ಪ್ರಚಲಿತ

99 ವರ್ಷಗಳ ಹಿಂದೆ ಬ್ರಿಟಿಷರು ನಡೆಸಿದ ಜಲಿಯನ್ ವಾಲಾ ಭಾಗ್ ನರಮೇಧದಲ್ಲಿ ಹುತಾತ್ಮರಾದವರಿಗೆ ಶ್ರದ್ದಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ!!!

ಭಾರತದ ಇತಿಹಾಸದಲ್ಲೇ ಎಂದೂ ಕಂಡರಿಯದ ಕರಾಳ ದಿನ!! ಭರತ ಖಂಡದಲ್ಲಿ ಸ್ವಾತಂತ್ರ್ಯ ಪೂರ್ವವಲ್ಲಿ ಬ್ರಿಟಿಷರ ದಬ್ಬಾಳಿಕೆ ಹೇಗಿತ್ತು ಎಂಬುದಕ್ಕೆ ಇದೊಂದು ಪ್ರತ್ಯಕ್ಷ ನಿದರ್ಶನ. ಹಬ್ಬ ಆಚರಿಸುತ್ತಿದ್ದ ಸಾವಿರಾರು ಅಮಾಯಕರನ್ನು ನಾಲ್ಕು ಗೋಡೆಗಳ ಮದ್ಯೆ ಭೀಕರವಾಗಿ ನರಸಂಹಾರಗೈದು, ಅಟ್ಟಹಾಸ ಮೆರೆದಿದ್ದರು ಆ ಕ್ರೂರ ಬ್ರಿಟಿಷರು!! ಚೆಲ್ಲಾ ಪಿಲ್ಲಿಯಾಗಿ ಹರಡಿರುವ ರಕ್ತ ಸಿಕ್ತ ದೇಹಗಳು ಒಂದು ಕಡೆಯಾದರೆ, ದಿಕ್ಕೇ ತೋಚದೆ ಬಾವಿಯಲ್ಲಿ ಜಿಗಿದು ಪ್ರಾಣ ಬಿಡುತ್ತಿರುವ ಜನಗಳ ಕೂಗಿಗೆ ಸಾಕ್ಷಿಯಾಯಿತು ಆ ಕರಾಳ ದಿನ. ಇತಿಹಾಸದ ಪುಟ ಸೇರಿದ  ಬರ್ಬರ ಜಲಿಯನ್ ವಾಲಾ ಭಾಗ್ ದುರಂತ.

ಹೌದು… 1919ರ ಎಪ್ರಿಲ್ 13ರಂದು ನಡೆದ ಈ ಭೀಕರ ದುರಂತವು ಭಾರತದ ಇತಿಹಾಸಗಳ ಪುಟಗಳಲ್ಲಿ ಅಚ್ಚಳಿಯಾಗಿ ಉಳಿದೆಯಲ್ಲದೇ ಅದೆಷ್ಟು ಭಾರತೀಯ ಕಣ್ಣೀರಿನ ಶಾಪ ಬ್ರಿಟಿಷರ ಮೇಲಿದೆಯೋ ನಾ ಕಾಣೆ!! ಆದರೆ ಭಾರತದ ಸ್ವಾತಂತ್ರ್ಯ ಚಳುವಳಿಯ ಕರಾಳ ಘಟನೆಯೆಂದು ಪರಿಗಣಿಸಲ್ಪಟ್ಟಿರುವ ಜಲಿಯನ್ ವಾಲಾ ಬಾಗ್ ನರಮೇಧ ನಡೆದು ಇಂದಿಗೆ 99 ವರ್ಷಗಳು ಸಂದೇ ಹೋಗಿದೆ!! 99 ವರ್ಷಗಳ ಹಿಂದೆ ನಡೆದು ಹೋದ ಆ ಭೀಕರ ಮಾರಣ ಹೋಮವು ಮನುಕುಲದ ಇತಿಹಾಸದ ಅತ್ಯಂತ ನಿರ್ದಯ ಹತ್ಯಾಕಾಂಡವಾಗಿದ್ದಂತೂ ಅಕ್ಷರಶಃ ನಿಜ.

ಜಲಿಯನ್ ವಾಲಾ ಬಾಗ್ ಎನ್ನುವ ಹೆಸರೇ ಪ್ರತೀ ಭಾರತೀಯರ ದೇಶಭಕ್ತಿಯನ್ನು ಬಡಿದೆಬ್ಬಿಸುತ್ತದೆ, ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಡೆದ ಭೀಕರ ದುರಂತ ಕಳೆದು ಹೋದ ನೆನಪನ್ನು ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತದೆ. ಇದೇ ಸ್ಥಳದಲ್ಲಿ ಬ್ರಿಟಿಷರ ಭೂಸೇನಾ ಮುಖ್ಯಸ್ಥನಾಗಿದ್ದ ಜನರಲ್ ಡಾಯರ್ ಮತ್ತು ಆತನ ಸೈನಿಕರು, ಸಾರ್ವಜನಿಕ ಸಭೆಗೆ ಬಂದಿದ್ದ ಮತ್ತು ಶಾಂತಿಯುತವಾಗಿ ನಡೆಯುತ್ತಿದ್ದ ಸಭೆಯಲ್ಲಿ ಭಾಗವಹಿಸಿದ್ದ ಪುರುಷರು, ಮಹಿಳೆಯರು ಮತ್ತು ಮಕ್ಕಳ ಮೇಲೆ ಗುಂಡಿನ ಸುರಿಮಳೆಗೈದಿದ್ದರು. ಇದರ ಪರಿಣಾಮ ಸುಮಾರು ನೂರಕ್ಕೂ ಹೆಚ್ಚು ಮುಗ್ದ ಭಾರತೀಯರು ಅನ್ಯಾಯವಾಗಿ ಪ್ರಾಣ ತೆತ್ತಿದ್ದರು.

ಜಲಿಯನ್ ವಾಲಾ ಬಾಗ್ ನರಮೇಧಕ್ಕೆ 99 ವರ್ಷ; ಹುತಾತ್ಮರಾದವರಿಗೆ ಶ್ರದ್ದಾಂಜಲಿ ಸಲ್ಲಿಸಿದ ಪ್ರಧಾನಿ ಮೋದಿ

ಪಂಜಾಬ್ ನ ಅಮೃತಸರದಲ್ಲಿ ಜಲಿಯನ್ ವಾಲಾ ಭಾಗ್ ನಲ್ಲಿ ಬೈಸಾಕಿ ಆಚರಿಸಲು ನೆರೆದಿದ್ದ ಸಾವಿರಾರು ಸಿಕ್ಖರ ಮೇಲೆ ಬ್ರಿಟಿಷ್ ಕೊಲೊನಿಯಲ್ ರೆಜಿನಾಲ್ಡ್ ಡಯರ್ ನ ಆದೇಶದ ಮೇರೆಗೆ, ಬ್ರಿಟಿಷ್ ನೇತೃತ್ವದ ಸೇನೆ ಏಕಾಏಕಿ ಗುಂಡಿನ ಮಳೆಗರೆದಿತ್ತು. ಈ ಘಟನೆಯಲ್ಲಿ 379 ಮಂದಿ ಮೃತರಾಗಿದ್ದರು ಮತ್ತು 1,200 ಮಂದಿ ಗಾಯಗೊಂಡಿದ್ದರಲ್ಲದೇ, ಇದು ಭಾರತದ ಇತಿಹಾಸದಲ್ಲಿ ಎಂದು ಕಂಡೂ ಕೇಳರಿಯದ ದುರಂತ ಕಥೆಯಾಗಿ ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿದಿದೆ.

ಈ ನರಮೇಧ ಘಟಿಸಿ ಇಂದಿಗೆ 99 ವರ್ಷಗಳಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಇದನ್ನು ಸ್ಮರಿಸಿಕೊಂಡಿದ್ದಾರೆ!! ಅಷ್ಟೇ ಅಲ್ಲದೇ ಈ ಘಟನೆಯಲ್ಲಿ ಹುತಾತ್ಮರಾದವರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಹೌದು… ‘ಹುತಾತ್ಮರ ಅದಮ್ಯ ಸ್ಪೂರ್ತಿ ನಿತ್ಯವೂ ಸ್ಮರಿಸಲ್ಪಡುತ್ತದೆ. ನಮ್ಮ ಸ್ವಾತಂತ್ರ್ಯಕ್ಕಾಗಿ ಅವರು ತಮ್ಮ ಬದುಕನ್ನು ತ್ಯಾಗ ಮಾಡಿದ್ದಾರೆ’ ಎಂದು ಟ್ವೀಟ್ ಮಾಡುವ ಮೂಲಕ ಹುತಾತ್ಮರಾದವರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ!!

ಅಂದು ನಡೆದ ಭೀಕರ ಹತ್ಯೆಗಳಿಗೆ ಇಂದು ಮೂಕ ಸಾಕ್ಷಿಯಾಗಿ ನಿಂತಿದೆ ಜಲಿಯನ್ ವಾಲಾ ಭಾಗ್!! ಹೌದು… ಅಂದು ನಡೆದ ಕೃತ್ಯಗಳನ್ನು ಮನಗಂಡ ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್ ಈ ಕೃತ್ಯವನ್ನು “ನನ್ನ ದೇಶವಾಸಿಗಳಾಗಿರುವ ಘೋರ ಅನ್ಯಾಯ” ವೆಂದು ಆಗಿನ ವೈಸರಾಯ್ ಲಾರ್ಡ್ ಫೋರ್ಡ್ ಗೆ ಪತ್ರ ಬರೆದಿದ್ದರಲ್ಲದೆ ತಮಗೆ ನೀಡಲಾಗಿದ್ದ “ನೈಟ್‍ಹುಡ್” ಪದವಿಯನ್ನು ಹಿಂತಿರುಗಿಸಿದ್ದರು!! ಅಮೃತಸರದಲ್ಲಿ ಬ್ರಿಟಿಷರ ದಬ್ಬಾಳಿಕೆಯನ್ನು ಕಣ್ಣಾರೆ ಕಂಡು ಸ್ವತಃ ಸಿಪಾಯಿಗಳಿಂದ ಗಾಯಗೊಂಡಿದ್ದ ಉಧಮ್‍ ಸಿಂಗ್ ಈ ಅಮಾನವೀಯ ಕೃತ್ಯಗಳಿಗೆಲ್ಲಾ ಆಗಿನ ಪಂಜಾಬ್ ಲೆ. ಗವರ್ನರ್ ಮೈಕಲ್ ಡೈಯರ್ ಸೂತ್ರದಾರನೆಂದು ಆರೋಪಿಸಿ ಆತನನ್ನು ಲಂಡನ್‍ನಲ್ಲಿ ಹತ್ಯೆಗೈದರು. ಡೈಯರ್ ಕೊಲೆ ಆರೋಪಕ್ಕೆ ಉಧಮ್ ಸಿಂಗ್‍ಗೆ ನೇಣು ಶಿಕ್ಷೆ ವಿಧಿಸಲಾಯಿತು.

ಅಮಾಯಕ, ನಿರಾಯುಧ ಜನರ ಮೇಲೆ ಬ್ರಿಟಿಷ್ ಪ್ರಭುತ್ವ ನಡೆಸಿದ ಅಮಾನವೀಯ ಕೃತ್ಯವನ್ನು ಅದು ಜರುಗಿದ ದಶಕಗಳ ಬಳಿಕ ಇಂಗ್ಲೆಂಡ್ ರಾಣಿ, ಪ್ರಧಾನಿಗಳೂ ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾರಲ್ಲದೇ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿದ್ದರು!! ಆದರೇ ಈಗಲೂ, ಪ್ರತಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಜಲಿಯನ್ ವಾಲಾ ಭಾಗ್ ಹತ್ಯಾಕಾಂಡ ನೆನಪಾಗುತ್ತದೆಯಲ್ಲದೇ ಸ್ವಾತಂತ್ರ್ಯದ ಕಥನ ಉಂಟುಮಾಡುವ ಪುಳಕದ ಜೊತೆಗೆ ಬಲಿದಾನದ ವಿಷಾದವೂ ಅನುಭವಕ್ಕೆ ಬರುತ್ತದೆ.

ಮೂಲ:http://news13.in/archives/100505

– ಅಲೋಖಾ

Tags

Related Articles

Close