶಕ್ಕೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎನ್ನುವುದು ಭಾರತದ ಅಭಿಪ್ರಾಯ ಎಂದು ಕಾಂಬೋಜ್ ತಿಳಿಸಿದ್ದಾರೆ.

Tags

Related Articles

Close